ಶರಣ ಕುಂಬಾರ ಗುಂಡಯ್ಯನವರು
ವಚನಾಂಕಿತ : ಬಹುತೇಕ ಇವರ ವಚನಗಳು ಲಭ್ಯವಿಲ್ಲ.
ಜನ್ಮಸ್ಥಳ : ಭಲ್ಲೂಕೆ (ಭಾಲ್ಕಿ): ಬೀದರ ಜಿಲ್ಲೆ.
ಕಾಯಕ : ಕುಂಬಾರಿಕೆ.
ಐಕ್ಯಸ್ಥಳ : ಭಲ್ಲೂಕೆ (ಭಾಲ್ಕಿ): ಬೀದರ ಜಿಲ್ಲೆ.
ಶಾಸನಗಳ ಪ್ರಕಾರ ಭಲ್ಲೂನಗರ, ಭಲ್ಲೂ, ಭಾಲಿಕ, ಭಾಲಕ ಎಂದು ಕರೆಯಲ್ಪಡುವ ಬೀದರ ಜಿಲ್ಲೆಯ ಭಾಲ್ಕಿ ಕುಂಬಾರ ಗುಂಡಯ್ಯನವರ ಜನ್ಮಸ್ಥಳ. ಕುಂಬಾರ ಗುಂಡಯ್ಯನವರ ತಂದೆ ಸತ್ಯಣ್ಣ ಮತ್ತು ತಾಯಿ ಸಂಗಮ್ಮ. ಕುಂಬಾರ ಗುಂಡಯ್ಯನವರ ಮಡದಿ ಕೇತಲಾದೇವಿ. ಇವರಿಗೊಬ್ಬಳು ನೀಲಲೋಚನೆ ಎಂಬ ಸಹೋದರಿ ಇದ್ದಳು. ಕೇತಲಾದೇವಿ ಏಕೆ ಬ್ರಹ್ಮಯ್ಯನವರ ತಂಗಿ. ಬ್ರಹ್ಮಯ್ಯನವರ ಸಹೋದರಿ ಕೇತಲಾದೇವಿಯವರು ಗುಂಡಯ್ಯನವರ ಧರ್ಮಪತ್ನಿ. ಕೇತಲಾದೇವಿಯವರು ಬರೆದ ವಚನಗಳು ಲಭ್ಯವಾಗಿವೆ. ಗುಂಡಯ್ಯನವರ ತಂಗಿ ನೀಲಲೋಚನೆಯನ್ನು ಏಕೆ ಬ್ರಹ್ಮಯ್ಯನವರು ವಿವಾಹ ಆಗಿದ್ದರೆಂದು ತಿಳಿದು ಬರುತ್ತದೆ.
ಮರಡೀಪುರ ಶಾಸನದಲ್ಲಿ ಗುಂಡಯ್ಯನವರ ಬಗ್ಗೆ ಉಲ್ಲೇಖವಿದೆ. ಅಬ್ಬಲೂರು ಸೋಮೇಶ್ವರ ದೇವಾಲಯದಲ್ಲಿ “ಕುಂಬಾರ ಗುಂಡನ ಮುಂದೆ ಬಂದಾಡಿದ ನಮ್ಮ ಶಿವನು” ಎಂಬ ಬರಹವಿದ್ದು ಅದರ ಕೆಳಗೆ ಗಡಿಗೆ ಬಾರಿಸುತ್ತ ಕುಳಿತ ಗುಂಡಯ್ಯನವರ ವಿಗ್ರಹವನ್ನು ಕೆತ್ತಲಾಗಿದೆ.
ಕೈಲಾಸ ಇದೆ ಎನ್ನುವ ತತ್ವವನ್ನೇ ಶರಣರು ನಿರಾಕರಿಸಿದವರು ಮತ್ತು ಎಂದು ಒಪ್ಪಲಿಲ್ಲ. ಕಾಯಕವೇ ಕೈಲಾಸ ಎನ್ನುವುದು ಬಸವಾದಿ ಶರಣ ಅತ್ಯುನ್ನತ ತತ್ವ.
ಕಾಯಕವೇ ಶಿವಭಕ್ತಿ | ಕಾಯಕವೆ ಶಿವಭಜನೆ ||
ಕಾಯಕವೆ ಲಿಂಗ | ಶಿವಪೂಜೆ ಶಿವಯೋಗ ||
ಕಾಯಕವೆ ಕಾಯ್ವ | ಕೈಲಾಸ ||
ಬೇಡೆನಗೆ ಕೈಲಾಸ | ಬಾಡುವುದು ಕಾಯಕವು ||
ನೀಡೆನಗೆ | ಕಾಯಕವ ||
ಕುಣಿದಾಡಿ ನಾಡ | ಹಂದರಕೆ ಹಬ್ಬಿಸುವೆ ||
ಹೀಗೆಂದು ಶರಣ ಕುಂಬಾರ ಗುಂಡಯ್ಯನ ಕುರಿತ ಈ ವಿವರಣೆ ಸಿಗುವುದು ಜನಪದ ಕವಿ ಸಾವಳಿಗೇಶನ ಕೃತಿಯಲ್ಲಿ. ಕುಂಬಾರ ಗುಂಡಯ್ಯನವರು ಕೈಲಾಸವನ್ನೂ ನಿರಾಕರಿಸಿ ನನಗೆ ಕಾಯಕವೇ ಇರಲಿ ಎಂದು ಹೇಳುತ್ತಾರೆ. ಹರಿಹರ ಕವಿ ಬರೆದ “ಕುಂಬಾರ ಗುಂಡಯ್ಯನ ರಗಳೆ” ಯಲ್ಲಿಯೂ ಇಂತಹ ಅನೇಕ ಪ್ರಸ್ತಾಪಗಳು ಬರುತ್ತವೆ.
ಕುಂಬಾರ ಗುಂಡಯ್ಯನವರನ್ನು ಕುರಿತು ಜನಪದ ವಿದ್ವಾಂಸರಾದಂಥ ಡಾ. ಬಿ. ಎಸ್. ಗದ್ದಗಿಮಠ ಅವರು ತಮ್ಮ ಸಂಶೋಧನೆಯ ಪುಸ್ತಕ “ಜನಪದ ಕಾವ್ಯ” ದಲ್ಲಿ ಚಿತ್ರಿಸಿದ್ದಾರೆ.
ಅನುಭಾವ ಆವಿಗೆಗಿಗೆ | ಕನಲೆಂಬ ಕಿಚ್ಚಿಟ್ಟು ||
ತಣಿವಂತೆ ಸುಡಲು | ಶಿವಭಕ್ತಿ ಮಡಿಕೆಗಳ ||
ದಣುವಾರಿಹೋಯ್ತು | ಕಾಯಕದ ||
ಹರುಷದಲಿ ಗಡಿಗೆಗಳ | ಶರಣರಿಗೆ ಮಾರುತಲಿ ||
ಸರಸದಲಿ ಇದ್ದ | ಸತಿಯೊಡನೆ ಗುಂಡಯ್ಯ ||
ಸರಿಯಾರು ಶಿವನೆ | ಶರಣರಿಗೆ ||
ಕುಂಬಾರ ಗುಂಡಯ್ಯನವರು ಬಸವಣ್ಣನವರ ಪೂರ್ವದಲ್ಲಿದ್ದರೋ ಅಥವಾ ಸಮಕಾಲೀನರೋ ಎನ್ನುವು ಖಚಿತವಾಗಿ ತಿಳಿದು ಬಂದಿಲ್ಲ. ಆದರೆ ಅಂಬಿಗರ ಚೌಡಯ್ಯ, ಸಿದ್ಧರಾಮೇಶ್ವರ, ಜೇಡರ ದಾಸಿಮಯ್ಯನವರ ವಚನಗಳಲ್ಲಿ ಕುಂಬಾರ ಗುಂಡಯ್ಯನವರ ಪ್ರಸ್ತಾಪ ಬಂದಿರುವುದನ್ನು ನೋಡಿದರೆ ಬಸವಣ್ಣನವರ ಸಮಕಾಲೀನರು ಎಂದು ಗುರುತಿಸಬಹುದು.
ಕುಂಬಾರ ಗುಂಡಯ್ಯನವರ ಘನ ವ್ಯಕ್ತಿತ್ವಕ್ಕೆ ಸಿದ್ದರಾಮೇಶ್ವರರ ಈ ವಚನವೇ ಸಾಕ್ಷಿ.
ಕುಂಬಾರರೆಲ್ಲರು | ಗುಂಡಯ್ಯನಾಗಬಲ್ಲರೆ ||
ಮಡಿವಾಳರೆಲ್ಲರು | ಮಾಚಯ್ಯನಾಗಬಲ್ಲರೆ ||
ಜೇಡರೆಲ್ಲರು | ದಾಸಿಮಯ್ಯನಾಗಬಲ್ಲರೆ ||
ಎನ್ನ ಗುರು | ಕಪಿಲಸಿದ್ಧಮಲ್ಲೇಶ್ವರಯ್ಯಾ ||
ಪ್ರಾಣಿಗಳ ಕೊಂದು | ಪರಿಹರಿಸಬಲ್ಲಡೆ ||
ತೆಲುಗ | ಜೊಮ್ಮಯ್ಯನಾಗಬಲ್ಲರೆ ||
ವೀರ ಗಣಾಚಾರಿ ಅಂಬಿಗರ ಚೌಡಯ್ಯನವರ ಈ ಒಂದು ವಚನದಲ್ಲಿ ಕುಂಬಾರ ಗುಂಡಯ್ಯನವರ ವರ್ಣನೆಯಿದೆ :
[ನಂಬಿಯಣ್ಣ] ಮಾಡುವ ಭಕ್ತಿ | ನಾಡೆಲ್ಲ ಮಾಡಬಹುದಯ್ಯಾ ||
ಕುಂಬಾರ ಗುಂಡಯ್ಯ ಮಾಡುವ ಭಕ್ತಿ | ಊರೆಲ್ಲಾ ಮಾಡಬಹುದಯ್ಯಾ ||
ಬಸವಣ್ಣ ಮಾಡುವ ಭಕ್ತಿ | ಶಿಶುವಲ್ಲ ಮಾಡಬಹುದಯ್ಯಾ ||
ಇದೇನು ದೊಡ್ಡಿತ್ತೆಂಬರು | ಸರ್ವರಿಗೆ ವಶವಾಗದ ಭಕ್ತಿ ||
ಅವರ ಮನ-ಜ್ಞಾನದಂತೆ | ಇರಲಿ ಶರಣಾರ್ಥಿ ||
ಈ ವಸುಧೆಯೊಳಗೆ | ಶುದ್ಧಭಕ್ತಿಯನರಿತು ||
ನಡೆದುದು ಬಟ್ಟೆಯಾಗದೆ | ನುಡಿದುದು ಶುದ್ಧಿಯಾಗದೆ ||
ದೇಹಕ್ಕೆ ಕಷ್ಟ-ನಷ್ಟ | ರೋಗ-ರುಜೆಗಳು ಬಂದು ||
ಅಟ್ಟಿ ಮುಟ್ಟಿದವನಾಗಿ | ಧೃಢವಾಗಿದ್ದು ||
ಶರಣನ ಮನವು | ನಿಶ್ಚಯಿಸಿ ||
ಧೃಢಶೀಲಂಗಳಂ | ಬಿಡದೆ ನಡೆವಾತ ||
ದೊಡ್ಡ ಭಕ್ತನೆಂದಾತ ನಮ್ಮ | ಅಂಬಿಗರ ಚೌಡಯ್ಯ ||
ಹಾಗೆಯೇ ಜೇಡರ ದಾಸಿಮಯ್ಯನವರು ತಮ್ಮ ಒಂದು ವಚನದಲ್ಲಿ ಕುಂಬಾರ ಗುಂಡಯ್ಯನನ್ನು ನೆನೆಸಿಕೊಂಡಿದ್ದಾರೆ.
ನಂಬಿದ ಚೆನ್ನನ | ಅಂಬಲಿಯನುಂಡ ||
ಕೆಂಭಾವಿ ಭೋಗಯ್ಯನ | ಹಿಂದಾಡಿ ಹೋದ ||
ಕುಂಭದ ಗತಿಗೆ | ಕುಕಿಲಿರಿದು ಕುಣಿದ ||
ನಂಬದೇ ಕರೆದವರ | ಹಂಬಲನೊಲ್ಲನೆಮ್ಮ ರಾಮನಾಥ ||
ಕುಂಬಾರ ಗುಂಡಯ್ಯನವರು ಬರೆದ ವಚನಗಳು ಇದೂವರೆಗೂ ಲಭ್ಯವಾಗಿಲ್ಲ. ಕುಂಬಾರ ಗುಂಡಯ್ಯ ನಿಷ್ಠೆಯಿಂದ ಕಾಯಕ ಮಾಡುತ್ತಾ ಅದರ ಮೂಲಕ ಶಿವಾರ್ಚನೆ ಸಲ್ಲಿಸುವುದು ಆತನ ದಿನಚರಿಯಾಗಿತ್ತು. ಜೀವನದುದ್ದಕ್ಕೂ ಭಕ್ತಿಯ ಪರಾಕಾಷ್ಠೆ ಮೆರೆದ, ಕಾಯಕವನ್ನು ತಮ್ಮ ಜೀವನದ ಉಸಿರಗಿಸಿಕೊಂಡು ಜೀವಿಸಿದ ಶ್ರೇಷ್ಠ ಶರಣ ಕುಂಬಾರ ಗುಂಡಯ್ಯನವರು. ಹುಟ್ಟೂರಾದ ಭಾಲ್ಕಿಯಲ್ಲಿಯೇ ಲಿಂಗೈಕ್ಯರಾದರೆಂದು ತಿಳಿದು ಬರುತ್ತದೆ.
ಮತ್ತೆ ಜನಪದ ಕವಿ ಡಾ. ಬಿ. ಎಸ್. ಗದ್ದಗಿಮಠ ಅವರ ಕವನದ ಒಂದು ಸಾಲಿನೊಂದಿಗೆ ಕುಂಬಾರ ಗುಂಡಯ್ಯನವರ ಪರಿಚಯಕ್ಕೆ ವಿರಾಮ ಹೇಳುತ್ತೇನೆ.
ಶರಣು | ಶರಣೆಂಬುವೆವು ||
ಹರಣ ಹಾರುವ | ತನಕ ||
ಕರುಣಿಸರಿ | ಶರಣ ಗುಂಡಯ್ಯ ||
ನಮಗಿನ್ನು | ಹರಸಿರಿ ||
ಹುಲುಸು | ಹುಲ್ಲು ಹುಲ್ಲಿಗೂ ||
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com