ಕಾಯಬೇಕಿದೆ
ಭೂತ ಹಿಡಿದಿದೆ
ಹಿಂದೂ ಮುಸ್ಲಿಂ ಕ್ರೈಸ್ತರಿಗೆ
ಭೂತ ಹಿಡಿಸುತ್ತಿದ್ದಾರೆ
ಗೀತೆ ಖುರಾನ್ ಬೈಬಲ್ ಗಳಿಗೆ ||
ಯುದ್ಧ
ಮಂದಿರ ಮಸೀದಿ ಚರ್ಚಗಳದ್ದು
ಲೇಬಲ್ಲು ಮಾತ್ರ
ಧರ್ಮಗಳದ್ದು ಶ್ರೇಷ್ಠತೆಯದ್ದು ||
ಜಗುಲಿಯ ಮೇಲೆ
ಪೂಜಿಸಲ್ಪಡುತ್ತಿದ್ದವವು
ಗಂಥಾಲಯಗಳಲ್ಲಿ
ಬೆಳಕ ಚೆಲ್ಲುವೆನೆಂದು ಕುಳಿತಿದ್ದವು ||
ಅವೇ ಗೀತೆ ಖುರಾನು ಬೈಬಲ್ಲು
ಗಳಿಂದು ಬೀದಿಯಲ್ಲಿ!
ಎತ್ತಿ ಅಪ್ಪುವರಿಲ್ಲ
ಕಳೆ ಕೊಡವಿ ಅಣಿಗೊಳಿಸುವವರಿಲ್ಲ ||
ಜಗಳಗಳ ಜಾತ್ರೆಯಲಿ
ಅಸಹಿಷ್ಣುತೆಯ ಸಂತೆಯಲಿ
ಸರದಾರಿ ತೋರುವ ಸಂತ ಬರಬೇಕಿದೆ
ತಾಳ್ಮೆಯಿಂದ ಕಾಯೋಣ ಆ ಕಾಲ ಬರಲಿದೆ ||
ನಿದ್ದೆಯಿಂದೆದ್ದ ಸಿದ್ದನನು
ಬುದ್ಧನ ಮಾಡಿದ ಮಣ್ಣಿದು
ಮರಳಿ ರಾಮರಾಜ್ಯ ಕನಸು ನನಸಾಗದೇ?
ಕಾಯಬೇಕಿದೆ ನಾವು ತಾಳ್ಮೆಗೆಡದೇ ||
✍️ ಚಿದಾನಂದಯ್ಯ ಗುರುವಿನ