ಚಾಗಿ’ ಯ ನೆರಳಲ್ಲಿ ಬದುಕಿನ ಬಣ್ಣಗಳು

ಚಾಗಿ’ ಯ ನೆರಳಲ್ಲಿ ಬದುಕಿನ ಬಣ್ಣಗಳು


ಈ ಜಗತ್ತಿನಲ್ಲಿ ಸ್ವಾರ್ಥಲಾಲಸೆಗಳಿಲ್ಲದೇ, ಪ್ರೀತಿ-ವಾತ್ಸಲ್ಯಗಳಂಥ ಮತ್ತೊಬ್ಬರ ಸುಖ ಆನಂದಗಳಿಗಾಗಿ ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಬದುಕುವ ಅದಮ್ಯವಾದ ಜೀವವೆಂದರೆ ಅದು ‘ತಾಯಿ’ ಮಾತ್ರ. ತಾಯ್ತನವೆನ್ನುವುದು ಹೆತ್ತಕರುಳಿಗಷ್ಟೇ ಅಲ್ಲದೆ ಜೀವ ಜಗತ್ತನ್ನೇ ಆವರಿಸಿಕೊಳ್ಳುವ ಅಪರಿಮಿತವಾದ ಮುಗಿಲು! ಇದು ಜಗದ ಎಲ್ಲ ಭಾವಗಳಿಗೂ ಮಿಗಿಲು. ಅದಕ್ಕೆಂದೇ ಈ ಜಗದ ಮನುಷ್ಯನಾದಿಯಾಗಿ ಎಲ್ಲಾ ಜೀವಿಗಳು ಹುಟ್ಟುತ್ತಲೇ ದನಿ ತೆಗೆಯುವುದು ‘ಅವ್ವ’ ಅಂತಲೇ.

ಇದು ನವಜಾತವಾದ ಎಲ್ಲಾ ಜೀವಿಗಳ ಬಾಯಿಯಿಂದ ಹೊರಡುವ ಸಹಜವಾದ ಕರುಳಿನ ಕರೆ. ಇಂತಹ ತಾಯಿ ತನ್ನ ಕರುಳ ಭಾವದಿಂದ ತನ್ನ ಕುಡಿಯೇ ಆಗಲಿ , ಇದರದ್ದೇ ಆಗಲಿ ಹಸಿವನ್ನು ಸಹಿಸದೇ ತಕ್ಷಣವೇ ಅದನ್ನು ಅನ್ನವಿಕ್ಕಿ ತಣಿಸುತ್ತದೆ. ಅಷ್ಟೇ ಅಲ್ಲ, ಅವುಗಳಲ್ಲಿನ ಅರಿವಿನ ಜಾಗೃತಿಗಾಗಿ ಕೆಲ ಹೊತ್ತಾದರೂ ಅನ್ನವಿಕ್ಕದೇ ದಂಡಿಸುತ್ತಾ, ಅರಿವಿನ ಕೊರತೆಯನ್ನು ತಣಿಸುತ್ತದೆ. ಇದು ತಾಯ್ತನದ ಸಹಜತನ. ಇದರಂತೆಯೇ, ಈ ಜಗತ್ತು ಭಾವನೆಗಳನ್ನು ಹೊರ ಚೆಲ್ಲಲು ದನಿ ತೆಗೆದಾಗ ಅದರಲ್ಲಿ ಇಂಪು ಮಾಧುರ್ಯತೆಗಳು ಸಹಜವಾಗಿ ಮೈವೆತ್ತಿ ಬಂದು ಕೇಳುವ ಮನೋಭಾವಗಳನ್ನು ಪುಳಕಗೊಳಿಸುತ್ತವೆ. ಇಂತಹ ಭಾಷಾ ಪುಳಕತನವೆ ಕಾವ್ಯವಾಗುತ್ತದೆ. ಇದು ಕೂಡ ಪ್ರಕೃತಿಯ ಎಲ್ಲಾ ಜೀವಿಗಳಿಗೆ ಸಹಜವಾದದ್ದು. ಕಾವ್ಯವು ತಾಯ್ತನದಂತೆ ಈ ಜಗತ್ತಿನಲ್ಲಿ ಸಹಜವಾಗಿ ಮೈದಳೆದು ಅದರಂತೆಯೇ ಈ ಜಗದ ಚೇತನಾಚೇತನಗಳಿಗೆ ಪ್ರೀತಿ ವಾತ್ಸಲ್ಯಗಳನ್ನು ಧಾರೆಯೆರೆದು ಅವುಗಳಿಗೆಲ್ಲ ಜೀವತುಂಬಿ ಲೋಕವನ್ನು ಆನಂದಗೊಳಿಸುತ್ತದೆ. ಆಹ್ಲಾದಗೊಳಿಸುತ್ತದೆ. ಅಷ್ಟೇ ಅಲ್ಲ ತಾಯಿಯಂತೆಯೇ ಲೋಕವನ್ನು ಪ್ರೀತಿಸುವುದರೊಂದಿಗೆ ಅದರ ಜಾಗೃತಿಗಾಗಿ ಆಗಾಗ ದಂಡಿಸುತ್ತಾ ಬದುಕು ಸದಾ ಜಾಗೃತಿಯಿಂದ, ಉಲ್ಲಾಸದಿಂದ ,ಸಂತೃಪ್ತಿಯಿಂದ ಇರುವಂತಾಗಲು ಹಂಬಲಿಸುತ್ತದೆ. ಆದರೆ, ಕವಿತೆ, ತಾಯಿಯಂತೆ ತನಗಾಗಿ ಯಾವುದನ್ನು ಬಯಸದೆ ಅಪೇಕ್ಷಿಸುತ್ತದೆ. ಹಾಗಾಗಿ ನನಗೆ ‘ತಾಯಿ’ ಮತ್ತು ‘ಕವಿತೆ’ ಎರಡೂ ಅಭೇದವಾಗಿವೆ. ನಾನಂತೂ ಇವೆರಡನ್ನು ಅತಿಯಾಗಿ ಪ್ರೀತಿಸುತ್ತೇನೆ. ಭಕ್ತಿಯಿಂದ ಗೌರವಿಸುತ್ತೇನೆ. ಇಲ್ಲಿ ನಾನು ಅಂದರೆ ಕೇವಲ ನನ್ನ ವೈಯಕ್ತಿಕತೆಯಂತಲ್ಲ. ಪ್ರತಿಯೊಬ್ಬ ಕವಿ ಮನಸ್ಥಿತಿ ಎಂದೇ ನನ್ನ ಭಾವನೆ . ಈ ಹಿನ್ನೆಲೆಯಲ್ಲಿ ಮಿತ್ರರಾದ ‘ವೆಂಕಟೇಶ ಚಾಗಿ’ ಅವರನ್ನು ಕಾಣುತ್ತಿದ್ದೇನೆ. ‘ಚಾಗಿ’ ಎಂಬ ಹೆಸರೇ ‘ತಾಯ್ತತನ ಮತ್ತು ‘ಕವಿತೆ’ಗಳ ಮೂಲಗುಣ ಅಂದರೆ ‘ತ್ಯಾಗ’. ‘ತ್ಯಾಗ’ ಪದವನ್ನೇ ಮಹಾಕವಿ ಪಂಪನು ಕರ್ಣನನ್ನು ಗುರುತಿಸುವಾಗ ‘ತ್ಯಾಗಿ’ ಬದಲಿಗೆ ‘ಚಾಗಿ’ ಎನ್ನುತ್ತಾನೆ. ‘ತ್ಯಾಗ’ಕ್ಕೆ ‘ಚಾಗ’ ತ್ಯಾಗಿ’ಗೆ ‘ಚಾಗಿ’ ಎಂಬ ಪದದ ಬಳಕೆ ನಮ್ಮಲ್ಲಿ ಬಹುಕಾಲದಿಂದಲೂ ಇದೆ. ಹೀಗಾಗಿ, ಕಾವ್ಯದ ನೆಲೆಯಲ್ಲಿ ಗಮನಿಸುವಾಗ ನಮ್ಮ ‘ವೆಂಕಟೇಶ ಚಾಗಿ’ಯವರು ‘ಚಾಗಿ’ಯೇ ಆಗಿದ್ದಾರೆ.

ಕಾರಣ ಅವರ ಕಾವ್ಯದ ತುಂಬಾ ಇಂಥ ಚಾಗವೇ ಮೂಲದ್ರವನಿರೂಪಿಸುತ್ತಾಜೀವಕಾರುಣ್ಯ ಸತ್ಯ ನಿಷ್ಠೆ ಮತ್ತು ಬದ್ಧತೆಗಳು ಮೊದಲಾದವುಗಳು ಚಾಗದ ಮೂಲದ್ರವ್ಯಗಳು ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಯಾವಾಗಲೂ ತನ್ನತನವನ್ನು ಸಮರ್ಥಿಸಿಕೊಳ್ಳುವಂತೆ ಪ್ರಕೃತಿ ಸಹಜವಾದದ್ದು. ಅಷ್ಟೇ ಅಲ್ಲ, ಪ್ರಕೃತಿಯಲ್ಲಿ ಕಾಣುವಂಥದ್ದು ಆದರೆ ಇಂಥ ಎಲ್ಲಾ ಗುಣಗಳಿಗೆ ಮೂಲರೂಪವಾದ ಮನುಷ್ಯನೇ ಒಂದುಕಡೆ ಇದಕ್ಕಾಗಿ ಹಂಬಲಿಸುತ್ತಿದ್ದರೂ ಮತ್ತೊಂದು ಕಡೆ , ಇದರ ವಿನಾಶ ಕೃತ್ಯದಲ್ಲಿ ತಲ್ಲೀನರಾಗಿದ್ದಾನೆ. ಚಾಗದಲ್ಲಿ ನಾಶವೆಂದರೆ ಪ್ರಕೃತಿಯ ವಿನಾಶ. ಪ್ರಕೃತಿ ನಾಶವಾದರೆ ಅದು ಮಾನವನ ನಾಶ ಇದು ಗೊತ್ತಿದ್ದೂ ಮನುಷ್ಯ ಇಂತಹ ವಿನಾಶಕಾರಿ ದೊಡ್ಡ ದುರಂತ ಕೃತ್ಯವೆಸಗುತ್ತಿರುವುದು ‘ನಮ್ಮ ಜಾತಿಯವರು ಕಟ್ಟಲಾಗಿದೆ ಮನೆ’ ಕವಿತೆಯಲ್ಲಿ

ಕಟ್ಟಲಾಗಿದೆ ಮನೆಯ
ಮನೆ ಮನೆಗಳ ಮೇಲೆ
ಬೀಸುವ ಗಾಳಿಯ ತಡೆದು
ಆಗಸ ಮುಟ್ಟುವ ತನಕ
ಮೋಡಗಳು ದಿಕ್ಕೆಡುವ ಹಾಗೆ…”

ಹೇಳುತ್ತಾ ಇದರಿಂದಾಗುವ ವನ್ಯ ಸಂಪತ್ತು ಜಲ ಸಂಪತ್ತು ಗಳಿಗೆ ಮೊದಲಾದ ಒಟ್ಟಾರೆ ಪ್ರಾಕೃತಿಕ ಸಂಪತ್ತಿನ ನಾಶದ ಪರಿಯನ್ನು ನಿರೂಪಿಸುತ್ತಾರೆ. ಕೊಳ್ಳುಬಾಕತನದ ಬಕಾಸುರನಂತೆ ಆಗಿರುವ ಮನುಷ್ಯನಿಗೆ ಈಗ ಪೌಷ್ಟಿಕ ಆಹಾರವನ್ನು ಬೆಳೆಯುವ ಭೂಮಿ ಬೇಕಾಗಿಲ್ಲ. ಅದರ ಬದಲಿಗೆ ದುರಾಸೆ ಮೋಹದ ಬಂಗಲೆಗಳು ಬೇಕಾಗಿವೆ. ಅದಕ್ಕಾಗಿ ಬೆಳೆದ ಭೂಮಿಯನ್ನು ನಿವೇಶನಗಳನ್ನಾಗಿಸಿ ಆಯಕಟ್ಟಿನ ಜಾಗದ ಮೇಲೆ ಭ್ರಮೆಯನ್ನು ಹುಟ್ಟಿಸಿ, ಮೋಜು ಮಾಡುವ ಮೂಲಕ ಮಿತಿಮೀರಿದ ಹಣವನ್ನು ಗಳಿಸುವ ಧಾವಂತದಲ್ಲಿದ್ದಾನೆ. ‘ಕೊಂಡುಬಿಡಿ ಸೈಟು’ ಕವಿತೆಯಲ್ಲಿ

“… …..ಬೆಳೆಯಲು ಭೂಮಿಯ ಬಗ್ಗೆ
ಎಂದಿಗೂ ಚಿಂತಿಸದಿರಿ
ಕೇಳೋಣ ಅಮೆರಿಕ ಚೀನಾಗಳ
ಇಲ್ಲವೇ ಬೇರೆ
ಗ್ರಹ ವಾಸಿಗಳ…”
ಎಂದು ವ್ಯಂಗ್ಯವಾಗಿ ಹೇಳುತ್ತಾರೆ.

ಹೀಗೆ ಭೂಮಿಯನ್ನು ವ್ಯಾಪಾರದ ಅಮೂಲ್ಯ ವಸ್ತುವನ್ನಾಗಿಸಿಕೊಂಡಿರುವ ಮನುಷ್ಯ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡು ಪ್ರೀತಿ ಕರುಣೆ ಗಳಂತಹ ಗುಣಗಳನ್ನು ಹಾಳು ಮಾಡುತ್ತಿದ್ದಾನೆ.ಇದರಿಂದಾಗಿ ದೇಶದ ರಾಜ್ಯಗಳ ನಡುವೆ ಗಡಿ ಇರುವಂತೆ ಮನುಷ್ಯ-ಮನುಷ್ಯರ ಮಧ್ಯೆಯೇ ಗಡಿ ನಿರ್ಮಾಣವಾಗಿ ಬಿಟ್ಟಿದೆ. ದುಡಿಯುವ ಕೈಗಳು ಬರೀ ದುಡ್ಡಿನ ಲೆಕ್ಕಾಚಾರದಲ್ಲಿ ಮಗ್ನವಾಗಿವೆ. ಮನಸ್ಸಂತೂ ಪಿಶಾಚಿಯ ರೂಪ ತಾಳಿದೆ. ಇದರ ಪರಿಣಾಮವಾಗಿ ಏನೆಲ್ಲಾ ಇದ್ದರೂ ಏಕಾಂಗಿಯಾಗಿ ದುರಂತದ ದುರ್ಗಂಧದಲ್ಲೇ ಉಸಿರಾಡುತ್ತಿದ್ದಾನೆ. .ಮನುಷ್ಯ ಇಂಥ ಹೀನತನದಿಂದಲೇ ಪ್ರಕೃತಿ ತನ್ನ ತಾಳ್ಮೆ ಹಾಗೂ ಕರುಣೆಗಳನ್ನು ಕಳೆದುಕೊಂಡಿದೆ. ಹಾಗಾಗಿ, ‘ಬರ’ ದಂತಹ ಪ್ರಾಕೃತಿಕ ಮುನಿಸು ಜೀವಜಲವನ್ನು ಕಾಡುತ್ತಿದೆ. ತಾನೇ ಮಾಡಿದ ದುಷ್ಕೃತ್ಯದ ಪರಿಣಾಮ ಈಗ ಈ ಜೀವಜಗತ್ತಿಗೆ ‘ಬರ’ ತಾಗುತ್ತಿದೆ.‘ನೀನೇಕೆ ಬಂದೆ’ ಕವಿತೆಯಲ್ಲಿ

ಬರ ನೀನೇಕೆ ಬಂದೆ?
ಹಸಿದ ಕಂಗಳಲಿ
ಅಕ್ಷರಗಳ ಬರ,
ಧರೆಯ ಒಡಲಿನಲ್ಲಿ
ಅವಿತಿರುವ ಜೀವಕ್ಕೆ
ಜೀವಜಲದ ಬರ,
ಆಡಂಬರದ ಮನದೊಳಗೆ
ಪ್ರೀತಿ-ವಾತ್ಸಲ್ಯದ ಬರ…”

ಎಂಬುದಾಗಿ ಬದಲಾದ ವಿಪರ್ಯಾಸಗಳ ಪಟ್ಟಿ ಮಾಡುತ್ತಾ, ಕೊನೆಯಲ್ಲಿ

ಬರ ಬರಬಾರದಿತ್ತು
ನೀ ಬರಬಾರದಿತ್ತು….”

ಎಂದೆನ್ನುತ್ತಾ ‘ಬರ’ ಪದದ ಚಮತ್ಕಾರಯುತವಾದ ಬಳಕೆಯೊಂದಿಗೆ ಮನುಷ್ಯನ ಜೀವನದ ಇಂತಹ ಅನೇಕ ದಯನೀಯ ಸ್ಥಿತಿಗಳಿಗೆ ಕಾರಣವಾದ ಬರಕ್ಕೆ ಮರಗುತ್ತಾರೆ. ಪ್ರಗತಿಗಳ ನೆಪದಲ್ಲಿ ಮನುಷ್ಯ ಪ್ರಕೃತಿಗೆ ಹಾನಿ ತರುವುದರೊಂದಿಗೆ ಅದಕ್ಕೆ ಕಂಟಕನೂ ಆಗುತ್ತಿದ್ದಾನೆ ಇಂತಹ ಕಂಡ ಕಥನಗಳಲ್ಲಿ ಪ್ಲಾಸ್ಟಿಕ್ ಬಳಕೆಯು ಸೇರಿದೆ. ನಮ್ಮ ಜೀವನದ ಅನಿವಾರ್ಯವಾಗಿ ಹಾಸುಹೊಕ್ಕಾಗಿರುವ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ‘ನಿಸರ್ಗದಳಲು’ ಕವಿತೆಯಲ್ಲಿ..

‘…ಪಂಚಭೂತಗಳಲ್ಲಿ ಬೆರೆತು ಮೆರೆಯುತಿದೆ

ವಿಷವರ್ತುಲದ ಕಲರವ….

ಮಾನವನ ಆಸೆ ಅತಿಯಾಸೆ ದುರಾಸೆ ಗಳಲ್ಲೆಲ್ಲಾ

ಅತಿರೇಕ ತಲುಪಿ ಜೀವಸಂಕುಲಕ್ಕೆ ಮಾರಕವು

ಈ ಪ್ಲಾಸ್ಟಿಕ್ ಪೆಡಂಭೂತ

ಶಾಂತ ಸಾಗರದ ತಡಿಯಲ್ಲೂ ಕೊಳಕು

ಉದಯಿಸುವ ನೇಸರನಿಗೊಂದಿಷ್ಟು ಇರಿಸುಮುರಿಸು……” ಎನ್ನುತ್ತಾ ಪ್ಲಾಸ್ಟಿಕ್ ನಿಂದಾಗುವ ಮಾಲಿನ್ಯ ದನ-ಕರುಗಳಿಗೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸುತ್ತಾರೆ. ಮನುಷ್ಯತ್ವವನ್ನೇ ಧ್ವಂಸ ಮಾಡಿರುವ ಇಂದಿನ ವಿದ್ಯಮಾನಗಳನ್ನು ಅನುಭವಿಸಿ ಅದಕ್ಕಾಗಿ ಮರುಗುತ್ತಿರುವ ಚಾಗಿ ಅವರ ಇನ್ನೊಂದು ರೂಪವನ್ನು ‘ಆ ಕಾಲ’ ಕವಿತೆಯಲ್ಲಿ ನಿರೂಪಿಸುತ್ತಾ

“……….ಹರಿದ ಕಿಸೆ ಅಂಗಿಯ ತೊಟ್ಟು
ಜಾತ್ರೆ ಸಂತೆಗಳ ಸುತ್ತಿ
ಚೌಕಾಸಿ ತಮಾಷೆಗಳ ವ್ಯವಹರಿಸಿ
ಬರಗಾಲದೊಳಗೆ ಬರಿಗೈಯಲ್ಲಿ
ಖುಷಿಯ ಖರೀದಿಸಿದ ಕಾಲ
ನೆಲದೊಳಗೆ ಹೂತಿಟ್ಟ ಬ್ಯಾಂಕಿನ
ಬಾಯೊಳಗೆ
ಅಜ್ಜ-ಅಜ್ಜಿ ಕೊಟ್ಟ ನಾಲ್ಕಾಣೆ ಇಟ್ಟು
ನಗು ತರುವ ಕನಸನ್ನು
ಹಗಲಿರುಳು ಕಾಣುತ್ತಿದ್ದ ಕಾಲ…..”

ಎಂದು ಮನುಷ್ಯತ್ವವನ್ನೇ ಮಿಗಿಲಾಗಿದ್ದು ತಮ್ಮ ಬಾಲ್ಯದ ದಿನಗಳನ್ನು ನೆನೆಯುತ್ತಾ, ತಮ್ಮ ಇಂದಿನ ಪರಿಸ್ಥಿತಿಯೊಂದಿಗೆ ಅದನ್ನು ಮುಖಾಮುಖಿಯಾಗಿಸುತ್ತಾರೆ. ಇಂದಿನ ತಂತ್ರಜ್ಞಾನದ ಆಧುನಿಕ ಜೀವನದಲ್ಲಿ ಭಾವನೆಗಳು ನಾಟಕೀಯ ಅಷ್ಟೇ ಅಲ್ಲ; ಯಾಂತ್ರಿಕರಣ ವಾಗುತ್ತಿವೆ. ಅದು ಹೇಗೆ, ಕಾರಣ ಯಾವುದು? ಎಂಬುದನ್ನು ‘ಮರೆತು ಬಿಟ್ಟಿನಿ ಗೆಳೆಯ ಮೊಬೈಲ್ ಬಂದಮೇಲೆ’ ಎಂಬ ಎಂಬ ಕವಿತೆಯಲ್ಲಿ ನಿರೂಪಿಸುತ್ತಾ…..

“…………..

ದೂರದೂರದ ಅನ್ಯಾಯವಾದ
ಕಮೆಂಟು ಮಾಡ್ತೀನಿ
ನಮ್ಮೊಳಗ ಆಗುವ ಅನ್ಯಾಯ ಕಂಡು
ಕಾಣದಂಗ ಇರುತೀನಿ
ಯಾರೋ ಮಾಡಿದ ಒಳ್ಳೆಯ ಕೆಲಸಕ್ಕೆ
ಶಹಬ್ಬಾಷ್ ಹೇಳ್ತೀನಿ
ನನ್ನ ಕರ್ತವ್ಯ ನೀತಿನಿಯಮಗಳ
ಗಾಳಿಗೆ ತೂರೀನಿ….”

ಎಂದು ಮಾಯವಾದ ಮಾನವೀಯತೆಯ ಬಗೆಯನ್ನು ವಿವರವಾಗಿ ತೆರೆದಿಡುತ್ತಾರೆ. ಈ ಬದುಕು ಪ್ರಕೃತಿಯನ್ನು ಪ್ರೀತಿಸುವಂಥದ್ದು. ಪ್ರಕೃತಿ ಎಂದರೆ ತಾಯಿ ಹೆಣ್ಣು ಹಾಗೂ ನಮ್ಮ ಬದುಕು ಕೂಡ ತಾಯಿಯಾಗಿ ನೀಡುವಂತಹ ಕಷ್ಟಗಳನ್ನು ಅನುಭವಿಸಬೇಕು. ಹೆಣ್ಣು ಯಾರೇ ಇರಲಿ ತಾಯ್ತನದ ಭಾವ ಇಲ್ಲದಿದ್ದರೆ ಅಲ್ಲಿ ಮಾನವೀಯತೆ ನಾಶವಾದಂತೆಯೇ ಸರಿ.ಆದ್ದರಿಂದ ತಾಯ್ತನ ಎನ್ನುವುದು ಎಲ್ಲಾ ಜೀವಿಗಳಿಗೂ ಅವಶ್ಯಕ ಅನಿವಾರ್ಯ. ಅದು ಯಾವಾಗಲೂ ದೊರಕುವುದಿಲ್ಲ ಬದಲಿಗೆ, ಜೀವಕಾರುಣ್ಯ ಕ್ಕಾಗಿ ಕರಗುತ್ತದೆ ಎಂಬುದನ್ನು ‘ಅವಳ ಸೀರೆ’ ಎಂಬ ಕವಿತೆಯಲ್ಲಿ..

“…………ನಾ ಬೆಳೆದು ನಿಂತಾಗ
ಅವ್ವ ಕೋಲಿಡಿದು ಬಾಗಿದರೂ
ಬೆಚ್ಚಗಿರಿಸಿತು ನನ್ನ
ಕೌದಿಯಾಗಿ
ಅವ್ವನ ಆ ಸೀರಿ…”

ಹೇಳುತ್ತಾ, ಸೀರೆ ಕೇವಲ ಹೆಣ್ಣಿನ ಮೈಮುಚ್ಚುವ ಬಟ್ಟೆಯಾಗದೇ, ತ್ಯಾಗದ ಬಗ್ಗೆ ಕಳಕಳಿ ವಾತ್ಸಲ್ಯ ಗಳಂತಹ ಕಾರುಣ್ಯದ ಪ್ರತೀಕವಾಗಿ ಕಾವ್ಯ ರೂಪ ತಾಳಿದೆ. .ಹೀಗೆ ಗೆಳೆಯ ವೆಂಕಟೇಶ ಚಾಗಿ ಅವರು ಇಲ್ಲಿನ ತಮ್ಮ ಕವಿತೆಗಳ ತುಂಬೆಲ್ಲ ಜೀವಕಾರುಣ್ಯವನ್ನು ಜೀವಾಳವಾಗಿ ನೆಲೆ-ಬೆಲೆ ಗಳ ಕಥೆಯನ್ನು ಅಗಾಧತೆಯನ್ನು ಭಾವನಾತ್ಮಕತೆ ಹಾಗೂ ಚಿಂತನಾತ್ಮಕತೆಯನ್ನು ತುಂಬಿ ಕಾವ್ಯವಾಗಿಸಿದ್ದಾರೆ. ಜೀವಕಾರುಣ್ಯತೆಯನ್ನು ಹೃದಯ ವಾಚಕವಾಗಿಸಿಕೊಂಡಿರುವ ಕಾವ್ಯ ಇಂದಿನ ದಿನಮಾನಗಳಲ್ಲಿ ವಿಕೃತವಾದ ಬದುಕನ್ನು ಅನಾವರಣಗೊಳಿಸುತ್ತಾ, ಬಣ್ಣಗಳ ಗೋಸುಂಬೆಯಂತೆ ಕಣ್ಣಿಗೆ ಆಕರ್ಷಣೆಯನ್ನು,ಮನಸ್ಸಿಗೆ ಆಘಾತವನ್ನು ಉಂಟು ಮಾಡುವಂತಹ ವರ್ತಮಾನದ ಜಗತ್ತನ್ನು ಎಳೆಎಳೆಯಾಗಿ ಚಾಗಿಯವರು ಅನಾವರಣಗೊಳಿಸುತ್ತಾರೆ. ಈ ನೆಲೆಯಲ್ಲಿ ಚಾಗಿ ಅವರ ಕಾವ್ಯದ ಉದ್ದೇಶ ಇಲ್ಲಿ ಪರಿಪೂರ್ಣವಾಗಿ ವ್ಯಕ್ತಗೊಂಡಿದೆ. ಆತ್ಮಶೋಧ- ಆತ್ಮನಿವೇದನೆಯಂತಹ ಮನೋಭಾವದೊಂದಿಗೆ ಬದುಕಿನ ಪರಿಣಾಮ ಮತ್ತು ಪರಿಹಾರಗಳು ಅವರ ಕವಿತೆಯ ಫಲಿತಗಳಾಗಿವೆ. ಈ ಕಾರಣಕ್ಕಾಗಿ ಅವರ ಕವಿತೆ ಮುಖ್ಯವಾಗುತ್ತದೆ; ಸಾರ್ಥಕವಾಗುತ್ತದೆ. ಹಾಗಾಗಿ ಗೆಳೆಯ ಕವಿ ವೆಂಕಟೇಶ್ ಅವರನ್ನು ಅಭಿನಂದಿಸುತ್ತ,ಕವಿತೆ ಮೂಲಕ ಬದುಕನ್ನು ಅನಾವರಣಗೊಳಿಸುವ, ಕಟ್ಟುವ ಅವರ ಕಾಯಕ, ದಣಿವರಿಯದೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ.


–  ಶಶಿಕಾಂತ ಕಾಡ್ಲೂರ

Don`t copy text!