ಉತ್ಸಾಹಿ, ಸ್ನೇಹ ಜೀವಿ, ಸದಾ ಸಮಾಧಾನಿ ರಾಮಚಂದ್ರ ಜೋಗಿನ

ಉತ್ಸಾಹಿ, ಸ್ನೇಹ ಜೀವಿ, ಸದಾ ಸಮಾಧಾನಿ ರಾಮಚಂದ್ರ ಜೋಗಿನ

ಗದುಗಿನ ಕೆ.ವಿ.ಎಸ್.ಆರ್. ಕಾಲೇಜು ಅನೇಕ ಪ್ರತಿಭಾವಂತ ಪ್ರಾಧ್ಯಾಪಕರ ತವರು. ಇಲ್ಲಿ ಕೆಲಸ ಮಾಡುತ್ತಿರುವ ಸಮಕಾಲೀನ ಗೆಳೆಯರು ವಯೋಸಹಜ ಕಾರಣದಿಂದ ನಿವೃತ್ತರಾಗುತ್ತಿದ್ದಾರೆ.
ಕಾಲನ ವೇಗ ಅರ್ಥಮಾಡಿಕೊಳ್ಳುವದು ಕಷ್ಟ. ನಾವು ಹತ್ತು ಜನ ಅಧ್ಯಾಪಕರು ಇತ್ತೀಚೆಗೆ ತೀರಾ ಮೊನ್ನೆ ಮೊನ್ನೆ ಕೆಲಸಕ್ಕೆ ಸೇರಿದ್ದೇವೆನೋ ಎಂಬ ಭಾವನೆ ಉಂಟಾಗುತ್ತಿರುವಾಗಲೇ ನಿವೃತ್ತರಾಗುವ ಸಮಯ ಬಂದು ಬಿಟ್ಟಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯ ವಾಣಿಜ್ಯಶಾಸ್ತ್ರ ಉಪನ್ಯಾಸಕ ರಾಮಚಂದ್ರ ಬಾಲಪ್ಪ ಜೋಗಿನ ನಿವೃತ್ತರಾಗುತ್ತಿದ್ದಾರೆ. ಗ್ರಾಮೀಣ ಭಾಗದ ಮುಗ್ದತೆಯ ಪ್ರತಿರೂಪದಂತಿರುವ ಪ್ರೊ.ಜೋಗಿನ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದವರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು, ತಾಯಿಯ ತವರುಮನೆ ಬಟಪ್ಪನಹಳ್ಳಿಯ ಸೋದರ ಮಾವ ದೇವೇಂದ್ರಪ್ಪ ಗುರಿಕಾರ ಅವರ ಆಶ್ರಯದಲ್ಲಿ ಬದುಕನ್ನು ರೂಪಿಸಿಕೊಂಡರು. ಇವರ ತಾಯಿ ಯಮನಮ್ಮ ಆದರ್ಶ ಮಹಿಳೆ, ತನ್ನ ಮಗನ ಬಾಳಿಗೆ ಬೆಳಕಾಗುತ್ತಿರುವ ತವರು ಮನೆಯ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಂಡರು.
ಆ ಕಾಲದಲ್ಲಿ ಈಗಿನ ಹಾಗೆ ಊಟದ ಸೌಲಭ್ಯ ಇರಲಿಲ್ಲ, ತಾಯಿ ಕಟ್ಟುವ ಬುತ್ತಿ ಊಟ ವಿದ್ಯಾರ್ಥಿಗಳ ಹಸಿವು ನೀಗಿಸುತ್ತಿತ್ತು.
ಅದೇ ಪರಿಸರದ ಪ್ರತಿಭಾವಂತ ವಿದ್ಯಾರ್ಥಿಯಾದ ಮಾವ ಪ್ರೊ.ಎಚ್.ಡಿ.ಪಾಟೀಲ ( ಇವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದರು) ಅವರ ವ್ಯಕ್ತಿತ್ವದ ಪ್ರಭಾವ ರಾಮಚಂದ್ರನ ಮೇಲಾಯಿತು.‌
ಮುಂದೆ ಎಂ.ಕಾಂ. ಸ್ನಾತಕೋತ್ತರ ಪದವಿ ಪಡೆದ ನಂತರ ನಾಲ್ಕಾರು ಕಡೆಗೆ ತಾತ್ಕಾಲಿಕ ಉಪನ್ಯಾಸಕ ವೃತ್ತಿಯನ್ನು ಮಾಡಿದರು. ೧೯೯೩ ರಿಂದ ಕನಕದಾಸ ಶಿಕ್ಷಣ ಸಮಿತಿಯ ಕೆ.ವಿ.ಎಸ್.ಆರ್. ಪದವಿಪೂರ್ವ ಕಾಲೇಜಿನಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದರು. ವಿದ್ಯಾರ್ಥಿಗಳ ಹಿತ ಕಾಪಾಡುವ ಬಗೆ ಬಗೆಯ ಕಲಿಕಾ ವಿಧಾನಗಳನ್ನು ರೂಢಿಸಿಕೊಂಡು ಕಾಲೇಜಿನ ಕೀರ್ತಿ ಹೆಚ್ಚಿಸಿದರು.
ಸೌಮ್ಯ ಸ್ವಭಾವದ, ಅಗತ್ಯ ಇದ್ದಷ್ಟೇ ಮಾತನಾಡುವ, ಸಮಾಧಾನ ಗುಣಧರ್ಮದ ಜೋಗಿನ ನಮಗೆ ಸದಾ ಆಪ್ತ ಗೆಳೆಯನಾದ. ಏನಾದರೂ ಸಾಧಿಬೇಕೆಂಬ ಪಣ ತೊಟ್ಟು, ಲೆಕ್ಕಶಾಸ್ತ್ರ ಮತ್ತು ಬಿಸಿನೆಸ್ ಸ್ಟಡಿ ವಿಷಯಗಳ ಉಪನ್ಯಾಸಕರ ವೇದಿಕೆ ಮೂಲಕ ನೂರಾರು ಚಟುವಟಿಕೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ಕಾಮರ್ಸ್ ವಿಷಯದಲ್ಲಿ ಆಸಕ್ತಿ ಹೆಚ್ಚಿಸಿದ್ದಾರೆ. ಈಗ ವಿಜ್ಞಾನ ವಿಷಯದಷ್ಟೇ ಕಾಮರ್ಸ್ ವಿಷಯಕ್ಕೆ ಬೇಡಿಕೆ ಹೆಚ್ಚಾಗಲು ಪ್ರೊ.ಜೋಗಿನ ಅಂತವರ ಪರಿಶ್ರಮ, ಶ್ರದ್ಧೆಯೇ ಮೂಲ ಕಾರಣ.

ಅವರಿಗೆ ಸುದೀರ್ಘ ಮೂರು ದಶಕಗಳ ಸಂತೃಪ್ತ ಸೇವೆ ಸಲ್ಲಿಸಿದ ಸಮಾಧಾನವಿದೆ. ಇನ್ನೂ ಹರೆಯದ ಯುವಕನಂತೆ ಕಾಣುವ ರಾಮಚಂದ್ರ ಜೋಗಿನ ಅವರ ಆರೋಗ್ಯದ ಗುಟ್ಟೆಂದರೆ ಸಮಾಧಾನ ಮತ್ತು ಒಳ್ಳೆಯತನ.
ಜೋಗಿನ ಪಾಲಿನ ಬಹುದೊಡ್ಡ ಆಸ್ತಿಯೆಂದರೆ ಪ್ರತಿಭಾವಂತ ಮಕ್ಕಳು, ಆತ್ಮವಿಶ್ವಾಸ ನೀಡುವ ಸ್ನೇಹಿತರು ಮತ್ತು ಬಂಧುಗಳು, ವಿಶೇಷವಾಗಿ ಪ್ರೊ.ಎಚ್.ಡಿ.ಪಾಟೀಲ ಅವರು.

ಎಲ್ಲರಿಗಿಂತ ಮುಖ್ಯ ತಮಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಎಫ್. ದಂಡಿನ ಅವರನ್ನು ತಮ್ಮ ಪಾಲಿನ ದೇವರು ಎಂದು ವರ್ಣಿಸುತ್ತಾರೆ. ‘ಆ ಕಾಲದಲ್ಲಿ ಗ್ರಾಮೀಣ ಭಾಗದ ತಮ್ಮಂತಹ ಬಡ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸದಿದ್ದರೆ ಇಷ್ಟೆಲ್ಲ ಸಾಧನೆ ಸಾಧ್ಯವಾಗುತ್ತಿರಲಿಲ್ಲ’ ಎಂದು ವಿನೀತರಾಗಿ ನುಡಿಯುತ್ತಾರೆ.

ಮಗ ಹರೀಶ ಬಿ.ಇ. ಪದವಿ ಪಡೆದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದಾನೆ, ಅವಳಿ ಹೆಣ್ಣುಮಕ್ಕಳಾದ ಕವನಾ,ರಚನಾ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಹಂತ ತಲುಪಿದ್ದಾರೆ. ಆತ್ಮೀಯ ಸಹೃದಯಿ ಗೆಳೆಯ
ಪ್ರೊ. ರಾಮಚಂದ್ರ ಜೋಗಿನ ಅವರ ನಿವೃತ್ತ ಬದುಕು ನೆಮ್ಮದಿ ತರಲಿ ಮತ್ತು ಅವರ ಅನುಭವದ ಲಾಭ ಸಮಾಜಕ್ಕೆ ಲಭಿಸಲಿ ಎಂದು ಹಾರೈಸುತ್ತೇನೆ.

-ಪ್ರೊ.ಸಿದ್ದು ಯಾಪಲಪರವಿ.
ಪ್ರಾಚಾರ್ಯರು, ಕೆ.ವಿ.ಎಸ್.ಆರ್‌. ಕಾಲೇಜು, ತಿಮ್ಮಾಪೂರ.
೯೪೪೮೩೫೮೦೪೦

Don`t copy text!