ಗುರುವಿಗೆ

ಗುರುವಿಗೆ

ಗುರುವೇ…..ವರಗುರುವೇ…..
ಮಹಾಗುರುವೇ……ಪರಮಗುರುವೇ…..
ಸದ್ಗುರುವೇ……
ನಿನಗೆ ಶರಣು…ಸಾ…ವಿರದ ಶರಣು….

ಜಗವ ಕಾಣುವ ಮೊದಲೇ
ಅದರರಿವು ಇತ್ತವ ನೀನು
ಹಸಿದಡೆ ಉಣ್ಣುವುದು
ದಣಿದಡೆ ಮಲಗುವದು
ಸೂರ್ಯ ಚಂದ್ರರ ನೋಡಿ
ನಕ್ಕು ನಲಿದಾಡುವದು
ತೊಟ್ಟಿಲೊಳು ಮಲಗಿದವಗೆ
ಎಲ್ಲವನು ಪ್ರೀತಿಸಲು
ಕಲಿಸಿದ ನೀನು
ಗುರುವೇ…..ನಿನಗೆ ಶರಣು…

ಅಮ್ಮನೇ ಮೊದಲಾದ
ಬಂಧುಗಳ ತೋರಿದವ ನೀನು
ಹೂ ಕಾಯಿ ಹಣ್ಣುಗಳಿಗೆ
ಆಸೆಯನಿಕ್ಕುತಲಿ
ಜಗದ ರುಚಿಯ
ಕಲಿಸಿದೆ ನೀನು
ಗುರುವೇ…..ನಿನಗೆ ಶರಣು…..

ನುಡಿಯಲು ಕಲಿಸಿದೆ ನೀನು
ನಡೆಯಲು ಕಲಿಸಿದೆ ನೀನು
ಓದುವ ಬರಹದಲಿ
ಬ್ರಹ್ಮಾಂಡವ ತೋರಿದೆ ನೀನು
ನೂರು ದಾರಿಗಳಲ್ಲಿ
ಬದುಕನು ಕಲಿಸಿದೆ ನೀನು
ಗುರುವೇ…ನಿನಗೆ ಶರಣು….

ನಾನಾರೆಂಬುವ ಮಾತು
ಮರೆತು ಸಾಯುವ ಜಗಕೆ
ಪರಿಪರಿಯಾಗಿ ಅರುಹುವ
ಕರುಣಾಳು ನೀನೇ…..
ಎಲ್ಲವೂ ನಾನೇ….
ಜಗವೆಲ್ಲವೂ ನನ್ನಿಂದೆ
ಎಂಬೀ ಬರಿ ಮಾತಿನ
ಸದ್ದಡಗಿಸಿದ ಗುರುವೇ
ನಾನೆಂಬುದು ಇಲ್ಲಿಲ್ಲ
ಯಾವದೂ ನಿನ್ನಿಂದಲ್ಲ
ಹರನ ಕರುಣೆಯೇ
ನರ ರೂಪದ ನೀನೆಂದು
ಅರುಹಿದ ಸುರ ಗುರುವೇ
ನಿನಗೆ ಶರಣು…

ನರಜನ್ಮವ ತೊಡೆದು
ಹರಜನ್ಮವ ತಾಳುದಕೆ
ಸಕಲ ಜೀವಕೆ ಎಲ್ಲ
ಪ್ರೀತಿಯನುಣಿಸುದಕೆ
ಬರೀಮಾನವನೆಂಬುದನಳಿಸಿ
ಮಹಾದೇವನಾಗಿಸಿದ
ಗುರುವೇ ನಿನಗೆ ಶರಣು…

ತಾಯಿಯಾಗಿ ಕಲಿಸಿ
ತಂದೆಯಾಗಿ ಸಲಹಿ
ಓದಲು ಶಾಲೆಗೆ ಕರೆಸಿ
ತಿದ್ದಿ ತೀಡಿ ಬರೆಸಿ
ಬುದ್ಧಿಯನು ಹರಹುತ್ತ
ಶುದ್ಧ ಜ್ಞಾನದಿಂದ
ಬುದ್ಧನಾಗಿಸಿದ ಗುರುವೇ
ಶರಣು ನಿನಗೆ ಶರಣು
ಸಾ…ವಿರದ ಶರಣು…

-ಕೆ.ಶಶಿಕಾಂತ

Don`t copy text!