ನಿಜಸುಖಿ ಶರಣ ಹಡಪದ ಅಪ್ಪಣ್ಣ
ಹನ್ನೆರಡನೆಯ ಶತಮಾನದಲ್ಲಿ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳುವಳಿ. ಈ ಚಳುವಳಿಯಲ್ಲಿ ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ,ಅವಮಾನಕ್ಕೊಳಗಾಗಿದ್ದ ಕಷ್ಟಸಹಿಷ್ಣುಗಳು, ಶ್ರಮಜೀವಿಗಳೆಲ್ಲರೂ ಒಂದಾಗಿ ಇದಕ್ಕೆಲ್ಲ ಕಾರಣವಾದ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು.ಜಾತಿ,ವರ್ಣ,ವರ್ಗ,ಲಿಂಗವನ್ನು ಆಧರಿಸಿ ಅಸಮಾನತೆಯಿಂದ ನಿರ್ಮಾಣಗೊಂಡಿದ್ದ ಸಮಾಜವನ್ನು ಧಿಕ್ಕರಿಸಿ ಪ್ರತಿಯಾಗಿ ಸಹಬಾಳ್ವೆ, ಸಮಾನತೆ, ಪರಸ್ಪರ ಸಹಕಾರ, ಸಹಾನುಭೂತಿ, ಅರಿವು, ಆಚಾರ, ನಡೆನುಡಿ ಸಿದ್ಧಾಂತಗಳ ಆಧಾರದ ಮೇಲೆ ಜನಮುಖಿ ಶರಣ ಸಮಾಜವನ್ನು ನಿರ್ಮಿಸಿದರು. ಅಂದಿನ ಸಮಾಜವು ತಮ್ಮಲ್ಲಿ ಬಿತ್ತಿದ ಕಿಳುರಿಮೆ,ಭಯ,ಅವೈಚಾರಿಕತೆಗಳಿಂದ ಬಿಡುಗಡೆ ಪಡೆದರು.ಕಸಬುದಾರರು,ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಸ್ಪೃಶ್ಯರು ಅಕ್ಷರಜ್ಞಾನವನ್ನು, ವೈಚಾರಿಕತೆಯ ಮನೋಭಾವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರತಿಭಟನೆಯ ಕಿಚ್ಚನ್ನು ಪಡೆದುಕೊಂಡರು.ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಹಿತ್ಯವನ್ನು ಮಾಧ್ಯಮವಾಗಿ ಮಾಡಿಕೊಂಡರು. ದುಡಿಯುವವರ್ಗದ,ಮಹಿಳೆಯರ, ದಲಿತರ, ದುರ್ಬಲರ ಧ್ವನಿಯಾಗಿ ವಚನಸಾಹಿತ್ಯ ರೂಪಗೊಂಡಿತು.ಈ ಚಳುವಳಿಯಲ್ಲಿ ಅಸಂಖ್ಯಾತ ಶರಣರು ಭಾಗಿಯಾಗಿದ್ದರು.ಹನ್ನೆರಡನೆಯ ಶತಮಾನದಲ್ಲಿ ನಡೆದ ಈ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಪ್ರಮುಖ ಹರಿಕಾರರಲ್ಲಿ ಶರಣ ಹಡಪದ ಅಪ್ಪಣ್ಣನವರು ಒಬ್ಬರು.
“ನಿಜಸುಖಿ ಅಪ್ಪಣ್ಣ” ಎಂದು ಕರೆಯಿಸಿಕೊಂಡ ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದ ಚೆನ್ನವೀರಪ್ಪ-ದೇವಕಮ್ಮನವರ ಮಗ.ದೇಗಿನಾಳ ಗ್ರಾಮದ ಜೀರ ನಾಗಪ್ಪ-ಚೆನ್ನಬಸಮ್ಮನವರ ಮಗಳಾದ ವಚನಕಾರ್ತಿ ‘ನಿಜಮುಕ್ತೆ ಹಡಪದ ಲಿಂಗಮ್ಮ’ ಇವರ ಪತ್ನಿ .ಇವರ ಕಾಲವನ್ನು ಸುಮಾರು ೧೧೬೦ ಎಂದು ಗುರುತಿಸಲಾಗುತ್ತದೆ. ಇವರು “ಬಸವಪ್ರಿಯ ಕೂಡಲ ಚೆನ್ನಬಸವಣ್ಣ” ಎಂಬ ಅಂಕಿತನಾಮದಲ್ಲಿ ಸುಮಾರು ೨೫೦ ವಚನಗಳನ್ನು ರಚಿಸಿದ್ದಾರೆ. ಪತ್ನಿ ಲಿಂಗಮ್ಮನವರು ಅಪ್ಪಣಪ್ರಿಯ ಚೆನ್ನಕೂಡಲಸಂಗಮದೇವ ಅಂಕಿತದಲ್ಲಿ ೧೧೪ ವಚನಗಳನ್ನು ರಚಿಸಿದ್ದಾರೆ.ಕಲ್ಯಾಣ ಕ್ರಾಂತಿಯ ತರುವಾಯ ಇವರು ತಂಗಡಗಿಯಲ್ಲಿ ಐಕ್ಯರಾಗಿದ್ದು, ಅಲ್ಲಿ ಇವರ ಸಮಾಧಿ ಇದೆ. ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನಲ್ಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹವಿದೆ.
ಅಪ್ಪಣ್ಣನವರ ಹೆಸರಿನೊಂದಿಗೆ ಸೇರಿಕೊಂಡಿರುವ ‘ಹಡಪ’ ಎಂಬ ಪದಕ್ಕೆ ಎಲೆ ಅಡಿಕೆ ಇಡುವ ಚೀಲ,ಕ್ಷೌರಿಕರು ಕ್ಷೌರಕ್ಕೆ ಬಳಸುವ ವಸ್ತುಗಳನ್ನು ಇಡುವ ಚೀಲ ಎಂಬ ಅರ್ಥಗಳಿವೆ.ಅಪ್ಪಣ್ಣನವರು ತಾಂಬೂಲ ವೃತ್ತಿಯವರಾಗಿದ್ದರೆ ಅಥವಾ ಕ್ಷೌರಿಕ ವೃತ್ತಿಯವರಾಗಿದ್ದರೆ ಎಂದು ಅವರ ವೃತ್ತಿಯ ಬಗ್ಗೆ ಗೊಂದಲಗಳಿವೆ.”ಶರಣ ಲೀಲಾಮೃತ “ದಲ್ಲಿ ಬಿಜ್ಜಳನ ಆಸ್ಥಾನದಲ್ಲಿದ್ದ ಬಸವಣ್ಣನವರಿಗೆ ಅಪ್ಪಣ್ಣನವರು ತಾಂಬೂಲ ಕಳುಹಿಸಿಕೊಟ್ಟ ತಾಂಬೂಲ ಪವಾಡದ ಕತೆ ಇರುವುದರಿಂದ ಶರಣರಿಗೆ ತಾಂಬೂಲ ಪೂರೈಸುವ ವೃತ್ತಿಯನ್ನು ಇವರು ಮಾಡಿರಬಹುದು ಎನ್ನಲಾಗುತ್ತದೆ. ಇಂದು ಕ್ಷೌರಿಕ ವೃತ್ತಿಯನ್ನು ಮಾಡುವ ಹಡಪದ ಸಮಾಜದವರು ಹಡಪದ ಅಪ್ಪಣ್ಣನೇ ತಮ್ಮ ಸಮಾಜದ ಮೂಲಪುರುಷ ಎನ್ನುತ್ತಾರೆ. ಜೊತೆಗೆ ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದುರಿಗೆ ಬಂದರೆ ಅಪಶಕುನವಾಗುತ್ತದೆ ಎಂಬ ಮೂಢನಂಬಿಕೆ ಸಮಾಜದಲ್ಲಿದ್ದು ಅದನ್ನು ಹೋಗಲಾಡಿಸಲು ಬಸವಣ್ಣನವರು ಯಾರೇ ಬಂದರೂ ಮೊದಲು ಅಪ್ಪಣ್ಣನವರನ್ನು ನೋಡಿಕೊಂಡೆ ಬರಬೇಕೆಂಬ ನಿಯಮ ಮಾಡಿದ್ದರೆಂಬ ಪ್ರತೀತಿ ಇದೆ. ಹೀಗಾಗಿ ಅಪ್ಪಣ್ಣನವರು ಶರಣರ ಕ್ಷೌರ ಮಾಡುವ ವೃತ್ತಿಯನ್ನು ಮಾಡುತ್ತಿದ್ದರು ಎಂಬ ಅಭಿಪ್ರಾಯಗಳಿವೆ. ಅಪ್ಪಣ್ಣನವರು ತಮ್ಮ ಒಂದು ವಚನದಲ್ಲಿ ಮಾತ್ರ ‘ನಿಮ್ಮ ಮರೆಯಲಡಗಿಪ್ಪ ಹಡಪಿಗ ನಾನಯ್ಯ’ ಎನ್ನುತ್ತಾರೆ ಹೊರತು ಅಲ್ಲಿ ಅವರ ವೃತ್ತಿಯನ್ನು ಪ್ರಸ್ತಾಪಿಸಿಲ್ಲ.ಹಾಗಾಗಿ ಅವರ ವೃತ್ತಿಯ ಬಗ್ಗೆ ಇನ್ನೂ ಗೊಂದಲಗಳಿವೆ .
ಮಸಬಿನಾಳದ ಶಿವಶಂಕರಯ್ಯಸ್ವಾಮಿ ಹಿರೇಮಠ ಮತ್ತು ವಿಜಯಪುರದ ಈಶ್ವರಯ್ಯ ಗಣಾಚಾರಿ ಅವರಿಂದ ಶಿಕ್ಷಣ ಪಡೆದ ಅಪ್ಪಣ್ಣನವರು ತಮ್ಮ ಗುರುಗಳೊಂದಿಗೆ ಕೂಡಲಸಂಗಮಕ್ಕೆ ತೆರಳಿ ಕೆಲವು ದಿನ ಅಲ್ಲಿ ನೆಲಸುತ್ತಾರೆ.ಅದೇ ಕಾರಣದಿಂದ ಪ್ರಭುದೇವರು ‘ಗುಹೇಶ್ವರದ ಶರಣ ಸಂಗಮೇಶ್ವರದ ಅಪ್ಪಣ್ಣ ‘ ಎಂದು ಇವರನ್ನು ಕರೆದಿರಬಹುದು.
ಇದೇ ಸಂದರ್ಭದಲ್ಲಿ ಅಕ್ಕನ ಉಪನಯನದ ವಿಚಾರದಿಂದ ಮನೆ ತೊರೆದಿದ್ದ ಬಸವಣ್ಣನವರು ಕೂಡಲಸಂಗಮದಲ್ಲಿ ನೆಲಸಿದ್ದು ಇವರಿಬ್ಬರ ನಡುವೆ ಬಾಂಧವ್ಯ ಬೆಳಯುತ್ತದೆ.ತರುವಾಯ ಕಲ್ಯಾಣಕ್ಕೆ ತೆರಳಿದ ಅಣ್ಣ ,ಶರಣರ ಖ್ಯಾತಿ ತಿಳಿದು ಕಲ್ಯಾಣಕ್ಕೆ ಬಂದಬಾಲ್ಯದ ಜೊತೆಗಾರ ಅಪ್ಪಣ್ಣನವರನ್ನು ಅನುಭವಮಂಟಪದಲ್ಲಿ ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳುತ್ತಾರೆ.
ಅಣ್ಣನ ನಿಕಟವರ್ತಿಯಾಗಿದ್ದ ಅಪ್ಪಣ್ಣನವರು ಅಣ್ಣನ ಬಗ್ಗೆ ಅಪಾರವಾದ ಗೌರವ ಭಕ್ತಿ ಹೊಂದಿದ್ದು ಕಾಯಾ ವಾಚಾ ಮನಸ್ಸಿನಿಂದ ಅವರ ಸೇವೆ ಮಾಡಿ
ಅಣ್ಣನ ಕೊನೆಗಾಲದವರಗೂ ಅವರ ಒಡನಾಡಿಯಾಗಿ,ಆಪ್ತಸೇವಕನಾಗಿ ಬಾಳುತ್ತಾರೆ.
ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು
ಎನ್ನ ಅರಿವು ನಿಮ್ಮ ಘನ ದೊಳಗೆ ಸವೆದು
ನಿಶ್ಚಲ ನಿಜೈಕೈವಾಗಿ ಬಸವಪ್ರಿಯ ಕೂಡಲ ಸಂಗಯ್ಯಾ
ನಾ ನೀನೆಂಬುದು ಏನಾಯಿತೆಂದರಿಯೆ.
ಎನ್ನ ಆಚಾರ-ವಿಚಾರ ಬಸವಣ್ಣಗರ್ಪಿತವಾದುವು ಎನ್ನ ಅವಧಾನ ಅನುಭಾವ
ಬಸವಣ್ಣಗಅರ್ಪಿತವಾದವು
ಎನ್ನ ಸರ್ವಾಚಾರ ಸಂಪತ್ತು ಬಸವಣ್ಣನಲ್ಲಿ ವೇದ್ಯವಾಯಿತು
ಬಸವಪ್ರಿಯ ಕೂಡಲಚೆನ್ನಸಂಗಮದೇವರಲ್ಲಿ ನಿಜವಾಸಿಯಾಗಿದ್ದೇನು”
ಅಪ್ಪಣ್ಣನವರ ಈ ವಚನಗಳು ಬಸವಣ್ಣನವರ ಬಗ್ಗೆ ಅವರಲ್ಲಿದ್ದ ನಿಷ್ಕಲ್ಮಶ ಭಕ್ತಿ, ಗೌರವವನ್ನು ವ್ಯಕ್ತಪಡಿಸುತ್ತವೆ.
ಪಾರಮಾರ್ಥಿಕ ವಿಷಯದಲ್ಲಿ ಚಾಣಾಕ್ಷ ತಿಳುವಳಿಕೆಯುಳ್ಳವನಾಗಿದ್ದ ಅಪ್ಪಣ್ಣನವರು ಲೌಕಿಕ ಮಾತ್ರವಲ್ಲ ಪಾರಮಾರ್ಥದಲ್ಲಿಯೂ ಬಸವಣ್ಣನವರಿಗೆ ಸಹಾಯಕನಾಗಿದ್ದು ಲೌಕಿಕ, ಪಾರಮಾರ್ಥಿಕಗಳೆರಡನ್ನು ಯಾವ ಎಡರುತೊಡರುಗಳಿಲ್ಲದೆ ಲೀಲಾಜಾಲವಾಗಿ ತೂಗಿಸಿಕೊಂಡು ಹೋಗುತ್ತಿದ್ದರು.ಇದಕ್ಕಾಗಿಯೇ ಶರಣರೆಲ್ಲ ಅವನನ್ನು “ನಿಜಸುಖಿ ಅಪ್ಪಣ್ಣ'” ಎಂದೂ,ಇವರ ಶರಣಸತಿ ಶ್ರೇಷ್ಠ ಅನುಭಾವಿ ಲಿಂಗಮ್ಮನನ್ನು ನಿಜಮುಕ್ತೆ ಎಂದು ಕರೆದರು.
ಅಲ್ಲಮಪ್ರಭು ಮೊದಲಬಾರಿಗೆ ಸಿದ್ದರಾಮೇಶ್ವರರೊಡನೆ ಕಲ್ಯಾಣಕ್ಕೆ ಬಂದಾಗ, ಲಿಂಗಪೂಜೆಗೆ ಕುಳಿತಿದ್ದ ಬಸವಣ್ಣ ಲಿಂಗಪೂಜೆ ಬಿಟ್ಟು ಎದ್ದುಬಾರದಿದ್ದಾಗ, ಬಂದವರಲ್ಲಿ “ಪ್ರಭುದೇವರ ಭಾವ ತೋರುತ್ತದೆ” ಎಂಬ ಮಾತನ್ನು ಬಸವಣ್ಣನವರಿಗೆ ತಿಳಿಸಿ ಪ್ರಭುದೇವರನ್ನು ಎದುರುಗೊಳ್ಳುವಂತೆ ಮಾಡಿ ಪ್ರಭುದೇವ-ಬಸವಣ್ಣನವರ ಮಧ್ಯ ಸೂಕ್ಷ್ಮವಾದ ರೀತಿಯಲ್ಲಿ ದೌತ್ಯವನ್ನು ನಡೆಸಿ ಬಿರುಕು ಮೂಡದಂತೆ ತಡೆದ ಅಪ್ಪಣ್ಣನವರು ಯಾವುದೇ ಸಂದರ್ಭದಲ್ಲಿಯೂ ಬಸವಣ್ಣನವರಿಗೆ ಮೂಜುಗರವಾಗದಂತೆ ಕಾರ್ಯನಿರ್ವಹಿಸುತ್ತಾರೆ.
ಅಪ್ಪಣ್ಣನವರು ತಮ್ಮ ಮೇಲಿಟ್ಟಿರುವ ಈ ನಿಷ್ಠೆಯಿಂದಲೆ ಅಣ್ಣ ” ಹಡಪದ ಅಪ್ಪಣ್ಣನಿಂದ ಕಂಡ ಎನ್ನ ಜನ್ಮ ಸಫಲವಾಯಿತ್ತಯ್ಯಾ” ಎಂದು ಹೇಳುತ್ತಾರೆ.
ಶರಣರ ಎಳೆಹೂಟಿ ಪ್ರಸಂಗದಿಂದ ಕಲ್ಯಾಣದಲ್ಲಿ ಕ್ರಾತಿಯುಂಟಾದಾಗ ಅಣ್ಣ ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ತೆರಳುವಾಗ ಯಾರನ್ನೂ ತಮ್ಮ ಸಂಗಡ ಕರೆದುಕೊಂಡು ಹೋಗದಿದ್ದರೂ, ತನ್ನ ಒಡನಾಡಿ ಅಪ್ಪಣ್ಣನವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅರ್ಧದಾರಿಯಲ್ಲಿ ಮನಸ್ಸು ಬದಲಿಸಿ ನೀಲಮ್ಮನನ್ನು ಕರೆತರಲು ಕಳಿಸುತ್ತಾರೆ.
ಅವರ ಅಪ್ಪಣೆಯ ಮೇರೆಗೆ ಕಲ್ಯಾಣಕ್ಕೆ ಹೋಗಿ ನೀಲಮ್ಮನವರನ್ನು ಕರೆತರುವಷ್ಟರಲ್ಲಯೇ ಬಸವಣ್ಣನವರು ಐಕ್ಯರಾದ ಸಂಗತಿ ತಿಳಿಯುತ್ತದೆ. ಆಮೇಲೆ ನೀಲಮ್ಮ ಮತ್ತು ಅಪ್ಪಣ್ಣನವರು ತಂಗಡಗಿಯಲ್ಲಿ ಲಿಂಗೈಕ್ಯರಾಗುತ್ತಾರೆ.
ಅನುಭವ ಮಂಟಪದ ಮಹಾನುಭಾವಿಯಾದ ಹಡಪದ ಅಪ್ಪಣ್ಣನವರು ಬಸವಪ್ರಿಯ ಕೂಡಲಚೆನ್ನಬಸವಣ್ಣ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ .ಇವರ ವಚನಗಳಲ್ಲಿ ಷಟಸ್ಥಲದ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಪ್ರಭುದೇವ,ಅಕ್ಕಮಹಾದೇವಿಯರಂತೆ ಅಪ್ಪಣ್ಣನವರು ಸಹ ಬೆಡಗಿನ ವಚನಗಳನ್ನು ರಚಿಸಿದ್ದು, ಕಾಯಕನಿಷ್ಠೆ, ದಾಸೋಹ ನಿಷ್ಠೆ, ಭಕ್ತಿ, ವೈರಾಗ್ಯ, ಆಚಾರ ವಿಚಾರ ಇತ್ಯಾದಿ ವಿಷಯಗಳನ್ನು ವೈಚಾರಿಕತೆಯ ನೆಲೆಯಲ್ಲಿ ವಿಡಂಬನಾತ್ಮಕವಾಗಿ ಇವರು ತಮ್ಮ ಬೆಡಗಿನ ವಚನಗಳಲ್ಲಿ ತಿಳಿಸುತ್ತಾರೆ.ಇವರ ವಚನಗಳು ಅಂಧಕಾರದಲ್ಲಿ ಮುಳುಗಿದ ಅಜ್ಞಾನಿಗಳಿಗೆ ಸನ್ಮಾರ್ಗವನ್ನು ತೋರಿಸುವ ದಾರಿದೀಪಗಳಾದರೆ,ಶೋಷಕವರ್ಗಕ್ಕೆ ಚಾಟಿ ಎಟಿನಂತಿವೆ.
ಪ್ರಸ್ತುತ ಸಮಾಜದಲ್ಲಿ ವಿವೇಕರಹಿತ ನಡೆಯನ್ನು ರೂಢಿಸಿಕೊಂಡು, ಪ್ರಕೃತಿಯ ಚರಾಚರವು ತನ್ನ ಪಿತ್ರಾರ್ಜಿತ ಆಸ್ತಿ ಎಂದು ಭಾವಿಸಿ,ಮತ್ತೊಬ್ಬರಿಗೆ ಮಾಡುವ ಅತಿ ಚಿಕ್ಕ ಸಹಾಯವನ್ನು ಊರಿಗೆ ಡಂಗುರ ಸಾರಿ ದುರಃಹಂಕಾರದಿಂದ ಮೆರೆಯುವ ವರ್ಗವನ್ನು ಮತ್ತು ಇವರ ಈ ಗುಣವನ್ನು ಶೋಷಣೆಗೆ ಅಸ್ತ್ರವನ್ನಾಗಿ ಮಾಡಿಕೊಂಡ ಶೋಷಕ ವರ್ಗಕ್ಕೆ ಅಪ್ಪಣ್ಣ ಪ್ರಶ್ನೆಗಳ ಸರಮಾಲೆಯನ್ನೆ ಇಡುತ್ತಾರೆ.
ಅನ್ನವನ್ನಿಕ್ಕಿದರೇನು? ಹೊನ್ನ ಕೊಟ್ಟರೇನು?
ಹೆಣ್ಣು ಕೊಟ್ಟರೇನು? ಮಣ್ಣು ಕೊಟ್ಟರೇನು?
ಪುಣ್ಯ ಉಂಟೆಂಬರು.ಅವರಿಂದಾದೊಡವೆ
ಏನು ಅವರೀವುದಕ್ಕೆ? ಇದಕ್ಕೆ ಪುಣ್ಯವಾವುದು, ಪಾಪವಾವುದು? ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಸಮಾಜದಲ್ಲಿ ಮೇಲ್ಜಾತಿಯವರೆನಿಸಿಕೊಂಡವರು ಕೆಳಜಾತಿಯವರಲ್ಲಿ ನಿಮ್ಮ ಈ ಸ್ಥಿತಿಗೆ ನಿಮ್ಮ ಪಾಪಗಳೆ ಕಾರಣ. ತಮಗೆ ಗೋದಾನ,ಭೂದಾನ,ಅನ್ನದಾನ,ಕನ್ಯಾದನ ಮುಂತಾದವುಗಳನ್ನು ಮಾಡುವ ಮೂಲಕ ನಿಮ್ಮ ಪಾಪಗಳನ್ನು ಕಳೆದುಕೊಳ್ಳಬಹುದು ಎಂಬ ಮೌಢ್ಯವನ್ನು ಬಿತ್ತಿದ್ದರು.ಅಜ್ಞಾನದಲ್ಲಿ ಮುಳುಗಿದ್ದ ಶ್ರಮಿಕವರ್ಗ ತಮ್ಮ ದುಡಿಮೆಯನ್ನೆಲ್ಲ ಅಲ್ಲಿಯೇ ಸುರಿದು ಕಷ್ಟದ ಬದುಕನ್ನು ನಡೆಸುವುದನ್ನು ಕಂಡ ಅಪ್ಪಣ್ಣನವರು ಅನ್ನ, ನೀರು, ಹಣ ಇತ್ಯಾದಿಗಳನ್ನು ಕೊಟ್ಟು ಪುಣ್ಯ ಪಡೆಯಲು ಆ ವಸ್ತುಗಳನ್ನೇನು ನೀವು ಸೃಷ್ಟಿಸಿರುವಿರಾ? ಎಂದು ಪ್ರಶ್ನಿಸುವ ಮೂಲಕ ವೈಚಾರಿಕ ಸತ್ಯ ವಿಚಾರಗಳನ್ನು ಅರಿಯದೇ ವರ್ತಿಸುವ ಜನರನ್ನು ತಿದ್ದಲು ಪ್ರಯತ್ನಿಸುತ್ತಾರೆ.
ಜ್ಯೋತಿಷ್ಯ,ಶಾಸ್ತ್ರ, ಪುರಾಣ ಎಂದು ನಂಬಿ ತಮ್ಮ ಅರಿವಿನ ಜ್ಞಾನವನ್ನು ಪಡೆಯದೆ ಮೂಢನಂಬಿಕೆಯ ದಾಸರಾದ ಜನರನ್ನು ಎಚ್ಚರಿಸುವ ಪ್ರಯತ್ನವನ್ನು ಅಪ್ಪಣ್ಣನವರು ಮಾಡುತ್ತಾರೆ.
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು
ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ.
ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ.
ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ.
ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ,
ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು.
ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ,ಬಸವಪ್ರಿಯ ಕೂಡಲಚೆನ್ನಬಸವಣ್ಣ
ಮುಂಜಾನೆ,ಮಧ್ಯಾಹ್ನ,ಸಾಯಂಕಾಲ, ರಾತ್ರಿ ಇವೆಲ್ಲವೂ ಪ್ರಾಕೃತಿಕ ಕ್ರಿಯೆಗಳು. ದಿನ, ವಾರ, ವರ್ಷಗಳೂ ಸಹ ನಮ್ಮ ಗುರುತಿಗಾಗಿ ಮಾಡಿಟ್ಟುಕೊಂಡ ಚಿಂತನೆಯ ಸಾರ. ಆದರೆ ಇವುಗಳ ಸಾರವನ್ನು ಅರಿಯದ ಮನುಷ್ಯ ಅವುಗಳ ಒಳಗೆ ತನ್ನ ಬದುಕಿನ ಒಳಿತು, ಕೆಡುಕುಗಳನ್ನು ತಳುಕು ಹಾಕಿಕೊಂಡು ಏಗುತ್ತಿದ್ದಾನೆ.
ಹಲವಾರು ನಂಬಿಕೆಗಳ ದಾಸನಾಗಿ ಆ ನಂಬಿಕೆಗಳ ಹಿಂದಿನ ಸತ್ಯಾಸತ್ಯತೆಯನ್ನು ಪರಾಮರ್ಶಿಸುವ , ಪ್ರಶ್ನಿಸುವ, ವಿವೇಚಿಸುವ ಗೋಜಿಗೆ ಹೋಗಿಲ್ಲ. ಈಗ ಅವೆಲ್ಲ ಪೆಡಂಭೂತದಂತೆ ನಮ್ಮ ಬೆನ್ನು ಬಿದ್ದಿವೆ. ಇಂತಹ ಕಲ್ಮಷ ನಮ್ಮ ಬಿಟ್ಟು ಹೋಗಬೇಕಾದರೆ ಶರಣರ ವಚನದ ರಸಾಯನ ನಮ್ಮ ಹೃದಯ, ಮಿದುಳು ತುಂಬಬೇಕು. ಶರಣರ ವೈಚಾರಿಕ ತತ್ವಗಳನ್ನು ಅಳವಡಿಸಿಕೊಂಡು ಜೀವಕಂಟಕವಾದ ಮೂಢನಂಬಿಕೆಗಳಿಂದ ಹೊರಬರಲು ಅಪ್ಪಣ್ಣ ಸಮಾಜಕ್ಕೆ ಕರೆಕೊಡುತ್ತಾರೆ.
ಶರಣರು ಭಕ್ತಿಗೆ ಪ್ರಾಮುಖ್ಯತೆ ನೀಡಿದ್ದರು. ಭಕ್ತಿಯೆಂಬುದು ತೋರುಂಬ ಲಾಭವಲ್ಲ. ಹಾಗೆಯೇ ಭಕ್ತನಾಗುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಅಂಥದ್ದರಲ್ಲಿ ಸಮಾಜದಲ್ಲಿ ಡಾಂಭಿಕಭಕ್ತಿಯನ್ನು ಆಚರಿಸಿಕೊಂಡು ಭಕ್ತಿಯ ಹೆಸರಿನಿಂದ ಜನರನ್ನು ಮೋಸಗೊಳಿಸುವ ಜನರು ಸಾಕಷ್ಟಿದ್ದರು.ಅವರನ್ನು ಅಪ್ಪಣ್ಣನವರು ವಿಡಂಬಿಸುತ್ತಾರೆ.
ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ.
ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ.
ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ.
ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ,
ಲಿಂಗ ಜಂಗಮಕ್ಕೆ ದೂರ,
ನಮ್ಮ ಶರಣರ ಸಂಗಸುಖಕ್ಕೆ ಸಲ್ಲರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
ಹೊಟ್ಟಹೊರೆಯಲು ಭಕ್ತಿಯನ್ನು ಮಾರ್ಗವನ್ನಾಗಿ ಮಾಡಿಕೊಂಡು, ಆಸೆಗೆ ಮೋಸದ ಕ್ರಿಯೆ ನಡೆಸಿದರೆ ಅದರಿಂದ ಯಾವ ಲಾಭವೂ ಆಗಲಾರದು. ಅಂತಹ ಮೋಸಗಾರರಿಂದ ದೂರವಿದ್ದು ಭಕ್ತಿಯನ್ನು ಸನ್ಮಾರ್ಗದ ಬದುಕಿನ ಕ್ರಮವೆಂದು ಭಾವಿಸಿದರೆ ಅದರಿಂದ ಮುಕ್ತಿ ದೊರೆಯುತ್ತದೆ.ಶರಣರ ಸಂಘದಿಂದ ಮಾತ್ರ ಇದು ಸಾಧ್ಯ.
ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಕಂಡುಬರುವ ಅಪ್ಪಣ್ಣನವರ ವಚನಗಳು ಸಹಜ ಸರಳವಾಗಿದ್ದು, ಕೆಲವು ವಚನಗಳಲ್ಲಿ ಕಥಾಶೈಲಿಯ ಬಳಕೆಯನ್ನು ಇವರು ಮಾಡುತ್ತಾರೆ. ತತ್ವ ನಿರೂಪಣೆಯ ಸಂಧರ್ಭದಲ್ಲಿ ಲೋಕಪ್ರಸಿದ್ಧ ನಿದರ್ಶನಗಳನ್ನು ಬಳಸಿರುವದನ್ನು ಕಾಣಬಹುದು.ಇವರ ವಚನಗಳು ಗ್ರಹಿಸಲು ಸುಲಭವಾಗಿದ್ದು ಸಮಾಜಕ್ಕೆ ಮೌಲಿಕ ಸಂದೇಶಗಳನ್ನು ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಕ್ರಾಂತಿಕಾರಕ ಧೋರಣೆ, ವೈಚಾರಿಕತೆಯ ನೆಲೆಯ ಅಪ್ಪಣ್ಣನವರ ವಚನಗಳು ಸಮಾಜಕ್ಕೆ ಬೆಳಕಾಗಿ, ದಮನಿತರ ದನಿಯಾಗಿ, ದಾರಿ ತಪ್ಪಿತ ಸಮಾಜವನ್ನು ತಮ್ಮ ಬಂಡಾಯದ ಧ್ವನಿಯ ಮೂಲಕ ಸರಿದಾರಿಯಲ್ಲಿ ತರುವಲ್ಲಿ ಪ್ರಮುಖಪಾತ್ರವನ್ನು ವಹಿಸುತ್ತವೆ.
–ಡಾ.ರಾಜೇಶ್ವರಿ ವೀ.ಶೀಲವಂತ
ಬೀಳಗಿ
.