ಹಡಪದ ಕುಲತಿಲಕ,ಬಸವಣ್ಣನ ಮೂರನೆ ಕಣ್ಣು ಹಡಪದ ಅಪ್ಪಣ್ಣ.

ಹಡಪದ ಕುಲತಿಲಕ,ಬಸವಣ್ಣನ ಮೂರನೆ ಕಣ್ಣು ಹಡಪದ ಅಪ್ಪಣ್ಣ

ನಾವ್ಯಾರು? ನಾವೇಕೆ ಇಲ್ಲಿಗೆ ಬಂದಿದ್ದೇವೆ? ನಾವೇನು ಮಾಡಬೇಕಾಗಿತ್ತು?ಈಗ ಏನುಮಾಡುತ್ತಿದ್ದೇವೆ? ಎಂಬ ಮೂಲಭೂತವಾದ ಪ್ರಶ್ನೆಗಳಿಗೆ ಪ್ರಾಚೀನಕಾಲದಿಂದ ಆರ್ವಾಚೀನ ಕಾಲದವರೆಗೆ ಬದುಕಿ ಬಾಳುತ್ತಿರುವ ಸಂತ, ಮಹಾಂತ,ಚಿಂತಕ,ಶಿವಶರಣರ ಬದುಕು ಬರಹಗಳೇ ಉತ್ತರವನ್ನು ಹೇಳುತ್ತವೆ.

ಅಂತಹ ನಡೆನುಡಿಗಳೊಂದಾಗಿ ಬದುಕಿದ ಸಹಸ್ರಾರು ಶಿವಶರಣರಲ್ಲಿ ಕಲ್ಯಾಣದ ವಚನ ಚಳುವಳಿಯ ಪಿತಾಮಹ, ಸಮಾನತೆಯ ಹರಿಕಾರ, ಜಗಜ್ಯೋತಿ, ಬಸವೇಶ್ವರರ ಆಪ್ತಕಾರ್ಯದರ್ಶಿ ,ಮೂರನೇ ಕಣ್ಣು ನಿಜಸುಖಿ ಹಡಪದ ಅಪ್ಪಣ್ಣನವರು.

ನುಡಿದಂತೆ ನಡೆದ ಅವರ ಬದುಕಿನ ಶೈಲಿ ,ನೇರ ನಿಷ್ಟೂರವಾಗಿ ಹೇಳುವ ಅವರ ವಚನಗಳ ಪ್ರಖರತೆ ನಮಗೆಲ್ಲ ಆದರ್ಶಪ್ರಾಯವಾಗಿವೆ.

ಅಂತಹ ಶರಣರ ಜನನ ವಿಜಯಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಮಸಬಿನಾಳ ಎಂಬ ಗ್ರಾಮದ ಚನ್ನವೀರಪ್ಪ ದೆವಮ್ಮ ಎಂಬ ಆದರ್ಶದಂಪತಿಗಳ ಪುಣ್ಯಗರ್ಭದಲ್ಲಿ ಕ್ರಿಸ್ತ ಶಕ 1134 ರ ಶಾರ್ವರಿ ನಾಮ ಸಂವತ್ಸರದ ರವಿವಾರದಂದು ಜನಿಸುತ್ತಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣಾ ಎನ್ನುವಂತೆ ಚಿಕ್ಕಂದಿನಲ್ಲಿಯೇ ಕುಶಾಗ್ರಮತಿಯಾಗಿದ್ದ ಅವರು ಹುಟ್ಟೂರಿನಲ್ಲಿಯೇ ಶಿವಶಂಕ್ರಯ್ಯ ಹಿರೇಮಠ ಎನ್ನುವ ಗುರುಗಳಿಂದ ಪ್ರಾಥಮಿಕ ಶಿಕ್ಷಣ ಪಡೆದು, ಈಶ್ವರಯ್ಯಸ್ವಾಮಿ ಗಣಾಚಾರಿಯವರಿಂದ ಪ್ರೌಢಶಿಕ್ಷಣ ಪಡೆಯುತ್ತಾರೆ.

ನಂತರ ಚನ್ನಮಲ್ಲೇಶ್ವರರ ಆಧ್ಯಾತ್ಮಿಕ ಮಾರ್ಗದರ್ಶನಪಡೆದು ಅವರನ್ನೇ ಆದ್ಯಾತ್ಮಿಕ ಗುರುಗಳನ್ನಾಗಿ ಸ್ವೀಕರಿಸುತ್ತಾರೆ.
ಮಸಿಬಿನಾಳ ಸಮೀಪದ ದೇಗಿನಾಳ ಎಂಬ ಗ್ರಾಮದ ಲಿಂಗಮ್ಮ ಎನ್ನುವವರನ್ನು ವಿವಾಹವಾಗುತ್ತಾರೆ.

ಸತಿಪತಿಗಳೊಂದಾದ ಬಕುತಿ ಹಿತವಪ್ಪುದು ಶಿವಂಗೆ ಎನ್ನುವಂತೆ ಸಹಧರ್ಮಿಣಿಯಾದ ಲಿಂಗಮ್ಮನವರೊಡಗೂಡಿ ಆದ್ಯಾತ್ಮಿಕ ಲೌಕಿಕ ಜೀವನ ಸಾಗುತ್ತದೆ.

ಶರಣೆ ಲಿಂಗಮ್ಮನವರೂ 114 ವಚನಗಳನ್ನು ರಚಿಸಿ ಲೋಕದ ಡೊಂಕು ತಿದ್ದುವ ಸುಭೋದೆಯನ್ನು ಮಾಡಿದ್ದಾರೆ.

ಹಡಪದ ಅಪ್ಪಣ್ಣನವರು ಸುಮಾರು 246 ವಚನಗಳನ್ನು ರಚಿಸಿದ್ದಾರೆ. ಆದರೆ ಶಿವಯೋಗಿ ಸಿದ್ದರಾಮರು ಕೆಲವು ಶಿವಶರಣರ ವಚನಗಳ ಸಂಖ್ಯಯನ್ನು ಹೇಳುವಾಗ ಹಡಪದಯ್ಯಗಳ ವಚನ ಹನ್ನೊಂದು ಸಾಸಿರ ಎನ್ನುವ ಮೂಲಕ ಇವರ ವಚನಗಳು ಕೇವಲ 246 ಅಲ್ಲ ಸಾವಿರಾರು ವಚನಗಳನ್ನು ಬರೆದಿದ್ದಾರೆಂಬ ಸತ್ಯವನ್ನು ಹೇಳಿದ್ದಾರೆ.

ಶರಣೆ ಲಿಂಗಮ್ಮ ನವರು “ಅಪ್ಪಣ್ಣಪ್ರಿಯ ಚನ್ನಬಸವಣ್ಣ” ಎಂಬ ಅಂಕಿತ ನಾಮದಿಂದ ವಚನಗಳನ್ನು ಬರೆದರೆ, ಹಡಪದ ಅಪ್ಪಣ್ಣನವರು ಬಸವಪ್ರಿಯ ಕೂಡಲಚನ್ನಬಸವಣ್ಣ ಎಂಬ ಅಂಕಿತನಾಮದಿಂದ ವಚನಗಳ ರಚನೆಮಾಡಿದ್ದಾರೆ.

ಇವರೀರ್ವರ ವಚನಗಳಲ್ಲಿ ವೇಧ, ಶಾಸ್ತ್ರ,ಪುರಾಣಗಳನ್ನು ವಿರೋಧಿಸುವ ಧ್ವನಿ ಎದ್ದುಕಾಣುತ್ತದೆ. ದಂಪತಿಗಳಿಬ್ಬರಿಗೂ ಕನ್ನಡದಲ್ಲಿ ಪರಿಪಕ್ವತೆಯಿದ್ದಂತೆ ಸಂಸ್ಕೃತದಲ್ಲಿಯೂ ಹಿಡಿತವಿತ್ತೆಂಬುದು ಅವರ ವಚನಗಳನ್ನು ನೋಡಿದಾಗ ಗಮ್ಯವಾಗುತ್ತದೆ.

ಆಟದಲ್ಲಿ ಕೆಲಹೊತ್ತುಗಳೆದು
ಕೂಟದಲ್ಲಿ ಕೆಲಹೊತ್ತುಗಳೆದು
ನೋಟದಲ್ಲಿ ಕೆಲಹೊತ್ತುಗಳೆದು
ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ,

ಊಟ,ಮಾಟ,ಕೂಟದಲ್ಲಿ
ಕೋಟಲೆಗೊಳ್ಳುತ್ತಿದ್ದೇನೆಂಬುವನೊಬ್ಬ ಪೋಟ,
ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿ ಹೋದನು ನಮ್ಮ ಬಸವಪ್ರಿಯ ಕೂಡಲ ಚೆನ್ನಬಸವಣ್ಣ.”

ಎನ್ನುವ ವಚನದ ಮೂಲಕ ಡಾಂಭಿಕ ಭಕ್ತರಿಗೆ ಚಾಟಿ ಬೀಸಿದ್ದಾರೆ.

ಸಕ್ಕರೆಯನ್ನು ಕಂಡ ಇರುವೆಗಳಂತೆ ಕಲ್ಯಾಣದೆಡೆಗೆ ನಾಡಿನಾದ್ಯಂತ ಶರಣರು ವಚನಚಳುವಳಿಯ ಭಾಗವಾಗಲು ತೆರಳಿದಂತೆ ಹಡಪದ ಅಪ್ಪಣ್ಣನವರೂ ಬಸವಣ್ಣನವರ ಸಮಕಾಲೀನ ಮತ್ತು ಅವರ ಹುಟ್ಟೂರ ಪಕ್ಕದವರಾಗಿದ್ದರಿಂದ ಸಹಜವಾಗಿ ಕಲ್ಯಾಣ ಆಕರ್ಷಿಸಿತು.

ಅವರೂ ಕಲ್ಯಾಣದೆಡೆ ಪ್ರಯಾಣಬೆಳೆಸಿ, ಬಸವೇಶ್ವರರ ಸಖ್ಯಬೆಳೆಸಿ ಆಪ್ತಕಾರ್ಯದರ್ಶಿಗಳಾಗಿ ಬೆಳೆದರು.

ಅವರೀರ್ವರ ನಡುವೆ ಮಗ ತಾಯಿ, ಶಿಷ್ಯ ,ಗುರು, ಭಕ್ತ ಜಂಗಮ, ಜೀವ ,ಶಿವರ ಸಂಬಂಧವಿದೆ.

ಅಪ್ಪಣ್ಣ ಎನ್ನುವ ಹೆಸರು ತಾತ್ವಿಕ ಸಾಂಸ್ಕೃತಿಕ ಮೌಲ್ಯಗಳಿಗೆ ಅಪ್ಪನಂತೆ ಮತ್ತು ಅವರ ಧರ್ಮಪತ್ನಿ ಲಿಂಗಮ್ಮರು ಮಹೋನ್ನತ ಮೌಲ್ಯಗಳಿಗೆಲ್ಲ ಅವ್ವನಾಗಿ ನಿಂತಿದ್ದಾರೆಂದು ಹೆಸರಾಂತ ಲೇಖಕ ಡಾ,ಎಸ್,ಎಮ್,ಹಿರೇಮಠರು ಮಾರ್ಮಿಕವಾಗಿ ಬರೆದಿದ್ದಾರೆ.

ಅಷ್ಟೇ ಅಲ್ಲದೆ ಅಪ್ಪಣ್ಣನವರ ಬಗ್ಗೆ ವೀರಶೈವ ಕವಿಗಳಾದ ಗುಬ್ಬಿಯ ಮಲ್ಲಣಾರ್ಯರು,ವೀರಶೈವಾಮೃತ ಪುರಾಣದಲ್ಲಿ ಸಪ್ಪಣ್ಣನವರು ಬಸವಣ್ಣರ ಆಜ್ಞೆಯ ಮೇರೆಗೆ ಗಿರಿಯನ್ನು ಕೀಳಿದ ಘಟನೆಯನ್ನು ಕಾಂಡ 8 ರಲ್ಲಿ ಉಲ್ಲೇಕಿಸಿದ್ದಾರೆ.

ಕ್ರಿ,ಶ, 1500. ರಲ್ಲಿ ಜೀವಿಸಿದ್ದ ಕವಿ ಸಿಂಗಿರಾಜನು ತನ್ನ ಕಾವ್ಯ ಬಸವರಾಜ ಚಾರಿತ್ರ, ಅಥವಾ ಸಿಂಗಿರಾಜ ಪುರಾಣದಲ್ಲಿ ಹಡಪದ ಅಪ್ಪಣ್ಣರ ಪವಾಡಗಳ ಬಗ್ಗೆ ವಿವರಿಸಿದ್ದಾರೆ.

ಸಿದ್ದನಂಜೇಶ 1679 ರಲ್ಲಿ ಸಾವಿರ ಗಣರ ಹೆಸರುಗಳನ್ನು ಸ್ಮರಿಸುವಾಗ ಅಪ್ಪಣ್ಣನವರ ಹೆಸರನ್ನೂ ಸ್ಮರಿಸಿದ್ದಾರೆ.

ಚನ್ನಪ್ಪ ಕವಿ 1750 ರಲ್ಲಿ ಬರೆದ ತಮ್ಮ ಶರಣಲೀಲಾಮೃತ ಕಾವ್ಯದಲ್ಲಿ ಕತ್ತರಿಸಿದ ತಲೆಯ ಪವಾಡವನ್ನು ವಿವರಿಸಿದ್ದಾರೆ.

ಸ್ವತಹ ಬಸವಣ್ಣನವರೇ “ಏನೆಂದು ಪಮಿಸುವೆನಯ್ಯ ತನ್ನಿಂದ ತಾ ತೋರದೆ ಗುರುಮುಖದಿಂದ ತೋರಿದ ತನ್ನ ನಿಲವ ನಿರೂಪವನು ಕೂಡಲಸಂಗಮದೇವರಲ್ಲಿ ಹಡಪದ ಅಪ್ಪಣ್ಣನಿಂದ ಕಂಡು ಯನ್ನ ಜನ್ಮ ಸಫಲವಾಯಿತಯ್ಯ.” ಎನ್ನುವ ಮೂಲಕ ಅಪ್ಪಣ್ಣರ ಹಿರಿಮೆಯನ್ನು ಕೊಂಡಾಡಿದ್ದಾರೆ.

ಇವರಷ್ಟೇ ಅಲ್ಲದೆ ಅಲ್ಲಮ ಪ್ರಭುದೇವರು, ಪುರದ ನಾಗಣ್ಣ,ಅಮುಗೆ ದೇವಯ್ಯ,ನೀಲಾಂಬಿಕೆ,ಮರುಳ ಶಂಕರದೇವರು,ಲಿಂಗಮ್ಮ,ಹಾವಿನಾಳ ಕಲ್ಲಯ್ಯ,ಲಿಂಗಸೋಂಕಿನ ಲಿಂಗತಂದೆ ಸೇರಿದಂತೆ ಹಲವಾರು ಶಿವಶರಣ ಶರಣೆಯರು ಅಪ್ಪಣ್ಣನವರನ್ನು ಹೊಗಳಿದ್ದಾರೆ.

ಈಗಿನ ಸಾಹಿತಿಗಳಾದ ವಿ,ಜಿ,ಪೂಜಾರರ ಹಡಪದ ಶರಣ ಶರಣೆಯರ ವಚನಗಳು , ಮತ್ತು ಹಡಪದ ಶರಣ ಶರಣೆಯರು ಎಂಬ ಕೃತಿಗಳು,

ಪ್ರೊ, ಬಿ,ಹೆಚ್, ಹಡಪದರ ಶರಣರುಕಂಡ ಹಡಪದ ಅಪ್ಪಣ್ಣ, ಪ್ರೊ,ವೆಂಕಟಾಚಲಪತಿಯವರು ಬರೆದ ಕೇಶ ಶಿಲ್ಪಿಗಳು, ಮತ್ತು ಟಿ,ಎಮ್, ಧನರಾಜು ಬರೆದ ದಿ,ಗ್ರೇಟ್ ಬಾರ್ಬರ್ ರೂಲರ್ಸ್ ಆಫ್ ಇಂಡಿಯಾ, ಮತ್ತು ದಿ,ನಂದಾಸ್ ಎಂಬ ಆಂಗ್ಲಭಾಷಾ ಕೃತಿಗಳ ಮೂಲಕ ಹಡಪದರ ,ಹಾಗೂ ಹಡಪದ ಸಾಮ್ರಾಟರ ಬಗ್ಗೆ ವಿವರಿಸಿದ್ದಾರೆ.

ಹಲವು ಶಾಸನಗಳೂ ಕೊತ್ತಕೆರೆ ಶಾಸನ,ಕೊಪ್ಪಳದ ಶಾಸನ,ನಂದಿಪುರದ ಶಾಸನ,ಗಳಲ್ಲೂ ಹಡಪದರಬಗ್ಗೆ ವಿಸ್ತೃತವಾಗಿ ಬರೆಯಲ್ಪಟ್ಟಿದೆ.

ಹಡಪದ ಅಪ್ಪಣ್ಣರಷ್ಟೇ ಅಲ್ಲದೆ ಹಡಪದ ರೇಚಣ್ಣ,ಕನ್ನಡಿಕಾಯಕದ ಅಮ್ಮಿದೇವಯ್ಯ,ರೇವಮ್ಮ,ಎಂಬ ಶರಣಶರಣೆಯರಿದ್ದಾರೆ.

ಪ್ರಾಚೀನಕಾಲದ ಗೌತಮ ಬುದ್ದನ ಅಪ್ಪಟ ಶಿಷ್ಯ ಆಚಾರ್ಯ ಉಪಾಲಿ,ಮಾತಂಗಮುನಿ, ಗಾಯಿತ್ರಿದೇವಿ,

ಮಹಾಪದ್ಮನಂದ,ಧನಾನಂದ, ಚಂದ್ರಗುಪ್ತಮೌರ್ಯ, ಬಿಂಧುಸಾರ,ಸಾಮ್ರಾಟ ಅಶೋಕ,ಇಮ್ಮಡಿ ಬಿಜ್ಜಳ,ಸೇರಿದಂತೆ ಹಲವು ಕ್ಷೌರಿಕ ರಾಜರು ಸಾಮ್ರಾಜ್ಯ ಕಟ್ಟಿ ಆಡಳಿತಮಾಡಿ ತೋರಿಸಿದ್ದಾರೆ.

ಆದರೆ ಇಂದು ಹಡಪದ ಜನಾಂಗ ಆರ್ಥಿಕ,ಸಾಮಾಜಿಕ,ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವುದು ಸರಕಾರದ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯೆಂಬುದನ್ನು ಬೇರೆ ಹೇಳಬೇಕಿಲ್ಲ.

ಹಡಪದ ಅಭಿವೃದ್ದಿ ನಿಗಮದ ನಿರ್ಮಾಣ, ಎಸ್,ಸಿ, ಮೀಸಲಾತಿ ಪಟ್ಟಿಗೆ ಸೇರಿಸುವುದು, ಹಡಪದ ಕುಟೀರಗಳನ್ನು ನೀಡುವುದು, ರಾಜಕೀಯದಲ್ಲಿ ಪ್ರಾಧಾನ್ಯತೆ ನೀಡುವುದು. ಎಂಬ ಬೇಡಿಕೆಗಳನ್ನು ಇಟ್ಟು ಹಲವಾರು ವರ್ಷಗಳಿಂದ ಪ್ರತಿಭಟನೆ ಮಾಡುತ್ತಿರುವ ಜನಾಂಗದ ಕೂಗಿಗೆ ಸರಕಾರ ಸ್ಪಂಧಿಸುತ್ತಿಲ್ಲ

ಸರಕಾರದಿಂದ ಜಯಂತಿ ಆಚರಣೆ,ಅಧ್ಯಯನ ಪೀಠ ಸ್ತಾಪನೆ ಮಾಡಿದೆಯಾದರೂ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ.

ಇದಕ್ಕೆಲ್ಲ ಮೂಲಕಾರಣ ಹಡಪದ ಜನಾಂಗದ ಯುವಕರಲ್ಲಿ ಶಿಕ್ಷಣದ ಕೊರತೆ, ಒಗ್ಗಟ್ಟಿನ ಕೊರತೆ, ಕಡಿಮೆ ಜನಸಂಖ್ಯ
ಆರ್ಥಿಕ ಪ್ರಾಬಲ್ಯತೆ ಇಲ್ಲದಿರುವಿಕೆ ಹೆಚ್ಚು ದುಷ್ಚಟಗಳಿಗೊಳಗಾಗಿರುವುದು.

ಈ ಎಲ್ಲ ಅಂಶಗಳಿಂದ ಹೊರಬಂದು ಸರಕಾರದಕಣ್ಣು ತೆರೆಸಿದಾಗ ಈ ಸಮಾಜ ಮುಖ್ಯವಾಹಿನಿಗೆ ಬರಲುಸಾಧ್ಯವೆಂದು ಹೇಳಬಹುದು.

ಸುರೇಶ ಬಳಗಾನೂರು
ಉಪನ್ಯಾಸಕರು
ದೇ,ಅ,ಸರಕಾರಿ ಪ್ರಥಮದರ್ಜೆ ಕಾಲೇಜು ಮಸ್ಕಿ
M,9980167085

Don`t copy text!