ಅರಿವೇ ಗುರು
ಬೆರಳ ಕೇಳಲಿಲ್ಲ
ಕೊರಳ ಕೊಯ್ಯಲಿಲ್ಲ
ಮುಡಿ ಗಡ್ಡ ಬಿಟ್ಟು
ಗುಡ್ಡಕ್ಕೆ ಹೋಗಲಿಲ್ಲ
ತಪ ಜಪವೆಂದು
ಕಣ್ಣು ಮುಚ್ಚಿ ಕೂಡಲಿಲ್ಲ
ಜಾತಿಯ ಹೋಮ ಕುಂಡಕೆ
ವಿಷ ಬೀಜ ಹಾಕಲಿಲ್ಲ
ಧರ್ಮ ಕರ್ಮದ ಗೋಷ್ಠಿಯಲ್ಲಿ
ವಾದ ಮಾಡಲಿಲ್ಲ
ಯಜ್ಞಕೆ ಪ್ರಾಣಿ ಬಲಿ ಕೊಡಲಿಲ್ಲ
ದೇವರ ಹೆಸರಿನಲ್ಲಿ
ಸುಲಿಗೆ ಶೋಷಣೆ ಮಾಡಲಿಲ್ಲ
ಕಲ್ಲು ಮೂರ್ತಿಗೆ
ಹಾಲು ತುಪ್ಪ ಸರಿಯಲಿಲ್ಲ
ಮಡಿ ಮೈಲಿಗೆ ಎಂದು
ದೂರ ಹಾರಲಿಲ್ಲ
ತಿಳಿಯದ ಭಾಷೆಯಲ್ಲಿ
ಮಂತ್ರ ಹೇಳಲಿಲ್ಲ
ವಚನ ರಚಿಸಿ
ಕಾಯಕ ದಾಸೋಹ ತತ್ವವ
ಎತ್ತಿ ಹಿಡಿದು
ಅರಿವೇ ಗುರು ಎಂದ
ನಮ್ಮ ಕಲ್ಯಾಣ ಬಸವಣ್ಣ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ