ಪುಸ್ತಕ ಪರಿಚಯ: ಜಿ.ಎಸ್.ಶಿವರುದ್ರಪ್ಪ ಸಂಚಯ
“ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ-ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ”
“ಹಾಡು ಹಳೆಯದಾದರೇನು
ಭಾವ ನವನವೀನ”
ಈ ಭಾವಗೀತೆಗಳು ಹೃದಯಕ್ಕೆ ಎಷ್ಟು ಹತ್ತಿರ ಎನಿಸುತ್ತವೆ ಅಲ್ಲವೇ? ಅಷ್ಟೇ ಸುಲಲಿತವಾಗಿ ಓದಿಸಿಕೊಂಡು ಹಾಗೆಯೇ ವೈಚಾರಿಕತೆಯ ಚಾಟಿ ಏಟನ್ನು ಬೀಸುತ್ತವೆ ಶಿವರುದ್ರಪ್ಪನವರ ಕಾವ್ಯ ವಿಮರ್ಶೆಗಳು. “ವಚನಕಾರರ ವಿಚಾರಕ್ರಾಂತಿ” ಎನ್ನುವ ವಿಮರ್ಶೆಯಲ್ಲಿ ಅವರು ಹೀಗೆ ಬರೆಯುತ್ತಾರೆ.
“ವಚನಕಾರರು ಅಥವಾ ಶಿವಶರಣರು ಮೂಲತ: ನಿಷ್ಠುರ ವಿಮರ್ಶಕರು. ಅವರು ವೇದ, ಶಾಸ್ತ್ರಗಳ ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಆ ಸ್ವಾನುಭವವೇ ಎಲ್ಲಕಿಂತ ಮಿಗಿಲಾದುದು ಎಂದು ಕಂಡು ಕೊಂಡರು.
ವೇದಕ್ಕೆ ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳನಿಕ್ಕುವೆ – ಎಂದು ಬಸವಣ್ಣ ನವರು ಸವಾಲು ಹಾಕಿದರು.
ವೇದಶಾಸ್ತ್ರ ಪುರಾಣಾಗಮಗಳೆಂಬ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ – ಎಂದು ಅಕ್ಕಮಹಾದೇವಿ ಅವುಗಳ ನಿರರ್ಥಕತೆಯನ್ನು ಘೋಷಿಸಿದಳು.
ಧರ್ಮವೆಂದರೆ ಬದುಕಿಗೆ ಇಳಿಯಲಾರದ ಆದರ್ಶಗಳ, ವಿಚಾರಗಳ, ನಂಬಿಕೆಗಳ ಒಂದು ಕಂತೆ ಎಂದು ವಚನಕಾರರು ಭಾವಿಸಲಿಲ್ಲ. ಧ್ಯಾನ, ಪೂಜೆ, ಪ್ರಾರ್ಥನೆಗಳು ಇರುವುದು ವ್ಯಕ್ತಿಯ ಅಂತರಂಗವನ್ನು ಪರಿಶುದ್ಧಗೊಳಿಸಲು. ಇವು ಬಹಿರಂಗದ ನಡುವಳಿಕೆಗಳಲ್ಲಿ ಪ್ರಕಟವಾಗದಿದ್ದರೆ ಆ ಅಂತರಂಗದ ಆಧ್ಯಾತ್ಮಿಕ ಸ್ಥಿತಿಗೆ ಏನೂ ಅರ್ಥವಿಲ್ಲ.”
ಹೀಗೆ ಇತರೆ ಕವಿಗಳಾದ ಪಂಪ, ಹರಿಹರ, ರಾಘವಾಂಕ, ಸರ್ವಜ್ಞ, ಕುವೆಂಪು, ಬೇಂದ್ರೆಯವರ ಕಾವ್ಯ ವಿಮರ್ಶೆಗಳು ಈ ಪುಸ್ತಕದಲ್ಲಿವೆ.
ಜಾನಪದ, ನವೋದಯ, ಹೊಸಗನ್ನಡ ಕಾವ್ಯ, ಸಾಹಿತ್ಯ ಚಳವಳಿಗಳು ಮತ್ತು ಸಾಹಿತ್ಯ ಪರಂಪರೆ ಇವೆಲ್ಲ ವಿಷಯಗಳ ಮೇಲೆ ಲೇಖಕರು ರಚಿಸಿರುವ ಹಲವಾರು ಮೀಮಾಂಸೆಗಳು ಈ ಪುಸ್ತಕದಲ್ಲಿವೆ. ಅವು ಓದುಗರಿಗೆ ಜ್ಞಾನಾರ್ಜನೆ ಮತ್ತು ಹೊಸ ಬರಹಗಾರರಿಗೆ ಮಾರ್ಗದರ್ಶನ ನೀಡಬಲ್ಲವು.
ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಲೇಖಕರು ರಚಿಸಿದ ನಾಲ್ಕು ಕೃತಿಗಳು – “ಟಾಲ್ ಸ್ಟಾಯ್ ಬೆಳೆದ ಮಲೆನಾಡಿನಲ್ಲಿ“, “ವಿವೇಕಾನಂದರ ಹೆಜ್ಜೆಯ ಹಿಂದೆ“, “ಸರೋವರ ಮಂಡಲಗಳ ಮಧ್ಯೆ” ಮತ್ತು “ಕೇದಾರನಾಥಕ್ಕೆ” ಕೂಡ ಈ ಪುಸ್ತಕದ ಭಾಗವಾಗಿವೆ.
ಲೇಖಕರು ರಚಿಸಿದ “ಶಿವಯೋಗಿ ಸಿದ್ಧರಾಮ” ಕಾದಂಬರಿಯ ಆಯ್ದ ಭಾಗ ಆಕರ್ಷಿತವಾಗಿದೆ ಮತ್ತು ಲೇಖಕರಿಗಿದ್ದ ಅಧ್ಯಾತ್ಮದ ಒಲವನ್ನು ಸ್ಪಷ್ಟ ಪಡಿಸುತ್ತದೆ. ಲೇಖಕರ ಆತ್ಮಕಥೆಯಾದ “ಚತುರಂಗ” ದ ಆಯ್ದ ಭಾಗ, ಲೇಖಕರ ಶಾಲಾ ದಿನಗಳು, ಅವರು ಬಾಲಕರಾಗಿದ್ದಾಗ ರಚಿಸಿದ ಕವಿತೆಗಳು, ಅವರ ಸಾಹಿತ್ಯಾಸಕ್ತಿ ರೂಪುಗೊಂಡ ಬಗೆ ಇವುಗಳ ಪರಿಚಯ ಮಾಡಿಸುತ್ತದೆ.
ಸುಮಾರು ೪೫೦ ಪುಟಗಳ, ಅತ್ಯುತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಲ್ಪಟ್ಟ ಈ ಪುಸ್ತಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದು, ರಿಯಾಯಿತಿ ದರದಲ್ಲಿ ಲಭ್ಯವಿದೆ.
ಈ ಪುಸ್ತಕ ಒಂದೇ ಸಲಕ್ಕೆ ಓದಿ ಮುಗಿಸುವ ಕಾದಂಬರಿಯಲ್ಲ. ಬದಲಿಗೆ ನಿಧಾನವಾಗಿ ಮತ್ತು ನಿರಂತರವಾಗಿ ಓದಿದರೆ ಹೃದಯಕ್ಕೆ ತಂಪನ್ನು ತಂದುಕೊಡಬಲ್ಲ ಪುಸ್ತಕ. ಕವಿಗಳ ಮತ್ತು ವಚನಕಾರರ ಮನದಾಳಕ್ಕೆ ಇಳಿಯುತ್ತ, ಸಾಹಿತ್ಯ ಪ್ರೇಮವನ್ನು ಗಟ್ಟಿಗೊಳಿಸಲು ನೆರವಾಗುವ ಪುಸ್ತಕ.
ಲೇಖಕರು- ಆನಂದ ಮರಳದ, ಬೆಂಗಳೂರು