ಮಸ್ಕಿ ಹಳ್ಳಕ್ಕೆ ಕೊಚ್ಚಿ ಹೋಗಿದ್ದ ಚನ್ನಬಸವ ಮಡಿವಾಳ ಶವ ಪತ್ತೆ

e-ಸುದ್ದಿ ಮಸ್ಕಿ

ಪಟ್ಟಣದ ಹಳ್ಳದ ನೀರಿಗೆ ಕೊಚ್ಚಿಕೊಂಡು ಹೋಗಿದ್ದ ಚನ್ನಬಸವ ಮಡಿವಾಳ (38) ಮೃತ ದೇಹ ಒಂದು ತಿಂಗಳ ನಂತರ ಶನಿವಾರ ಮಧ್ಯಾಹ್ನ ಹಳ್ಳದ ಮುಳ್ಳು ಕಂಟಿಯಲ್ಲಿ ಪತ್ತೆಯಾಗಿದೆ ಎಂದು ಪಿಎಸ್‍ಐ ಸಣ್ಣ ವೀರೇಶ ತಿಳಿಸಿದ್ದಾರೆ.
ಹಳ್ಳದಲ್ಲಿ ತುಂಗಭದ್ರ ಎಡದಂಡೆ ಕಾಲುವೆಯ ಕೆಳಭಾಗದ ಸೇತುವೆ ಬಳಿ ಮೀನು ಹಿಡಿಯಲು ಹೋಗಿದ್ದು ಯುವಕರಿಗೆ ಕೊಳೆತ ವಾಸನೆ ಬಂದಿದೆ. ಕೂಡಲೇ ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪಿಎಸ್‍ಐ ಸಣ್ಣ ವೀರೇಶ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಇದು ಚನ್ನಬಸವ ಮಡಿವಾಳ ಶವ ಎಂದು ಗುರುತಿಸಿದ್ದಾರೆ.


ಕಳೆದ ಅಕ್ಟೋಬರ್ 10 ರಂದು ಚನ್ನಬಸವ ಮಡಿವಾಳ ಬೆಳಿಗ್ಗೆ ಬಹಿರ್ದೆಸೆಗೆಂದು ಹಳ್ಳಕ್ಕೆ ಹೋಗಿದ್ದಾಗ ಮಸ್ಕಿ ಜಲಾಶಯದಿಂದ ಹೆಚ್ಚಿನ ನೀರು ಹಳ್ಳಕ್ಕೆ ಬಿಡುಗಡೆ ಮಾಡಿದ್ದರು. ಹಳ್ಳಕ್ಕೆ ನೀರಿನ ರಭಸ ಹೆಚ್ಚಾಗಿ ಬಂದಿದ್ದರಿಂದ ಪ್ರವಾಹದಲ್ಲಿ ಕೊಚ್ಚಿಕೊಂಡ ಹೋದ ಘಟನೆ ಜರುಗಿತ್ತು.
ತಾಲೂಕು ಆಡಳಿತದಿಂದ 15 ದಿನಗಳ ವರೆಗೆ ಪೊಲೀಸರು, ಅಗ್ನಿಶಾಮಕ ದಳದವರು ಹುಡುಕಾಟ ನಡೆಸಿದ್ದರು. ಚನ್ನಬಸವ ಪತ್ತೆ ಆಗಿರಲಿಲ್ಲ. 15 ದಿನಗಳ ನಂತರ ತಾಲೂಕು ಆಡಳಿತ ಕೈಚೆಲ್ಲಿ ಉಡುಕಾಟ ಸ್ಥಗಿತಗೊಳಿಸಿದ್ದರು. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಒಂದು ತಿಂಗಳ ನಂತರ ಚನ್ನಬಸವ ಮಡಿವಾಳ ಅವರ ಮೃತ ದೇಹ ಪತ್ತೆ ಆದ ಸುದ್ದಿ ಗೊತ್ತಾಗಿ ಚನ್ನಬಸವನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Don`t copy text!