ನಿಮ್ಮ ಆಹಾರ ನಿಮಗೆಷ್ಟು ಗೊತ್ತು ? ಮೆಂತ್ಯೆ
(ವಾರದ ವಿಶೇಷ)
ದಿನ ನಿತ್ಯದಲ್ಲಿ ನಾವು ಬಳಸುವ ಸೊಪ್ಪು ಮತ್ತು ಕಾಳುಗಳು ಮೆಂತ್ಯ. ಮೆಂತ್ಯೆಗೆ ಆಂಗ್ಲ ಭಾಷೆಯಲ್ಲಿ ಫೇನುಗ್ರೀಕ್ ಎನ್ನುತ್ತಾರೆ. ನಮ್ಮ ಹಿತ್ತಲಲ್ಲೇ ಬೆಳಸಬಹುದಾದ ಹೆಚ್ಚು ಕಾಲ ಅಥವಾ ಸ್ಥಳವನ್ನು ತೆಗೆದು ಕೊಳ್ಳದ ಗಿಡವೆಂದರೆ ಮೆಂತ್ಯದ್ದು. ಭಾರತವು ಮೆಂತ್ಯದ ಅತೀ ದೊಡ್ಡ ಉತ್ಪಾದಕ ದೇಶವಾಗಿದೆ. ಭಾರತದಲ್ಲಿ ರಾಜಸ್ಥಾನದಲ್ಲಿ ಅತೀ ಹೆಚ್ಚು ಬೆಳೆಯುತ್ತಾರೆ.
ನೂರು ಗ್ರಾಂ ಮೆಂತ್ಯದಲ್ಲಿ 58 ಗ್ರಾಂ ಕಾರ್ಬೋಹೈಡ್ರೆಡ್ಸ್, 6.4 ಗ್ರಾಂ ಫ್ಯಾಟ್, 23 ಗ್ರಾಂ ಪ್ರೋಟಿನ್ ಜೊತೆಗೆ ಥಯಮೈನ್ (ಬಿ1) 0.322ಮಿಲಿ ಗ್ರಾಂ, ರಿಬೋಫ್ಲಾವಿನ್ (ಬಿ2) 0.366 ಮಿಲಿ ಗ್ರಾಂ, ನಿಯಾಸಿನ್ (ಬಿ3) 1.64 ಮಿಲಿಗ್ರಾಂ, ವಿಟಮಿನ್ ಬಿ6 0.6 ಮಿಲಿಗ್ರಾಂ, ಫೋಲೇಟ್ (ಬಿ9) 57 ಮೈಕ್ರೋ ಗ್ರಾಂ, ಮತ್ತು ವಿಟಮಿನ್ ಸಿ ಅಂಶ 3 ಮಿಲಿ ಗ್ರಾಂ ಇರುತ್ತದೆ. ಕ್ಯಾಲ್ಶಿಯಮ್, ಕಬ್ಬಿಣ, ಮ್ಯಾಂಗನೀಸ್, ಫಾಸ್‌ಫರಸ್ , ಪೊಟಾಷಿಯಮ್, ಸೋಡಿಯಮ್ ಮತ್ತು ಜಿಂಕ್ ಅಂಶಗಳು ಇರುತ್ತವೆ. ಸ್ವಲ್ಪ ಪ್ರಮಾಣದ ನೀರು ಕೂಡ ಇರುತ್ತದೆ.
ಮೆಂತ್ಯೆಯನ್ನು ಸೊಪ್ಪಿನ ರೂಪದಲ್ಲಿದ್ದಾಗ ತರಕಾರಿಯಾಗಿ ಮತ್ತು ಕಾಳುಗಳ ರೂಪದಲ್ಲಿದ್ದಾಗ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ.
ಮೆಂತ್ಯೆಯನ್ನು ಪಥ್ಯಕ್ಕಾಗಿ, ಔಷಧಿಯಾಗಿ ಮತ್ತು ಆಹಾರವಾಗಿ ಜೊತೆಗೆ ಅಡುಗೆಗೆ ಸ್ವಾದವನ್ನು ಪರಿಮಳವನ್ನು ಕೊಡುವ ಪದಾರ್ಥವಾಗಿ, ಕೊನೆಗೆ ಸೌಂದರ್ಯ ವರ್ಧಕವಾಗಿಯೂ ಬಳಸುತ್ತಾರೆ.
ಮನುಷ್ಯರು ಮೆಂತ್ಯೆ ಸೊಪ್ಪು ಕಾಳನ್ನು ಬಳಸುವುದು ಸಾಮಾನ್ಯ ಆದರೆ ಮೀನುಗಳಿಗೆ ಮತ್ತು ಮನೆಯಲ್ಲಿ ಸಾಕುವ ಮೊಲಗಳಿಗೂ ಆಹಾರವಾಗಿ ಕೊಡಲಾಗುತ್ತದೆ.
ಪ್ರಮುಖವಾಗಿ ಮೆಂತ್ಯದ ಉಪಯೋಗ ಸಕ್ಕರೆ ಕಾಯಿಲೆಯಲ್ಲಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ನಿಯಂತ್ರಿಸಲು, ದೇಹದಲ್ಲಿ ಟೆಸ್ಟಿರೋನ್ ಪ್ರಮಾಣ ಹೆಚ್ಚು ಮಾಡಲು, ಬಾಣಂತಿಗೆ ಎದೆ ಹಾಲು ವೃದ್ಧಿಯಾಗಲೂ, ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರಹಾಕಲು, ಮಲಬದ್ಧತೆಯ ಸಮಸ್ಯೆ ಇರುವವರಿಗೆ ಮಲ ವಿಸರ್ಜನೆ ಸರಾಗವಾಗಿ ಆಗಲು ಸಾಮಾನ್ಯವಾಗಿ ಬಳಸುತ್ತಾರೆ. ಇದರೊಂದಿಗೆ ಸೊಂಕನ್ನು ಕಡಿಮೆ ಮಾಡುವ ಮತ್ತು ಕೋಲೇಸ್ಟ್ರಾಲ್ ಅನ್ನು ಕಡಿಮೆ ಮಡುವ ಗುಣವನ್ನುಕೂಡ ಹೊಂದಿದೆ. ಇವು ಸಾಮಾನ್ಯವಾಗಿ ದಿನ ನಿತ್ಯದಲ್ಲಿ ಬಳಸುವದು. ಇನ್ನು ಹೆಚ್ಚಿನ ಅಧ್ಯಯನ ಮತ್ತು ಮಾಹಿತಿಗಳು ಅಧಿಕೃತವಾಗಿ ದೊರೆಯಬೇಕಿದೆ. ವಿಶ್ವದಾದ್ಯಂತ ವೈದ್ಯಕೀಯ ಉಪಯೋಗಕ್ಕೆ ಬಳಸುವ ಮೆಂತ್ಯದ 260 ತಳಿಗಳನ್ನು ಕಾಣಬಹುದಾಗಿದೆ.
ನಿಯಮಿತವಾಗಿ ದಿನ ನಿತ್ಯ ಮೆಂತ್ಯ ಪಲ್ಯ/ಕಾಳಿನ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ರಕ್ತದಲ್ಲಿರುವ ಕೊಬ್ಬಿನ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಈ ರೀತಿಯಿಂದ ಹೃದಯಕ್ಕೆ ಆಗಬಹುದಾದ ತೊಂದರೆ ಸಂಭವವನ್ನು ಕಡಿಮೆ ಮಾಡಿದಂತೆ.
ವೈದ್ಯಕೀಯವಾಗಿ ಕ್ಯಾನ್ಸರ್, ಮಧುಮೇಹ, ಅತೀ ತೂಕ, ಹೆಚ್ಚಿನ ಕೋಲೆಸ್ಟ್ರಾಲ್, ಹೆಚ್ಚಿನ ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆಗಳು, ಬ್ಯಾಕ್ಟಿರಿಯಲ್, ಫಂಗಲ್ ಮತ್ತು ವೈರಲ್ ಸೋಂಕುಗಳನ್ನು ಮತ್ತು ಉರಿಊತಗಳನ್ನು ನಿಯಂತ್ರಿಸುವ ಮತ್ತು ಅಪಾಯವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇಷ್ಟೇ ಅಲ್ಲದೇ ಉಸಿರಾಟದ ಸಮಸ್ಯೆ, ಅಲ್ಸರ್, ಋತುಚಕ್ರದ ಸಮಯದ ನೋವು ಮಾಂಸ ಖಂಡಗಳ ನೋವು ಜೊತೆಗೆ ಗಾಯಗಳಿಗೂ ಉಪಯೋಕಾರಿ. ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗೂ ಉಪಯುಕ್ತವಾದ ಔಷಧೀಯಾಗಿದೆ. ಹೆರಿಗೆ ನೋವಿನಲ್ಲೂ ಸಹಾಯಕವಾಗಿದೆ.
ಅತೀಯಾಗಿ ಮೆಂತ್ಯವನ್ನು ಸೇವಿಸಿದರೆ ಅತೀಸಾರ, ಹೊಟ್ಟೆ ಉಬ್ಬರ, ಹೊಟ್ಟೆಯ ಅಸ್ವಸ್ಥತೆ, ಅಪಾನವಾಯು ಮೊದಲಾದ ಸಮಸ್ಯೆಗಳು ಬರುತ್ತವೆ.
–ಮಾಧುರಿ ದೇಶಪಾಂಡೆ, ಬೆಂಗಳೂರು