ಶಿವಮೊಗ್ಗ ಸುಬ್ಬಣ್ಣ ಎಂಬ
ಚೇತನವನ್ನು ನೆನೆಯುತ್ತಾ….
ಅದೊಂದು ಮಾತಿನಿಂದ ಅವರು ನನ್ನ ಮನಸ್ಸಿನಲ್ಲಿ ನೆಲೆಯಾಗಿ ಹೋಗಿದ್ದರು
ಅವರ ಹೆಸರು ಶಿವಮೊಗ್ಗ ಸುಬ್ಬಣ್ಣ.ಕಾಡು ಕುದುರೆ ಓಡಿ ಬಂದಿತ್ತಾ ಎಂಬ ಹಾಡನ್ನು ತಮ್ಮ ಕಂಚಿನ ಕಂಠದಲ್ಲಿ ಹಾಡಿದ ಅವರಿಗೆ ಅಷ್ಟೊತ್ತಿಗಾಗಲೇ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿತ್ತು.
ಈ ಪ್ರಶಸ್ತಿಗೆ ಅವರು ಭಾಜನರಾಗುವ ಕಾಲಕ್ಕೆ ನಾನಿನ್ನೂ ಚಿಕ್ಕವನು.ಜಗತ್ತನ್ನು ಅಚ್ಚರಿಯಿಂದ ಪಿಳಿ ಪಿಳಿ ನೋಡುವ ಕಾಲಘಟ್ಟ ಅದು.
ಹಾಗಿದ್ದ ಕಾಲದಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಿಕ್ಕ ಪ್ರಶಸ್ತಿ ನಮಗೆಲ್ಲ ಅತೀವ ಹೆಮ್ಮೆಯ ವಿಷಯವಾಗಿತ್ತು.ಇದಕ್ಕಿದ್ದ ಕಾರಣವೆಂದರೆ ಅವರು ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರದವರು.
ಅವತ್ತಿನ ಕಾಲಕ್ಕೆ ಆ ಹಾಡಿನ ಖದರು ಹೇಗಿತ್ತೆಂದರೆ ಅದು ನಮ್ಮ ಪಾಲಿನ ರಾಷ್ಟ್ರಗೀತೆಯೇ ಆಗಿತ್ತು.
ಯಾವ ಸಭೆ,ಸಮಾರಂಭ ಇರಲಿ,ಕಾಡು ಕುದುರೆ ಓಡಿ ಬಂದಿತ್ತಾ ಎಂಬ ಹಾಡು ಅಲ್ಲಿ ಅನುರಣಿಸಲೇಬೇಕಿತ್ತು.
ಜನಮಾನಸದಲ್ಲಿ ಅದರ ಖ್ಯಾತಿ ಹೇಗಿತ್ತೆಂದರೆ ಅವತ್ತಿನ ಕಾಲದಲ್ಲಿ ನನಗೆ ಆತ್ಮೀಯನಾಗಿದ್ದ ಶ್ರೀನಾಥನ ಅಕ್ಕನನ್ನು ನೋಡಲು ಬಂದ ವರನ ಕಡೆಯವರು,ಹುಡುಗಿಗೆ ಹಾಡಲು ಬರುತ್ತಾ ಅಂತ ಕೇಳಿದರೆ ಹುಡುಗಿ ಹಿಂದೆ,ಮುಂದೆ ನೋಡದೆ ಕಾಡು ಕುದುರೆ ಓಡಿ ಬಂದಿತ್ತಾ ಅಂತ ಹಾಡು ಹೇಳಿ ವರ ಮೂಕವಿಸ್ಮಿತನಾಗುವಂತೆ ಮಾಡಿದ್ದಳು.
ಈ ಹಾಡನ್ನು ಹುಡುಗಿ ಇಷ್ಟು ನಿರಾಯಾಸವಾಗಿ ಹೇಳ್ತಾಳೆ ಅಂದರೆ ಅವಳು ಸಂಸಾರ ನಡೆಸೋ ಗಟ್ಟಿಗಿತ್ತಿಯೇ ಬಿಡಿ ಅಂತ ವರನ ಕಡೆಯವರು ಒಂದೇ ಟೇಕಿಗೆ ಹುಡುಗಿಯನ್ನು ಓಕೆ ಎಂದಿದ್ದರು.
ಹೀಗೆ ಕನ್ನಡಿಗರ ಮನಗಳಲ್ಲಿ ಜಮಖಾನ ಹಾಸಿ ನಿರುಮ್ಮಳವಾಗಿ ಬಂದು ಕುಳಿತ ಶಿವಮೊಗ್ಗ ಸುಬ್ಬಣ್ಣ ಅಲ್ಲಿ ಶಾಶ್ವತವಾಗಿ ನೆಲೆಯಾಗಿಬಿಟ್ಟರು.
ಅಂದ ಹಾಗೆ ನನ್ನ ಪಾಲಿಗೆ ಅದ್ಭುತವೇ ಆಗಿದ್ದ ಅವರನ್ನು ನಾನು ಮೊದಲು ನೋಡಿದ್ದು ನಾಡಿನ ಆಡಳಿತ ಕೇಂದ್ರ ವಿಧಾನಸೌಧದಲ್ಲಿ.ಇಪ್ಪತ್ತೈದು ವರ್ಷಗಳಿಗೂ ಹಿಂದೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಾರಂಭವೊಂದು ನಡೆದಾಗ ಮುಖ್ಯಮಂತ್ರಿಗಳು,ಸಚಿವರು,ಶಾಸಕರು ಸೇರಿದಂತೆ ಸರ್ಕಾರದ ಬಹುತೇಕರು ಅಲ್ಲಿ ಉಪಸ್ಥಿತರಿದ್ದರು.
ಸಮಾರಂಭ ಆರಂಭವಾಗುವ ಮುನ್ನ ಅಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರ ಸುಗಮ ಸಂಗೀತ ಕಾರ್ಯಕ್ರಮ ಶುರುವಾಯಿತು.
ಅವರು ಹಾಡುತ್ತಾ,ಹಾಡುತ್ತಾ ಮಧ್ಯೆ,ಮಧ್ಯೆ ತಮಗನ್ನಿಸಿದ್ದನ್ನು ಹೇಳುತ್ತಾ ಹೋಗುತ್ತಿದ್ದರು.
ಹೀಗೆ ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಕೆಲ ಸೆಕೆಂಡುಗಳ ಮೌನ ಸೃಷ್ಟಿಸಿ ಮುಖ್ಯಮಂತ್ರಿಗಳು ಮತ್ತು ಗಣ್ಯರನ್ನು ನಿಟ್ಟಿಸಿದರು.
ಅವರ ನೋಟ ತಮ್ಮ ನೋಟದೊಂದಿಗೆ ವಿಲೀನವಾಗಿವೆ ಎಂಬುದು ಖಚಿತವಾಗುತ್ತಿದ್ದಂತೆಯೇ:ಈ ದೇಶದಲ್ಲಿ ಕನ್ನಡಿಗರಷ್ಟು ಅಭಿಮಾನ ಶೂನ್ಯರು ಯಾರೂ ಇಲ್ಲ.ಅವರಿಗೆ ತಮ್ಮ ನೆಮ್ಮದಿ ಮುಖ್ಯ.ಆದರೆ ಕನ್ನಡ ಭಾಷೆಯ,ಸಂಸ್ಕೃತಿಯ ನೆಮ್ಮದಿ ಉಳಿಯದಿದ್ದರೆ ತಮ್ಮದಷ್ಟೇ ಅಲ್ಲ,ತಮ್ಮ ಮಕ್ಕಳೂ ನೆಮ್ಮದಿಯಿಂದ ಇರಲಾರರು ಎಂದು ಬಿಟ್ಟರು.
ಈ ಮಾತುಗಳಿಗೆ ಎಲ್ಲರೂ ತಲೆದೂಗುತ್ತಿದ್ದಂತೆಯೇ:ಕನ್ನಡಿಗರ ಅಭಿಮಾನ ಶೂನ್ಯತೆಯ ಬಗ್ಗೆ ಹಳಹಳಿಸುತ್ತಾ ಕೂತರೆ ಸಾಲದು.ಆಳುವ ಸರ್ಕಾರ ಅವರಲ್ಲಿ ಕನ್ನಡ ಪ್ರಜ್ಞೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು.ಅದರ ನೀತಿಗಳು ಕನ್ನಡದ ಪರವಾಗಿರಬೇಕು.ದುರಾದೃಷ್ಟವೆಂದರೆ ನಾವು ಕನ್ನಡ ಆಡಳಿತ ಭಾಷೆಯಾಗಬೇಕು ಎಂದು ಬೊಂಬಡ ಹೊಡೆಯುತ್ತಲೇ ಇದ್ದೇವೆ ಅಂತ ಝಾಡಿಸಿಯೇ ಬಿಟ್ಟರು.
ಒಂದು ಸಮಾರಂಭದ ಗ್ಲಾಮರ್ ಹೆಚ್ಚಿಸಲು ಏರ್ಪಾಡಾಗುವ ಇಂತಹ ಸಂಗೀತ ಗೋಷ್ಟಿಗಳಲ್ಲಿ ಇಂತಹ ಬಾಣ ಸಿಡಿಯುವುದು ಕಷ್ಟ.
ಆದರೆ ಸುಬ್ಬಣ್ಣನವರಿಗೆ ಹಾಡುಗಾರಿಕೆ ಹೇಗೆ ಬದುಕಿನ ಅಂಗವಾಗಿತ್ತೋ?ನಾಡು-ನುಡಿಯ ಮೇಲಿನ ಪ್ರೀತಿ ಅದಕ್ಕಿಂತ ಮುಖ್ಯವಾಗಿತ್ತು.
ಹೀಗಾಗಿ ಅಲ್ಲಿ ಕೂತ ಅತಿರಥ-ಮಹಾರಥ ನಾಯಕರ ಪೈಕಿ ಯಾರೊಬ್ಬರೂ ಸುಬ್ಬಣ್ಣ ಅವರ ಮಾತನ್ನು ವಿರೋಧಿಸಲಿಲ್ಲ.
ಇದಾದ ಕೆಲ ಕಾಲದ ನಂತರ ಹಾಯ್ ಬೆಂಗಳೂರು ಪತ್ರಿಕೆಯ ರಥಯಾತ್ರೆ ಆರಂಭವಾಯಿತಲ್ಲ?ಅದಾದ ಸ್ವಲ್ಪೇ ದಿನಗಳಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರ ಪ್ರೀತಿ ನನಗೆ ದಕ್ಕತೊಡಗಿತು.
ಬದುಕಿನ ಎಲ್ಲ ರಂಗಗಳ ಬಗ್ಗೆ ಅರಿವಿದ್ದ ಅವರ ಬಳಿ ನಾನೇ ಒಮ್ಮೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನ ಘಟನೆಯನ್ನು ನೆನಪಿಸಿದೆ.
ಅದಕ್ಕವರು:ವಿಠ್ಠಲಮೂರ್ತಿ,ಆ ಮಾತನ್ನು ನಾನು ಬೇರೆ ಕಡೆ ಆಡುವುದಕ್ಕಿಂತ ಅಲ್ಲಿ ಆಡುವುದು ಅನಿವಾರ್ಯವಾಗಿತ್ತು ಎಂದರು.
ಆದರೆ ಹಾಗೆ ಕಠೋರವಾಗಿ ಮಾತನಾಡಿದ್ದರಿಂದ ಸರ್ಕಾರ ನಿಮ್ಮ ಮೇಲೆ ಮುನಿಸಿಕೊಳ್ಳುವುದಿಲ್ಲವೇ?ಎಂದೆ.
ಮುನಿಸಿಕೊಂಡರೆ ಮುನಿಸಿಕೊಳ್ಳಲಿ.ಆದರೆ ಅವರು ನೀತಿ ನಿರೂಪಕರು.ಇವತ್ತು ನಾನಾಡಿದ ಮಾತಿನಿಂದ ಅವರಿಗೆ ಮುನಿಸಾಗಬಹುದು.ಆದರೆ ಕನ್ನಡದ ಬಗೆಗಿನ ಇವರ ಅಭಿಮಾನ ಶೂನ್ಯತೆಯಿಂದ ಈ ನಾಡಿನ ಪೀಳಿಗೆ ಪರಭಾಷಿಕರ ಮುಂದೆ ಕೈ ಕಟ್ಟಿ ನಿಲ್ಲುವ ಸ್ಥಿತಿಗೆ ಬರುತ್ತದೆ.ಇದನ್ನು ನಾನು ಹೇಳಲೇಬೇಕಲ್ಲವೇ?ಎಂದರು.
ಅವತ್ತು ಅವರಾಡಿದ ಮಾತು ಇವತ್ತಿಗೂ ನನ್ನನ್ನು ಕಾಡುತ್ತಿದೆ.ಬರೀ ನನ್ನನ್ನಲ್ಲ.ಇಡೀ ನಾಡನ್ನು ಕಾಡುತ್ತಿದೆ.
ಅಂದ ಹಾಗೆ ಶಿವಮೊಗ್ಗ ಸುಬ್ಬಣ್ಣ ನಿಧನರಾಗಿದ್ದಾರೆ.ಈಗ ಅವರ ಬಗ್ಗೆ ಮಾತನಾಡುತ್ತಾ ಶೋಕ ಸೂಚಿಸುವುದು ಒಂದು ಭಾಗ.ಆದರೆ ನಾಡಿನ ಬಗ್ಗೆ ನಮಗಿರಬೇಕಾದ ಅಭಿಮಾನದ ಬಗ್ಗೆ ಅವರು ಹಚ್ಚಿಟ್ಟು ಹೋದ ದೊಂದಿ ಬಹಳ ಮುಖ್ಯ.ಆ ದೊಂದಿಗೆ ಎಣ್ಣೆ ಹಾಕಿ ಅದು ಆರದಂತೆ ನೋಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ.ಮತ್ತು ಅವರ ಆತ್ಮಕ್ಕೆ ಕೋರುವ ನಿಜವಾದ ಶ್ರದ್ಧಾಂಜಲಿ.
–ಆರ್.ಟಿ.ವಿಠ್ಠಲಮೂರ್ತಿ