ಬುದ್ಧ ಬಸವರ ಬಳಲಿಕೆ
ಅಂದು ಎಲ್ಲ ಜಾತಿ ಪಂಥ
ಒಂದು ಮಾಡಿ
ಕಟ್ಟಿದನು ಶರಣ ಧರ್ಮ
ಇಂದು ಮೀಸಲಾತಿಗೆ
ಮೆರವಣಿಗೆ
ಒಳ ಪಂಗಡಗಳ ಕರ್ಮ
ಬೇಡವೆಂದ ಗುಡಿ ಗೋಪುರ
ಇಂದು ಮಠಗಳ ದರ್ಪವು
ಮೂರ್ತಿ ಸ್ಥಾವರ ಒಪ್ಪಲಿಲ್ಲ
ಇಂದು ಕಲ್ಲು ಕಂಚಿನ ಬಸವನು
ದಯೆ ಧರ್ಮ ದುಡಿಮೆ ದೇವರು
ಪುರಾಣ ಪ್ರವಚನ ಶಬ್ದವು
ಲಿಂಗಾಯತ ಧರ್ಮ ಬೇಡಿಕೆ
ಶತಮಾನಗಳ ಶಾಸನ
ಸ್ವಾರ್ಥ ರಾಜಕಾರಣಕ್ಕಾಗಿ
ಖಾದಿ ಕಾವಿಯ ನಾಟಕ
ಮತ್ತೆ ಬಂತು ಚುನಾವಣೆ
ಮತ ಬೇಟೆಯ ಪ್ರಹಸನ
ಏಳಿರೈ ಬಸವ ಭಕ್ತರೇ
ಗಟ್ಟಿಗೊಳ್ಳಿ ವಚನಕೆ
ತತ್ವ ನೀತಿ ಧರ್ಮ ಶಾಂತಿ
ಸತ್ಯ ಸಮತೆ ಕ್ರಾಂತಿಗೆ
ಜಗದ ಜಗುಲಿಗೆ ಬೆಂಕಿ ಬಿದ್ದಿದೆ
ಕೊನೆಗೊಳ್ಳಲಿ ಭ್ರಮೆ ಭ್ರಾಂತಿ
ಧರ್ಮದ ಹೆಸರಲಿ ಸುಲಿಗೆ ಶೋಷಣೆ
ಬಹು ರೂಪ ಉದರ ಪೋಷಣೆ
ತೆಂಗು ತಾಯತ ವಿಳೆ ಕುಂಕುಮ
ವೇದ ಶಬ್ದ ಮಂತ್ರ ಘೋಷಣೆ
ದುಡಿವ ವರ್ಗದ ಮರಣ ಹೋಮ
ಬುದ್ಧ ಬಸವರ ಬಳಲಿಕೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ