ನಿನ್ನನಾಶ್ರಯಿಸುವೆನು
ನಿನ್ನ ಆಶ್ರಯಿಸುವೆನು ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೋ ||ಪ||
ಪುರಂದರದಾಸರ ಈ ಒಂದು ಸುಂದರ ಪದ್ಯ ನನ್ನನ್ನು ಸದಾ ಕಾಯುತ್ತಿರೋ ದೇವಾ ನಿಗಮಗೋಚರನೇ ಮತ್ತು ನನಗೆ ಇಷ್ಟವಾದುದನ್ನು ನೀಡು ಎಂಬುದು ಈ ಪಲ್ಲದಲ್ಲಿದೆ.
ವಿವರ : ಮುಂದೆ ಜೀವಿಸುವ ವಿವರ ನೀಡುತ್ತಾ ಯಾರು ಯಾರಿಗೆ ಆಶ್ರಯ ಎಂಬುದನ್ನು ಪ್ರತಿಯೊಂದು ಪದ್ಯಗಳಲ್ಲಿ ತಿಳಿಸಿದ್ದಾರೆ. ತುಂಬಾ ಮನತಟ್ಟುವ ಉತ್ತಮ ರಚನೆ ಇದಾಗಿದೆ.
ಕುಂದಣದ ಆಶ್ರಯ ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಗೆ
ಕಂದರ್ಪನಾಶ್ರಯ ವಸಂತ ಕಾಲಕ್ಕೆ
ಗೋವಿಂದನಾಶ್ರಯವು ಮರಣಕಾಲದೊಳು || 1 ||
ನವರತ್ನಗಳನ್ನು ಜೋಡಿಸಲು ಕುಂದಣದ ಆಶ್ರಯ ಅವಶ್ಯಕ. ಚಕೋರನಿಗೆ ಚಂದ್ರನ ಆಶ್ರಯವು ಬೇಕು. ಚಂದ್ರನು ಬರುವದನ್ನೇ ಅದು ಕಾಯುತ್ತಿರುತ್ತದೆ. ಅದರಂತೆ ವಸಂತ ಕಾಲಕ್ಕೆ ಕಂದರ್ಪನಾಶ್ರಯ ಬೇಕೇ ಬೇಕು ಎಂದು ತಿಳಿಸಿ ಕೊನೆಗೆ, ಮರಣದ ಕಾಲಕ್ಕೆ ದೇವ ದೇವ ಗೋವಿಂದನ ಆಶ್ರಯವು ಇರಲೇಬೇಕು ಎಂಬುದು ಈ ಒಂದನೇ ಪದ್ಯದ ಸಾರಾಂಶ.
ಹಣ್ಣುಳ್ಳ ಮರಗಳು ಪಕ್ಷಿಗಳಾಶ್ರಯವು
ಪುಣ್ಯನದಿಗಳು ಋಷಿಗಳಾಶ್ರಯವು
ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು
ತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು || 2 ||
ಹಣ್ಣುಳ್ಳ ಮರಗಳು , ಗಿಡಗಳು ಯಾವಾಗಲೂ ಪಕ್ಷಿಗಳಿಗೆ ಆಶ್ರಯವಾಗಿರುತ್ತವೆ ಮತ್ತು ಕಣ್ಣು ಇಲ್ಲದ ಕುರುಡನಿಗೆ ಕೈಕೋಲ ಅತಿ ಅವಶ್ಯ ಎಂಬುದನ್ನು ಹೇಳಿ ತನ್ನಿಷ್ಟದಂತೆ ನಡೆಯುವವಗೆ ನಿನ್ನದೇ ಆಶ್ರಯವು ಇರಲೇಬೇಕು ಎಂಬುದನ್ನು ತಿಳಿಯಪಡಿಸಿ ಪುಣ್ಯಕರವಾದ ನದಿಗಳು ಋಷಿಗಳಿಗೆ ಆಶ್ರಯದಾಯಕವಾಗಿರುತ್ತವೆ ಎಂಬುದನ್ನು ತಿಳಿಸಿದ್ದಾರೆ. ಪಾವನಕರವಾದ ನದಿಗಳು ಋಷಿಗಳಿಗೆ ಅತಿ ಅವಶ್ಯವೆಂಬುದು ಇದರ ಅರ್ಥ.
ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು
ಯತಿಗಳಿಗೆ ಶ್ರುತಿ ಪ್ರಣವದಾಶ್ರಯವು
ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವು
ಹಿತವಾದ ಪುರಂದರವಿಠಲನಾಶ್ರಯವು || 3 ||
ಪತಿವೃತೆಯಾದವಳಿಗೆ ಪತಿಯೇ ಪರದೈವ , ಅವನಿಲ್ಲದೇ ಅವಳ ಜೀವನ ಸಾಗಿಸುವದು ದುಸ್ತರ ಮತ್ತು ಯತಿಗಳಿಗೆ ಹರಿಕಥೆ ಶ್ರವಣ, ಮನನ ಧ್ಯಾನವೇ ಆಶ್ರಯವು ಮುಖ್ಯವೂ ಎಂದು ಹೇಳಿ ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವೆಂದು ತಿಳಿಸಿ ಅಂತಹವರು ಹರಿಯ ಧ್ಯಾನದಲ್ಲಿ ಕಾಲ ಕಳೆಯುವದು ಅವಶ್ಯ ಎಂದು ತಿಳಿಸಿ ಪುರಂದರ ವಿಠಲನ ಆಶ್ರಯವು ಎಲ್ಲರಿಗೂ ಮತ್ತು ಜಗಕ್ಕೂ ಬೇಕು ಎಂಬುದನ್ನು ಮಾರ್ಮಿಕವಾಗಿ ತಿಳಿಸಿ ಎಲ್ಲದಕ್ಕೂ ಶ್ರೀಹರಿಯನ್ನೇ ಆಶ್ರಯಿಸಬೇಕು ಎಂಬುದನ್ನು ತಿಳಿಸಿದ್ದಾರೆ.
ಕೃಷ್ಣ ಬೀಡಕರ.
ವಿಜಯಪುರ.
ಮೋ. 9972087473