(ವಿಜಯ ಕರ್ನಾಟಕ ಪತ್ರಿಕೆಯಯಲ್ಲಿ ಪ್ರಕಟವಾದ ಪೂಜ್ಯರ ಲೇಖನವನ್ನು e-ಸುದ್ದಿ ಓದುಗರಿಗಾಗಿ ಪ್ರಕಟಿಸಲಾಗಿದೆ.)

ಎದೆಯ ದನಿಗಿಂತ ಮಿಗಿಲಾದ ಧರ್ಮ ಉಂಟೇ?

 

ಬೇರೆಯವರಿಂದ ಏನನ್ನೂ ನಿರೀಕ್ಷಿಸದೆ ಮಾನವೀಯ ನೆಲೆಗಟ್ಟಿನಲ್ಲಿ ಉಪಕಾರ ಮಾಡಬೇಕು.

ತ್ಯಾಗಮನೋಭಾವವೇ ನಿಜವಾದ ಧರ್ಮ!

ವಿದೇಶದಲ್ಲಿರುವ ಆತ್ಮೀಯರಿಂದ ಇತ್ತೀಚೆಗೆ ನಮಗೆ ಬಂದ ಒಂದು ಮನಮಿಡಿಯುವ ಆನಿಮೇಟೆಡ್ ರೇಖಾಚಿತ್ರದ ವೀಡಿಯೋ ತುಣುಕು. ಮೂರು ನಿಮಿಷಗಳ ಈ ವೀಡಿಯೋ ಅತ್ಯುತ್ತಮ animated movie ಎಂದು Oscar ಪ್ರಶಸ್ತಿಯನ್ನು ಪಡೆದಿದೆ. ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದ ವೃದ್ಧನೊಬ್ಬ ರೈಲು ಬಂದ ತಕ್ಷಣವೇ ಕೋಲೂರಿಕೊಂಡು ನಡೆದು ಹತ್ತಿಕೊಳ್ಳುತ್ತಾನೆ. ಬೋಗಿಯೊಳಗೆ ಹೋದಾಗ ಕುಳಿತುಕೊಳ್ಳಲು ಒಂದೂ ಸೀಟು ಖಾಲಿ ಇರುವುದಿಲ್ಲ. ಬೋಗಿಯಲ್ಲಿ ಕುಳಿತಿದ್ದ ಸಹ ಪ್ರಯಾಣಿಕರು ಒಳಗೆ ಬಂದ ಅಶಕ್ತ ವೃದ್ದನನ್ನು ನೋಡಿದರೂ ಯಾರೂ ಕನಿಕರಪಟ್ಟು ತಮ್ಮ ಸೀಟು ಬಿಟ್ಟುಕೊಡುವುದಿಲ್ಲ. ಎಲ್ಲರೂ ಮೊಬೈಲು ನೋಡುವುದರಲ್ಲಿಯೋ, ಪತ್ರಿಕೆ ಓದುವುದರಲ್ಲಿಯೋ, ಚಹಾಪಾನೀಯ ಮಾಡುವುದರಲ್ಲಿಯೋ, ಹರಟೆ ಹೊಡೆಯುವುದರಲ್ಲಿಯೋ ತಲ್ಲೀನರಾಗಿರುತ್ತಾರೆ. ವೃದ್ದ ಕೋಲೂರಿ ಖಾಲಿ ಸೀಟು ಹುಡುಕುತ್ತಾ ಮುಂದೆ ಸಾಗಿದಂತೆ ಹದಿಹರೆಯದ ಯುವತಿಯೊಬ್ಬಳು ತನ್ನ ಸೀಟಿನಿಂದ ಎದ್ದು ನಿಂತು ಆತನ ಕೈಹಿಡಿದು ಹೇಳುತ್ತಾಳೆ:

“ತಾತ! ಬನ್ನಿ ಇಲ್ಲಿ ಕುಳಿತುಕೊಳ್ಳಿ”
“ಪರವಾಯಿಲ್ಲ ಬಿಡಮ್ಮ, ನನ್ನದು ಸೀಟಿಲ್ಲದ ಟಿಕೆಟ್! ನಿಂತುಕೊಳ್ಳುತ್ತೇನೆ”
“ಅಯ್ಯೋ ನನ್ನದೂ ಸೀಟಿಲ್ಲದ ಟಿಕೆಟ್ಟೇ ತಾತ, ನಾನು ಚಿಕ್ಕವಳಲ್ಲವೆ? ನಿಂತುಕೊಂಡೇ ಪ್ರಯಾಣ ಮಾಡಬಲ್ಲೆ, ಬನ್ನಿ ಕುಳಿತುಕೊಳ್ಳಿ”

ವೃದ್ದ ಆಕೆಗೆ ಧನ್ಯವಾದಗಳನ್ನು ಹೇಳಿ ಆರಾಮಾಗಿ ಕುಳಿತುಕೊಂಡು “ಯಾವ ಪುಣ್ಯಾತ್ಮನದೋ ಈ ಸೀಟು. ಅವನು ಬರದೇ ಇದ್ದರೆ ಎಷ್ಟು ಚೆನ್ನಾಗಿರುತ್ತೆ!” ಎಂದು ಉದ್ಗರಿಸುತ್ತಾನೆ. ರೈಲು ಮುಂದೆ ಓಡುತ್ತಿದ್ದಂತೆ ಪಕ್ಕದಲ್ಲಿಯೇ ಕಂಬಿ ಹಿಡಿದುಕೊಂಡು ನಿಂತಿದ್ದ ಆ ಯುವತಿಯತ್ತ ತಿರುಗಿ: “ಮಗೂ ನಿನ್ನ ಸ್ಟೇಷನ್ ತಲುಪಲು ಎಷ್ಟು ಸಮಯ ಬೇಕು?” “ಇನ್ನೂ ಐದು ಗಂಟೆಯಾದರೂ ಬೇಕು ತಾತ” “ಸುಸ್ತಾದರೆ ಹೇಳಮ್ಮ. ನಾನು ಎದ್ದು ನಿಂತು ನಿನಗೆ ಸೀಟು ಬಿಟ್ಟುಕೊಡುತ್ತೇನೆ” “ಪರವಾಗಿಲ್ಲ ತಾತ, ಆರಾಮಾಗಿ ಕುಳಿತುಕೊಳ್ಳಿ” ರಾತ್ರಿಯಾಗುತ್ತದೆ. ಪ್ರಯಾಣಿಕರೆಲ್ಲರೂ ನಿದ್ದೆಗೆ ಜಾರುತ್ತಾರೆ. ಯುವತಿಯು ಕಂಬಿಯನ್ನು ಹಿಡಿದುಕೊಂಡು ನಿಂತೇ ತೂಕಡಿಸುತ್ತಾಳೆ. ಅಷ್ಟರಲ್ಲಿ ಟಿ.ಸಿ. ಪ್ರಯಾಣಿಕರ ಟಿಕೆಟ್ ಗಳನ್ನು ಪರೀಕ್ಷಿಸುತ್ತಾ ಬರುತ್ತಾನೆ. ವೃದ್ದನ ಟಿಕೆಟ್ ಪರೀಕ್ಷಿಸಿದಾಗ ಅದರಲ್ಲಿ “No Seat” ಎಂದಿರುವುದನ್ನು ಗಮನಿಸಿದರೂ ಠಸ್ಸೆಯೊತ್ತಿ ಹಿಂದಿರುಗಿಸುತ್ತಾನೆ. ಯುವತಿಯ ಟಿಕೆಟ್ ಅನ್ನು ಪರೀಕ್ಷಿಸಿದಾಗ ಅದರಲ್ಲಿ ಸೀಟ್ ನಂಬರ್ “27C” ಎಂದು ನಮೂದಾಗಿರುತ್ತದೆ. ವೃದ್ದ ಕುಳಿತಿದ್ದ ಸೀಟಿನ ನಂಬರ್ ಅದೇ ಆಗಿರುತ್ತದೆ. ತಕ್ಷಣವೇ ಯುವತಿಯು “ನನ್ನದು ಸೀಟಿಲ್ಲದ ಟಿಕೆಟ್ ಎಂದು ಹೇಳಿ ತಾತನನ್ನು ಕೂರಿಸಿದ್ದೇನೆ, ನೀವು ಅವರನ್ನು ಏಳಿಸಬೇಡಿ” ಎಂದು ಟಿ.ಸಿಗೆ ಕಣ್ಸನ್ನೆ ಮಾಡುತ್ತಾಳೆ. ಆಕೆಯ ದಯಾಳು ಗುಣವನ್ನು ನೋಡಿ ಟಿ.ಸಿಯ ಹೃದಯ ತುಂಬಿ ಬರುತ್ತದೆ. “ಬಾರಮ್ಮಾ ನೀನಿನ್ನೂ ಬಹಳ ದೂರ ಪ್ರಯಾಣ ಮಾಡಬೇಕು. ಹಿಂದಿನ ಬೋಗಿಯಲ್ಲಿ ಒಂದು ಸೀಟು ಖಾಲಿಯಿದೆ; ತೋರಿಸುತ್ತೇನೆ. ಅಲ್ಲಿ ಕುಳಿತುಕೋ” ಎಂದು ಆಕೆಯನ್ನು ಕರೆಯುತ್ತಾನೆ. ಆ ಯುವತಿಯು ಲಗೇಜು ಇಡುವ ಬರ್ತ್ ಮೇಲೆ ಕೈಯಾಡಿಸಿ ತನ್ನ ಎರಡು ಊರುಗೋಲುಗಳನ್ನು ತೆಗೆದುಕೊಂಡು ಕಂಕುಳದ ಕೆಳಗೆ ಇಟ್ಟುಕೊಂಡು ಟಿ.ಸಿಯ ಹಿಂದೆ ಹೆಜ್ಜೆ ಹಾಕುತ್ತಾಳೆ. ಕುಂಟುತ್ತಾ ಊರುಗೋಲಿನ ಸಹಾಯದಿಂದ ಮುಂದೆ ಸಾಗಿದ ಆ ಅಂಗವಿಕಲ ಯುವತಿಯನ್ನು ನೋಡಿ ಅವಳಿಗೇ ಕುಳಿತುಕೊಳ್ಳಲು ಸೀಟಿನ ಅಗತ್ಯವಿದ್ದರೂ ತನ್ನ ಸೀಟನ್ನು ವೃದ್ಧನಿಗೆ ಬಿಟ್ಟುಕೊಟ್ಟ ಅವಳ ಹೃದಯವೈಶಾಲ್ಯವು ಸಹ ಪ್ರಯಾಣಿಕರ ಆತ್ಮಸಾಕ್ಷಿಯನ್ನು ಚುಚ್ಚುತ್ತದೆ. ಕೊನೆಯಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಸಂದೇಶ: “The real kindness is when you are ready to give up something that you need yourself!” (“ನಿಮಗೆ ಅಗತ್ಯವಾಗಿ ಬೇಕಾಗಿರುವುದನ್ನು ಬೇರೊಬ್ಬರ ಹಿತಕ್ಕಾಗಿ ತ್ಯಾಗ ಮಾಡುವುದೇ ನಿಜವಾದ ಕರುಣೆ!”) ಆ ಯುವತಿಯ ನಡೆಯಲ್ಲಿ ಕಂಡುಬಂದ ಈ ತ್ಯಾಗಮನೋಭಾವವೇ ನಿಜವಾದ ಧರ್ಮ!
ಇತ್ತೀಚೆಗೆ ಶಿವಮೊಗ್ಗದಲ್ಲಿ ಉಂಟಾದ ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ ಕಳೆದ ಶನಿವಾರ (3.9.2022) ಶಿವಮೊಗ್ಗ ನಾಗರಿಕರು ಏರ್ಪಡಿಸಿದ್ದ “ನಮ್ಮ ನಡಿಗೆ ಶಾಂತಿಯ ಕಡೆಗೆ” ಎಂಬ ಶಾಂತಿಪಾದಯಾತ್ರೆಯಲ್ಲಿ ನಗರದ ವಿವಿಧ ಧರ್ಮಗುರುಗಳ ಜೊತೆಗೆ ಹೆಜ್ಜೆ ಹಾಕಿದೆವು. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದವಿಲ್ಲದೆ ಯುವಕರು ಮಹಿಳೆಯರಾದಿಯಾಗಿ ಸಾವಿರಾರು ಜನರು ಅದರಲ್ಲಿ ಭಾಗವಹಿಸಿದ್ದರು. ನಗರದ ಜಿಲ್ಲಾ ನ್ಯಾಯಾಲಯದ ಎಲ್ಲ ನ್ಯಾಯಾಧೀಶರೂ ಈ ಶಾಂತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಒಂದು ವಿಶೇಷ. ಕೋಮು ಘರ್ಷಣೆಗಳಲ್ಲಿ ಸಾವು ನೋವು ಸಂಭವಿಸಿ ಜನರು ನ್ಯಾಯಾಲಯದ ಮೆಟ್ಟಿಲೇರುವ ಬದಲು ನ್ಯಾಯದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುವ ಈ ಶಾಂತಿಯಾತ್ರೆಗೆ ನ್ಯಾಯಾಧೀಶರುಗಳು ನೀಡಿದ ಸಾಥ್ ಇಡೀ ದೇಶಕ್ಕೇ ಮಾದರಿ. ಮೆಗ್ಗಾನ್ ಆಸ್ಪತ್ರೆ ಆವರಣದಿಂದ ಹೊರಟ ಈ ಶಾಂತಿಯಾತ್ರೆ ಅಮೀರ್ ಅಹಮದ್ ಸರ್ಕಲ್ ದಾಟಿ ಮಧ್ಯಾಹ್ನದ ಉರಿಬಿಸಿಲಿನಲ್ಲಿ ತಲುಪಿದ್ದು ಸರಕಾರಿ ಪ್ರೌಢಶಾಲೆ! 1960-63 ರ ಕಾಲಾವಧಿಯಲ್ಲಿ ನಾವು ಓದಿದ ಈ ಶಾಲೆ ನಮ್ಮ ಪಾಲಿಗೆ ಕಾಡಿನಲ್ಲಿ ಸೀತೆಯ ಕಣ್ಮನ ಸೆಳೆದ ಮಾಯಾಜಿಂಕೆಯಂತೆ! ಆದರೆ ಈ “ಮಾಯಾಜಿಂಕೆ” ಸೀತೆಯನ್ನು ಮೋಸಗೊಳಿಸಿದ ಮಾಯಾವಿ ಮಾರೀಚನಂತಲ್ಲ. ಬಾಲ್ಯದಲ್ಲಿ ನಮ್ಮ ಬದುಕಿನ ದಾರಿಗೆ ಬೆಳಕನ್ನು ನೀಡಿದ ಶಾಲೆ. ಅಪರಿಮಿತವಾದ ವಿಜ್ಞಾನ, ಸಾಹಿತ್ಯ, ಸಂಗೀತ ಇತ್ಯಾದಿ ವಿಷಯಗಳಲ್ಲಿ ಅಂಬೆಗಾಲಿಟ್ಟು ಹೆಜ್ಜೆ ಹಾಕಲು ಕಲಿಸಿದ ಶಾಲೆ; ದಿಗ್ ದಿಗಂತಗಳಿಗೆ ನಮ್ಮನ್ನು ಕರೆದೊಯ್ದ ಶಾಲೆ! ಈ ಪ್ರೌಢಶಾಲೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗಾಂಧೀಜಿ 1927 ರಲ್ಲಿ ಈ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಒಂದು ಅಪರೂಪದ ಭಾವಚಿತ್ರವಿದೆ. ಮಧ್ಯಾಹ್ನದ ಉರಿಬಿಸಿಲಲ್ಲಿ ಈ ಶಾಲೆಯನ್ನು ತಲುಪಿದಾಗ ಶಾಂತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರನ್ನು ಉದ್ದೇಶಿಸಿ ಧರ್ಮಗುರುಗಳಿಂದ ಶಾಂತಿ ಸಂದೇಶ ನೀಡಲು ವೇದಿಕೆಯಾಗಿ ಬಳಕೆಯಾಗಿದ್ದು ನಮ್ಮ ಶಾಲೆಯ ಮುಂಭಾಗದಲ್ಲಿರುವ ಬಸ್ ಸ್ಟಾಪ್! ಯಾವ ರಾಜಕೀಯ ಸೋಂಕಿಲ್ಲದೆ, ಯಾವ ಹಾರ ತುರಾಯಿಗಳಿಲ್ಲದೆ ಧರ್ಮಗುರುಗಳಿಂದಲೇ ಸ್ವಾಗತ! ಧರ್ಮಗುರುಗಳಿಂದಲೇ ವಂದನಾರ್ಪಣೆ! ಆ ಬಸ್ ಸ್ಟಾಪ್ ನಲ್ಲಿ ಕುಳಿತು ಮಾತನಾಡುವಾಗ ನಮಗೆ ನೆನಪಾಗಿದ್ದು ಆತ್ಮೀಯರೊಬ್ಬರು ಬಹಳ ಹಿಂದೆ ಕಳುಹಿಸಿದ್ದ ಮತ್ತೊಂದು ವೀಡಿಯೋ ತುಣುಕು:

ಒಬ್ಬ ಯುವಕನು ಕಾರನ್ನು ನಡೆಸುತ್ತಾ ಸಾಗುತ್ತಾನೆ. ಕುಂಭದ್ರೋಣ ಮಳೆ! ಬಿರುಗಾಳಿ, ಗುಡುಗು, ಮಿಂಚು, ಆಗಾಗ ಕಿವಿಗಡಚಿಕ್ಕುವ ಬರಸಿಡಿಲು! ಹಾಗೆ ಸಾಗುತ್ತಿರುವಾಗ ಬಸ್ ಸ್ಟಾಪ್ ಬಳಿಯಲ್ಲಿ ಬಸ್ಸಿಗೆ ಕಾಯುತ್ತಾ ನಿಂತಿದ್ದ ಮೂವರು ಕಾಣಿಸುತ್ತಾರೆ. ಅವರಲ್ಲಿ ಒಬ್ಬಳು ಸುಂದರವಾದ ಯುವತಿ; ಇನ್ನೊಬ್ಬ ತನ್ನ ಕಷ್ಟಕಾಲದಲ್ಲಿ ತನಗೆ ನೆರವಾದ ಜೀವದ ಗೆಳೆಯ, ಮತ್ತೊಬ್ಬಳು ಹಣ್ಣು ಹಣ್ಣು ಮುದುಕಿ, ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ನಿಂತ ಅವರನ್ನು ನೋಡಿ ಕನಿಕರಪಟ್ಟು ಕಾರು ನಿಲ್ಲಿಸುತ್ತಾನೆ. ಕಾರಿನಲ್ಲಿ ಖಾಲಿ ಇರುವುದು ಒಂದೇ ಒಂದು ಸೀಟು ಮಾತ್ರ. ಒಬ್ಬರನ್ನು ಮಾತ್ರ ಹತ್ತಿಸಿಕೊಳ್ಳಲು ಸಾಧ್ಯ! ಈಗ ನಿಮಗೊಂದು ಪ್ರಶ್ನೆ: ಅವನು ಯಾರನ್ನು ಹತ್ತಿಸಿಕೊಳ್ಳಬೇಕು? ತನ್ನ ಕನಸಿನ ಕನ್ಯೆಯಾದ ಸುಂದರ ಯುವತಿಯನ್ನೋ, ಆತ್ಮೀಯ ಗೆಳೆಯನನ್ನೋ, ವಯಸ್ಸಾದ ಅಜ್ಜಿಯನ್ನೋ? ಮುಂದೆ ಓದುವ ಮೊದಲು ಕ್ಷಣಕಾಲ ಕಣ್ಮುಚ್ಚಿ ಚಿಂತಿಸಿರಿ. ಹಾಂ, ನಿಮ್ಮ ಉತ್ತರವೇನೆಂದು ಯಾರಾದರೂ ಊಹಿಸಬಹುದು. ಆ ಮೂವರಲ್ಲಿ ವಯಸ್ಸಾದ ಅಜ್ಜಿಯನ್ನೇ ಕಾರಿನಲ್ಲಿ ಹತ್ತಿಸಿಕೊಳ್ಳಬೇಕು ಅದೇ ಮಾನವೀಯ ಧರ್ಮ ಎನ್ನುತ್ತೀರಿ. ಯುವತಿಯ ಸೌಂದರ್ಯದ ಸೆಳೆತಕ್ಕೆ ಒಳಗಾಗದಿರುವುದೇನೂ ಸರಿ. ಆದರೆ ತನ್ನ ಪ್ರಾಣ ಉಳಿಸಿದ ಪ್ರಾಣ ಸ್ನೇಹಿತನಿಗೆ ಪ್ರತ್ಯುಪಕಾರ ಮಾಡದಿರುವುದು ಸರಿಯೇ?

ಇರುವ ಒಂದೇ ವಿಕಲ್ಪದಲ್ಲಿ ಆತ ಮಾಡಿದ್ದೇನು ಗೊತ್ತೇ? ತಾನು ಕೆಳಗಿಳಿದು ಅಜ್ಜಿಯನ್ನು ಕಾರಿನಲ್ಲಿ ಕೂರಿಸಿ, ಗೆಳೆಯನತ್ತ ತಿರುಗಿ “ನೀನು ಈ ಅಜ್ಜಿಯನ್ನು ಬೇಗನೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸು. ನಾನು ನಂತರ ಬಸ್ಸಿನಲ್ಲಿ ಸೀದಾ ಅಲ್ಲಿಗೆ ಬರುತ್ತೇನೆ” ಎಂದು ಹೇಳಿ ತನ್ನ ಕಾರಿನ ಕೀಯನ್ನು ಗೆಳೆಯನಿಗೆ ಕೊಡುತ್ತಾನೆ. ಇಲ್ಲಿ ಆ ಯುವಕ ತನ್ನ ವೈಯಕ್ತಿಕ ಸುಖವನ್ನು ತ್ಯಾಗಮಾಡಿ ಉಪಕಾರ ಸ್ಮರಣೆ ಮತ್ತು ಹೃದಯದ ಮಿಡಿತ ಎರಡನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಧರ್ಮವೆಂದರೆ ಅರ್ಥವಾಗದ ಕಗ್ಗವೇನೂ ಅಲ್ಲ; ಅಪರಿಚಿತಳಾದ ಅಜ್ಜಿಯು ಹಿಂದುವೋ, ಮುಸ್ಲಿಮಳೋ, ಕ್ರೈಸ್ತಳೋ ಎಂದು ಯೋಚಿಸದೆ ಶುದ್ಧಾಂತಃಕರಣದಿಂದ ತನ್ನ ಹೃದಯದ ದನಿಗೆ ಓಗೊಟ್ಟು ನೀಡಿದ ನೆರವೇ ನಿಜವಾದ ಧರ್ಮ. ಇದೇ ಇಂದು ದೇಶಕ್ಕೆ ಬೇಕಾಗಿರುವುದು.

ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ಸಹಜ ಧರ್ಮ, ಕೃತಜ್ಞತೆ ಎನಿಸುತ್ತದೆ. ಆದರೆ ಕೆಲವು ವೇಳೆ ಅದು ಕೊಡುಕೊಳೆ ಎನಿಸುತ್ತದೆ. ನಿಮ್ಮ ಮನೆಯ ಮಂಗಳ ಕಾರ್ಯದಲ್ಲಿ ಕೊಟ್ಟ ಮುಯ್ಯಿ (ಉಡುಗೊರೆ) ಗೆ ಅವರ ಮನೆಯ ಮಂಗಳ ಕಾರ್ಯದಲ್ಲಿ ನೀವು ಮುಯ್ಯಿ ಮಾಡಿದ ಹಾಗೆ. ಕೆಲವು ವೇಳೆ ಅದರಲ್ಲಿ ಪ್ರೀತಿಯ ಆರ್ದ್ರತೆ ಇರುವುದಿಲ್ಲ, ವ್ಯಾವಹಾರಿಕ ದೃಷ್ಟಿ (Social obligation) ಇರುತ್ತದೆ. ಅದೇ ರೀತಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಮಾಡುವ ನೈವೇದ್ಯಕ್ಕೆ ಅರ್ಪಿಸುವ ಬೆಳ್ಳಿ, ಬಂಗಾರದ ಒಡವೆಗಳಿಗೆ ಮಾರುಹೋಗಿ ದೇವರು ಅನುಗ್ರಹಿಸಿದರೆ “ಉಂಡುಟ್ಟು ಕೊಟ್ಟಡೆ ಮುಯ್ಯಿಗೆ ಮುಯ್ಯೆನಿಸಿತ್ತು ಎನಗೆ ಕೊಟ್ಟಡೆ ಧರ್ಮವೆನಿಸಿತ್ತು ಕೂಡಲ ಸಂಗಮದೇವಾ” ಎಂದು ಬಸವಣ್ಣನವರು ಭಕ್ತಿಯ ಅತಿಶಯದಲ್ಲಿ ದೇವರನ್ನೇ ಹಂಗಿಸುತ್ತಾರೆ. ಮುಯ್ಯಿಗೆ ಮುಯ್ಯಿ ಎಂಬ ಶಿಷ್ಟಾಚಾರ ಕಾಟಾಚಾರವಾಗಿ ಪರಿಣಮಿಸಿ ಸೇಡಿನ ಅಪಾರ್ಥವೂ ಧ್ವನಿಸುವಂತಾಗಿದೆ. ಬೇರೆಯವರಿಂದ ಏನನ್ನೂ ನಿರೀಕ್ಷಿಸದೆ ಕೇವಲ ಮಾನವೀಯ ನೆಲೆಗಟ್ಟಿನ ಮೇಲೆ ಮಾಡುವ ಸಹಾಯವೇ ನಿಜವಾದ ಧರ್ಮ. ರಾಷ್ಟ್ರಕವಿ ಕುವೆಂಪು ಹೇಳುವಂತೆ:

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ನಿನ್ನೆದೆಯ ದನಿ ಋಷಿ!
ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.8-9-2022.

Don`t copy text!