ಗಜಲ್
ಅಶಾಂತಿಯ ಮೋಡ ಕವಿದಾಗಲೊಮ್ಮೆ ಬಾಪೂಜಿ ಸ್ವ ಹಿಂಸೆಯನ್ನು ಅನುಭವಿಸುತ್ತಾನೆ
ಶಾಂತಿಯ ಹೂ ಅರಳಿದಾಗಲೊಮ್ಮೆ ಅವನು ನೆಮ್ಮದಿಯ ನಗೆಯನ್ನು ಬೀರುತ್ತಾನೆ
ವಿದೇಶದಲ್ಲಿದ್ದು ಬಂದಿದ್ದರೂ ಸರಳತೆಯ ವ್ಯಕ್ತಿತ್ವವನ್ನೇ ಉಳಿಸಿಕೊಂಡವನು
ಸತ್ಯ ಸಂಧರನ್ನು ಕಂಡಾಗಲೊಮ್ಮೆ ಖುಷಿಯಿಂದ ಪ್ರೀತಿಯನ್ನು ಹಂಚುತ್ತಾನೆ
ಪರದೇಶಿ ವ್ಯಾಮೋಹವನ್ನು ತಿರಸ್ಕರಿಸಿ ಗ್ರಾಮ ಸ್ವರಾಜ್ಯದ ಕನಸು ಕಂಡವನಲ್ಲವೆ
ಸ್ವದೇಶಿ ಮಂತ್ರ ನಿತ್ಯ ಜಪಿಸುತ್ತ ಉಡಲು ಖಾದಿಯನ್ನು ಪ್ರೋತ್ಸಾಹಿಸುತ್ತಾನೆ
ಅವಿಶ್ರಾಂತ ದುಡಿದು ಹಿಂಸೆಯಿಲ್ಲದೆ ದೇಶಕ್ಕೆ ಸ್ವಾತಂತ್ಯ ತಂದು ಕೊಟ್ಟವನು
ಒಲವಿನಂದದಿ ಸತ್ಯ ಶಾಂತಿ ಅಹಿಂಸೆಯ ಮಂತ್ರವನ್ನು ಜಪಿಸುತ್ತಾನೆ
ಅರೆಬತ್ತಲೇ ಫಕೀರನಾಗಿಯೇ ದುಂಡು ಮೇಜಿಗೆ ಹಾಜರಾಗಿದ್ದು ವಿಸ್ಮಯ
ಆಶ್ರಮ ಕುಟೀರಗಳನ್ನು ಸ್ಥಾಪಿಸಿ ದೀನ ದಲಿತರ ಸೇವೆಯನ್ನು ಮಾಡುತ್ತಾನೆ
ಸಾಗರದಾಚೆ ಸುತ್ತಿದರೂ ಸ್ವಧರ್ಮದಲ್ಲಿದ್ದು ಅನ್ಯ ಧರ್ಮಗಳನ್ನು ಗೌರವಿಸಿದನು
ಎಲ್ಲರಿಗೂ ಸರ್ವೇ ಜನ: ಸುಖಿನೋಭವಂತು ಸಂದೇಶವನ್ನು ನೀಡುತ್ತಾನೆ
ರಾಮರಾಜ್ಯದ ಕನಸು ಕಂಡ ತ್ಯಾಗಿಯೀತನು ಹತ್ಯೆಯಾಗಿದ್ದು ಸರಿಯೆ
ಧಾಳಿಗೆ ಪ್ರತಿ ಧಾಳಿ ಬೇಡೆನ್ನುತ ವೈರಿಯ ಕ್ಷಮೆಯನ್ನು ಘೋಷಿಸುತ್ತಾನೆ
ದುಃಖ ನೀಡಿದವರನ್ನೂ ಕ್ಷಮಿಸಪ್ಪಿಕೊಂಡು ಮುಂದಡಿಯಿಟ್ಟವನು
ಆತ್ಮನಿರ್ಭರ ಜಾಗೃತಿಯನ್ನು ಮೂಡಿಸಿ ಜನತೆಯನ್ನು ಪ್ರಭಾವಿಸುತ್ತಾನೆ
ಈಶ್ವರ ಅಲ್ಲಾ ತೇರೆ ನಾಮ ಭಜನೆಯು ಎಲ್ಲರ ಹೃದಯವನ್ನು ಬೆಸೆದಿತ್ತು
ಈಶ್ವರ ! ಆಗದವರು ಇಂದಿಗೂ ಗುಂಡಿಟ್ಟರೂ ನಗುವನ್ನು ನೀಡುತ್ತಾನೆ
– ಈಶ್ವರ ಮಮದಾಪೂರ, ಗೋಕಾಕ.