ಪ್ರತಾಪಗೌಡ ಪಾಟೀಲ ರಾಜಿನಾಮೆಯಿಂದ ನಾವು ಅಧಿಕಾರ ನಡೆಸುತ್ತಿದ್ದೇವೆ-ಸಚಿವ ಬಿ.ಶ್ರಿರಾಮುಲು ಉವಾಚ
e-ಸುದ್ದಿ ಮಸ್ಕಿ
ಮಸ್ಕಿ: ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ಪ್ರತಾಪಗೌಡ ಪಾಟೀಲರು ರಾಜೀನಾಮೆ ನೀಡಿದ್ದಾರೆ ಹೊರತು ಯಾವುದೇ ಅಮೇಶಕ್ಕೆ ಅಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಪ್ರತಾಪಗೌಡ ಪಾಟೀಲರ 68 ನೇ ಹುಟ್ಟು ಹಬ್ಬದ ನಿಮಿತ್ತ ಶನಿವಾರ ಪ್ರತಾಪಗೌಡ ಪೌಂಡೇಶನ್ ಹಮ್ಮಿಕೊಂಡಿದ್ದ ಉದ್ಯೋಗ ಮೇಳಾ, ಉಚಿತ ಅಂಬುಲೇನ್ಸ್ ಸೇವೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮುನ್ನುಡಿ ಬರೆದವರು ಪ್ರತಾಪಗೌಡರು, ಅವರ ತ್ಯಾಗವನ್ನು ಪಕ್ಷ ಮರೆಯುವುದಿಲ್ಲ, ವಿರೋಧಿಗಳು ಮಾಡುವ ಅಪಪ್ರಚಾರ ಸತ್ಯಕ್ಕೆ ದೂರವಾದದ್ದು.
ಉಪ ಚುನಾವಣೆಯಲ್ಲಿ ಪ್ರತಾಪಗೌಡರು ಗೆದ್ದಿದ್ದರೆ ಸಚಿವರಾಗಿದ್ದರೆ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿಯಾಗುತ್ತಿತ್ತು. ಈಗ ಗೆದ್ದಿರುವ ಶಾಸಕರಿಂದ ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ. ಕಮೀಷನ್ ಕೊಟ್ಟರೆ ಕೆಲಸ ಎನ್ನುವಂತಾಗಿದೆ ಎಂದು ಆರೋಪಿಸಿದರು,
ಪ್ರತಾಪಗೌಡರ ಸೋಲು ನಮಗೆ ನೋವುಂಟು ಮಾಡಿದೆ. ಪ್ರತಾಪಗೌಡ ಹೆಸರು ಹೇಳಿ ನಾವು ನಿತ್ಯ ಊಟ ಮಾಡುತ್ತಿದ್ದೇವೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ನಾನು ಸೋತರು ಸಹ ನಿತ್ಯ ಜನರೊಂದಿಗೆ ಸಂಪರ್ಕದಲ್ಲಿದ್ದು ಅವರ ಬೇಕು ಬೇಡಾಗಳಿಗೆ ಸ್ಪಂದಿಸುತ್ತಿದ್ದೇನೆ, ಜನರ ಪ್ರೀತಿಯಿಂದ ನಾನು ಹೃದಾಯಘಾತದಿಂದ ಪಾರಾಗಿ ಪುನರ್ ಜನ್ಮ ಪಡೆದಿದ್ದೇನೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದುಮೋಹಮ್, ಸಾಮಾಜಿಕ ಕಾರ್ಯಕರ್ತೆ ಮೊಕ್ಷಮ್ಮ ಹಾಗೂ ಆಧ್ಯತ್ಮಿಕ ಚಿಂತಕ ದೇವಣ್ಣ ಸಾಹುಕಾರ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಿವೃತ್ತ ಪ್ರಾಚಾರ್ಯ ಡಾ. ಸ್ವಾಮಿರಾವ್ ಕುಲಕರ್ಣಿ ಅಭಿನಂದನಾ ಭಾಷಣ ಮಾಡಿದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಜೀಲಾನಿ ಖಾಜಿ, ಗುಂಡಪ್ಪ ತಾತಾ, ಲಿಂಗಣ್ಣ ತಾತ, ಮಾಜಿ ಸಂಸದ ಕೆ. ವಿರೂಪಾಕ್ಷ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಗಂಗಾಧರ ನಾಯಕ, ಶಿವನಗೌಡ ಗೊರೆಬಾಳ, ಶಿವಪುತ್ರಪ್ಪ ಅರಳಹಳ್ಳಿ, ಶರಣಪ್ಪಗೌಡ, ವಿಶ್ವನಾಥ ರೆಡ್ಡಿ, ದೊಡ್ಡ ಬಸವರಾಜ, ಪೌಂಡೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ್ ಇತರರು ಇದ್ದರು.
ಉದ್ಯೋಗ ಮೇಳಾದಲ್ಲಿ ರಾಜ್ಯದ 55 ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡಿದ್ದವು. ಸಾವಿರಕ್ಕೂ ಹೆಚ್ಚು ಯುವಕರು ಹೆಸರು ನೊಂದಾಯಿದ್ದಾರೆ.
ಪ್ರತಾಪಗೌಡ ಪಾಟೀಲ್ ಪೌಂಡೇಶನ್ ವತಿಯಿಂದ ಉಚಿತ ಅಂಬುಲೈನ್ಸ್ ಸೇವೆಯನ್ನು ಲೋಕಾರ್ಪಣೆ ಮಾಡಲಾಯಿತು.
8 ರಂದು ಸರ್ವಪಕ್ಷ ಸಭೆ
ಮಸ್ಕಿ: ಎಸ್ಸಿ ಹಾಗೂ ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸುವ ಸಂಬಂಧ ಇದ್ದ ಕಾನೂನು ತೊಡಕುಗಳು ನಿವಾರಣೆಯಾಗಿದ್ದು, ಅ. 8 ರಂದು ಮುಖ್ಯಮಂತ್ರಿಗಳ ನೇತೃತ್ವದ ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚಿಸಿ ಮುಂದಿನ ವಾರ ನಡೆಯುವ ಸಚಿವ ಸಂಪುಟದಲ್ಲಿ ವರದಿ ಮಂಡಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಮಾತು ಕೊಟ್ಟಂತೆ ಎಸ್ಸಿ ಹಾಗೂ ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಲಿದೆ ಎಂದರು ತಿಳಿಸಿದರು.
ಊಹಾ ಪೋಹ ಸುದ್ದಿಗಳಿಗೆ ಯಾರು ಕಿವಿಗೊಡಬಾರದು ಎಂದು ಅವರು ತಿಳಿಸಿದರು.