ಬಿಜೆಪಿಯವರು ಸುಳ್ಳು ಭರವಸೆಯ ಸರದಾರರು ಪ್ರತಾಪಗೌಡ ಪಟೀಲ ಯಾರ ಸಲುವಾಗಿ ರಾಜಿನಾಮೆ ನೀಡಿದರು ? –ಅಮರೇಗೌಡ ಬಯ್ಯಾಪುರ ಸಿಡಿಮಿಡಿ

e-ಸುದ್ದಿ, ಮಸ್ಕಿ
ಈ ಬಾರಿಯ ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ. ಪ್ರತಾಪಗೌಡ ಸೋಲು ಖಚಿತ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಾಂಗ್ರಸ್‍ನಿಂದ ಗೆದಿದ್ದ ಪ್ರತಾಪಗೌಡ ಯಾವ ಪುರಾಷಾರ್ಥಕ್ಕಾಗಿ ರಾಜಿನಾಮೆ ಸಲ್ಲಿಸಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಕ್ಷೇತ್ರದ ಜನರಿಗೆ ಮೋಸ ಮಾಡಿ ಸರ್ಕಾರದ ಬೊಕ್ಕಸಕ್ಕೆ ಹೊರೆ ಮಾಡಿದ್ದಾರೆ ಎಂದು ವಾಗ್ದಳಿ ನಡೆಸಿದರು.
ಶಿರಾ ಮತ್ತು ಆರ್.ಆರ್.ನಗರದ ಚುನಾವಣೆಯಲ್ಲಿ ಪಕ್ಷ ಸೋತಿದ್ದರು ಮಸ್ಕಿ ಕ್ಷೇತ್ರದಲ್ಲಿ ಗೆಲವು ನಮ್ಮದೆ. ಜಿಲ್ಲೆಯ ಮುಖಂಡರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. ನಾನು, ಹಂಪನಗೌಡರು, ಕೆ.ವಿರುಪಾಕ್ಷಪ್ಪ, ಎನ್.ಎಸ್.ಬೊಸರಾಜ್ ಮತ್ತು ಹಂಪಯ್ಯ ನಾಯಕರೇ ಚುನಾವಣೆಗೆ ನಿಂತಂತೆ ಎಂದು ಅಮರೇಗೌಡ ಬಯ್ಯಾಪುರ ಸಮರ್ಥಿಸಿಕೊಂಡರು.
ವಿಧಾನ ಪರಿಷತ್ ಮಾಜಿ ಸದಸ್ಯ ಎನ್,ಎಸ್.ಬೋಸರಾಜ ಮಾತನಾಡಿ ಬಿಜೆಪಿಯವರು ಬರೀ ಸುಳ್ಳು ಆಶ್ವಾಸನೆ ಕೊಡಲು ಶೂರರು. ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾರಿಗೆ ನೌಕರರಿಗೆ ವೇತನ ಕೊಡಲು ಸರ್ಕಾರದಲ್ಲಿ ಹಣ ಇಲ್ಲ ಎನ್ನುತ್ತಿದ್ದಾರೆ. ಆದರೆ ಮಸ್ಕಿ ಕ್ಷೇತ್ರಕ್ಕೆ ಕೋಟಿ ಗಟ್ಟಲೇ ಮಂಜೂರಾಗಿದೆ ಎಂದು ಪ್ರತಾಪಗೌಡ ಪಾಟೀಲ ಸುಳ್ಳು ಹೇಳುತ್ತಿದ್ದಾರೆ. ಇದರಲ್ಲಿ ಯಾರು ನಿಜ ಹೇಳುತ್ತಿದ್ದಾರೆ ಎಂದು ಬೋಸರಾಜ ಪ್ರಶ್ನಿಸಿದರು.
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಸ್ಕಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿ ಅಭಿವೃದ್ದಿಗೆ ಸಾಕಷ್ಟು ಹಣ ಬಿಡುಡಗೆ ಮಾಡಿದ್ದರು. ಆದರೆ ಪ್ರತಪಗೌಡ ಪಾಟೀಲ ಕಾಂಗ್ರೆಸ್ ಬಿಡುವಾಗ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಹಣ ನೀಡದ ಕಾರಣ ಪಕ್ಷ ಬಿಟ್ಟೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಮಸ್ಕಿ ಕ್ಷೇತ್ರಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ಸಾರ್ವಜನಿಕರ ಮುಂದೆ ಚುನಾವಣೆಯಲ್ಲಿ ಬಹಿರಂಗಪಡಿಸುತ್ತೇವೆ ಎಂದರು.
ಮಸ್ಕಿ ಉಪಚುನಾವಣೆ ಸಮೀಪಿಸುತ್ತಿರುವಾಗ ನೂರು ಕೋಟಿ ಹಣ ಅನುದಾನ ನೀಡಿದ್ದಾರೆ ಎಂಬುದು ಬೋಗಸ್. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೇ ವರ್ಷದಿಂದ ಹಣ ನೀಡದ ಸರ್ಕಾರ ಇದೀಗ ಮತದಾರನ್ನು ದಾರಿ ತಪ್ಪಿಸುವ ಮೂಲಕ ಮತ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಸ್ಕಿ ಉಪಚುನಾವಣೆ ಹಿನ್ನಲೆಯಲ್ಲಿ ನ.23 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಸ್ಕಿ ಆಗಮಿಸಲಿದ್ದಾರೆ. ಅಂದು ಆರ್.ಬಸನಗೌಡ ತುರ್ವಿಹಾಳ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ಕನಿಷ್ಠ 10 ಸಾವಿರ ಜನ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಕರೊನಾ ಹಿನ್ನಲೆಯಲ್ಲಿ ಹೆಚ್ಚು ಜನ ಸೇರಿಸುವುದು ಸರಿಯಲ್ಲ ಎಂಬ ಕಾರಣಕ್ಕೆ 5 ಸಾವಿರ ಜನರನ್ನು ಸೇರಬಹುದು. ಕರೊನಾ ಮುಂಜಾಗ್ರತವಾಗಿ ದೈಹಿಕ ಅಂತರ ಸ್ಯಾನಿಟೈಸರ್ ಬಳಕೆ ಮಾಡಿ ಕಾರ್ಯಕ್ರಮ ನಡೆಸಲಾಗುವದು ಎಂದರು.
ಮಾಜಿ ಶಾಸಕ ಹಂಪಯ್ಯ ನಾಯಕ ಮಾತನಾಡಿ ಈ ಚುನಾವಣೆ ಕಾಂಗ್ರೆಸ್‍ನ ಸ್ವಾಭಿಮಾನದ ಚುನಾವಣೆಯಾಗಿದ್ದು ಮತದಾರರು ಪ್ರತಾಪಗೌಡ ಪಾಟೀಲರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಗ್ರಾಮೀಣ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ದೊಡ್ಡಬಸವರಾಜ, ಕೆ.ಕರಿಯಪ್ಪ, ಎಚ್.ಬಿ.ಮುರಾರಿ. ಶ್ರೀಶೈಲಪ್ಪ ಬ್ಯಾಳಿ, ಸಿದ್ದಣ ಹೂವಿನಬಾವಿ, ಆರ್.ಸಿದ್ದನಗೌಡ ಸೇರಿದಂತೆ ಇತರರು ಇದ್ದರು.

Don`t copy text!