e-ಸುದ್ದಿ, ಮಸ್ಕಿ
ಮಸ್ಕಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ 110 ಕೋಟಿ ರೂ. ಬಿಡುಗಡೆ ಮಾಡಿದ್ದು ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಂಜೆ ಮಾತನಾಡಿದರು. ಕಳೆದ ಏಳೆಂಟು ವರ್ಷಗಳ ಬಹು ಬೇಡಿಕೆಯಾಗಿದ್ದ ಮಸ್ಕಿ ನಾಲಾ ಜಲಾಶಯ ಕಾಲುವೆಗಳ ಆಧುನೀಕರಣಕ್ಕೆ ಬೇಡಿಕೆ ಸಲ್ಲಿಸಿದ್ದೇವು. ಕರೊನಾ ಹಿನ್ನಲೆಯಲ್ಲಿ ಅನುದಾನ ಸ್ಥಗಿತವಾಗಿತ್ತು. ಈಗ ಸರ್ಕಾರ ಕಾಲುವೆಗಳ ಆಧುನಿಕರಣಕ್ಕೆ 52.54 ಕೋಟಿ ರೂ.ಬಿಡುಡಗೆ ಮಾಡಿದೆ ಎಂದರು.
ತೋರಣದಿನ್ನಿ-ಬ್ಯಾಗವಾಟ ರಸ್ತೆ ಅಭಿವೃದ್ದಿಗೆ 16 ಕೋಟಿ ರೂ., ಬಳಗಾನೂರು-ಜಾಲವಾಡಗಿ ರಸ್ತೆ ಅಭಿವೃದ್ಧಿಗೆ 8 ಕೋಟಿ ರೂ., ಮಸ್ಕಿ-ಕವಿತಾಳ ರಸ್ತೆಯ ನಾಗಲದಿನ್ನಿ ಸೇತುವೆ ನಿರ್ಮಾಣಕ್ಕೆ 7.5 ಕೋಟಿ, ಗೂಗೇಬಾಳ ಸೇತುವೆ 7.5 ಕೋಟಿ ರೂ., ತುರುವಿಹಾಳ-ಮಧ್ಯಕ್ಯಾಂಪ್ ರಸ್ತೆಗೆ 6.5 ಕೋಟಿ, ಕೋಳಬಾಳ-ಕುರಕುಂದಾ ರಸ್ತೆಗೆ 3.5 ಕೋಟಿ ರೂ., ಮಾಟೂರು ಸೇತುವೆ-ತುರುವಿಹಾಳ ರಸ್ತೆಗೆ 1ಕೋಟಿ ರೂ., ಹಾಲಾಪೂರ-ಇರಕಲ್ ಮಾರ್ಗದಲ್ಲಿ ಪ್ರತ್ಯೇಕ ಎರಡು ಸೇತುವೆ ಹಾಲಾಪೂರ-ಸಾನಬಾಳ ಹಾಗೂ ಇರಕಲ್-ತೋರಣದಿನ್ನಿ ಮಾರ್ಗದಲ್ಲಿ ಎರಡು ಸೇತುವೆಗೆ ಒಟ್ಟು 4 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನು ಆರ್‍ಡಿಪಿಆರ್ ಇಲಾಖೆಯಲ್ಲಿ 8 ಕೋಟಿ ರೂ. ರಸ್ತೆ ಹಾಗೂ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಮರಕಂದಿನ್ನಿ-ಎನ್.ಎನ್.ಕ್ಯಾಂಪ್ 4 ಕೋಟಿ, ಮಸ್ಕಿ-ಮಾರಲದಿನ್ನಿ ರಸ್ತೆಗೆ 1.60 ಕೋಟಿ ರೂ., ಗುಂಡಾ-ಹೊಕ್ರಾಣಿ ರಸ್ತೆಗೆ 40 ಲಕ್ಷ ರೂ., ಉಮಲೂಟಿ-ಬುಕ್ಕನಹಟ್ಟಿ 1.20 ಕೋಟಿ ರೂ., ಮಸ್ಕಿ ಶಾಸಕ ಕಟ್ಟಡಕ್ಕೆ ಹೆಚ್ಚುವರಿಯಾಗಿ 60 ಲಕ್ಷ ರೂ., ಸಾಮಾಥ್ರ್ಯಸೌಧ ಕಟ್ಟಡಕ್ಕೆ 20 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ವಿವರಿಸಿದರು. ಇನ್ನು ಸಣ್ಣ ನೀರಾವರಿ ಇಲಾಖೆಯಿಂದ ಚೆಕ್‍ಡ್ಯಾಂಗಳ ನಿರ್ಮಾಣಕ್ಕೆ 6 ಕೋಟಿ ರೂ. ಹಂಚಿಕೆಯಾಗಿದೆ. ಕೂಡಲೇ ಎಲ್ಲ ಕಾಮಗಾರಿಗಳಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
…………..
ಅಮರೇಗೌಡರು, ಹಂಪನಗೌಡರು ನನ್ನ ವಿರುದ್ದ ಪ್ರಚಾರ ಮಾಡುವುದು ಹೊಸದಲ್ಲ: ಪ್ರತಾಪಗೌಡ
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನನ್ನ ವಿರುದ್ದ ಪ್ರಚಾರ ಮಾಡುತ್ತಿರುವುದು ಹೊಸದೇನಲ್ಲ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಮಸ್ಕಿಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಮರೇಗೌಡ ಬಯ್ಯಾಪೂರ, ಹಂಪನಗೌಡ ಬಾದರ್ಲಿ ಇಬ್ಬರು ಈ ಹಿಂದೆಯೂ ಅವರು ನನ್ನ ವಿರುದ್ದ ಪ್ರಚಾರ ಮಾಡಿದ್ದಾರೆ. ಆಗ ನಾನು ಗೆದ್ದಿದೆ. ಈಗಲೂ ನಾನು ಗೆಲ್ಲುವೆ. ಯಾರೇ ರಾಜಕೀಯ ಲೀಡರ್‍ಗಳಾಗಲಿ ಅವರ ಪಕ್ಷದ ಪ್ರಚಾರ ಮಾಡುವುದು ಸಹಜ.
ಈ ಹಿಂದೆ 2008ರಲ್ಲಿ ನಾನು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದಾಗ ಇಬ್ಬರು ನನ್ನ ವಿರುದ್ದ ಚುನಾವಣೆ ಪ್ರಚಾರಕ್ಕೆ ಬಂದಿದ್ದರು. ಆದರೆ 2013ರಲ್ಲಿ ನಾನು ಕಾಂಗ್ರೆಸ್ ಸೇರಿದಾಗ ನನ್ನ ಪರ ಪ್ರಚಾರ ಮಾಡಿದರು. ಆದರೆ ಈಗ ಮತ್ತೆ ಪರಿಸ್ಥಿತಿ ಬದಲಾಗಿದೆ. ನಾನು ಬಿಜೆಪಿಯಲ್ಲಿರುವುದರಿಂದ ಅವರ ನನ್ನ ವಿರುದ್ದ ಪ್ರಚಾರ ಮಾಡುವುದು ಸಹಜ. ಆದರೆ ಜನ ಸ್ಥಳೀಯ ಕೆಲಸಗಳು, ಸ್ಥಳೀಯ ಮುಖಂಡರನ್ನು ನೋಡುತ್ತಾರೆ ಆದರೆ ಪಕ್ಕದ ಕ್ಷೇತ್ರದವರನ್ನು ನೋಡುವುದಿಲ್ಲ. ಅಮರೇಗೌಡ ಬಯ್ಯಾಪೂರ ಅವರಿಗೆ ಇಲ್ಲಿ ಹಳೆಯ ಒಡನಾಟ ಇರಬಹುದು. ಇಲ್ಲಿ ಸಾಕಷ್ಟು ಜನ ಅವರಿಗೆ ಪರಿಚಿತರಿದ್ದಾರೆ. ಅವರ ಒಡನಾಡಿಗಳೆಲ್ಲರೂ ಅವರನ್ನು ಗೌರವಿಸುತ್ತಾರೆ. ತಮ್ಮ ಮನೆಗೆ ಆಹ್ವಾನಿಸುತ್ತಾರೆ. ಅದೇ ರೀತಿ ಹಂಪನಗೌಡ ಬಾದರ್ಲಿ ಅವರು ನೆರೆಯ ಸಿಂಧನೂರು ಕ್ಷೇತ್ರದವರಾಗಿದ್ದರಿಂದ ಮಸ್ಕಿ ಕ್ಷೇತ್ರದ ಹಳ್ಳಿಗರು ಅವರ ಸಂಪರ್ಕಕ್ಕಿದ್ದಾರೆ. ಹಾಗಂದ ಮಾತ್ರಕ್ಕೆ ಎಲ್ಲರೂ ನನ್ನ ವಿರುದ್ದ ಮತ ಹಾಕುತ್ತಾರಂದಲ್ಲ. ಸ್ಥಳೀಯವಾಗಿ ಏನು ಕೆಲಸ ನಡೆದಿದೆ? ಒಳ್ಳೆಯದು ಕೆಟ್ಟದ್ದಕ್ಕೆ ಯಾರಾಗ್ತಾರೆ? ಇಲ್ಲಿನ ಪರಿಸ್ಥಿತಿ ಏನು ಎನ್ನುವ ಆಧಾರದ ಮೇಲೆ ಮತ ಚಲಾವಣೆಯಾಗಲಿದೆ ಎಂದರು.
ಯೋಗ ಇರಬೇಕು: ಮಂತ್ರಿಯಾಗಲು ಎಲ್ಲರಿಗೂ ಸಾಧ್ಯವಾಗಲ್ಲ. ನಾನೂ ಮಂತ್ರಿಯಾಗುತ್ತೇನೆ ಎಂದು ನನಗೂ ಅನಿಸಿರಲಿಲ್ಲ. ಆದರೆ ಈಗ ಅಂತಹ ಪರಿಸ್ಥಿತಿ ಬಂದಿದೆ. ಮಂತ್ರಿಯಾಗಲು ಯೋಗವಿರಬೇಕು. ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿಗಳು ಯಾರೂ ತಾವು ಮಂತ್ರಿಯಾಗಿಲ್ಲ ಎನ್ನುವ ಕಾರಣಕ್ಕೆ ನನ್ನನ್ನು ಸೋಲಿಸುತ್ತಾರೆ ಎನ್ನುವ ವಿಷಯದ ಮೇಲೆ ನಂಬಿಕೆ ಇಲ್ಲ. ಅಂತಹ ಹೊಟ್ಟೆಕಿಚ್ಚು ಯಾರಿಗೆ ಇಲ್ಲ ಎಂದು ಭಾವಿಸುತ್ತೇನೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಹಂಪನಗೌಡ ಬಾದರ್ಲಿ ಅವರನ್ನು ಸಚಿವರನ್ನಾಗಿ ಮಾಡಲು ನಾವು ಸಾಕಷ್ಟು ಒತ್ತಡ ಹಾಕಿದ್ದೇವು ಆದರೆ ಅದು ಫಲಿಸಲಿಲ್ಲ. ಈಗ ನನಗೆ ಅವಕಾಶ ಬಂದಿದೆ. ಅದೃಷ್ಠ ಏನಾಗಲಿದೆ ನೋಡಬೇಕು ಎಂದರು.
ಸಮಾವೇಶ: ಉಪಚುನಾವಣೆಗಾಗಿ ನಾವು ಎಲ್ಲ ರೀತಿಯಿಂದಲೂ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಸಾರ್ವತ್ರಿಕ ಚುನಾವಣೆ ಬೇರೆ. ಉಪಚುನಾವಣೆಗಳೇ ಬೇರೆ ಎನ್ನುವುದು ಗೊತ್ತಾಗಿದೆ. ಈಗಾಗಲೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗಮಿಸಿ ಚುನಾವಣೆಯ ಪೂರ್ವ ಸಿದ್ದತೆ ಕುರಿತು ಮಾರ್ಗದರ್ಶನ ಮಾಡಿದ್ದಾರೆ. ನ.18ರಂದು ವಸತಿ ಸಚಿವ ವಿ.ಸೋಮಣ್ಣ ಬರಲಿದ್ದಾರೆ ಪಕ್ಷದ ಸಮಾವೇಶ ನಡೆಯಲಿದ್ದು, ಪ್ರಮುಖರ ಸಭೆ ನಡೆಯಲಿದೆ. ರಾಯಚೂರು, ಕೊಪ್ಪಳ ಎರಡು ಜಿಲ್ಲೆಗಳ ಮುಖಂಡರ ಸಭೆ ನಡೆಸಿ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ವಿವರಿಸಿದ ಪ್ರತಾಪಗೌಡ ಪಾಟೀಲ್, ಸಿಂಧನೂರಿನಲ್ಲಿ ನ.20ರಂದು ರಾಜ್ಯ ಮಟ್ಟದ ಕಾರ್ಯಕಾರಿಣಿಗಳ ಸಭೆ ಆಯೋಜನೆಯಾಗಿದೆ. ಈ ಸಭೆ ಮುಕ್ತಾಯದ ಬಳಿಕ ನ.21ರಿಂದ ಮಸ್ಕಿ ಕ್ಷೇತ್ರಾದ್ಯಂತ ಚುನಾವಣೆ ಪ್ರಚಾರ ನಡೆಸಲಾಗುತ್ತದೆ ಎಂದು ಹೇಳಿದರು.