ಕಾ..ಕಾ..ಕಾಗೆ

ಕತೆ-೨

ಕಾ..ಕಾ..ಕಾಗೆ

ಎರಡು ಕಾಗೆ ಮರದ ಮೇಲೆ ಕುಳಿತಿದ್ದವು. ಜೊತೆಯಲ್ಲಿ ಆಹಾರ ಬೇರೆ ಇತ್ತು..ಸಕುಶಲ ಮಾತಾಡುತ್ತಿರುವಾಗ ಪ್ರಿಯಶತ್ರು ನರಿ ಎಂಟ್ರಿ ಕೊಡ್ತು.. “ಬಂತು ನೋಡು ಈ ನರಿ ಆಗಲೆ ಹೊಂಚು ಹಾಕಿ..ಹಿಂದೆ ಎಲ್ಲಾ ನಮ್ಮ ಹಿರಿಯರನ್ನ ಯಾಮಾರಿಸಿದೆ..ನಾವು ಯಾಮಾರದು ಬೇಡ?” ಎಂದು ಕಾಗೆ ಹೇಳಿತು.. “ಹೌದಕ್ಕ ಸೊಪ್ಪು ಹಾಕೋದು ಬೇಡ?” ಎಂದಿತು ಮತ್ತೊಂದು ಕಾಗೆ.
‘ಸರಿ ಅದು ಹೇಳುವ ಡೈಲಾಗು..ಕೇಳೋಣ ಮಜಾ ತಗೊಳೊಣ’ ಎಂದು ಮಾತಾಡಿಸಿ ನಮ್ಮ ಆಹಾರ ಬಾಯಲ್ಲಿ ಇಟ್ಟುಕೊಳ್ಳೋಣ ಸೂಚಿಸಿ “ಏನು ನರಿಯಣ್ಣ ಮುಂದೊಗೋದು ಬಿಟ್ಟು ಇಲ್ಲೆ ನಿಂತಿ…..ಏನಾಯ್ತು?”
“ಕಾಗವ್ವ, ಎಷ್ಟಾದ್ರೂ ನೀವು ನಮ್ಮ ಆಪ್ತ ಮಿತ್ರ ಅಲ್ವಾ ನಿಮ್ಮಿಂದಲೆ ನಮಗೆ ಊಟ ಇರುವ ಸ್ಥಳ ಸಿಗೋದು”
“ಇವತ್ತು ಏನೂ ಇಲ್ವಲ್ಲ…?”
“ನನಗೂ ಏನೂ ಬೇಕಾಗಿಲವ್ವ,್ಲ ನಿಮ್ಮ ನೋಡಿದೆ ಮಾತಾಡಿಸಿಕೊಂಡು ಹೋಗೋಣ ಅಂತ ಬಂದೆ”
“ಹೌದಾ…ಆರಾಮ ಇದ್ದಿಯಾ ನರಿಯಣ್ಣಾ?”
“ಹಾಂ ತಂಗೆವ್ವಾ”
“ಸರಿ, ಹೋಗಿ ನರಿಯಣ್ಣಾ”
“ಇಲ್ಲಕ್ಕಾ ನೀವು ಮಾತಾಡಿ ನಿಮ್ಮ ಮಾತು ಕೇಳುಬೇಕು…. ನಿಮ್ಮ ಹಾಡು ಕೇಳುಬೇಕು…. ಅನ್ನೊ ಆಸೆ ನೀವು ಹಾರೋದು ನೋಡಬೇಕು ಅನ್ನೊ ಆಸೆ..”
ಹಿರಿಯ ಕಾಗೆ “ ನೋಡಿದ್ಯಾ ಹ್ಯಾಂಗ ಉಬ್ಬಸಕತಾನ…ನಮ್ಮಲ್ಲಿರೊ ಮಾಂಸದ ತುಂಡು ನೋಡ್ಯಾನ ತಿನ್ನಾಕ ಹೊಂಚು ಹಾಕಕತ್ಯಾನ?”
“ಹೌದಕ್ಕ, ನಮ್ಮ ಹಿರಿಯರಿಗೆಲ್ಲ ಹೀಂಗ ಉಬ್ಬಿಸಿ ಉಬ್ಬಿಸಿ ಹಾಡಿಸಿ ಬಾಯಿಂದ ಬಿದ್ದ ತುಂಡು ಬಿದ್ದ ಕೂಡಲೆ…ಎತ್ತಿಕೊಂಡು ಪಾರಾಗ್ಯಾನ.. ನಾವು ಈಗಿನ ಜನರೇಶನ್‌ನವರು…ಮೋಸ ಹೋಗೋದಕ್ಕ ಚಾನ್ಸ ಇಲ್ಲ..ಇವನಿಗೆ ನಾವು ಮೋಸ ಮಾಡಿ ಓಡಸೋಣ “ ಎಂದಿತು ಕಿರಿಯ ಕಾಗೆ.
“ನರಿಯಣ್ಣ ನರಿಯಣ್ಣ ನಾವು ಅಷ್ಟು ಚಂದ ಹಾಡತಿವಾ?” ಎಂದಿತು ಹಿರಿಯ ಕಾಗೆ.
“ಹೌದವ್ವ ನಿಮ್ಮ ಹಾಡು ಬಲು ಚಂದ..” ಎಂದು ಆಹಾರ ಕಾಲಲ್ಲಿ ಇರೋದನ್ನು ನೋಡಿ “ಈಗ ನೀವು ಹಾರಿ ನೀವು ಹಾರೋದನ್ನ ಕಣ್ತುಂಬ ನೋಡ್ತೀನಿ..”
“ಇಲ್ಲ ಇಲ್ಲ ಹಾಡತಿವಿ ಆಮೇಲೆ ಹಾರತೀವಿ….ನಮ್ಮ ಗೆಳೆಯರನ್ನೆಲ್ಲ…ಕರಿತಿವಿ” ಎಂದು ಕಿರಿಯ ಕಾಗೆ ‘ಕಾ….ಕಾ…” ಕೂಗಿದಾಗ ಎಲ್ಲಾ ಕಾಗೆಗಳು ಬಂದವು…ಎಲ್ಲರ ಬಾಯಲ್ಲೂ ಆಹಾರ…ನರಿಯ ಬಾಯಲ್ಲಿ ನೀರು ಬಂತು… ‘ಕ್ಷಣಕಾಲ ಹಾಡೋದನ್ನ ಕೇಳೋಣ ಆಮೇಲೆ ಚಂದಾಗಿ ಹಾರತಿರಾ? ಎಂದು ಉಬ್ಬಿಸೋಣ ಹಾರಿದ ಕೂಡಲೆ ಕೆಳಗಡೆ ಮಾಂಸದ ತುಂಡುಗಳು ಬೀಳ್ತವೆ ಆಗ ಎತ್ತಿಕೊಂಡು ಓಡೋಣ’ ಎಂದು ಲೆಕ್ಕ ಹಾಕಿತು.
“ನರಿಯಣ್ಣ ನಮ್ಮ ಕಛೇರಿ ಸುರು ಹಚ್ಚಕೊಳ್ಳೋಣ?” ಎಂದು ಕೇಳಿತು ಕಾಗೆ
“ಅಯ್ಯೋ ಕೇಳಿತ್ರಾ ನಿಮ್ಮ ಮಧುರ ಕಂಠವನ್ನು ಕೇಳಲಿಕ್ಕೆ ಬಂದಿದ್ದು ..ಹುಂ..ಹ್ಞೂA…ಆರAಭಿಸಿ” ಎಂದಿತು.
ನೂರಾರೂ ಕಾಗೆಗಳು ಒಂದೆ ಧ್ವನಿಯಲಿ ‘ಕಾ..ಕಾ…ಕ್ರಾ..ಕ್ರಾ…ಕಾ..ಕಾ..ಕ್ರಾ….’ ಒಂದೆ ಸವನೆ ಒದರಲು ಆರಂಭಿಸಿದಾಗ ನರಿಗೆ ‘ಯಾಕಾದ್ರೂ ಹಾಡೆಂದೆನೋ’ ಎಂದು ತತ್ತರಸಂಗ ಆಯ್ತು..ಮನುಷ್ಯರ ಹಾಗೆ ಕೈ ಇದ್ರೆ ಕಿವಿ ಮುಚ್ಚಿಕೊಳ್ಳಬಹುದಿತ್ತು..ಹಾಡು ಕೇಳಿ ಕೇಳಿ ಕಿವಿಯಿಂದ ರಕ್ತ ಸೋರದಷ್ಟ ಬಾಕಿ ಉಳಿದಿತ್ತು…..ಸಾಕಪ್ಪ ಈ ಕಾಗೆಗಳ ಸಹವಾಸ ಅಂತ ದೂರಹೋಗುತ್ತಿದ್ದರೆ….ಅದರ ಹಿಂದೆ ಬಂದು ಕೂಗಹತ್ತಿದವು..ಕೆಳಗೆ ಬಿದ್ದು ಒದ್ದಾಡಬೇಕು ಅನ್ನುವಷ್ಟರಲ್ಲಿ ತಮ್ಮ ಜಾಗಕ್ಕೆ ಹೋದವು…ಆದರೂ ಎಲ್ಲ ಕಾಗೆಗಳ ಕಾಲುಗಳಿದ್ದ ಸವಿಯಾದ ಊಟದತ್ತ ಕಣ್ಣು ಇದ್ದದುದ್ದಕ್ಕಾಗಿ ಸಮಾಧಾನ ಮಾಡಿಕೊಂಡಿತು…..
“ನರಿಯಣ್ಣಾ ಹೇಗೆ ಇತ್ತು ನಮ್ಮ ಹಾಡು” ಎಂದು ಕಿರಿಯ ಕಾಗೆ ಕೇಳಿದಾಗ ‘ಕಣ್ಣರಿಯದಿದ್ದರೂ ಕರುಳರಿಯದೆ’ೆ ಎನ್ನುವಂತೆ ತೋರುಗೊಡದೆ.. “ವಾವ್ ವಾವ್..ಮಾರವಲೆಸ್… ಹಾಡಿ ಹಾಡಿ ಎಷ್ಟು ನಿಮ್ಮ ಕಂಠ ಸುಧಾರಿಸಿದೆ..ಹೆಚ್ಚು ಕಮ್ಮಿ ಕೋಗಿಲೆಗೆ ಸಮೀಪಕ್ಕೆ ಬರುತ್ತಿದ್ದೀರಿ” ಎಂದಾಗ ತಮ್ಮ ಶತ್ರು ಕೋಗಿಲೆ ಬಗ್ಗೆ ಮಾತಾಡಿದ್ದಕ್ಕೆ ಸಹಜವಾಗಿ ಖುಷಿ ಬಂತು..ಒAದು ಕ್ಷಣ ತಮ್ಮ ಉದ್ದೇಶವನ್ನು ಮರೆತವು… “ಹೌದಾ ಹೌದಾ” ಅಂತ ತಮ್ಮತಮ್ಮಲ್ಲೆ ಮಾತಾಡತಿರಬೇಕಾದ್ರೆ..ತನ್ನ ಭಾಷೆಯಲ್ಲಿ… ‘ಉಬ್ಬಿ ಮೋಸ ಹೋಗಿ ಮತ್ತೆ ಬೆಪ್ಪು ಆಗದಿರಿ…’ ಎಂದು ಹಿರಿಯ ಕಾಗೆ ಎಚ್ಚರಿಸಿ.. “ನರಿಯಣ್ಣ ನಿನ್ನ ಮಾತು ಕೇಳಿ ಬಹಳ ಸಂತೋಷ ಆಯ್ತು… ಮತ್ತೊಮ್ಮೆ ಹಾಡೋಣವೆ ನರಿಯಣ್ಣ…” ಎಂದು ‘ಫ್ರೇಂಡ್ಸ ಸ್ಟಾರ್ಟ’ ಎಂತಿರಬೇಕಾದ್ರೆ… “ಬೇಡಾ ಬೇಡ ನಾಳೆ ನಮ್ಮ ಪರಿವಾರವನ್ನೆಲ್ಲ… ಕರಕೊಂಡು ಬರತಿನಿ…ಈಗ ಸೊಗಸಾಗಿ ಹಾರೋದನ್ನ ತೋರಿಸಿ” ಎಂದಾಗ…ಎಲ್ಲವೂ ಆಹಾರವನ್ನು ಬಾಯಲ್ಲಿ ಹಿಡಿದು ಹಾರಲಾರಂಭಿಸಿದವು…..


ಕಾಗೆಗಳು ಜಾಣರಾಗಿ ಬಿಟ್ಟಿವೆ…ಹಾರುವಾಗ ತಿಂಡಿ ಬೀಡದೆ ಬಾಯಲ್ಲಿ ಇಟ್ಟುಕೊಂಡಿವೆ…ನೀವು ಜಾಣರಾದ್ರೆ ನಾನು ಇಡಿ ಪ್ರಾಣಿ ಕುಲದಲ್ಲಿಯೆ ಜಾಣ ಎಂದು…. “ವಾಹ್ ವಾಹ್ ಪಾರಿವಾಳ ಹಾಗೆ ಹಾರತಿದ್ದಿರಿ ಬಹುತ್ ಖುಬ್…ಬಹುತ್ ಖೂಬ್, ಈಗ ಜೊತೆಗೆ ಹಾಡಿ” ಎಂದಾಗ….ಹಿರಿಯ ಕಾಗೆ ಸನ್ನೆ ಮಾಡಿದಂತೆ ಎಲ್ಲವೂ ಗಿಡದಲ್ಲಿ ಕುಳಿತು ಹಾಡಲು ಆರಂಭಿಸಿದವು…ಕಾಗೆಯ ಜಾಣತನದಿಂದ ಮೂರ್ಖ ಆಗತಿರೋದು ಬೇರೆ ಜೊತೆಗೆ ತನಗಾದ ಹಸಿವೆಗೆ ಬೇರೆ. “ಕಾಗವ್ವನೋರ, ನಾನು ಹೇಳಿದ್ದು ಹಾರುತ್ತ ಹಾಡಿ” ಎಂದಾಗ ಹಿರಿಯ ಕಾಗೆ “ಆಯ್ತು ಎರಡು ನಿಮಿಷ ತಡಿ ಅಣ್ಣಾಹಾಡಿ ಹಾರಿ ಸಾಕಾಗಿದೆ…ಊಟ ಮಾಡಿ ನೀನು ಹೇಳಿದ ಹಾಗೆ ಮಾಡ್ತೀವಿ” ಎಂದು..ಬಾಯಲ್ಲಿದ್ದ ತುಂಡನ್ನು ಗಬಗಬನೆ ತಿಂದಿತು. ಉಳಿದ ಕಾಗೆಗಳು ಅನುಸರಿಸಿದವು. ಎಲ್ಲ ಮುಗಿದಾದ ಮೇಲೆ “ನರಿಯಣ್ಣ ….ರೆಡಿ ನಾ?” ಎಂದಾಗ ಅದೂವರೆಗೂ ಹಸಿವಿನಿಂದ ತತ್ತರಿಸಿದ್ದ ನಿರಾಶೆಯಿಂದ ಬೇಡ “ಕಾಗಕ್ಕ ನಾನು ಹೋಗ್ತಿನಿ ಹೊತ್ತಾಯ್ತು.” ಅನ್ನೊದನ್ನು ಕೇಳದೆ “ಹೊಟ್ಟ ತುಂಬಿದೆ ತಡಿ ಹವರು ಮಾಡಿಕೊತೀವಿ” ಎಂದು ಎಲ್ಲವೂ ಹಾಡುತ್ತ……ನರಿಯ ಸುತ್ತ ಹಾರಹತ್ತಿದವು. ಹಸಿವು, ನಿರಾಸೆ, ಸಂಕಟ, ಜೊತೆಗೆ ಕಾಗೆಗಳ ಕರ್ಕಶ ಧ್ವನಿ ತಾಳಲಾರದೆ ಬಿದ್ದು ಹೊರಳಾಡ ತೊಡಗಿತು.
ಆಗ ಹಿರಿಯ ಕಾಗೆ ಎಲ್ಲರನ್ನು ತಡೆದು ನರಿಗೆ “ನೋಡು ನರಿಯಣ್ಣ ಹಸಿವಿಯಾಗಿದ್ರೆ ನೇರವಾಗಿ ಕೇಳು ಕೊಡ್ತೀವಿ…ನಮ್ಮದು ಕರೆದು ಹಂಚಿಕೊAಡು ತಿನ್ನುವ ಜಾತಿ..ನಿನಗೆ ಕೊಟ್ಟರೆ ನಮಗೇನು ಕಡಿಮೆಯಾಗೊಲ್ಲ..ಅದು ಬಿಟ್ಟು ನಮಗೆ ಪುಸಿ ಹೊಡೆದು ಮೋಸ ಮಾಡಿ ಕದ್ದು ಒಯ್ಯೊದು ಸರಿಯಲ್ಲ..ನಾವು ನಾಡಿನ್ಯಾಗ ಮನುಷ್ಯರನ್ನು ನೋಡಿ ನಮ್ಮ ಮೈಂಡು ಫಾಸ್ಟ ಆಗ್ಯಾದ. ನಿಮ್ಮ ವಿಚಾರ ಗೊತ್ತಾಗತದ..ಗೆಳೆಯರೆ ಇನ್ನಮುಂದೆ ಯಾರೆ ನಾವು ಊಟಮಾಡುವಾಗ ಹಸಿದು ಬಂದ್ರೆ ಅವರಿಗೆ ಕೊಟ್ಟು ತಿನ್ನೋಣ,,ಅವರು ಬದುಕಲಿ ನಾವು ಬದುಕೋಣ” ಎಂದು ಹಿರಿಯ ಕಾಗೆ ಕರೆಕೊಟ್ಟಾಗ..ತಮ್ಮಲ್ಲಿ ಉಳಿದಿದ್ದ ಆಹಾರವನ್ನೆಲ್ಲ ನರಿಯ ಮುಂದೆ ಸುರಿದು ಹೋದವು.. ಕಾಗೆಗಳ ವಿಶಾಲ ಬುದ್ಧಿಗೆ ನರಿ ನಾಚಿ ನೀರಾಯಿತು.

 

ಗುಂಡುರಾವ್ ದೇಸಾಯಿ, ಮಸ್ಕಿ

Don`t copy text!