ಹಂಬಲ…
ಸುತ್ತುತ್ತಿದೆ ಭೂಮಿ
ನಿರಂತರ ಎಡೆಬಿಡದೆ
ಸೂರ್ಯ ದೇವನನ್ನು..
ಖುಷಿಗೊಂಡ ಸೂರ್ಯ
ಭುವಿಯ ಬಸುರಿಗೆ
ಆಗಾಗ ಕಾವು ಕೊಟ್ಟು. ಕಾಲಕಾಲಕೆ ನೀರು ಹನಿಸಿ
ಬೀಜ ಮೊಳೆಯಿಸಿದಾಗ
ಭುವಿಯ ಒಡಲೆಲ್ಲ
ಹಚ್ಚ ಹಸಿರು ಕಾನನ
ಹೂ- ಗೊಂಚಲುಗಳ ಪರಿಮಳ ಘಮ ಘಮ
ತೆನೆ ಗೊನೆ, ಹಣ್ಣುಗಳೆಲ್ಲ ರಸಮಯ
ಎಲ್ಲೆಲ್ಲು ಚೇತನ ಉಲ್ಲಾಸಮಯ…
ಅದೇಕೋ ಈಗೀಗ
ಸೋಮಾರಿ ಗುಂಡನಾಗಿದ್ದಾನೆ ಸೂರ್ಯ..
ಭುವಿಯ ಗರ್ಭಕೆ
ಸುಡು ಸುಡುವ ಕಾವು ಕೊಟ್ಟು
ನೀರ ಹನಿಸುವದ ಮರೆತು ಬಿಟ್ಟ…
ಬೀಜ ಒಣಗಿ ಸೆಟೆದಿದೆ ಭುವಿಯ ಒಡಲು ಬಿರಿದು
ಹಸಿರೆಲ್ಲ ಉಸಿರುಗಟ್ಟಿದೆ ..
ಮುರುಟಿ ಬಾಡಿದೆ ಕಾನು, ಹೂ- ಮೊಗ್ಗು, ಮಿಡಿಗಾಯಿ..
ನಿಗಿ ನಿಗಿ ಕೆಂಡದುಂಡೆ ಒಡಲ ತುಂಬ
ಬಡಿದಂತೆ ಬರಸಿಡಿಲು…
ಆದರೂ,
ಛಲ ಬಿಡದ ತ್ರಿವಿಕ್ರಮನಂತೆ
ಸೂರ್ಯ ದೇವನನ್ನು ಹಂಬಲಿಸಿ,
ಬೆಂಬತ್ತಿ, ಕಾತರಿಸಿ, ನೀರ ನಿರೀಕ್ಷೆಯಲಿ
ಸುತ್ತುತ್ತಲೇ ಇದೆ, ಸುತ್ತುತ್ತಲೇ ಇದೆ
ದೀನ ಭಕ್ತಳಂತೆ ಭೂಮಿ….
ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.