ಮಮತೆಯ ಮಡಿಲು
ಮಣ್ಣಿನ ಮಕ್ಕಳು ನಾವೆಲ್ಲಾ
ನೆಲ ಊಳುವ ರೈತರು ನಾವೆಲ್ಲಾ
ಭೂತಾಯಿಯ *ಮಮತೆಯ ಮಡಿಲು*
ನೆಲೆಯೂರಲು ನಮಗೆ ನೀಡಿದೆ ಒಕ್ಕಲು
ಮಣ್ಣಲಿ ಬಿತ್ತಿದ ಬೀಜವು ಇಂದು
ಅನ್ನದ ರಾಶಿಯ ಫಲವಿದೆ ಮುಂದು
ನಂಬಿದ ಮಕ್ಕಳ ಕೈಬಿಡಲಾರಳು
ತುಂಬಿದ ಉಡಿಯದು ಮನುಜನೆ ಕೇಳು..
ನೇಗಿಲನೋವನು ಗುದ್ದಲಿ ಪೆಟ್ಟನು
ಸಹಿಸುವಳವಳು ಅಗೆದರೂ ಎದೆಯನು
ಮಣ್ಣಿನಮಗನಾ ಬೆವರನುಕುಡಿಯುತ
ಕೊಡುವಳು ಫಸಲನು ನಗುನಗುತ
ತೊಟ್ಟಿಲ ಕಂದನ ಹಸಿವನು ತಣಿಸುವ
ಹೆತ್ತಿಹ ತಾಯಿಯ ಎದೆಹಾಲಂತೆ
ಲೋಕದ ಜನರ ಒಡಲ ಹಸಿವಿಗೆ
ಅಕ್ಷಯಪಾತ್ರೆ ನೆಲದವ್ವನ ಮಡಿಲಂತೆ.
-ಹಮೀದಾಬೇಗಂ ದೇಸಾಯಿ. ಸಂಕೇಶ್ವರ