5ಎ ನಾಲೆ ಜಾರಿಗಾಗಿ ಅನಿರ್ಧಿಷ್ಟಾವಧಿ ಧರಣಿ

e-ಸುದ್ದಿ, ಮಸ್ಕಿ
ಮಸ್ಕಿ ಕ್ಷೇತ್ರದ ವ್ಯಾಪ್ತಿಯ ರೈತರ ಜಮೀನುಗಳಿಗೆ ನೀರಾವರಿ ಭಾಗ್ಯ ಕಲ್ಪಿಸುವ ಕೃಷ್ಣ ಭಾಗ್ಯ ಜಲನಿಗಮದ 5ಎ ನಾಲೆ ಜಾರಿಗೆ ಆಗ್ರಹಿಸಿ ನ.20 ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಎನ್‍ಆರ್‍ಬಿಸಿ 5ಎ ಕಾಲುವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರ ಹೇಳಿದರು.
ಪಟ್ಟಣದ ಗಾಂಧಿನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾರಾಯಣಪೂರ ಬಲದಂಡೆ ಕಾಲುವೆಯಿಂದ 5ಎ ಶಾಖಾ ಕಾಲುವೆ ಆರಂಭಿಸಿ ಮಸ್ಕಿ ಕ್ಷೇತ್ರದ 52 ಹಳ್ಳಿಗಳು ಸೇರಿ ಕೊಪ್ಪಳ, ರಾಯಚೂರು ಜಿಲ್ಲೆಯ ಹಲವು ಹಳ್ಳಿಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಹಲವು ಬಾರಿ ಹೋರಾಟದ ಮೂಲಕ ಸÀರ್ಕಾರದ ಗಮನ ಸೆಳೆಯಲಾಗಿದೆ. ಹುಸಿ ಭರವಸೆ ನೀಡುತ್ತಿದ್ದಾರೆ ಹೊರತು ಈ ಯೋಜನೆಗೆ ಬಿಡಿಗಾಸು ಹಣ ನೀಡುತ್ತಿಲ್ಲ. ಹೀಗಾಗಿ ಈ ಬಾರಿ ರೈತ ವರ್ಗ ಎಲ್ಲರೂ ಸೇರಿ ಪಾಮನಕಲ್ಲೂರಿನ ಶ್ರೀ ಬಸವೇಶ್ವರ ದೇವಸ್ಥಾನದ ಎದುರು ನ.20 ರಿಂದ ಅನಿರ್ಧಿಷ್ಟ ಅವಧಿ ಕಾಲ ಧರಣಿಯನ್ನು ಆರಂಭಿಸುತ್ತೇವೆ.
ಬೃಹತ್ ಮೆರವಣಿಗೆ ಮೂಲಕ ತೆರಳಿ ಬಸವೇಶ್ವರ ದೇವಸ್ಥಾನದ ಬಳಿ ಧರಣಿ ಆರಂಭಿಸಲಾಗುತ್ತದೆ. ಯದ್ದಲದೊಡ್ಡಿಯ ಮಹಾಲಿಂಗಸ್ವಾಮಿಗಳು, ಇರಕಲ್ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮಿಗಳು ಧರಣಿಯ ಸಾನ್ನಿಧ್ಯ ವಹಿಸಲಿದ್ದಾರೆ. ನೂರಾರು ರೈತರು ಧರಣಿಯಲ್ಲಿ ಭಾಗವಹಿಸಲಿದ್ದು 5 ಎ ಕಾಲುವೆ ಯೋಜನೆಗಾಗಿಯೇ ಪ್ರತ್ಯೇಕ 500 ಕೋಟಿ ರೂ. ಮೀಸಲಿಡವರೆಗೂ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.
ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರೆಡ್ಡೆಪ್ಪ ದೇವರಮನಿ, ಶಿವಕುಮಾರ ವಟಗಲ್ ಹಾಗೂ ಇತರರು ಇದ್ದರು.

Don`t copy text!