ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ, ಕ್ರಮಕ್ಕೆ ಒತ್ತಾಯ

e- ಸುದ್ದಿ, ಲಿಂಗಸುಗುರು

ಲಿಂಗಸ್ಗೂರು ತಾಲೂಕಿನಲ್ಲಿ ಹಲವಾರು ಗ್ರಾಮಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರೇಗಾದಡಿಯಲ್ಲಿ ಕೃಷಿ, ರೇಷ್ಮೆ, ತೋಟಗಾರಿಕೆ, ಅರಣ್ಯ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಯೋಜನೆ ಅನುಷ್ಠಾನದ ಹೆಸರಿನಲ್ಲಿ ಕೋಟ್ಯಂತರ ಹಣ ದುರ್ಬಳಕೆ ಮಾಡಿರುವುದು, ಆಯಾ ತಾಲೂಕು ಮಟ್ಟದ ಲೆಕ್ಕಪರಿಶೋಧನಾ ಸಮಿತಿಯವರು ಹಲವು ವರ್ಷಗಳಿಂದ ವರದಿ ಸಲ್ಲಿಸುತ್ತಾ ಬಂದಿದೆ.
ನರೇಗಾ ಅನುಮೋದಿತ ಕ್ರಿಯಾ ಯೋಜನೆ ೮ ಮತ್ತು ೯ ನಮೂನೆ ಕಡತಗಳ ನಿರ್ವಹಣೆ, ಎಂ.ಬಿ ಪ್ರತಿ ನಿರ್ವಹಣೆಯ ವೈಫಲ್ಯ, ಆಡಳಿತದಲ್ಲಿ ತಾಂತ್ರಿಕ ಮಂಜೂರಾತಿ ಮಾಡದಿರುವ ಕಾಮಗಾರಿಗಳ ಕಡತಗಳ ನಿರ್ವಹಣೆ, ಕಾಮಗಾರಿ ಆರಂಭದ ಆದೇಶದ ಪ್ರಮಾಣಪತ್ರ, ಅಂದಾಜು ಪತ್ರಿಕೆ, ಸೇರಿದಂತೆ ಅಗತ್ಯ ನಿರ್ವಹಣೆ ಮಾಡುವಲ್ಲಿ ವಾಸ್ತವ ವರದಿ ಸಲ್ಲಿಸುತ್ತಾ ಬಂದಿದ್ದರೂ ಕೂಡ ಯಾವೊಬ್ಬ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಹೀಗಾಗಿ ಲೆಕ್ಕಪರಿಶೋಧನಾ ವರದಿಗಳು ಕಸದ ಬುಟ್ಟಿಗೆ ಸೇರುತ್ತಿದೆ.
ಲಿಂಗಸ್ಗೂರು ತಾಲೂಕಿನ ಗೊರೆಬಾಳ, ಕಾಳಾಪುರ, ಮಾವಿನಬಾವಿ, ಸರ್ಜಾಪುರ, ಆನೆಹೊಸೂರು, ಚಿತ್ತಾಪುರ್, ನೀರಲಕೇರಿ, ನರಕಲದಿನ್ನಿ, ಪೈದೊಡ್ಡಿ, ಹೊನ್ನಳ್ಳಿ, ಆಮದಿಹಾಳ, ಕೆಲವು ಗ್ರಾಮಪಂಚಾಯಿತಿಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನ ಸಮಿತಿ ಗ್ರಾಮ ಸಭೆಯಲ್ಲಿ ವಿಚಾರಣೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ಅವ್ಯವಹಾರ ನಡೆದಿರುವ ವರದಿಗಳು ಧೂಳು ತಿನ್ನುತ್ತಿವೆ. ಹೀಗಾಗಿ ಕೂಡಲೇ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಸಂಚಾಲಕ ನಾಗರಾಜ, ಹಾಲಬಾವಿ ಮೌನೇಶ, ಹುಸೇನಪ್ಪ ತರಕಾರಿ ದುರ್ಗಪ್ಪ, ಮೇಗಳಮನಿ ಸೇರಿದಂತೆ ಅನೇಕರು ಭಾಗವಹಿಸಿದರು.

Don`t copy text!