e – ಸುದ್ದಿ ಮಾನ್ವಿ:
‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಸಾರ್ವಜನಿಕರ ಒಳಿತಿಗಾಗಿ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಅಗತ್ಯ’ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಶುಕ್ರವಾರ ತಾಲ್ಲೂಕಿನ ಚೀಕಲಪರ್ವಿ ಬಳಿ ತಾಲ್ಲೂಕು ಕಮ್ಮವಾರಿ ಸಂಘ ಹಮ್ಮಿಕೊಂಡಿದ್ದ ತುಂಗಭದ್ರಾ ಪುಷ್ಕರ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಜತೆಗೆ ಧಾರ್ಮಿಕ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳ ತೊಡಗಿಸಿಕೊಳ್ಳುವಿಕೆ ಬಹುಮುಖ್ಯ. ಈ ನಿಟ್ಟಿನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಜರುಗುವ ತುಂಗಭದ್ರಾ ಪುಷ್ಕರ ಮಹೋತ್ಸವದ ಭಕ್ತರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಿರುವ ಕಮ್ಮವಾರಿ ಸಂಘದ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಈ ಭಾಗದಲ್ಲಿ ಮುನಿರಾಬಾದ ಮಹಿಬೂಬ ನಗರ ರೈಲು ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಚೀಕಲಪರ್ವಿ ಬಳಿ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 167 ನಿರ್ಮಾಣ, ಸುರಪುರದಲ್ಲಿ ಸೈನಿಕ ಶಾಲೆ ಮತ್ತು ಯಾದಗಿರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸೇರಿ ವಿವಿಧ ಯೋಜನೆಗಳ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.
ಶಾಸಕ ರಾಜಾ ವೆಂಕಟಪ್ಪ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಮ್ಮವಾರಿ ಸಂಘದ ಅಧ್ಯಕ್ಷ ಎಲ್.ಬದರಿನಾರಾಯಣ ಅಧ್ಯಕ್ಷತೆವಹಿಸಿದ್ದರು. ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಮಾಜಿ ಶಾಸಕರಾದ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ ಹಾಗೂ ಜಿ.ಹಂಪಯ್ಯ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶನಾಯಕ ಬೆಟ್ಟದೂರು, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶರಣಯ್ಯ ಗುಡದಿನ್ನಿ, ಎಸ್.ತಿಮ್ಮಾರೆಡ್ಡಿ ಭೋಗಾವತಿ, ರಾಜಾ ರಾಮಚಂದ್ರ ನಾಯಕ, ಮಲ್ಲಿಕಾರ್ಜುನಗೌಡ ಬಲ್ಲಟಗಿ, ಎಂ.ಶ್ರೀನಿವಾಸ, ಜಿ.ಸುಬ್ಬಾರಾವ್, ಎಸ್.ರಾಘವೇಂದ್ರ, ಎಸ್.ಸುಬ್ರಹ್ಮಣ್ಯಂ ವೇದಿಕೆಯಲ್ಲಿ ಇದ್ದರು. ಶಿಕ್ಷಕಿ ಉಷಾಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.