e-ಸುದ್ದಿ, ಮಸ್ಕಿ
ಕೃಷ್ಣ ಭಾಗ್ಯ ಜಲನಿಗಮದ 5ಎ ನಾಲೆ ಜಾರಿಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಪಾಮನಕಲ್ಲೂರಿನಲ್ಲಿ ಶುಕ್ರವಾರ ಕರ್ನಾಟಕ ನಿರಾವರಿ ಸಂಘದ ಸದಸ್ಯರು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ಬಸವೇಶ್ವರ ದೇವಸ್ಥಾನದ ಹತ್ತಿರ ಧರಣಿಗೆ ಇರಕಲ್ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ ಚಾಲನೇ ನೀಡಿ ಧರಣಿಯಲ್ಲಿ ಭಾಗವಹಿಸಿದರು. ನಂತರ ಮಾತನಾಡಿದ ಸ್ವಾಮೀಜಿ ರೈತರ ಬಹುದಿನಗಳ ಹೊರಾಟಕ್ಕೆ ಸರ್ಕಾರ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಎನ್‍ಆರ್‍ಬಿಸಿ 5ಎ ಕಾಲುವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರ ಮಾತನಾಡಿ ನಾರಾಯಣಪೂರ ಬಲದಂಡೆ ಯೋಜನೆಯ 5ಎ ಕಾಲುವೆ ಜಾರಿಗೊಳಿಸಿದರೆ ಮಸ್ಕಿ ಕ್ಷೇತ್ರದ 52 ಹಳ್ಳಿಗಳು ಸೇರಿ ಕೊಪ್ಪಳ, ರಾಯಚೂರು ಜಿಲ್ಲೆಯ ಹಲವು ಹಳ್ಳಿಗಳ ರೈತರ ಭೂಮಿಗೆ ನೀರು ಸಿಗಲಿದೆ. ಇದರಿಂದ ರೈತರು ಗೂಳೆ ಹೋಗುವದು ತಪ್ಪುವುದಲ್ಲದೆ ಈ ಭಾಗದಲ್ಲಿ ರೈತರ ಬದುಕು ಹಸನಾಗುತ್ತದೆ. ಅದಕ್ಕಾಗಿ ಕಳೆದ 10 ವರ್ಷಗಳಿಂದ ಹೊರಾಟ ನಡೆಯುತ್ತಿದೆ. ಕೂಡಲೇ ಸರ್ಕಾರ 500 ಕೋಟಿ ರೂ.ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಮೆರವಣಿಗೆ ಃ ರೈತರು ಪಾಮನಕಲ್ಲೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಿ ಬಸವೇಶ್ವರ ದೇವಸ್ಥಾನದ ಬಳಿ ಧರಣಿ ಆರಂಭಿಸಿದರು. ನೂರಾರು ರೈತರು ಧರಣಿಯಲ್ಲಿ ಭಾಗವಹಿಸಿದ್ದರು. ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರೆಡ್ಡೆಪ್ಪ ದೇವರಮನಿ, ಶಿವಕುಮಾರ ವಟಗಲ್ ಹಾಗೂ ಇತರರು ಇದ್ದರು.