ಸಂಕ್ರಮಣ

ಸಂಕ್ರಮಣ

ಸುಗ್ಗಿ ಬಂದಿಹುದಹದು
ಹಿಗ್ಗೇನು ಇಲ್ಲ
ಬೆಳೆದ ರೈತನ ಗೋಳು
ಕೇಳುವವರಿಲ್ಲ

ಈ ಹಿಂದಿನಂತೆ
ತೆನೆ ಮುರಿಯುವುದಿಲ್ಲ
ರಾಶಿಮಾಡುವುದಿಲ್ಲ
ಅಂತಿಯ ಪದಗಳ್ಯಾವೂ
ಕೇಳುವುದೇ ಇಲ್ಲ

ರಾಜಕಾರಣದಿ ದ್ವೇಷ ಅಸೂಯೆಗಳ ಛಾಯೆ
ಎಲ್ಲ ಕಂಡೂ
ನಾಡು ಸಾಕೆನ್ನುತಿದೆ
ಕಾಡು ಬಾ ಎನ್ನುತಿದೆ ಎನ್ನುವ ಹಿರಿಯ ಮಂದಿ
ಯುವಕರೋ ಸಾಮಾಜಿಕವಲ್ಲದ
ಜಾಲತಾಣಗಳ ಬಂಧಿ
ಯಾರಿಗಿದೆ ಸುಗ್ಗಿ ?

ಸೂರ್ಯ ಬಂದ
ದಾರಿ ಬದಲಿಸಿದ
ಮರ್ಮವರಿಯದೆ
ನಾವಿಟ್ಟಿರುವ ಹೆಸರು ಸುಗ್ಗಿ
ಹಿಗ್ಗಿದೆಯಾ ? ನೀವೇ ಹೇಳಿ.

✍️ ಆದಪ್ಪ ಹೆಂಬಾ ಮಸ್ಕಿ

Don`t copy text!