ಈ ತಿಂಗಳ ಜನ ಜಾತ್ರೆ ಮತ್ತು ವ್ಯತ್ಯಾಸ
ಹೊಸ ವರ್ಷದ ಎರಡನೇ ದಿನ ಶತಮಾನದ ಸಂತ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು ದೇಹ ಬಿಟ್ಟರು, ವಿಜಯಪುರದ ತುಂಬಾ ಜನ ಜಾತ್ರೆ. ಮಹಾನ್ ಸಂತರ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ, ಅಂದರೆ ಹತ್ತು ಲಕ್ಷಕ್ಕೂ ಅಧಿಕ. ಸಾಂಸ್ಕೃತಿಕ ಲೋಕದ ಗೆಳೆಯರಾದ ಡಾ.ಜಿ.ಬಿ.ಪಾಟೀಲ ಹಾಗೂ ಡಾ. ಉಮೇಶ ಪುರದ ಅವರ ಜೊತೆಗೆ ಆ ನೂಕು ನುಗ್ಗಾಟದಲಿ ಮೂರು ತಾಸು ಪಾಳಿ ಹಚ್ಚಿ ದೇವರ ಅಂತಿಮ ದರ್ಶನ ಪಡೆದಾಗ ಅದೇನೋ ಸಾರ್ಥಕ ಭಾವ. ನಮಗೆ ಮಠ, ಸ್ವಾಮಿಗಳು ಮತ್ತು ರಾಜಕೀಯ ಹೊಸದಲ್ಲ, ಮನಸು ಮಾಡಿದ್ದರೆ ವಿಐಪಿ ಕೋಟಾದಲ್ಲಿ ನೇರ ದರ್ಶನದ ಸಾಧ್ಯತೆ ಇತ್ತು. ಆದರೆ ಡಾ.ಜಿ.ಬಿ. ಅವರು ಆ ಅಹಮಿಕೆ ಬೇಡ ಎಂದಾಗ ಆ ನೂಕಾಟದಲ್ಲಿ ಸಾಗಿದೆವು. ‘ಜೈ ಗುರುದೇವ’ ಎಂದು ಜಯಘೋಶ ಹಾಕುತ್ತ ಗ್ರಾಮೀಣ ಮಹಿಳೆಯರು ನೂಕಾಟ ಲೆಕ್ಕಿಸದೇ ಸಾಗಲು ಅವರ ಭಕ್ತಿಯ ತೀವ್ರತೆಯೇ ಕಾರಣ. ಯಾವುದೇ ಹಿಂಸೆ, ಕಳ್ಳತನ ನಡೆಯದೇ ಲಕ್ಷಾಂತರ ಜನ ಸಂಯಮದಿಂದ ನಡೆದುಕೊಂಡು ಸಾರ್ಥಕತೆ ಮೆರೆದರು.
ಇದೇ ವಾರ ಏಕಕಾಲದಲ್ಲಿ ಕೊಪ್ಪಳದಲಿ ಗವಿಮಠದ ಜಾತ್ರೆ ಮತ್ತು ಹಾವೇರಿಯಲಿ ಸಾಹಿತ್ಯ ಜಾತ್ರೆಯಲ್ಲಿ ಕೂಡ ಅಷ್ಟೇ ಲಕ್ಷಾಂತರ ಪ್ರಮಾಣದ ಜನಸಾಗರ. ನಮ್ಮ ದೇಶದಲ್ಲಿ ಸೇರಿದಷ್ಟು ಜನ ಬೇರೆ ಎಲ್ಲಿಯೂ ಸೇರುವುದಿಲ್ಲ.
ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕ್ಷೇತ್ರಗಳಾದ ಮೆಕ್ಕಾ ಮತ್ತು ವೆಟಿಕನ್ ಸಿಟಿಯಲ್ಲಿ ಆಯಾ ಧರ್ಮೀಯರು ಮಾತ್ರ ಲಕ್ಷಾಂತರ ಜನ ಸೇರುತ್ತಾರೆ.
ಆದರೆ ಭಾರತ ದೇಶದಲ್ಲಿ ನೂರಾರು ಸ್ಥಳಗಳಲ್ಲಿ ಏಕಕಾಲಕ್ಕೆ ಲಕ್ಷಾಂತರ ಜನ ಧರ್ಮಾತೀತವಾಗಿ ಸೇರುವ ಕ್ರಮವಿದೆ. ಆಗಾಗ ಜರುಗುವ ಕುಂಭ ಮೇಳಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಾಧು- ಸಂತರು ಮತ್ತು ಅವರ ಅನುಯಾಯಿಗಳು ಜಮಾಯಿಸಿ ಸಂಭ್ರಮ ಪಡುತ್ತಾರೆ. ಇಲ್ಲಿ ಧರ್ಮ, ನಂಬಿಕೆ, ವಿಶ್ವಾಸ ಪ್ರಮುಖ ಕಾರಣವಾಗಿರುತ್ತದೆ.
ಧಾರ್ಮಿಕ ಕಾರಣ ಹೊರತು ಪಡಿಸಿ ನಮ್ಮ ರಾಜ್ಯದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನ ಸೇರುವ ಕನ್ನಡ ಜಾತ್ರೆಗೆ ಭಾಷೆ ಬಹುದೊಡ್ಡ ಕೊಂಡಿಯಾಗಿದೆ. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯಾಚೆಗಿನ ಜಂಗುಳಿಗೆ ಸಮೂಹದ ಸಡಗರವೂ ಕಾರಣ.
ಈಗ ಮಣ್ಣು-ನೀರು-ನುಡಿಗಿಂತ ಇತರ ವಿಷಯಗಳು ಚರ್ಚೆಯ ವಸ್ತುಗಳು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು? ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಹಿರಿಮೆ ಏನು? ಗೋಷ್ಟಿಗಳಲ್ಲಿ ನಡೆಯುವ ಚರ್ಚೆಯಾದರೂ ಏನು?
ಊಹೂಂ, ಅದಾವುದು ಈಗ ಮಹತ್ವದ್ದಲ್ಲ. ಸರಕಾರ, ಮಂತ್ರಿಗಳು, ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಣಯಗಳ ಆಶಯದಂತೆ ಕನ್ನಡದ ಜಾತ್ರೆ ಎಂಬ ರೂಪಕದೊಂದಿಗೆ ಮೂಲ ಸಾಹಿತ್ಯಕ ಆಶಯಗಳನ್ನು ಕೈ ಬಿಟ್ಟು ಜನ ಸೇರುತ್ತಾರೆ. ಊಟ, ವಸತಿ ಇತ್ಯಾದಿ ವಿಷಯಗಳ ಕುರಿತು ನಕಾರಾತ್ಮಕ ಅಥವಾ ಒಂದಿಷ್ಟು ಸಕಾರಾತ್ಮಕ ವರದಿಗಳು ಪ್ರಕಟಗೊಂಡು ಜಾತ್ರೆ ಮುಗಿದು ಹೋಗುತ್ತದೆ.
ಇದೇ ಮಾದರಿಯ ಕನ್ನಡದ ತೇರು ಮುಂದಿನ ಬಾರಿ ಮತ್ತೊಂದು ಜಿಲ್ಲೆಗೆ ಸಾಗುತ್ತದೆ ಅಷ್ಟೇ!
ಅಂತಹ ಒಂದು ಜಾತ್ರೆಗೆ ಪುಟ್ಟ ಊರು ಹಾವೇರಿ ಸಾಕ್ಷಿಯಾದದ್ದು ಹಾವೇರಿ ಜನರ ಹೆಮ್ಮೆ, ಅಭಿಮಾನ. ಕನ್ನಡಿಗರಾದ ನಾವೂ ಅವರಂತೆ ಸಡಗರಿಸೋಣ.
ಸಡಗರಿಸಿದ ಮೇಲೆ ಒಂದಿಷ್ಟು ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜ.
ವಿಜಯಪುರದಲಿ ಸೇರಿದ ಜನರ ಶ್ರದ್ಧಾ ಭಕ್ತಿಗೆ ಶತಮಾನದ ಸಂತ ಸಿದ್ಧೇಶ್ವರ ಸ್ವಾಮಿಗಳ ದಿವ್ಯ ಚೇತನ ಶಕ್ತಿಯೇ ಕಾರಣ, ಕೊಪ್ಪಳ ಗವಿಮಠದ ಜಾತ್ರೆಗೆ ಶತಮಾನದ ಪರಂಪರೆ ಇದೆ ಹಾಗೂ ಇಂದಿನ ಸ್ವಾಮಿಗಳ ಇಚ್ಛಾಶಕ್ತಿ ಮತ್ತು ಆಧುನಿಕ ಶಿಸ್ತಿನ ಸ್ಪರ್ಷವಿದೆ. ಧರ್ಮ, ಸಂಸ್ಕೃತಿ, ಅನ್ನ ದಾಸೋಹದ ಪರಿಕಲ್ಪನೆ ಒಂದು ಚಿಂತನೆಯನ್ನು ಕಟ್ಟಿ ಕೊಡುತ್ತದೆ.
ದುಡಿಮೆ ಮತ್ತು ವೈಯಕ್ತಿಕ ಬದುಕಿನ ಜಂಜಾಟವನ್ನು ಕೆಲ ತಾಸು ಮರೆತು ಜನ ಆನಂದ ಪಡುತ್ತಾರೆ. ಇದು ನಮ್ಮ ದೇಶದ ಶಕ್ತಿ ಮತ್ತು ಮಿತಿಯೂ ಹೌದು.
ವೈಯಕ್ತಿಕ ಅನುಭವ ಮತ್ತು ಮಾಧ್ಯಮಗಳ ಸುದ್ದಿಯಾಧಾರದ ಮೇಲೆ ನಮಗೆ ತಿಳಿಯುವ ಸಂಗತಿ ಎಂದರೆ ನಾವು ಸಮೂಹ ಪ್ರಿಯರು ಮತ್ತು ಸಮೂಹದ ಘಟನೆಗಳಿಗೆ ಅಷ್ಟೇ ಚರ್ಚಾಹೀನರಾಗಿ ಕಳೆದು ಸುಖಿಸುತ್ತೇವೆ. ಇಲ್ಲಿ ತಾರ್ಕಿಕ ಮತ್ತು ವೈಚಾರಿಕ ಆಲೋಚನೆಗಳಿಗಿಂತ ಮಾಸ್ ಆಕರ್ಷಣೆ ಮತ್ತು ಮೈ ಮರೆಯುವ ಕ್ಷಣಿಕ ಆನಂದವೇ ಮುಖ್ಯ.
‘Mass has head but no brain’ ಎಂಬ ಮಾತನ್ನು ಅರ್ಥೈಸುವ ಬಗೆಯಾದರೂ ಏನು? ಈ ಪ್ರಶ್ನೆ ಆಗಾಗ ಕಾಡುವುದು ಸಹಜ.
ಹೀಗೆ ಕಾಡಿದಾಗ, ವಿಜಯಪುರದಲ್ಲಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಶಕ್ತಿ, ಕೊಪ್ಪಳದಲಿ ಗವಿಮಠದ ಗದ್ದುಗೆ ಮತ್ತು ಸ್ವಾಮಿಗಳ ಸಾಮರ್ಥ್ಯದ ನಾಯಕತ್ವ ದಟ್ಟವಾಗಿ ಗೋಚರವಾಗಿ ಒಂದು ಸ್ಪಷ್ಟ ಕಾರಣ ಲಭಿಸಿತು.
ಆದರೆ, ಸಾಹಿತ್ಯ ಸಮ್ಮೇಳನದಲ್ಲಿ ಅಂತಹ ನಾಯಕತ್ವ, ಸಾಮರ್ಥ್ಯ, ಶಕ್ತಿ ಮತ್ತು ವ್ಯಕ್ತಿತ್ವದ ಹಿರಿಮೆ ಇರದೇ ಹೋದರೂ, ಅದನ್ನು ಪರಿಗಣಿಸದೇ ಲಕ್ಷಾಂತರ ಜನ ಸೇರಿ ಆನಂದ ಪಟ್ಟದ್ದು ಕೇವಲ ವಿಸ್ಮಯ ಅಲ್ಲ; ಹತ್ತಾರು ಆಲೋಚನೆಗಳನ್ನು ಹುಟ್ಟು ಹಾಕುವುದನ್ನು ಅಲ್ಲಗಳೆಯಲಾಗದು.
ನಮ್ಮ ಎಲ್ಲ ಸಾಮೂಹಿಕ ಆಚರಣೆಗಳಿಗೆ ಇರಬಹುದಾದ ಬದ್ಧತೆ ಮತ್ತು ಅಗತ್ಯಗಳ ಚರ್ಚೆ, ವಾದ, ವಿವಾದ ಮತ್ತು ಸಂವಾದಗಳನ್ನು ಒಳಗಣ್ಣಿನಿಂದ ನೋಡುವ ಪರಿಕ್ರಮ ಇರಬಹುದು, ಈ ಎಲ್ಲ ಅಂಶಗಳನ್ನು ಅವಲೋಕಿಸಿ, ಅದನ್ನು ಆರೋಗ್ಯಪೂರ್ಣವಾಗಿ ಸ್ವೀಕರಿಸುವ ಪ್ರಬುದ್ಧತೆ ಚಲನಗೊಳ್ಳಲಿ ಎಂದು ಆಶಿಸುತ್ತೇನೆ.
-ಪ್ರೊ. ಸಿದ್ದು ಯಾಪಲಪರವಿ ಕಾರಟಗಿ.
9448358040.