ಸೂರ್ಯ ಶರಣ
ಕರ್ಕ ಮೇರೆಯನ್ನು ಮೀರಿ
ಮಕರದೆಡೆಗೆ ಬಂದ ನೋಡಿ
ಎಡೆಬಿಡದೇ ಬಿಸಿಲು ಬೆಳಕ ತೂರಿ
ನಮ್ಮ ಅರ್ಕ ದಿವ್ಯ ಸೂರಿ.
ಆದಿಯಿಂದ ಅನಂತದೆಡೆಗೆ
ಅನವರತವು ಇವನ ನಡಿಗೆ
ದೇಶಕೋಶರಹಿತ ಮಹಿಮೆ
ಜಗದ ಬಲದ ಹಿರಿಮೆ
ಮೇಷ ವೃಷಭ ಮಿಥುನ ಕರ್ಕ
ರಾಶಿ ರಾಶಿ ತೂರಿ ತುಂಬಿ ನಡೆದು
ಚಳಿಯ ಮಳೆಯ ಹೊತ್ತು ತಂದು
ಬಾನಿಗೆಲ್ಲ ಬಿಸಿಲು ಬೆಳಕನಿತ್ತು
ಕತ್ತಲೆಯ ನಡುಗಿಸುವ ಕ್ರಾಂತಿಕಾರನು
ಜಗದ ಒಳಿತು ಇವಗೆ ಸೊಗಸು
ಅಳುವ ನಗುವ ಮೊಗವ ಸಹಿಸು
ಎಳ್ಳು ಬೆಲ್ಲ ಅದಕೆ ಬೆರೆಸು
ಸಂಕ್ರಾಂತಿಯ ಮುನ್ನಡೆಸು
ದೇವ ದೇವ ನಮೋ ನಮಃ
ಜೀವ ಜೀವಾಳ ನಿನಗಾರು ಸಮ
ಕ್ರಾಂತಿವೀರ ಕ್ಲೇಷದೂರ
ಸಂಕ್ರಮಣದ ಸೂರ್ಯ ದೇವ
ರಥವನೇರಿ ನಡದೇನಡೆದ
ವಿಶ್ವಪಥದಲಿ, ದಾಸೋಹ ಗುಣದಲಿ
-ಕೆ.ಶಶಿಕಾಂತ
ಲಿಂಗಸೂಗೂರ