ಹೊಸ,ಹೊಸ ಬರಹಗಾರರು ಮತ್ತು ಕವಿಗಳಿಗೆ ವೇದಿಕೆ ಸಿಗಬೇಕು- ಶ್ರೀಮತಿ ಶ್ರೀದೇವಿ ಸಿ.ರಾವ್

ಹೊಸ,ಹೊಸ ಬರಹಗಾರರು ಮತ್ತು ಕವಿಗಳಿಗೆ ವೇದಿಕೆ ಸಿಗಬೇಕು- ಶ್ರೀಮತಿ ಶ್ರೀದೇವಿ ಸಿ.ರಾವ್

ದಿ. ಚಂದ್ರಶೇಖರ ರಾವ್ ಮೆಮೊರಿಯಲ್ ಟ್ರಸ್ಟ್, ಮುಂಬೈ ವತಿಯಿಂದ ದಿನಾಂಕ 9-01-2023 ರಂದು ಸಂಜೆ 4 ಗಂಟೆಗೆ ದಿ. ಚಂದ್ರಶೇಖರ್ ರಾವ್ ಅವರ ಸಂಸ್ಮರಣಾ ದಿನವನ್ನು ಮುಂಬೈನ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದು ಕವಿ-ಕಾವ್ಯ ವಾಚನದ ಜೊತೆಗೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಟ್ರಸ್ಟನ ವತಿಯಿಂದ ಧನಸಹಾಯ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಮತಿ ಶ್ರೀದೇವಿ ರಾವ್ ಅವರು ಮಾತಾಡುತ್ತ,
” ದಿ. ಚಂದ್ರಶೇಖರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ. ಹೊಸ ಬರಹಗಾರರು ಬರೆಯಬೇಕು, ಬೆಳೆಯಬೇಕು, ಅವರಿಗೆ ವೇದಿಕೆ ಸಿಗಬೇಕು, ಅವರ ಪುಸ್ತಕ ಹೊರತರಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಕವಿಗಳು ಸಾಹಿತಿಗಳು ಎಂದರೆ ಅವರಿಗೆ ಬಹಳ ಪ್ರೀತಿ, ಅಭಿಮಾನವಿತ್ತು. ಸಾಹಿತ್ಯಪರ ಕಾರ್ಯಕ್ರಮಗಳು ನಮ್ಮ ಮನೆಯಲ್ಲಿ ಆಗಾಗ ನಡೆಯುತ್ತಿರಬೇಕು ಎಂದು ಅವರು ಹೇಳುತ್ತಿದ್ದರು ಎಂದರು.

ಅವರ ಆಸೆಯಂತೆ ಈ ಟ್ರಸ್ಟನ್ನು ನಾನು ಮುನ್ನಡೆಸಿಕೊಂಡು ಹೋಗುತ್ತಿರುವೆ. ಇದಕ್ಕೆಲ್ಲ ಅವರೇ ಪ್ರೇರಣೆಯೆಂದು ಹೇಳುತ್ತ, ಮುಂಬಯಿ ಚುಕ್ಕಿ ಸಂಕುಲ ಬಳಗದೊಂದಿಗಿನ ಒಡನಾಟವನ್ನು, ಈ ಕಾರ್ಯಕ್ರಮ ಆಯೋಜನೆಯಲ್ಲಿ ಅವರ ಸಹಯೋಗವನ್ನು ಹಂಚಿಕೊಂಡರು.

ಅಂದು ನೆರೆದವರಲ್ಲಿ ಕುಮುದಾ ಶೆಟ್ಟಿ, ಪ್ರಫುಲ್ಲ ಶೆಟ್ಟಿ, ಅಂಜಲಿ ಶಿಧೋರೆ, ವೇದಾವತಿ ಭಟ್, ದೀಪಾ ಶೆಟ್ಟಿ , ಡಾ.ದಾಕ್ಷಾಯಣಿ ಯಡಹಳ್ಳಿ, ಡಾ.ಜಿ.ಪಿ.ಕುಸುಮ ಸರೋಜಾ ಅಮಾತಿ ಸ್ವರಚಿತ ಕವನ ಮತ್ತು ಚುಟುಕು ವಾಚನ, ಗಾಯನ ಪ್ರಸ್ತುತ ಪಡಿಸಿದರು. ಪುಟಾಣಿ ಶಿವಾಂಕ್ ಭಗವದ್ಗೀತೆಯ ಪ್ರಾರಂಭದ ಶ್ಲೋಕಗಳನ್ನು ಬಲು ಸುಂದರವಾಗಿ ಪ್ರಸ್ತುತ ಪಡಿಸಿ ನೆರೆದ ಸಭಿಕರೆಲ್ಲರ ಮನಸೂರೆಗೊಂಡನು.

ಚುಕ್ಕಿ ಸಂಕುಲದ ಪರವಾಗಿ ಕವಿ ಲೇಖಕ ಗೋಪಾಲ ತ್ರಾಸಿ ಅವರು, ದಿವಂಗತ ಚಂದ್ರಶೇಖರ್ ರಾವ್ ಅವರ ರಚನೆಯ ಕವನವೊಂದನ್ನು ಮನಮುಟ್ಟುವಂತೆ ವಾಚಿಸಿದರು.

ದಾರಾವಿಯ ಮನಪಾ ಕನ್ನಡ ಶಾಲೆಯ ಮಕ್ಕಳಾದ ಶಿರಿಷ್, ಜಾನವಿ ಆರತಿ ಇವರು ವರಾಹ ರೂಪ0 ಗೀತೆಗೆ ನೃತ್ಯ ಮಾಡಿದರು. ಹಾಗೆಯೇ ಅದಿತಿ,ಶಿರಿಷ್, ಜಾನವಿ,ಕರಣ್,ಮಹಾಲಕ್ಷ್ಮಿ, ಸುನಿತಾ,ವಿನಾಯಕ, ಅನನ್ಯ,ಆದಿತ್ಯ ಇವರು ಬಹಳ ಸುಂದರವಾದ ಭಕ್ತಿಗೀತೆಗಳನ್ನು ಸಾದರಪಡಿಸಿದರು.

ವೇದಿಕೆಯಲ್ಲಿ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಸಿ.ರಾವ್, ಚುಕ್ಕಿ ಸಂಕುಲದ ಗೋಪಾಲ ತ್ರಾಸಿ ಮತ್ತು ಡಾ. ಜಿ.ಪಿ. ಕುಸುಮ ಡಾ.ದಾಕ್ಷಾಯಿಣಿ ಯಡಹಳ್ಳಿ, ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಅಂಜಲಿ ಶಿಧೋರೆ ಅವರು ಪ್ರಾರ್ಥನಾ ಗೀತೆ ಹಾಡಿದರು. ಸರೋಜಾ ಅಮಾತಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕೊನೆಯಲ್ಲಿ ಹೋಪ್ ಫೌಂಡೇಶನ್ ನ ಭೀಮರಾಯ ಚಿಲ್ಕ ಫೌಂಡೇಷನ್ ಕುರಿತು ಮಾಹಿತಿ ನೀಡಿ ವಂದಿಸಿದರು. ಚಂದ್ರಶೇಖರ ರಾವ್ ಪರಿವಾರದ ಹಿತೈಷಿಗಳು ಮತ್ತು ಹೋಪ್ ಫೌಂಡೇಶನ್ ನ ಅಧ್ಯಕ್ಷರಾದ ತಾಯಪ್ಪ ಮತ್ತಿತರ ಪದಾಧಿಕಾರಿಗಳು, ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

Don`t copy text!