ಪ್ರವಾಸ ಕಥನ ಮಾಲಿಕೆ ಸರಣಿ ಲೇಖನ
ಬೆಳಗಾವಿಯ ಕಮಲ ಬಸದಿ…..
ಕುಂದಾ ನಗರಿ ಬೆಳಗಾವಿ ಕೇವಲ ಕುಂದಾಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ. ಹಲವಾರು ಪ್ರವಾಸಿ ತಾಣಗಳು. ಪ್ರಸಿದ್ಧ ದೇವಾಲಯಗಳು. ಸುಂದರ ಪ್ರಕೃತಿ. ಅನೇಕ ಜಲಧಾರೆಗಳು. ಅಲ್ಹಾದಕರ ವಾತಾವರಣ ಸೊಬಗನ್ನು ತನ್ನ ಮಡಿಲಲ್ಲಿ ಬೆಳಗಾವಿ ತುಂಬಿಕೊಂಡಿದೆ. ಬೆಳಗಾವಿಯ ಹೃದಯ ಭಾಗದಲ್ಲಿ ಕಮಲ ಬಸಿದಿ ಇದೆ.
ಬೆಳಗಾವಿಯ ಐತಿಹಾಸಿಕ ಕೋಟೆಯಲ್ಲಿರುವ ಈ ಜೈನ ದೇವಾಲಯ 800 ವರ್ಷಗಳ ಹಿಂದಿನದು ಚಾಲುಕ್ಯ ಶೈಲಿಯಲ್ಲಿ ನಿರ್ಮಾಣ ಗೊಂಡಿರುವ ಈ ಬಸದಿಯನ್ನು ರಟ್ಟ ರಾಜವಂಶದ ನಾಲ್ಕನೇಯ ಕಾರ್ತಿವೀರ್ಯನ ಕಾಲದಲ್ಲಿ ಆತನ ಮಂತ್ರಿಯಾದ ಬಿಚಿ ರಾಜನು ಕಟ್ಟಿಸಿದನು.
22ನೇ ಜೈನ ತೀರ್ಥoಕರನಾದ ಶ್ರೀ ನೇಮಿನಾಥನ ದೇವಾಲಯವಾದ ಈ ಬಸದಿಗೆ ” ಕಮಲ ಬಸದಿ ” ಎಂಬ ಹೆಸರು ಬಂದಿದ್ದು ದೇವಸ್ಥಾನದ ರಂಗಮಂಟಪದ ಮೇಲಛಾ ವಾಣಿಯಲ್ಲಿ ಕೆತ್ತಲ್ಪಟ್ಟ ಸುಂದರ ಕಮಲ ಹೂವಿನಿಂದ. ಏಕ ಶಿಲೆಯಲ್ಲಿ ಮೂಡಿಬಂದ ಈ ಶಿಲ್ಪ ನೋಡುಗರಿಗೆ ಅಚ್ಚರಿ ಮೂಡಿಸುತ್ತದೆ. ಕಮಲ ಬಸದಿಯ ಕಂಬಗಳು ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು. ಅವುಗಳಲ್ಲಿ ನಮ್ಮ್ ಮುಖ ಕೂಡ ಕಾಣಿಸುತ್ತೆ ಅಷ್ಟೊಂದು ನುಣುಪು.
ಬಸದೀಯ ಪ್ರಾಕಾರದಿಂದ ಗರ್ಭ ಗುಡಿಯವರೆಗೆ ಒಟ್ಟು ನಾಲ್ಕು ಬಾಗಿಲುಗಳಿವೆ. ಪ್ರತಿ ಬಾಗಿಲು ಸೂಕ್ಷ್ಮ ಕೆತ್ತನೆಯಿಂದಕೂಡಿದೆ. ಗರ್ಭ ಗುಡಿಯಲ್ಲಿರುವ ಭಗವಾನ ನೇಮಿನಾಥನ ಮೂರ್ತಿ ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದೆ. ಈ ಕಲ್ಲು 200ವರ್ಷಗಳ ಹಿಂದೆ ಕಾಡಿನಲ್ಲಿ ದೊರೆತದ್ದು ಎನ್ನಲಾಗುತ್ತದೆ.
ಭಗವಾನ ನೇಮಿನಾಥನ ವಿಗ್ರಹದ ಹಿಂದೆ ಇರುವ ಪ್ರಭಾವಳಿಯು ಅತ್ಯಂತ ವಿಶಿಷ್ಟವಾದದ್ದು. ಕಲ್ಪವೃಕ್ಷ. ಕಾಮಧೇನು ಮತ್ತು ಅನೇಕ ಸೂಕ್ಷ್ಮ ಕೆತ್ತನೆ ಈ ಪ್ರಭಾವಳಿಯ ದಿವ್ಯತೆಗೆ ಮೆರಗು ತಂದಿದೆ. ಭಗವಾನ ಸುಮತಿನಾಥ. ಪಾರ್ಶನಾಥ. ಆದಿನಾಥರ ಸುಂದರ ವಿಗ್ರಹಗಳನ್ನು ಕಾಣಬಹುದು.
ಕಣ್ಮನ ಸೆಳೆಯುವ. ಮುದುಡಿದ ಮನ ಅರಳಿಸುವ ಬೆಳಗಾವಿಯ ಕಮಲ ಬಸ್ತಿ ಬೆಳಗಾವಿಯ ಪ್ರಸಿದ್ಧ ಜೈನ ದೇವಾಲಯ.
✍️ಶ್ರೀಮತಿ. ವಿದ್ಯಾ. ಹುಂಡೇಕರ.