ಲಿಂಗಾಯತ ಪುಣ್ಯಪುರುಷರ ಮಾಲೆ ವಿಶೇಷ
ಸ್ವತಂತ್ರ ವೀರ ಸಂಸ್ಥಾನ ಸಿಂಹ ಡಾ ಮಹದೇವಪ್ಪ ಶಿವಬಸಪ್ಪ ಪಟ್ಟಣ
ರಾಮದುರ್ಗ ಸಂಸ್ಥಾನ ವಿಲೀನಿಕರಣದ ಹೋರಾಟವು ಭಾರತದ ಐತಿಹಾಸಿಕ ಘಟನೆಗಳಲ್ಲಿ ಮರೆಯಲಾಗದ ಪುಟವು. ಪಟ್ಟಣ ಮನೆತನವು ಮೂಲತಃ ಬೈಲುಹೊಂಗಲ ತಾಲೂಕಿನ ದೇಶನೂರು ಗ್ರಾಮದವರು ಹಿರಿಯನ ಮಡದಿ ರಾಮದುರ್ಗದ ನಿಜಗುಲಿಯ ಮನೆತನದವಳು .ಗಂಡ ತೀರಿಕೊಂಡ ನಂತರ
1875 ರ ಸುಮಾರಿಗೆ ತನ್ನ ಎರಡು ಗಂಡು ಮಕ್ಕಳಾದ ವೀರಭದ್ರಪ್ಪ ಹಾಗು ಶಿವಬಸಪ್ಪ ಇವರೊಂದಿಗೆ ತನ್ನ ತವರು ಮನೆಗೆ ನೀಲಮ್ಮ ತಾಯಿ ಬಂದಳು . ರಾಮದುರ್ಗದ ಶೆಟ್ಟರ ಅವರೊಂದಿಗೆ ಹಿರಿಯ ಮಗ ವೀರಭದರಪ್ಪ ವ್ಯಾಪಾರ ಸುರು ಮಾಡಿ ನಂತರ ರೇಷ್ಮೆ ಸನಾಗು ಮುಂತಾದ ನೇಕಾರರಿಗೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಮಾರುಕಟ್ಟೆ ಸ್ಥಾಪಿಸಿದರು.
ಎರಡನೆಯವನು ಶಿವಬಸಪ್ಪ ಅಣ್ಣ ವೀರಬ್ಜದ್ರಪ್ಪ ಅವರು ವಿಸ್ತರಿಸಿದ ಕೃಷಿ ನೋಡಿಕೊಳ್ಳ ಹತ್ತಿದನು .
ಶಿವಬಸಪ್ಪನವರ ಮತ್ತು ಎರಡನೆಯ ಮಗನೆ ಸ್ವಾತಂತ್ರ ವೀರ ಸಂಸ್ಥಾನ ಸಿಂಹ ಡಾ ಮಹದೇವಪ್ಪ ಶಿವಬಸಪ್ಪ ಪಟ್ಟಣ ತಾಯಿ ಸಾವಂತರೆಮ್ಮ .
ಇವರ ಕಿರು ಪರಿಚಯ
ವೈಯಕ್ತಿಕ ಪರಿಚಯ
ಹೆಸರು: ಮಹಾದೇವಪ್ಪ ಪಟ್ಟಣ
ತಂದೆ-ತಾಯಿ: ಶಿವಬಸಪ್ಪ, ಸಾವಂತ್ರವ್ವ
ಜನ್ಮದಿನ: 26-9-1911
ಜನ್ಮಸ್ಥಳ: ರಾಮದುರ್ಗ ಸಂಸ್ಥಾನದ ಮುದೇನೂರ
ಶಿಕ್ಷಣ: ಮುಲ್ಕೀ ಪರೀಕ್ಷೆ
ಹವ್ಯಾಸ: ಪತ್ರಿಕೆ ಓದು, ಟಿವಿ ವೀಕ್ಷಣೆ, ರಾಜ್ಯ, ಅಂತಾರಾಷ್ಟ್ರೀಯ ಬೆಳಗವಣಿಗೆ ಚರ್ಚೆ, ಮಕ್ಕಳು, ಮೊಮ್ಮಕ್ಕಳೊಂದಿಗೆ ಹರಟೆ.
ಪತ್ನಿ: ಪರವ್ವ ಮತ್ತು ಶಾರದಮ್ಮ
ಮಕ್ಕಳು: ಮೊದಲ ಪತ್ನಿಯಿಂದ ದಿ. ಶಾಂತಾ, ಎಂಜಿನಿಯರ್ ಚನ್ನಬಸಪ್ಪ, ಎರಡನೇ ಪತ್ನಿಯಿಂದ ಡಾ. ಮೋಹನ, ಎಂಎಲ್‌ಎ ಅಶೋಕ, ಎಂಜಿನಿಯರ್ ಸುರೇಶ, ಮೃಣಾಲಿನಿ, ಮಧುಮತಿ ಮತ್ತು ಪ್ರದೀಪ
ಡಾ.ಮಹದೇವಪ್ಪನವರು -ಪಟ್ಟಣರ ಬಿರುದುಗಳು—
*ಕರ್ನಾಟಕ ಏಕೀಕರಣದ ಯಶಸ್ವಿ ಹೋರಾಟಕ್ಕೆ ಬಳ್ಳಾರಿ ಜನರಿಂದ ‘ಕ್ರಾಂತಿವೀರ’.*
*ತರುಣ ಕರ್ನಾಟಕ’ ಪತ್ರಿಕೆಯಿಂದ ‘ಕರ್ನಾಟಕದ ನೆಪೋಲಿಯನ್’*
*ಸಂಸ್ಥಾನದ ಜನರಿಂದ ‘ರಾಮದುರ್ಗ ಹುಲಿ’*
*ಚಳವಳಿಗಾರರಿಂದ ‘ಕ್ಯಾಪ್ಟನ್’ ಬಿರುದು*
*ಕರ್ನಾಟಕ ಸರಕಾರದಿಂದ ಏಕೀಕರಣ ಪ್ರಶಸ್ತಿ*
*ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ*
* *ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ*
ಹೋರಾಟದ ಹಿನ್ನೆಲೆ
ಮನೆ ತುಂಬ ಕಾಳುಕಡಿ, ಪೆಟ್ಟಿಗೆ ತುಂಬ ಬಂಗಾರ, ಸಾವಿರಾರು ಎಕರೆ ಜಮೀನು, ಪೇಟೆಬೀದಿಯಲ್ಲಿ ಧಾನ್ಯಗಳ ಸಗಟು, ರೇಷ್ಮೆ ನೂಲು, ಜವಳಿ, ಸ್ಟೇಶನರಿ, ಸೀರೆ ಖರೀದಿ-ವಿಕ್ರಿ ವ್ಯವಹಾರ… ಹಿರಿಯ ಮಗನಾಗಿದ್ದರಿಂದ ಇವುಗಳನ್ನೆಲ್ಲ ನಿಭಾಯಿಸುವ ಜವಾಬ್ದಾರಿ.
ಬಾಯಿಯಲ್ಲಿ ಬಂಗಾರದ ಚಮಚ ಇಟ್ಟುಕೊಂಡು ಹುಟ್ಟಿದ್ದ ಈ ಆಗರ್ಭ ಶ್ರೀಮಂತರ ಹುಡುಗ ಸುಮ್ಮನೇ ಅಂಗಡಿಯಲ್ಲಿ ಕುಳಿತು ಲೆಕ್ಕ ಬರೆಯುವುದನ್ನು ಬಿಟ್ಟು ರೈತರಿಗೆ ಧ್ವನಿಯಾಗಲು ಹೋಗಿ ರಾಜನ ಕೆಂಗಣ್ಣಿಗೆ ಗುರಿಯಾದ. ಇದರ ಫಲವಾಗಿ ಕಂಡಲ್ಲಿ ಗುಂಡಿಕ್ಕುವ ವಾರಂಟ್ ಜಾರಿಯಾಯಿತು. ತಪ್ಪಿಸಿಕೊಳ್ಳಲು ಏಳು ವರ್ಷಗಳ ಕಾಲ ಭೂಗತನಾದ. ಕೊನೆಗೆ ಕ್ರಾಂತಿಕಾರಿಯಾಗಿ ಹೊರಬಂದ. ಇದು ಭಗತ್‌ಸಿಂಗ್, ಸಂಗೊಳ್ಳಿ ರಾಯಣ್ಣನ ಕಥೆಯಲ್ಲ. ನಮ್ಮೊಡನೆ ಇಂದಿಗೂ ಜೀವಿಸಿರುವ ಶತಾಯುಷಿ ರಾಮದುರ್ಗದ ಮಹಾದೇವಪ್ಪ ಪಟ್ಟಣರ ಇತಿಹಾಸ ಇದು.
ಭಾರತ ಸರಕಾರದಲ್ಲಿ ದಕ್ಷಿಣದ ಸಂಸ್ಥಾನಗಳ ವಿಲೀನ, ಸ್ವಾತಂತ್ರ್ಯ ಹೋರಾಟ, ರಾಮದುರ್ಗ ಕ್ರಾಂತಿ, ಕರ್ನಾಟಕ ಏಕೀಕರಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಿರುವ ಇವರು, ಅದನ್ನು ಪ್ರಚಾರದ ವಸ್ತುವನ್ನಾಗಿ ಮಾಡಿಕೊಂಡಿಲ್ಲ. ಇಂದಿಗೂ ತಮ್ಮ ಪಾಡಿಗೆ ತಾವಿದ್ದಾರೆ. ಕೇಳಿದವರಿಗೆ ಆಗಿನ ಸನ್ನಿವೇಶಗಳನ್ನು ಮೈನವಿರೇಳುವಂತೆ ರೋಚಕವಾಗಿ ಕಟ್ಟಿಕೊಡುತ್ತಾರೆ. ಅನ್ಯಾಯದ ವಿರುದ್ಧ ಹೋರಾಡಲು ಯುವಕರಿಗೆ ಸ್ಫೂರ್ತಿ ನೀಡುತ್ತಿದ್ದಾರೆ.
ಪಟ್ಟಣ ಅವರು ಜನ್ಮತಃ ಹೋರಾಟ ಮಾಡಬೇಕೆಂದು ಚಿಂತಿಸಿದವರಲ್ಲ. ರಾಮದುರ್ಗ ಸಂಸ್ಥಾನದ ರಾಜ ರಾಮರಾವ್ ಭಾವೆಯ ದಬ್ಬಾಳಿಕೆ ಮತ್ತು ದುರಾಡಳಿತದಿಂದ ಬೇಸತ್ತುಹೋಗಿದ್ದ ಜನರ ಆರ್ತನಾದ ಅವರನ್ನು ತೀವ್ರಸ್ವರೂಪದ ಹೋರಾಟಗಾರರನ್ನಾಗಿ ರೂಪಿಸಿತು. ರಾಜ ಇವರ ಆಸ್ತಿ ಜಫ್ತ್ತ್ ಮಾಡಿಸಿ ಲಿಲಾವು ಹಾಕಿದ. ಇದರಿಂದ ಮಹಾದೇವಪ್ಪ ಪಟ್ಟಣ ಅವರು ಸುಖ, ಸಂಪತ್ತು ಕಳೆದುಕೊಂಡರೂ, ಎಂದಿಗೂ ಅಳಿಸಲಾಗದ ಚರಿತ್ರೆ ಬರೆದರು.
ಹೋರಾಟಕ್ಕೆ ನಾಂದಿ
1934 ರಿಂದ 1937 ರ ಅವಧಿಯಲ್ಲಿ ತೀವ್ರ ಬರಗಾಲವಿತ್ತು. ಒಪ್ಪತ್ತಿನ ಊಟಕ್ಕೂ ಗತಿ ಇರಲಿಲ್ಲ. ಜನ ಕಂಗಾಲಾಗಿದ್ದರು. ಪರಿಹಾರ ಕೈಗೊಳ್ಳುವುದನ್ನು ಬಿಟ್ಟು ಸಂಸ್ಥಾನದ ರಾಜ ಬ್ರಿಟಿಷ್ ಹದ್ದಿಗಿಂತ ಒಂದೂವರೆ ಪಟ್ಟು ಹೆಚ್ಚಿಗೆ ಭೂಕಂದಾಯ ವಸೂಲಿ ಮಾಡುತ್ತಿದ್ದ. ಇದು ಸಂಘರ್ಷಕ್ಕೆ ಎಡೆಮಾಡಿ ಮುಂದೆ ಸ್ಫೋಟಗೊಂಡಿತು.
ಸಂಸ್ಥಾನದ 33 ಹಳ್ಳಿಗಳ ಜನ ಒಗ್ಗೂಡಿ ಒಂದು ದಿನ ಭೂಕಂದಾಯ ಮನ್ನಾ ಮಾಡಬೇಕೆಂದು ಕೇಳಲು ರಾಮದುರ್ಗದಲ್ಲಿದ್ದ ಅರಮನೆ ಕಡೆಗೆ ಹೊರಟಿದ್ದರು. ರಾಜ ಬೀದಿಯಲ್ಲೇ ಇದ್ದ ಅಂಗಡಿಯಲ್ಲಿ ಲೆಕ್ಕ ಬರೆಯುತ್ತ ಕುಳಿತಿದ್ದ ತರುಣ ಮಹಾದೇವಪ್ಪ ಪಟ್ಟಣರನ್ನು ನಾಯಕತ್ವ ವಹಿಸಿಕೊಳ್ಳಲು ಕೇಳಿಕೊಂಡರು. ಕೈಯಲ್ಲಿದ್ದ ಪುಸ್ತಕ ಎಸೆದ ಮಹಾದೇವಪ್ಪ ಅವರು ಮರುಯೋಚಿಸದೇ ‘ನಡಿರೀ ನಿಮ್ಮನ್ನ ಬಿಟ್ರ ನಮ್ದೇನೈತಿ’ ಎಂದೇ ಬಿಟ್ಟರು. ಅದು ಮಹಾದೇವಪ್ಪನವರ ಹೋರಾಟದ ರಂಗ ಪ್ರವೇಶವಾಯಿತು.
ನಂತರದ ಬೆಳವಣಿಗೆಗಳಿಂದಾಗಿ ಪಟ್ಟಣ ರಾಜನ ಕೆಂಗಣ್ಣಿಗೆ ಗುರಿಯಾದರು. ರಾಜ ಹೆದರಿಸಲು ನೋಡಿದ. ಇದ್ಯಾವುದಕ್ಕೂ ಸೊಪ್ಪು ಹಾಕದ ಮಹಾದೇವಪ್ಪನವರು ನ್ಯಾಯವಾದಿ ಬಿ.ಎನ್. ಮುನವಳ್ಳಿಯವರ ಜತೆಗೂಡಿ ಜನ ಜಾಗೃತಿ ಮಾಡಿದರು. ಸ್ಫೂರ್ತಿಗಾಗಿ ರಾಜ ಬೀದಿಯಲ್ಲಿ ಕಾಂಗ್ರೆಸ್ ಧ್ವಜ ಕಂಬ ನೆಟ್ಟರು. ಸ್ವಯಂ ಸೇವಕರ ಪಡೆ ಕಟ್ಟಿದರು. ಖರ್ಚು-ವೆಚ್ಚ ನೋಡಿಕೊಂಡರು. ಶ್ರೀ ಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ರಚಿಸಿ ಜನ ಒಂದುಗೂಡುವಂತೆ ಮಾಡಿದರು.
ಕ್ರಾಂತಿಗೆ ಕಿಡಿ
ಇವರನ್ನೆಲ್ಲ ಮಟ್ಟ ಹಾಕಲು ರಾಜ ಕೊಲ್ಲಾಪುರದಲ್ಲಿದ್ದ ಬ್ರಿಟಿಷ್ ಪೊಲಿಟಿಕಲ್ ಏಜೆಂಟನನ್ನು ಕಂಡು ಹೆಚ್ಚಿನ ಪೊಲೀಸ್ ಬಲ ಕೊಡಲು ಕೇಳಿದ. ಇದಕ್ಕೊಪ್ಪದ ಆತ ಸ್ವತಃ ಚಳವಳಿಗಾರರ ಜತೆಗೆ ಸಂವಾದ ಮಾಡಿದ. ಪರಿಸ್ಥಿತಿಯ ಗಂಭೀರತೆ ಅರಿತು ರಾಜನಿಗೆ ಬುದ್ಧಿ ಹೇಳಿ ಹೋದ. ಆದರೂ ರಾಜ ಸುಧಾರಿಸಿಕೊಳ್ಳಲಿಲ್ಲ. ಮಿತ್ಯಾರೋಪದಲ್ಲಿ ಬಂಧನ ಶುರು ಮಾಡಿದ. ಇದು ಕ್ರಾಂತಿಗೆ ಕಿಡಿ ಹೊತ್ತಿಸಿತು.
ಮಹಾದೇವಪ್ಪ ಪಟ್ಟಣ ಮತ್ತು ನ್ಯಾಯವಾದಿ ಬಿ.ಎನ್. ಮುನವಳ್ಳಿಯವರನ್ನು ಕೊಲ್ಲುವ ಹೊಂಚು ಹಾಕಿದ್ದ ರಾಜ 1939 ಏಪ್ರಿಲ್ 5 ರಂದು ತೇರ ಬಜಾರದಲ್ಲಿದ್ದ ಕಾಂಗ್ರೆಸ್ ಧ್ವಜ ಕಂಬವನ್ನು ತೆರವುಗೊಳಿಸಿದ. ಇದರಿಂದ ಘರ್ಷಣೆ ಆರಂಭಗೊಂಡಿತು. ಲಾಠಿ ಚಾರ್ಜ್, ಹುಸಿಗುಂಡು, ಕಲ್ಲು ತೂರಾಟವಾಯಿತು. ಮಹಾದೇವಪ್ಪ ಪಟ್ಟಣರೆಂದೇ ಭ್ರಮಿಸಿ ಪೊಲೀಸರು ತಮ್ಮದೇ ಸಿಬ್ಬಂದಿಯೊಬ್ಬನನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ಜನರಲ್ಲೂ ಪಟ್ಟಣರೇ ಗಾಯಗೊಂಡರೆಂದು ಸುದ್ದಿಯಾಯಿತು. ಪರಿಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಅಲ್ಲಿಂದ ಜಾಗ ಖಾಲಿ ಮಾಡಿದ ಮಹಾದೇವಪ್ಪನವರು ಮನೆಗೆ ಹೋಗಿ ತಂದೆ-ತಾಯಿಗಳಿಗೆ ವಿಷಯ ತಿಳಿಸಿ ಮನೆಯಲ್ಲಿದ್ದ 800 ತೊಲೆ ಬಂಗಾರವನ್ನು ಮನೆಯ ನಾಲ್ಕು ಗೋಡೆಯಲ್ಲಿ ಹುಗಿದು ಸಾರಿಸಿ ನೋಟುಗಳನ್ನು ಕಿಸೆಯಲ್ಲಿಟ್ಟುಕೊಂಡು ಮಧ್ಯರಾತ್ರಿ ಮನೆ ಬಿಟ್ಟರು. ಅಲ್ಲಿಂದ ಶಿವಯೋಗೆಪ್ಪ ಕೊಣ್ಣೂರ ಮನೆ ಸೇರಿದರು. ಹೊರಗಡೆ ಪೊಲೀಸ್ ಸರ್ಪ ಕಾವಲು ಇತ್ತು. ಹೇಗೋ ಅವಕಾಶ ಸಾಧಿಸಿ ಪಾರಾದರು.
ರಕ್ತದೋಕುಳಿ
ಸಂಸ್ಥಾನದ ವಿರುದ್ಧ ಜನ ರೊಚ್ಚಿಗೆದ್ದಿದ್ದರು. 1939 ಏಪ್ರಿಲ್ 6 ರಂದು ಮುಖಕ್ಕೆ ಗುಲಾಲು ಬಡಿದುಕೊಂಡು ಬಡಿಗೆ, ಕೊಡ್ಲಿ, ಕುಡಗೋಲು ಹಿಡಿದುಕೊಂಡು ರಾಮದುರ್ಗದ ಕಡೆಗೆ ಬಂದರು. ಕೆಲವರು ಹೆಂಡತಿಯ ತಾಳಿ ಕಿತ್ತಿಕೊಂಡು ಲಾಠಿಗೆ ಕಟ್ಟಿದ್ದರು. ಬದುಕಿ ಬಂದರೆ ಮರಳಿ ಕಟ್ಟುವುದಾಗಿ ಹೇಳಿದ್ದರು. ತ್ವೇಷಮಯ ಸ್ಥಿತಿ ಮುಂದುವರಿದಿತ್ತು. ಪೊಲೀಸರೇ ಲೂಟಿ ಮಾಡಿದರು. ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಮನೆ ಹೊಕ್ಕು ಬಡಿದರು. ಮನಬಂದಂತೆ ಬಂಧಿಸಿದರು. ಇದರಿಂದಾಗಿ ಜನ ಏಪ್ರಿಲ್ 7 ರಂದು ರಾಮದುರ್ಗದ ಜೈಲಿನ ಮುಂದೆ ನೆರೆದರು.
ನ್ಯಾಯವಾದಿ ಬಿ.ಎನ್. ಮುನವಳ್ಳಿ ಮತ್ತು ಇತರೆ ಮುಖಂಡರನ್ನು ತೋರಿಸುವಂತೆ ಪಟ್ಟು ಹಿಡಿದರು. ಜೈಲರ್ ನಿರಾಕರಿಸಿದ. ಜನ ಘೋಷಣೆ ಕೂಗಿದರು. ಪೊಲೀಸರು ಜನರತ್ತ 80 ಗುಂಡು ಹಾರಿಸಿದರು. ರೊಚ್ಚಿಗೆದ್ದವರು ಮುತ್ತಿಗೆ ಹಾಕಿ ಜೈಲಿನ ಗೇಟು ಸುಟ್ಟು, ದಾಖಲೆ ಧ್ವಂಸ ಮಾಡಿದರು. ಕೀಲಿ ಒಡೆದರು. ಮಣಿದ ಪೊಲೀಸರು ನಾಯಕರ ಪ್ರದರ್ಶನ ಮಾಡಿದರು. ಜನ ಅವರನ್ನು ಕರೆದುಕೊಂಡು ಶಾಂತವಾಗಿ ಹೊರಟರು. ಆದರೆ ಹಿಂದಿನಿಂದ ಬಂದ ಪೊಲೀಸರು ಗೋಲಿ ಬಾರ್ ಮಾಡಿದರು. ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ನೂರಾರು ಜನ ಗಾಯಗೊಂಡರು. ಮರು ದಾಳಿ ನಡೆಯಿತು. ಈ ಗೊಂದಲದಲ್ಲಿ ತಪ್ಪಿಸಿಕೊಂಡ ಕೈದಿಯೊಬ್ಬ 8 ಜನ ಪೊಲೀಸರ ರುಂಡ ಕಡಿದು ಸಾಲಾಗಿ ಇಟ್ಟು ಓಡಿ ಹೋದ. ಹಿಂಸೆ ತಾರಕಕ್ಕೇರಿ ದುರಂತವೆಂದು ಕರೆಯಿಸಿಕೊಂಡಿತು.
ಇದೆಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದ ಊರು ಬಿಟ್ಟಿದ್ದ ಮಹಾದೇವಪ್ಪನವರು ತೀವ್ರ ಕಳವಳಗೊಂಡಿದ್ದರು. ಪೊಲೀಸ್ ಗುಪ್ತಚರರು ಅವರ ಬೆನ್ನುಬಿದ್ದಿದ್ದರು. ಇದರಿಂದಾಗಿ ನೆಲೆ ಬದಲಿಸುತ್ತ ಹೋದರು. ರಾಜ ಕಂಡಲ್ಲಿ ಗುಂಡಿಕ್ಕುವುದರ ಜತೆಗೆ ಹಿಡಿದುಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ಕೊಡುವುದಾಗಿ ಆದೇಶ ಹೊರಡಿಸಿದ. ಇದು ಮಹಾದೇವಪ್ಪನವರನ್ನು ಭೂಗತವಾಗುವಂತೆ ಮಾಡಿತು.
ವಿಚಾರಣೆ ಮತ್ತು ಶಿಕ್ಷೆ
ರಾಮದುರ್ಗ ದುರಂತದ ತನಿಖೆಗೆ ಜೆ.ಡಿ. ದಾವರ ಎಂಬ ಅಧಿಕಾರಿ ನೇಮಕವಾದ. ಬಂಧನಕ್ಕೊಳಗಾಗಿದ್ದ 82 ಜನರಲ್ಲಿ 28 ಜನ ಬಿಡುಗಡೆಗೊಂಡರು. 8 ಜನರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ, 11 ಜನರಿಗೆ 2 ವರ್ಷ, 8 ಜನರಿಗೆ 6 ತಿಂಗಳು ಶಿಕ್ಷೆ ವಿಧಿಸಲಾಯಿತು. 1940 ಜನವರಿ 5 ರಂದು ಇವರನ್ನೆಲ್ಲ ಬೆಳಗಾವಿ ಹಿಂಡಲಗಾ ಜೈಲಿಗೆ ತರಲಾಯಿತು.
ಸ್ಫೂರ್ತಿಯ ಮಾತು
ಶಿಕ್ಷೆಗೊಳಗಾಗಿದ್ದ ಎಲಿಗಾರ ಬಸಪ್ಪ ನೇಣಿಗೇರುವ ಮುನ್ನ ಕೊನೆಯ ಆಸೆ ಕೇಳಿದಾಗ, ‘ಮಹಾದೇವಪ್ಪ ಹೋರಾಟ ಮುಂದುವರಿಸುತ್ತಾನೆ. ಗುರಿ ಸಾಧಿಸಿ ನಮ್ಮೆಲ್ಲರ ಸಾವಿನ ಸೇಡು ತೀರಿಸಿಕೊಳ್ಳುತ್ತಾನೆ’ ಎಂದು ರಣೋತ್ಸಾಹ ಹೊರಗೆಡವಿದ್ದ. ಅದು ಜನರ ಹೋರಾಟವನ್ನು ಜೀವಂತವಾಗಿ ಇಟ್ಟಿತ್ತು. ಮಹಾತ್ಮಾ ಗಾಂಧೀಜಿ ಈ ಗಲ್ಲು ಶಿಕ್ಷೆ ರದ್ದುಪಡಿಸಲು ಕೇಳಿದ್ದರು. ರಾಜ ಮನ್ನಿಸಲಿಲ್ಲ.
ಆಸ್ತಿ ಜಫ್ತ್ತ್
ಭೂಗತರಾದ ಮಹಾದೇವಪ್ಪ ಹುಬ್ಬಳ್ಳಿ, ಅದರಗುಂಚಿ, ಕುಂದಗೋಳ, ಲಕ್ಷ್ಮೇಶ್ವರ, ಶಿರಹಟ್ಟಿ, ಗದಗ, ಮೊಗಲಾಯಿ ಹದ್ದಿನ ಕರ‌್ಮಡಿ, ಬಳ್ಳಾರಿ ಒಳಗೊಂಡು ಇತರೆ ಕಡೆಗೆ ಸುತ್ತಿದರು. 1939 ಜೂನ್ 7 ನೇ ತಾರೀಖಿನ ಒಳಗೆ ಮಹಾದೇವಪ್ಪ ಹಾಜರಾಗಬೇಕೆಂದು ರಾಜ ಆಜ್ಞೆ ಹೊರಡಿಸಿದ. ಮಹಾದೇವಪ್ಪ ಇದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಇದರಿಂದಾಗಿ ಅವರ ಪಾಲಿಗಿದ್ದ 400 ಎಕರೆ ಜಮೀನು ಮತ್ತು ಇತರೆ ಆಸ್ತಿ ವಶಪಡಿಸಿಕೊಂಡರು. ಪಟ್ಟಣರನ್ನು ಗಲ್ಲಿಗೇರಿಸುವ ಇರಾದೆ ರಾಜನದಾಗಿತ್ತು.
ವೇಷ ಬದಲು
ದ್ವೇಷದಿಂದ ಕೆಲ ಬಂಧು-ಮಿತ್ರರೇ ಇವರನ್ನು ಹಿಡಿದುಕೊಡಲು ಯತ್ನಿಸಿದ್ದರು. ಅದು ಸಫಲವಾಗಲಿಲ್ಲ. ವೇಷ ಬದಲಿಸಿಕೊಂಡ ಮಹಾದೇವಪ್ಪ ಬಳ್ಳಾರಿ, ಆದವಾನಿ, ಕಾರ್ಕಳ ಮುಂತಾದೆಡೆ ತಿರುಗಿದರು. 1941 ರಲ್ಲಿ ಪರಿಚಯದವರೊಬ್ಬರು ಮಂಗಳೂರಿನ ಕಯ್ಯಾರ ಕಿಞ್ಞಣ್ಣ ರೈ ಬಳಿಗೆ ಕಳುಹಿಸಿದರು. ‘ಸ್ವದೇಶಾಭಿಮಾನ’ ಪತ್ರಿಕೆಯಲ್ಲಿ ಪ್ರೂಫ್‌ರೀಡರ್ ಆಗಿ ಕೆಲಸ ಮಾಡಿದರು. ‘ಪುತ್ಲಿ ದಿಲ್‌ಪಸಂದ್’ ಬೀಡಿ ಏಜೆನ್ಸಿ ಪಡೆದರು. ಚಲೇಜಾವ್ ಚಳವಳಿಯಲ್ಲಿ ಸಕ್ರಿಯರಾದರು. ಮರಳಿ ಬಳ್ಳಾರಿಗೆ ಬಂದು ‘ಯಜಮಾನ್ ಆ್ಯಂಡ್ ಬ್ರದರ್ಸ್’ ಪುಸ್ತಕ ಅಂಗಡಿ ಸೇರಿದರು. ಪೊಲೀಸರು ಬಂದಿದ್ದರಿಂದ ಆಂಧ್ರದ ರಾಯದುರ್ಗಕ್ಕೆ ಹೋದರು. ಅಲ್ಲಿ ನೇಯ್ಗೆ ಕಲಿತರು. ಮತ್ತೆ ಬಳ್ಳಾರಿಗೆ ಬಂದು ಬಟ್ಟೆ ಅಂಗಡಿ ತೆರೆದರು.
ಅಜ್ಞಾತ ವಾಸ ಅಂತ್ಯ
ಎರಡನೇ ಮಹಾಯುದ್ದ ಮುಗಿದಿದ್ದರಿಂದ ಬ್ರಿಟಿಷ್ ಸರಕಾರ 1946 ರಲ್ಲಿ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿತು. ಸ್ವಾತಂತ್ರ್ಯ ಸಿಗುವುದು ನಿಶ್ಚಿತವಾಗಿತ್ತು. ದೇಶದಲ್ಲಿ ನಡುಗಾಲ ಸರಕಾರ ರಚನೆಯಾಯಿತು. ಆದರೆ ಸಂಸ್ಥಾನದ ಪರಿಸ್ಥಿತಿ ಬದಲಾಗಿರಲಿಲ್ಲ. ಇದರಿಂದ ಕಾಂಗ್ರೆಸ್ ನಾಯಕರು ಸಿಟ್ಟಿಗೆದ್ದು ರಾಮದುರ್ಗ ರಾಜನಿಗೆ ಎಚ್ಚರಿಕೆ ಕಳುಹಿಸಿದರು. ರಾಜ 1946 ಆಗಸ್ಟ್ 6 ರಂದು ಪಟ್ಟಣ ಅವರೂ ಸೇರಿದಂತೆ ಇತರರ ಮೇಲಿದ್ದ ವಾರಂಟ್ ರದ್ದುಪಡಿಸಿದ. ಜನ ತಮ್ಮ ನಾಯಕರನ್ನು ಆದರದಿಂದ ಸ್ವಾಗತಿಸಿದರು.
ವಿವಿಧ ಹೆಸರಿನಲ್ಲಿದ್ದ ಪಟ್ಟಣರ ನಿಜ ಹೆಸರು ಗೊತ್ತಾಗಿ ಆಯಾ ಪ್ರದೇಶದ ಜನ ಚಕಿತರಾದರು. ಮಾನ-ಸನ್ಮಾನ ನೀಡಿದರು. ಮಹಾದೇವಪ್ಪನವರು ಬರುವುದನ್ನು ತಿಳಿದು, ಸಂಸ್ಥಾನದ ಮೊದಲ ಹಳ್ಳಿ ಹಲಗತ್ತಿಯವರು ಸಂಭ್ರಮಪಟ್ಟರು. ಊರನ್ನು ತಳಿರುತೋರಣಗಳಿಂದ ಸಿಂಗರಿಸಿದರು. ಪಟ್ಟಣರು ಬರುತ್ತಲೇ ಸುತ್ತಲಿನ ಹಳ್ಳಿಗಳ ಸಾವಿರಾರು ಜನ ನೆರೆದರು. ಹೆಣ್ಣು ಮಕ್ಕಳು ಆರತಿ ಎತ್ತಿದರು. ಅಲಂಕೃತ ವಾಹನದಲ್ಲಿ ಅವರನ್ನು ರಾಮದುರ್ಗಕ್ಕೆ ಕರೆ ತರಲಾಯಿತು. ಇಲ್ಲಿಯೂ ಭಾವೋದ್ವೇಗದ ಸ್ವಾಗತ ಸಿಕ್ಕಿತು. ರಾಮದುರ್ಗದ ಹುಲಿ ಎಂದು ಕರೆಯಲಾಯಿತು.
ವಿಮೋಚನೆ ಚಳವಳಿ
ಪಟ್ಟಣರು ಊರಿಗೆ ಬರುತ್ತಲೇ ಮತ್ತೆ ಜನರನ್ನು ಒಟ್ಟುಗೂಡಿಸಿದರು. ದೇಶಕ್ಕೆ ಸ್ವಾತಂತ್ರ್ಯವೇನೋ ಸಿಕ್ಕುತ್ತದೆ. ಆದರೆ ಈ ಸಂಸ್ಥಾನ ಹಾಗೆಯೇ ಉಳಿಯುತ್ತದೆ. ಇದು ತೊಲಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲವೆಂದು ಘೋಷಿಸಿದರು. ಜನ ಇದಕ್ಕೆ ಅಭೂತಪೂರ್ವ ಸ್ಪಂದನೆ ನೀಡಿದರು.
ಒಂದು ಕಡೆಗೆ ಚಳವಳಿ ನಡೆಯುತ್ತಿದ್ದರೆ ಮತ್ತೊಂದು ಕಡೆಗೆ ರಾಮದುರ್ಗದ ರಾಜ ರಾಮರಾವ್ ಭಾವೆ ಸಾಂಗಲಿ, ಮೀರಜ್, ಔಂಧ, ಬುಧಗಾಂವ್ ಒಳಗೊಂಡ ಇತರೆ ಚಿಕ್ಕಪುಟ್ಟ ಸಂಸ್ಥಾನಗಳ ಒಕ್ಕೂಟ ರಚಿಸಿ ಔಂಧ ರಾಜನನ್ನು ಮುಖ್ಯಸ್ಥನನ್ನಾಗಿ ಮಾಡಿಕೊಂಡು ಅಧಿಕಾರ ಅನುಭವಿಸುವ ಹೊಂಚಿನಲ್ಲಿದ್ದ. ಆದರೆ ಪಟ್ಟಣರು ಜನಬೆಂಬಲದೊಂದಿಗೆ ಇದನ್ನು ವಿಫಲಗೊಳಿಸಿದರು. ಸರದಾರ ವಲ್ಲಭಭಾಯಿ ಪಟೇಲರ ಉತ್ತೇಜನ ಇದಕ್ಕಿತ್ತು.
ಕೊನೆಗೆ ರಾಜ ಕೊಲ್ಲಾಪುರಕ್ಕೆ ಹೋಗಿ ತನ್ನ ಸಂಸ್ಥಾನವನ್ನು ಭಾರತ ಒಕ್ಕೂಟ ಸರಕಾರದೊಂದಿಗೆ ವಿಲೀನಗೊಳಿಸುವ ಪತ್ರಕ್ಕೆ ಸಹಿ ಹಾಕಿದ. ಇಲ್ಲಿಗೆ ಜನತೆ ಆಸೆ ಫಲಿಸಿ, ಹೋರಾಟ ಅಂತ್ಯಕಂಡಿತು.
ಮದುವೆ:
ತಮ್ಮ 18 ನೇ ವಯಸ್ಸಿಗೇನೇ ಮುಳಗುಂದದ ಪರವ್ವನ ಜತೆಗೆ ಮದುವೆಯಾಗಿದ್ದ ಪಟ್ಟಣರು 1936 ರಷ್ಟೊತ್ತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಪಡೆದಿದ್ದರು. ಪತ್ನಿ ಕ್ಷಯರೋಗದಿಂದ ಮೃತಪಟ್ಟಳು. ಮಕ್ಕಳು ಆಕೆಯ ತವರಿನಲ್ಲೇ ಇದ್ದರು. 1939 ರಲ್ಲಿ ರಾಮದುರ್ಗ ಕ್ರಾಂತಿಯಾಯಿತು. ಸ್ವಾತಂತ್ರ್ಯ ನಂತರ ತಂದೆ-ತಾಯಿಗಳ ಒತ್ತಾಯದ ಮೇರೆಗೆ ಶಾರದಮ್ಮರನ್ನು ಮದುವೆಯಾದರು.
ಏಕೀಕರಣ:
ಪಟ್ಟಣರು ಸ್ವಾತಂತ್ರ್ಯ ನಂತರ ಸುಮ್ಮನೇ ಕೂಡ್ರಲಿಲ್ಲ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಧುಮುಕಿದರು. ಬಳ್ಳಾರಿ-ಹೊಸಪೇಟೆ ಕರ್ನಾಟಕದಲ್ಲೇ ಇರಬೇಕೆಂದು ಆ ಭಾಗದಲ್ಲಿ ತೀವ್ರ ಹೋರಾಟಕ್ಕೆ ನಿಂತರು. ಪೈಲ್ವಾನ್ ರಂಜಾನ್‌ಸಾಬ್ ಎಂಬಾತ ತೆಲುಗು ದುಷ್ಕರ್ಮಿಗಳ ಆಸಿಡ್ ದಾಳಿಗೆ ಬಲಿಯಾದ. ಇದು ಕೇಂದ್ರಕ್ಕೆ ಬಿಸಿ ಮುಟ್ಟಿಸಿತು. ಅದು ಕೂಡಲೇ ಬಳ್ಳಾರಿ ಮತ್ತು ಹೊಸಪೇಟೆ ಕರ್ನಾಟಕಕ್ಕೆ ಸೇರಿವೆ ಎಂದು ಘೋಷಣೆ ಹೊರಡಿಸಿತು. ಪಟ್ಟಣರು ಇಲ್ಲಿ ಮುಂಚೂಣಿಯಲ್ಲಿದ್ದರು.
ಶಾಸಕತ್ವ:
ಪಟ್ಟಣರು 1957 ರ ಚುನಾವಣೆಯಲ್ಲಿ ‘ಲೋಕಸೇವಾ ಸಂಘ’ದಿಂದ ರಾಮದುರ್ಗ ಕ್ಷೇತ್ರದಿಂದ ಆಯ್ಕೆಯಾದರು. 1967 ರಲ್ಲಿ ಇವರ ಪತ್ನಿ ಶಾರದಮ್ಮ ಕಾಂಗ್ರೆಸ್‌ನಿಂದ ಇದೇ ಕ್ಷೇತ್ರಕ್ಕೆ ಚುನಾಯಿತರಾದರು. ಇಬ್ಬರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರು. ಪಟ್ಟಣರು ಕೊಡುಗೈ ದಾನಿ. ಇದ್ದದ್ದನ್ನು ಕಳೆದುಕೊಂಡರು. ಗಳಿಸಿದ್ದನ್ನು ಹಂಚಿ ತಿಂದರು. ದೊಡ್ಡ ಮನೆತನದ ಹಿನ್ನೆಲೆ ಮತ್ತು ಒಂದು ಅವಧಿಗೆ ಎಂಎಲ್‌ಎ ಆದರೂ ನಂತರ ಉಪಜೀವನಕ್ಕೆ ಬೆಂಗಳೂರು ಬೀದಿಯಲ್ಲಿ ಸೈಕಲ್ ಮೇಲೆ ಸೀರೆ ಮಾರಿದರು.
ಮಹದೇವಪ್ಪ ಅವರ ಪುತ್ರ ರಾಮದುರ್ಗದ ಮಾಜಿ ಎಂಎಲ್‌ಎ ಅಶೋಕ ಪಟ್ಟಣ ಸೀರೆ ಮಾರಾಟಕ್ಕೆ ಇವರ ಅಸಿಸ್ಟೆಂಟ್ ಆಗಿದ್ದರು. ಮಹಾದೇವಪ್ಪನವರು ಮಕ್ಕಳ ಶಾಲಾ ಫೀ ಕಟ್ಟಲು ಒದ್ದಾಡಿದ್ದಾರೆ. ಪ್ರಭಾವವನ್ನು ಯಾವತ್ತೂ ಬಳಸಿಕೊಳ್ಳಲಿಲ್ಲ. ಪಿಂಚಣಿ ಪಡೆಯಲೂ ನಿರಾಕರಿಸಿದ್ದರು. ಕಳೆದುಕೊಂಡಿರುವ ಆಸ್ತಿಗೆ ಪರಿಹಾರ ಕೊಡಿಸುವುದಾಗಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಹೇಳಿದರೂ ದಾಖಲೆಗೆ ಸಹಿ ಹಾಕಲಿಲ್ಲ. ಈಗಿನ ರಾಜಕೀಯದ ಬಗ್ಗೆ ಅವರಲ್ಲಿ ಜುಗುಪ್ಸೆ ಇದೆ. ಶಾಸಕ ಅಶೋಕ ಪಟ್ಟಣರ ಹಿಂದೆ ಪತ್ನಿ ಶಾರದಮ್ಮನನ್ನು ಗೂಡಚಾರಿಕೆಗೆ ಹಚ್ಚಿರುತ್ತಾರೆ. ಯಡವಟ್ಟಾಗಿದ್ದರೆ ಕಿವಿ ಹಿಂಡುತ್ತಾರೆ. ಈಗಲೂ ಗಟ್ಟಿಮುಟ್ಟಾಗಿರುವ ಈ ಅಜ್ಜ ಮೌಲ್ಯಗಳನ್ನು ಜೋಪಾನವಾಗಿ ಕಾಯ್ದುಕೊಂಡಿದ್ದಾರೆ.
ಜನರ ಪ್ರೀತಿ:
ಶಾಸಕರಾಗಿದ್ದಾಗ ಪತಿ-ಪತ್ನಿಯರಿಬ್ಬರೂ ಕಾಲುನಡಿಗೆ, ಚಕ್ಕಡಿ, ಟ್ಯಾಕ್ಸಿಗಳಲ್ಲಿ ಅಡ್ಡಾಡುವುದನ್ನು ನೋಡಲಾಗದೆ ಕ್ಷೇತ್ರದ ಸುರೇಬಾನದ ಜನತೆ ಪ್ರೀತಿಯಿಂದ ಇವರಿಗೊಂಡು ಅಂಬಾಸಿಡರ್ ಕಾರು ಕೊಡಿಸಿದ್ದರು. ಅದು ಈಗಲೂ ಇದೆ. ಒಮ್ಮೆ ಮಳೆಗಾಲದಲ್ಲಿ ದಂಪತಿ ಚಕ್ಕಡಿಯಲ್ಲಿ ಹೋಗುತ್ತಿದ್ದಾಗ ಬ್ರಿಜ್ ಯಡವಟ್ಟಿನಿಂದಾಗಿ ಮಲಪ್ರಭಾ ನದಿಪಾಲಾಗಲಿದ್ದರು. ದೇವರ ದಯೆ ಅನಾಹುತದಿಂದ ತಪ್ಪಿಸಿಕೊಂಡಿದ್ದರು.
ಜನಪರ ಕಾಳಜಿ ಹೋರಾಟ ದಿಟ್ಟ ನಿಲುವಿನ ಸ್ವಾತಂತ್ರ ಸೇನಾನಿ ಡಾ ಮಹದೇವಪ್ಪ ಶಿವಬಸಪ್ಪ ಪಟ್ಟಣ ಅವರು ಮಾರ್ಚ್ 23 ಹುತಾತ್ಮ ದಿನದಂದು ( ಭಗತ್ ಸಿಂಗ್ ಸುಖದೇವ ಹಾಗು ರಾಜಗುರು ಅವರನ್ನು ಗಲ್ಲಿಗೇರಿಸಿದ ದಿನ ) ಬಯಲಿನಲ್ಲಿ ಮಹಾಬಯಲಾದರೂ. ಮನೆತನಕ್ಕೆ ಊರಿಗೆ ನಾಡಿಗೆ ದೇಶಕ್ಕೆ ಕೀರ್ತಿ ತಂದು ಕೊಟ್ಟ
ಶ್ರೇಷ್ಠ ಪುಣ್ಯ ಜೀವಿ ಇಂದು ನಮ್ಮೊಂದಿಗೆ ಇಲ್ಲ .
-ಡಾ ಶಶಿಕಾಂತ ಪಟ್ಟಣ ರಾಮದುರ್ಗ