ದೇಹಾತೀತವಾಗಿ ಬೆಳೆಯುವ ಪರಿ…

ಅಕ್ಕನೆಡೆಗೆ ವಚನ – 17

 

ದೇಹಾತೀತವಾಗಿ ಬೆಳೆಯುವ ಪರಿ…

ಅಂಗ ಭಂಗವ ಲಿಂಗಸುಖದಿಂದ ಗೆಲಿದೆ
ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ
ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ
ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ
ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ
ಚೆನ್ನಮಲ್ಲಿಕಾರ್ಜುನ
ಕಾಮನ ಕೊಂದು ಮನಸಿಜನಾಗುಳುಹಿದಡೆ
ಮನಸಿಜನ ತಲೆಯ ಬರಹವ ತೊಡೆದೆನು.

ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬರುತ್ತಿದ್ದಾಳೆಂದು ಅಲ್ಲಿಯ ಶರಣರಿಗೆ ತಿಳಿದಿರುತ್ತದೆ. ಅವಳು ಊರ ಹೆಬ್ಬಾಲಿಗೆ ಬಂದು ನಿಂತಾಗ, ಶರಣ ಕಿನ್ನರಯ್ಯ ಎದುರುಗೊಳ್ಳುತ್ತಾನೆ. ಅಕ್ಕನೊಂದಿಗೆ ಪರೀಕ್ಷೆಯ ಪ್ರಶ್ನೋತ್ತರಗಳು ನಡೆಯುತ್ತವೆ.
ಶೂನ್ಯ ಸಂಪಾದನೆಯಲ್ಲಿರುವಂತೆ ಕಿನ್ನರಿ ಬೊಮ್ಮಯ್ಯನು ಈ ವಚನ ರೂಪದಲ್ಲಿ ಪ್ರಶ್ನಿಸುತ್ತಾನೆ.
‘ಕಾಯದಲ್ಲಿ ಕಳವಳವಿರಲು ಪ್ರಾಣದಲ್ಲಿ ಮಾಯೆಯಿರಲು
ಏತರ ಮನ? ಇದೇತರ ನಿರ್ವಾಣ?
ಮಹಾಲಿಂಗತ್ರಿಪುರಾಂತಕನು ನಿನ್ನ ಸಂಸಾರಿಯೆಂಬನಲ್ಲದೆ
ಸಜ್ಜನೆಯೆಂದು ಕೈವಿಡಿವನಲ್ಲ ಕೇಳಾ ಮರುಳೆ.’

ಅಂದರೆ, ‘ಕೇಳು ಮರುಳೇ, ನೀನು ದೇಹವನ್ನು ಮೀರಿದವಳಲ್ಲ. ಈ ಜೀವ ವ್ಯಾಮೋಹವನ್ನೂ ತೊರೆದಿಲ್ಲ. ನಿನ್ನಲ್ಲಿ ಮಾಯೆ ಇನ್ನೂ ಅಳಿದಿಲ್ಲ. ಆ ಮಹಾಲಿಂಗತ್ರಿಪುರಾಂತಕ ದೇವನು ನಿನ್ನನ್ನು ಸಂಸಾರಿ ಎನ್ನದೆ ಸಜ್ಜನೆ ಎಂದು ಕೈ ಹಿಡಿಯುವುದಿಲ್ಲ.’
ಈ ಸಂದರ್ಭದಲ್ಲಿ ಅಕ್ಕ ಹೇಳಿದ ಉತ್ತರವೇ ಮೇಲಿನ ವಚನ.

ಅಂಗ ಭಂಗವ ಲಿಂಗಸುಖದಿಂದ ಗೆಲಿದೆ

ಅಂಗ, ದೇಹ, ಶರೀರ ಸಮಾನಾರ್ಥಕ ಪದಗಳು. ಈ ಶರೀರಕ್ಕೆ ಸಹಜವಾಗಿಯೇ ಅನೇಕ ದೌರ್ಬಲ್ಯಗಳು ಕಾಡುತ್ತವೆ. ಹಸಿವು, ನೀರಡಿಕೆ, ನಿದ್ರೆ ಇವುಗಳನ್ನೆಲ್ಲಾ ಗೆದ್ದು ಮುಂದೆ ಸಾಗುವುದು ಸುಲಭವಲ್ಲ. ಯಾವುದೇ ಸಾಧನೆ ಮಾಡಬೇಕಾದರೂ ಇವುಗಳನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಬೇಕಾದರೆ, ಲಿಂಗಪೂಜೆ ಸಹಾಯವಾಗುತ್ತದೆ. ಅಕ್ಕನ ಇನ್ನೊಂದು ವಚನದ ಸಾಲು ಲಿಂಗ ಪೂಜೆಯ ಸುಖದ ಅನಾವರಣ ಮಾಡುತ್ತದೆ. ‘ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ’. ಹೀಗೆ ಲಿಂಗ ಪೂಜೆ ಮಾಡುವ ಅಕ್ಕ ಅದರಲ್ಲಿ ಸುಖವನ್ನು ಅನುಭವಿಸುತ್ತಾಳೆ. ದೇಹ ವ್ಯಾಮೋಹದಿಂದ ಮುಕ್ತವಾಗಲು ಇಷ್ಟಲಿಂಗ ಪೂಜಾ ವಿಧಾನವೊಂದು ಪ್ರಾಥಮಿಕ ಹಂತದ ಅಧ್ಯಾತ್ಮ ಮಾರ್ಗವೆಂದು ಗ್ರಹಿಸಬಹುದು.

ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ

ಈ ದೇಹ ವ್ಯಾಮೋಹದಿಂದ ಗೆದ್ದು ಮುಂದೆ ಸಾಗುತ್ತಿದ್ದೇವೆ ಎಂದುಕೊಂಡರೂ, ಮನಸ್ಸಿನ ಗುಣ ಚಂಚಲವಾಗಿಯೆ ಮುಂದುವರಿದಿರುತ್ತದೆ. ಅದನ್ನು ಮಂಗನಿಗೆ ಹೋಲಿಸುತ್ತ, ಚಾಂಚಲ್ಯವೇ ಮನಸಿನ ಮೂಲ ಗುಣವೆನ್ನುವುದನ್ನು ಒಪ್ಪಬೇಕು. ಈ ಸಾಲಿನಲ್ಲಿ ‘ಅರುಹಿನ ಮುಖ’ ಎಂದರೆ ‘ಅರಿಷಡ್ವರ್ಗಗಳು’. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಆರು ಅಂಶಗಳು ಮನುಷ್ಯನ ಮನಸಿಗಂಟಿಕೊಂಡಿವೆ. ಅವುಗಳನ್ನು ಮೆಟ್ಟಿ ನಿಂತಾಗ ಮನವನ್ನು ಗೆಲ್ಲಲು ಸಾಧ್ಯವೆಂದು ಅಕ್ಕನ ಅನುಭಾವದಿಂದ ತಿಳಿದು ಬರುತ್ತದೆ.

ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ

ಇಲ್ಲಿ ‘ಶಿವ’ ಅಂದರೆ ಸಚ್ಚಿದಾನಂದ, ‘ಸತ್ ಚಿತ್ ಆನಂದದ’ ಸ್ವರೂಪ. ದೇಹ ಮತ್ತು ಮನಸನ್ನು ಯಾವಾಗಲೂ ಸಂತೋಷದಿಂದ, ಆನಂದಮಯವಾಗಿ ಇರಿಸಿಕೊಂಡರೆ, ಅದೇ ಏಳ್ಗೆಯ ಪ್ರತೀಕ. ವ್ಯಕ್ತಿಯ ಅಭ್ಯುದಯವಾಗಿ ಶ್ರೇಯಸ್ಸಿನತ್ತ ಕೊಂಡೊಯ್ಯುತ್ತದೆ. ಜೀವ ವ್ಯಾಮೋಹ ಕಳೆಯುವ ಪ್ರಕ್ರಿಯೆ, ಅನುಭವದಿಂದ ಅನುಭಾವ, ನಂತರ ಶಿವಾನುಭಾವಿಯಾಗುವ ಉತ್ತುಂಗ ಸ್ಥಿತಿ.

ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ

ಈ ಸಾಲಿನಲ್ಲಿ ‘ಕರಣ’ ಶಬ್ದವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು. ಇದನ್ನು ತಿಳಿದುಕೊಳ್ಳಲು ಈ ಕೆಳಗಿನ ಮೂರು ಅಂಶಗಳನ್ನು ಗಮನಸಿಬಹುದು:
ಕರಣಗ್ರಾಮ = ಪಂಚೇಂದ್ರಿಯಗಳು
ಕರಣವೇದ್ಯ= ಇಂದ್ರಿಯ ಗೋಚರ
ಕರಣಸಮಾಧಿ= ಇಂದ್ರಿಯ ನಿಗ್ರಹ
ಮನುಷ್ಯನ ದೇಹದ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಈ ಐದು ಜ್ಞಾನೇಂದ್ರಿಯವು ಹೌದು. ಮಾನವನಿಗೆ ಪಂಚೇಂದ್ರಿಯಗಳು ವೇದ್ಯವಾಗಿ, ಅವುಗಳ ಉಪಟಳವನ್ನು ನಿಗ್ರಹಿಸುವುದು ಅಷ್ಟು ಸುಲಭವಲ್ಲ. ಅವುಗಳಿಂದ ಆಗುವ ಹಾನಿಯೇ ಬದುಕಿನ ಕತ್ತಲೆ ಎಂದರ್ಥ. ಆ ಕತ್ತಲೆಗೆ ಜ್ಞಾನವೆಂಬ ಬೆಳಕಿನ ಉಡಿಗೆ ತೊಡಿಸಿದೆನೆಂದು ಹೇಳುತ್ತ ದೇಹವನ್ನು ಗೆದ್ದ ರೀತಿಯಾಗಿ ಅಕ್ಕ ವಿವರಿಸುತ್ತಾಳೆ.

ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ಚೆನ್ನಮಲ್ಲಿಕಾರ್ಜುನ

ಇಲ್ಲಿ ‘ಕಾಮ’ ಪದ ಬಹಳ ಮಹತ್ವದ್ದು. ನಮ್ಮ ವ್ಯವಸ್ಥೆಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎನ್ನುವ ಚತುರ್ವಿದ ಪುರುಷಾರ್ಥಗಳಿವೆ. ಮೊದಲ ಮೂರನ್ನು ಗೆದ್ದವರಿಗೆ ಮೋಕ್ಷವೆನ್ನುವ ನಂಬಿಕೆ. ಮಾನವರಿಗೆ ಧರ್ಮ, ಅರ್ಥವನ್ನು ಗೆದ್ದರೂ ಕಾಮ ಬಲು ಕಷ್ಟಸಾಧ್ಯ. ಅಕ್ಕ ತನ್ನನ್ನು ನೋಡುವವರ ಕಣ್ಣಲ್ಲಿ ಮೂಡುವ ಬಯಕೆ, ಅಪೇಕ್ಷೆ, ವಿಷಯಾಭಿಲಾಷೆಗಳನ್ನು ತನ್ನೊಳಗೆ ಇಳಿಯದಂತೆ ಮಾಡಿಕೊಂಡ ಅಧ್ಯಾತ್ಮ ಜೀವಿ. ಇದಕ್ಕೆ ಲಿಂಗಪೂಜೆ ಮತ್ತು ವಿಭೂತಿಯು ಸಹಕಾರಿ ಎನ್ನುವ ಮಾತನ್ನು ಪ್ರಖರವಾಗಿ ಅಭಿವ್ಯಕ್ತಿಸಿದ್ದಾಳೆ.

ಕಾಮನ ಕೊಂದು ಮನಸಿಜನಾಗುಳುಹಿದಡೆ
ಮನಸಿಜನ ತಲೆಯ ಬರಹವ ತೊಡೆದೆನು

ಈ ರೀತಿಯಾಗಿ ದೇಹದಾಚೆಗಿನ ಆಲೋಚನೆಗಳನ್ನು ಮೈಗೂಡಿಸಿಕೊಂಡು ಆಧ್ಯಾತ್ಮ ಜಗತ್ತಿನತ್ತ ಸಾಗುವಾಗ, ಮತ್ತೆ ಕಾಮ ಉಳಿದುಕೊಂಡಿದ್ದರೆ, ಅದರ ಹಣೆಬರಹವನ್ನೇ ಅಳಿಸಿ ಬಿಡುತ್ತೇನೆ ಎಂದು ಅಕ್ಕ ಕಿನ್ನರಯ್ಯನಿಗೆ ಉತ್ತರವಾಗಿ ಹೇಳುತ್ತಾಳೆ. ಅಕ್ಕ ಹುಟ್ಟು ಅಧ್ಯಾತ್ಮ ಜೀವಿ. ಆ ಜೀವನ ಕ್ರಮ ಅವಳಿಗೆ ರಕ್ತಗತವಾಗಿರುತ್ತದೆ.

ಅಂದು ಅಕ್ಕ ಹೇಳಿದ ಈ ವಚನ ಇಂದು ನಮಗೆ ಹೇಗೆ ಸಹಕಾರಿ ಎಂದು ಆಲೋಚಿಸುವುದು ಸಮಕಾಲೀನ ಪ್ರಜ್ಞೆ. ಇಂದು ಆಧುನಿಕ ಜಗತ್ತಿನಲ್ಲಿ ಜೀವನ ಮತ್ತು ಸಾಧನೆ, ಎರಡೂ ಬಹಳ ವೇಗವಾಗಿ ಸಾಗಿದೆ. ಇತ್ತೀಚೆಗಷ್ಟೆ ಅಲ್ಲ ಯಾವತ್ತು ಗಂಡು ಮತ್ತು ಹೆಣ್ಣಿನ ಸಂಬಂಧ ಸಂಯಮ, ಸಹನೆ, ಸ್ನೇಹದ ಪರಿಧಿಯಲ್ಲಿ ಇರಬೇಕಾದುದು ಅವಶ್ಯಕ. ಆದರೆ, ಆಧುನಿಕ ತಂತ್ರಜ್ಞಾನದ ಶಿಶುಗಳು ದೈತ್ಯವಾಗಿ ಬೆಳೆದು ನಿಂತಿವೆ. ವಾಟ್ಸ್ಆಪ್, ಫೇಸ್‌ಬುಕ್‌, ಇಂಸ್ಟಾಗ್ರಾಮ್, ಟ್ವೀಟರ್, ಮುಂತಾದವುಗಳಿಂದಾಗಿ ಯುವ ಜನತೆಯು ಹತ್ತು ವರ್ಷದ ಬದುಕನ್ನು ಹತ್ತು ದಿನಗಳಲ್ಲಿ ಕಳೆಯುತ್ತಿದ್ದಾರೆ. ಮೊದಲ ನೋಟ, ಆಕರ್ಷಣೆ, ಸ್ನೇಹ, ಸಂಬಂಧ, ಮಿಲನ, ಗೊಂದಲ, ತಕರಾರು, ವಿದಾಯ, ಹೀಗೆ ಜೀವನದ ಎಲ್ಲಾ ಹಂತಗಳು ವೇಗವಾಗಿ ಆರಂಭ-ಅಂತ್ಯ ಕಾಣುತ್ತವೆ.

ಇಂದಿನ ಫಾಸ್ಟ್ ಫುಡ್ ಯುಗವು ಅಷ್ಟೇ ವೇಗವಾಗಿರುವುದು ದುರಂತ. ಸಂಬಂಧಗಳು ಕಣ್ಣುಮುಚ್ಚಿ ತೆರೆಯುವುದರಲ್ಲಿ ಕಳಚಿಕೊಳ್ಳುತ್ತಿವೆ. ಮನುಷ್ಯ ಸಾಧನೆಯತ್ತ ಸಾಗಬೇಕಾದವನು ಖಿನ್ನತೆಗೆ ಒಳಗಾಗುತ್ತಿದ್ದಾನೆ. ಅನೇಕ ನಟರು, ಆಟಗಾರರು, ಸಾಮಾನ್ಯ ಜನರು ಖನ್ನತೆಗೆ ಗುರಿಯಾಗಿ ಆತ್ಮ ಹತ್ಯೆ ಮಾಡಿಕೊಂಡ ಉದಾಹರಣೆಗಳು ಬಹಳ ಆಗಿಹೋಗಿವೆ.

ಅಕ್ಕಮಹಾದೇವಿಯಲ್ಲಿರುವ ದೇಹಾತೀತ ಭಾವ, ಅಧ್ಯಾತ್ಮದ ಗಟ್ಟಿತನ, ಸಾಧನೆಯ ಛಲ, ಸಾತ್ವಿಕ ಹಟವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗದೆ ಇರಬಹುದು. ಆದರೆ ಒಂದು ಹಂತದವರೆಗೆ ಪಾಲಿಸುವ ಮನಸ್ಥಿತಿಯನ್ನು ಇಟ್ಟುಕೊಳ್ಳಬಹುದು. ಶರಣರು ಹೇಳಿದಂತೆ ಲೌಕಿಕದಲ್ಲಿ ಇದ್ದುಕೊಂಡು ಅಲೌಕಿಕ ಭಾವವನ್ನು ಒಂದಿಷ್ಟೇ ಇಷ್ಟು ಹೊಂದಿದರೂ ಸಾಕು. ಆಗ ಎಲ್ಲವೂ ಸರಳವಾಗಿ ಬದುಕೊಂದು ವರವಾಗಿ ಪರಿಣಮಿಸಬಹುದು.

ಸಿಕಾ

Don`t copy text!