ಹುಡುಕಿ ಕೊಡಿ

ಹುಡುಕಿ ಕೊಡಿ

ಸುಂದರ ಮೈಕಟ್ಟು ನೀಲಮೈಬಣ್ಣ
ನೀಳ ಜಡೆಯ ಬೂದಿಬಡುಕ
ಮೊಗದಿ ಶಾಂತಚಿತ್ತ ಯೋಗಕಳೆ
ಆನೆತೊಗಲ ತುಂಡುಡಿಗೆ
ಉರಗ ಹಾರ ವೃಷಭ ಸವಾರ
ವೇಷಧಾರಿ ಎಂದು ತಿಳಿಯಬೇಡಿ
ಕಾಣೆಯಾಗಿದ್ದಾನೆ ಕೈಲಾಸದಿಂದ
ಹುಡುಕಿಕೊಡಿ,
ಕೊಟ್ಟರೆ ಬಹುಮಾನ

ಕಪಟ ಅರಿಯದ ಬೊಳೆ ಸ್ವಭಾವ
ಹೊಗಳಿ ಬಿಟ್ಟರೆ ವರಕೊಡುವವ
ಒಲಿದು ಬಂದಳೆಂದು ಮುಡಿಯ
ಮರೆಯಲಿ ಮುಚ್ಚಿಟ್ಟುಕೊಂಡವ
ಸತಿಯ ಮೇಲೆ ಸವತಿಯ ತಂದವ
ಒಳ್ಳೆಯವನಿವನೆಂದು ತಿಳಿಯಬೇಡಿ
ಮುನಿದರೆ ರುದ್ರ ತಾಂಡವ
ಕಾಣೆಯಾಗಿದ್ದಾನೆ ಕೈಲಾಸದಿಂದ
ಹುಡುಕಿ ಕೊಡಿ
ಕೊಟ್ಟರೆ ಬಹುಮಾನ

ಅಸುರ ಸಂಸಾರಿ ವಿಷಕಂಠಧಾರಿ
ಲೋಕಪಾಲನಾ ನಿಮಿತ್ಯ
ಬಹುಕೃತ ವೇಶಧಾರಿ
ತ್ರಿಶೂಲ ಢಮರುಗ ಕಪಾಲ
ಹಿಡಿದ ತ್ರಿಲೋಕ ಸಂಚಾರಿ
ಸತಿಸುತರ ಬಗ್ಗೆ ಇಲ್ಲ ಜವಾಬ್ದಾರಿ
ತಿರುಕನೆಂದು ತಿಳಿಯಬೇಡಿ
ಇವ ರಜತಗಿರಿಯ ಒಡೆಯ ನೋಡಿ
ಕಾಣೆಯಾಗಿದ್ದಾನೆ ಕೈಲಾಸದಿಂದ
ಹುಡುಕಿ ಕೊಡಿ
ಕೊಟ್ಟರೆ ಬಹುಮಾನ

ಕಣ್ಣು ಕಿತ್ತುಕೊಡಬೇಕಿಲ್ಲ
ಘೋರ ತಪವ ಮಾಡಬೇಕಿಲ್ಲ
ಮಗನ ಕೊಂದು ಮಾಂಸದಡಿಗೆ
ಉಣಬಡಿಸಬೇಕಿಲ್ಲ ಪರಿಪರಿಯ
ಪರೀಕ್ಷೆಗೊಳಗಾಗಬೇಕಿಲ್ಲ
ಪೂಜೆ ಜಪತಪ ಉಪವಾಸ
ಜಾಗರಣೆ ಮಾಡಬೇಕಿಲ್ಲ
ದಯೆಪ್ರೀತಿ ಕರುಣೆ ಅನುಕಂಪದ
ಹೃದಯದಲಿ ಅವ ನೆಲೆಸಿರುವ
ಕಾಣೆಯಾಗಿದ್ದಾನೆ ಕೈಲಾಸದಿಂದ
ಹುಡುಕಿ ಕೊಡಿ
ಕೊಟ್ಟರೆ ಬಹುಮಾನ

ಡಾ. ನಿರ್ಮಲ ಬಟ್ಟಲ
೧೮.೨.೨೦೨೩

Don`t copy text!