ಆತ್ಮೀಯ e-ಸುದ್ದಿ ಯ ಓದುಗರೇ
ನಿಮ್ಮ ಅಭಿಮಾನ ದೊಡ್ಡದ್ದು. ಸಾಮಾಜಿಕ ಜಾಲತಾಣ ಅತ್ಯಂತ ಶರವೇಗದಲ್ಲಿ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ನಿನ್ನೆ ಶಿವರಾತ್ರಿ ಗಾಗಿ ಬೆಳಗಾವಿಯ ಕವಯತ್ರಿ ಡಾ.ನಿರ್ಮಲ ಬಟ್ಟಲ್ ಅವರು ಹುಡುಕಿ ಕೊಡಿ ಎಂಬ ಕವಿತೆ ಕಳಿಸಿದ್ದರು ಪ್ರಕಟಿಸಲಾಗಿತ್ತು. ಪ್ರಕಟವಾದ ತಕ್ಷಣ ಅನೇಕರಿಂದ ಪ್ರಶಂಶೆಗೆ ಒಳಗಾಯಿತು. ಅಷ್ಟೇ ಅಲ್ಲ ಬೇರೆ ಬೇರೆ ವಾಟ್ಸ್ ಆಪ್ ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ ಟ್ರೋಲ್ ಆಗಿ ಚರ್ಚೆ ಶುರುವಾಯಿತು. ಬಹಳಷ್ಟು ಜನ ಡಾ.ನಿರ್ಮಲ ಬಟ್ಟಲ್ ಅವರು ಕಳೆದುಕೊಂಡಿದ್ದ ಶಿವನನ್ನು ಹುಡಕಲು ಪ್ರಾರಂಭಿಸಿದರು. ಕಾರಣ ಹುಡುಕಿಕೊಟ್ಟವರಿಗೆ ಬಹುಮಾನ ಸಿಗುತ್ತಿತ್ತು. ಅಂತೂ ಇಂತು ಪೂಣೆಯ ಹಿರಿಯ ಕವಯತ್ರಿ ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ ಅವರು ಹುಡುಕಿದ್ದಾರೆ. ಒಂದು ಕವಿತೆಗೆ ಸಂವಾದಿಯಾಗಿ ಮತ್ತೊಂದು ಕವಿತೆ ಹುಟ್ಟುತ್ತದೆ ಎಂದರೆ ಎಂತಹ ಸಂತೋಷ ಅಲ್ವೇ? ಹಾಗಾಗಿ ನಮ್ಮ ಓದುಗರಿಗೆ ನಿನ್ನೆ ಡಾ.ನಿರ್ಮಲ ಬಟ್ಟಲ್ ಅವರ ಕವಿತೆ ಮತ್ತು ಸಂವಾದಿಯಾಗಿ ಅನ್ನಪೂರ್ಣ ಸಕ್ರೋಜಿ ಪುಣೆ ಅವರ ಕವಿತೆ ಎರಡನ್ನು ಪ್ರಕಟಿಸಿರುವೆ ಓದಿ. ನಿಮ್ಮ ಅಭಿಪ್ರಾಯ ತಿಳಿಸಿ.
–ಸಂಪಾದಕ
—————
ಹುಡುಕಿ ಕೊಡಿ
ಸುಂದರ ಮೈಕಟ್ಟು ನೀಲಮೈಬಣ್ಣ
ನೀಳ ಜಡೆಯ ಬೂದಿಬಡುಕ
ಮೊಗದಿ ಶಾಂತಚಿತ್ತ ಯೋಗಕಳೆ
ಆನೆತೊಗಲ ತುಂಡುಡಿಗೆ
ಉರಗ ಹಾರ ವೃಷಭ ಸವಾರ
ವೇಷಧಾರಿ ಎಂದು ತಿಳಿಯಬೇಡಿ
ಕಾಣೆಯಾಗಿದ್ದಾನೆ ಕೈಲಾಸದಿಂದ
ಹುಡುಕಿಕೊಡಿ,
ಕೊಟ್ಟರೆ ಬಹುಮಾನ
ಕಪಟ ಅರಿಯದ ಬೊಳೆ ಸ್ವಭಾವ
ಹೊಗಳಿ ಬಿಟ್ಟರೆ ವರಕೊಡುವವ
ಒಲಿದು ಬಂದಳೆಂದು ಮುಡಿಯ
ಮರೆಯಲಿ ಮುಚ್ಚಿಟ್ಟುಕೊಂಡವ
ಸತಿಯ ಮೇಲೆ ಸವತಿಯ ತಂದವ
ಒಳ್ಳೆಯವನಿವನೆಂದು ತಿಳಿಯಬೇಡಿ
ಮುನಿದರೆ ರುದ್ರ ತಾಂಡವ
ಕಾಣೆಯಾಗಿದ್ದಾನೆ ಕೈಲಾಸದಿಂದ
ಹುಡುಕಿ ಕೊಡಿ
ಕೊಟ್ಟರೆ ಬಹುಮಾನ
ಅಸುರ ಸಂಸಾರಿ ವಿಷಕಂಠಧಾರಿ
ಲೋಕಪಾಲನಾ ನಿಮಿತ್ಯ
ಬಹುಕೃತ ವೇಶಧಾರಿ
ತ್ರಿಶೂಲ ಢಮರುಗ ಕಪಾಲ
ಹಿಡಿದ ತ್ರಿಲೋಕ ಸಂಚಾರಿ
ಸತಿಸುತರ ಬಗ್ಗೆ ಇಲ್ಲ ಜವಾಬ್ದಾರಿ
ತಿರುಕನೆಂದು ತಿಳಿಯಬೇಡಿ
ಇವ ರಜತಗಿರಿಯ ಒಡೆಯ ನೋಡಿ
ಕಾಣೆಯಾಗಿದ್ದಾನೆ ಕೈಲಾಸದಿಂದ
ಹುಡುಕಿ ಕೊಡಿ
ಕೊಟ್ಟರೆ ಬಹುಮಾನ
ಕಣ್ಣು ಕಿತ್ತುಕೊಡಬೇಕಿಲ್ಲ
ಘೋರ ತಪವ ಮಾಡಬೇಕಿಲ್ಲ
ಮಗನ ಕೊಂದು ಮಾಂಸದಡಿಗೆ
ಉಣಬಡಿಸಬೇಕಿಲ್ಲ ಪರಿಪರಿಯ
ಪರೀಕ್ಷೆಗೊಳಗಾಗಬೇಕಿಲ್ಲ
ಪೂಜೆ ಜಪತಪ ಉಪವಾಸ
ಜಾಗರಣೆ ಮಾಡಬೇಕಿಲ್ಲ
ದಯೆಪ್ರೀತಿ ಕರುಣೆ ಅನುಕಂಪದ
ಹೃದಯದಲಿ ಅವ ನೆಲೆಸಿರುವ
ಕಾಣೆಯಾಗಿದ್ದಾನೆ ಕೈಲಾಸದಿಂದ
ಹುಡುಕಿ ಕೊಡಿ
ಕೊಟ್ಟರೆ ಬಹುಮಾನ
–ಡಾ. ನಿರ್ಮಲ ಬಟ್ಟಲ
೧೮.೨.೨೦೨೩
————————————————————————–
ಸಿಕ್ಕೇಬಿಟ್ಟ
ಕೈಲಾಸದಿಂದಿಳಿದು ಹುಡುಕುತ
ನಿರ್ಮಲ ಮನಗಳ ತಡಕಾಡುತ
ಪುಣೆಗೆ ಬಂದು ಎದುರಿಗೆ ನಿಂತ
ನಾ ಕಾಣೆಯಾಗಿರುವೆನೆಂದು
ಕೋಲಾಹಲ ಮಾಡುತಿಹಳವಳು
ಕೂಗಾಡುತಿಹಳು ಭಯವಾಗಿದೆ
ಆಶ್ರಯ ಕೊಡುವೆಯಾ ನನಗೆ
ಶಿವರಾತ್ರಿಯಂದು ನಿದ್ದೆ ಕೆಡಿಸುವಳು
ಕಟ್ಟಿ ಹಾಕುವಳು ಉಪವಾಸವಿದ್ದು
ಬೂದಿಬಡುಕ ಭಾಂಗಕುಡುಕ
ಬೈಯ್ಯುವಳವಳು ಸಹಿಸಲಾರೆ
ವಿಚಿತ್ರ ವೇಷಧಾರಿಯಾಗಿರುವೆ
ಬಹುಮಾನದಾಶೆಯಿಂದ ನಕ್ಕೆ
ಬಟ್ಟಲಗಣ್ಣಿನ ಚೆಲುವೆ ನಿರ್ಮಲಗೆ
ಫೋನ ಹಚ್ಚಿಬಿಟ್ಟೆ ಕಳ್ಳ ಸಿಕ್ಕನೆಂದು
ಓಡೋಡಿ ಬಾ ಗೆಳತಿ ಬೇಗ ಬಾ
ಕಣ್ಣಿಗೆ ಕಾಣದ ಕಾಣೆಯಾದವ
ಕಂಡಿರುವೆ ಹಿಡಿದಿಟ್ಟಿರುವೆ ಪುಣೆಗೆ
ಬಾ ಓಡೋಡಿ ಬಾ ಶಿವನ ಶಕ್ತಿ
–ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ