ಇಶಾ ಫೌಂಡೇಶನ್ ನಿಂದ ಚಿಕ್ಕಬಳ್ಳಾಪುರದ ಆದಿಯೋಗೇಶ್ವರ ಬೃಹತ್ ಪ್ರತಿಮೆ

ಇಶಾ ಫೌಂಡೇಶನ್ ನಿಂದ ಚಿಕ್ಕಬಳ್ಳಾಪುರದ ಆದಿಯೋಗೇಶ್ವರ ಬೃಹತ್ ಪ್ರತಿಮೆ ಪ್ರತಿಮೆ

ಸದ್ಯ ನಮ್ಮ ಸಮಕಾಲೀನ ಜಗತ್ತಿನಲ್ಲಿ ಸತ್ಯದ ಅನ್ವೇಷಣೆಗಾಗಿ ಜ್ಞಾನ,ಧ್ಯಾನ,ಯೋಗ,ತಪಸ್ಸಿನ ಮಾರ್ಗದಲ್ಲಿ ನಡೆದು ತಾವು ಕಂಡುಕೊಂಡ ಸತ್ಯವನ್ನು ಜನರಿಗೆ ಉಪದೇಶ ಮಾಡುತ್ತಾ ಸನ್ಮಾರ್ಗದಲ್ಲಿ ತರುವ ಪ್ರಯತ್ನ ಮಾಡುತ್ತಿರುವ ಸಾಧು, ಸಂತರು, ಸಾಧಕರನ್ನು ಭರತ ಭೂಮಿಯಲ್ಲಿ ಹೇರಳವಾಗಿ ಕಾಣಬಹುದು. ಅಂತಹವರುಗಳಲ್ಲಿ ಶಿರಡಿಯ ಸಾಯಿಬಾಬಾ, ಪುಟ್ಟಪರ್ತಿಯ ಸಾಯಿಬಾಬಾ, ಆಚಾರ್ಯ ರಜನೀಶ್ (ಓಶೋ), ಶ್ರೀ ಸಿದ್ದೇಶ್ವರ ಸ್ವಾಮಿಗಳು, ಪತಂಜಲಿ ಯೋಗ ಪ್ರತಿಪಾದಕ ಬಾಬಾ ರಾಮದೇವ್, ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಹಾಗೆಯೇ ಇತ್ತೀಚಿಗೆ ಸೇವ್ ದಿ ಸ್ವಾಯಲ್, ಸೇವ್ ದಿ ವಾಟರ್ (ಮಣ್ಣು, ಜಲ ರಕ್ಷಿಸಿ) ಎನ್ನುವ ಘೋಷಣೆಗಳು ಹಾಗೂ ಧ್ಯಾನ,ಯೋಗ, ನೃತ್ಯದ ಮೂಲಕ ಶಿವನ ಆರಾಧನೆಯನ್ನು ಜನಪ್ರಿಯಗೊಳಿಸುತ್ತಿರುವ ಇಶಾ ಫೌಂಡೇಶನ್ ನ ಸದ್ಗುರು.

2023 ರ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಲು ಆಗಮಿಸಿದ್ದ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು (ಜಗ್ಗಿ ವಾಸುದೇವ) ರವರನ್ನು ಅತ್ಯಂತ ಸಮೀಪದಿಂದ ಕಂಡಿದ್ದರಿಂದ ಹಾಗೂ ಇದೇ ಜನವರಿ 14 ಮಕರ ಸಂಕ್ರಾಂತಿಯ ದಿನ ಆದಿಯೋಗಿಶ್ವರನ ಬೃಹತ್ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ದೃಶ್ಯಗಳನ್ನು ದೃಶ್ಯಮಾಧ್ಯಮ ಹಾಗೂ ಮುದ್ರಣ ಮಾಧ್ಯಮದ ಮೂಲಕ ನೋಡಿ ಓದಿ ತಿಳಿದುಕೊಂಡಿದ್ದರಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಸದ್ಗುರು ಸ್ಥಾಪಿಸಿರುವ ಕಾಲ್ಪನಿಕ ಶಿವ (ಆದಿಯೋಗೇಶ್ವರ) ನ ಬೃಹತ್ ಪ್ರತಿಮೆಯನ್ನು ನೋಡಬೇಕೆಂಬ ಹಂಬಲ ದಿನೇ ದಿನೇ ಹೆಚ್ಚಾಗುತ್ತಿತ್ತು .ನನ್ನ ಹಂಬಲಕ್ಕೆ ಪೂರಕವಾಗಿ ನಮ್ಮ ಕುಟುಂಬದ ಸಮಾರಂಭಕ್ಕಾಗಿ ಕುಟುಂಬ ಸಮೇತ ಇದೇ ತಿಂಗಳ 11, 12 ಕ್ಕೆ ಬೆಂಗಳೂರಿಗೆ ಹೋಗಿದ್ದೆವು. ದಿನಾಂಕ 11 ರಂದು ಯಾವುದೇ ಕಾರ್ಯಕ್ರಮಗಳು ಇಲ್ಲದಿರುವುದರಿಂದ ಕುಟುಂಬ ಸಮೇತವಾಗಿ ಬೆಂಗಳೂರಿಂದ 67 ಕಿಲೋಮೀಟರ್ ದೂರದಲ್ಲಿ ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದ ಬಳಿ ಇಶಾ ಫೌಂಡೇಶನ್ ನ ಸದ್ಗುರು ಸ್ಥಾಪಿಸಿರುವ ಆದಿಯೋಗೇಶ್ವರನನ್ನು ನೋಡಲು ಹೊರಟೆವು.

ಚಿಕ್ಕಬಳ್ಳಾಪುರದಿಂದ 7 ಕಿ.ಮೀ ದೂರದಲ್ಲಿರುವ ನಂದಿ (ಬೆಟ್ಟ) ಗಿರಿ, ಸ್ಕಂದ ಗಿರಿ, ನರಸಿಂಹವರ್ಮ ಶಿಖರ ಹೀಗೆ ಸಪ್ತ ಗಿರಿ ಶಿಖರಗಳ ನಡುವಿನ ಆಳವಾದ ಕಣಿವೆಯ ನೂರು ಎಕರೆ ಪ್ರದೇಶದಲ್ಲಿ ಅನಾವರಣಗೊಂಡಿರುವ ಬೃಹತ್ ಆದಿಯೋಗಿಶ್ವರನ ಪ್ರತಿಮೆಯನ್ನು ದೂರದಿಂದಲೇ ನೋಡುತ್ತಾ ನಾವೆಲ್ಲ ನಿಬ್ಬೆರಗಾಗಿದ್ದೆವು. ಈ ಕ್ಷೇತ್ರದ ಪೂರ್ಣ ಪರಿಚಯವಿರುವ ಒಬ್ಬ ಮಾರ್ಗದರ್ಶಕರು ನಮ್ಮೊಂದಿಗಿದ್ದರೆ ಮಾಹಿತಿ ಪಡೆದುಕೊಳ್ಳಲು ಚೆನ್ನಾಗಿರುತ್ತದೆನಿಸಿ ಇಶಾ ಫೌಂಡೇಶನ್ ನ ಉನ್ನತ ಅಧಿಕಾರಿಗಳಿಗೆ ಅತ್ಯಂತ ಸಮೀಪವರ್ತಿಯಾಗಿರುವ ಬೆಂಗಳೂರವಾಸಿ ಗೆಳೆಯ ಜಗದೀಶ ಅಂಗಡಿಯವರಿಗೆ ಫೋನ್ ಮೂಲಕ ಸಂಪರ್ಕಿಸಿ ನಾವು ಚಿಕ್ಕಬಳ್ಳಾಪುರಕ್ಕೆ ಆದಿ ಯೋಗೇಶ್ವರ್ ನ ದರ್ಶನಕ್ಕಾಗಿ ಹೋಗುತ್ತಿದ್ದೇವೆ ಅಲ್ಲಿ ಯಾರಾದರೂ ಮಾರ್ಗದರ್ಶಕರಿದ್ದರೆ ತಿಳಿಸಿ ಎಂದು ಕೇಳಿಕೊಂಡಾಗ ನಮ್ಮ ವಾಹನದ ನಂಬರ್ ಹಾಗೂ ದೂರವಾಣಿಯ ಸಂಖ್ಯೆಯನ್ನು ಪಡೆದುಕೊಂಡ ಜಗದೀಶ ಅಂಗಡಿಯವರು ಮತ್ತೊಮ್ಮೆ ಫೋನ್ ಮಾಡಿ ನೀವು ಅಲ್ಲಿ ಹೋಗಿ ಮುಟ್ಟುವುದರೊಳಗಾಗಿ ಫೌಂಡೇಶನ್ ನ ಸ್ವಯಂಸೇವಕರು ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ನಿಮ್ಮನ್ನು ಕಾಯುತ್ತಿರುತ್ತಾರೆ ಎಂದು ಹೇಳಿದ್ದರು.

ಜಗದೀಶ್ ಅಂಗಡಿಯವರು ಹೇಳಿದಂತೆ ಇಶಾ ಫೌಂಡೇಶನ್ ನ ಮೇಲುಸ್ತರದ ಸ್ವಯಂಸೇವಕರೊಬ್ಬರು ಪಾರ್ಕಿಂಗ್ ಸ್ಥಳದಲ್ಲಿ ನಮ್ಮನ್ನು ಗೌರವದಿಂದ ಎದುರುಗೊಂಡು ವೀಕ್ಷಣೆಗಾಗಿ ಕರೆದುಕೊಂಡು ಹೊರಟರು. ಏಳು ಗಿರಿಗಳ ನಡುವಿನ ವಿಶಾಲವಾದ ನೂರೆಕೆರೆ ಕಣಿವೆಯಲ್ಲಿ ನಮ್ಮನ್ನು ಮೊಟ್ಟಮೊದಲು ಕರೆದುಕೊಂಡು ಹೋಗಿದ್ದು ನಾಗ ಪ್ರತಿಷ್ಠಾನದ ಸ್ಥಳ ವೀಕ್ಷಣೆಗೆ.

ನಾಗ ಪ್ರತಿಷ್ಠಾನದ ವಿಶೇಷತೆ ಎಂದರೆ ಕಳೆದ 800 ವರ್ಷಗಳ ಇತಿಹಾಸದಲ್ಲಿ ಭಾರತದ ಯಾವುದೇ ಭಾಗದಲ್ಲಿ ಈ ರೀತಿಯ ನಾಗ ಪ್ರತಿಷ್ಠಾಪನೆಯಾಗಿಲ್ಲ.ಅಂದರೆ ಪಾದರಸವನ್ನು ಉದ್ದನೆಯ ರಸದಂಡದಲ್ಲಿ ಸ್ಪಟಿಕೀಕರಣ (ದ್ರವ ರೂಪದಲ್ಲಿರುವ ಪಾದರಸವನ್ನು ಘನ ರೂಪ) ಗೊಳಸಿ ವಿಶುದ್ದಿ, ಮಣಿಪೂರಕ, ಹಾಗೂ ಮೂಲಾಧಾರ ಎಂಬ ಮೂರು ತತ್ವಗಳನ್ನು ಮೇಳವಿಸಿ ನಾಗ ಪ್ರತಿಷ್ಠಾಪನೆ ಮಾಡಿದ್ದಾರೆ. ಸ್ವಯಂಸೇವಕರು ತಿಳಿಸಿದಂತೆ ಪಾದರಸವನ್ನು ರಸದಂಡದಲ್ಲಿ ಘನ ರೂಪಕ್ಕೆ ತಂದು ನಾಗಪ್ರತಿಷ್ಠಾನದ ಮೂರು ಹಂತಗಳನ್ನು ಪೂರೈಸಿ ಪ್ರತಿಷ್ಠಾಪಿಸಿರುವದರಿಂದ ಆ ಸ್ಥಳದಲ್ಲಿ ಸಕಾರಾತ್ಮಕ (positive energy) ಶಕ್ತಿಯ ಪ್ರಭಾವಳಿ ಸೃಷ್ಟಿಯಾಗಿರುತ್ತದೆ. ಆ ಪ್ರಭಾವಳಿಯ ಪರಿದಿಯೋಳಗೆ ಬಂದವರ ದೇಹ ಮತ್ತು ಮೆದುಳಿನ ಮೇಲೆ ಅಗೋಚರವಾಗಿ ಪ್ರಭಾವವನ್ನು ಬೀರಿ ಮನಸ್ಸನ್ನು ಏಕಾಗ್ರಗೊಳಿಸಿ ಅವರ ಇಷ್ಟಾರ್ಥವನ್ನು ಈಡೇರಿಸುತ್ತದೆ. ಹಾಗೂ ಹೊಸ ಸಂಕಲ್ಪಗಳನ್ನು ಮಾಡಿಕೊಂಡು ಪ್ರಯತ್ನಶೀಲರಾದರೆ ಜಯ ಶತಸಿದ್ಧ ಎನ್ನುವುದು ಸ್ವಯಂಸೇವಕರ ಅಭಿಪ್ರಾಯವಾಗಿತ್ತು.

ಹೀಗಾಗಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸರ್ಪದೋಷಪೀಡಿತರು ಆಗಮಿಸಿ ಪರಿಹಾರಕ್ಕಾಗಿ ಪೂಜೆ ಸಲ್ಲಿಸುತ್ತಾರೆ. ಸರ್ಪದೋಷ ಪರಿಹಾರಕ್ಕಾಗಿ ಜನ ಕಾಳಹಸ್ತಿ, ಸುಬ್ರಹ್ಮಣ್ಯ,  ಘಾಟಿ ಸುಬ್ರಹ್ಮಣ್ಯ ಮುಂತಾದ ಕ್ಷೇತ್ರಗಳಿಗೆ ಹೋಗುತ್ತಾರೆ. ನಾನು ಒಂದೆರಡು ಸಲ ಕಾಳಹಸ್ತಿ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಬೆಟ್ಟಿಕೊಟ್ಟು ನೋಡಿದ್ದೇನೆ, ಅಲ್ಲಿರುವ ಪುರೋಹಿತರು ಹೆಚ್ಚು ಹೆಚ್ಚು ಹಣ ಕೊಟ್ಟವರಿಗೆ ಪ್ರತ್ಯೇಕವಾಗಿ ಹಾಗೂ ಕ್ಷೇತ್ರದವರು ನಿಗದಿಪಡಿಸಿದ ಹಣ ಕೊಟ್ಟು ರಸೀದಿ ಪಡೆದ ಸಾಮಾನ್ಯ ಭಕ್ತರನ್ನು ನೂರಾರು ಸಂಖ್ಯೆಯಲ್ಲಿ ಒಂದೆಡೆ ಗುಂಪುಗೂಡಿ ಕುಳ್ಳಿರಿಸಿ ಸಂಕಲ್ಪ ಹೇಳಿಸಿ ಸರ್ಪದೋಷ ಪರಿಹಾರ ಪೂಜೆ ಮಾಡಿಸುತ್ತಾರೆ.

ಆದರೆ ಇಲ್ಲಿ ಭಕ್ತರು ಸ್ವತಹ ತಮ್ಮ ಕೈಯಾರೆ ರಸದಂಡದ ನಾಲ್ಕು ದಿಕ್ಕಿನಲ್ಲಿ ಪ್ರತಿಷ್ಠಾಪಿಸಿರುವ ನಾಗಗಳಿಗೆ ಏಕಾಗ್ರತೆಯಿಂದ ಹುತ್ತದ ಮಣ್ಣನ್ನು ಲೇಪಿಸಿ ಪ್ರಾರ್ಥನೆ ಮಾಡಿಕೊಳ್ಳುವ ಮೂಲಕ ಸರ್ಪದೋಷ ಪರಿಹಾರ ಮಾಡಿಕೊಳ್ಳುತ್ತಾರೆ. ಇಲ್ಲಿ ಸರ್ಪದೋಷ ನಿವಾರಣೆಗಾಗಿ ಭಕ್ತ ಮತ್ತು ನಾಗದೇವತೆಯ ನಡುವೆ ಪೂಜಾರಿ ಅಥವಾ ಪುರೋಹಿತರು ಇರುವುದಿಲ್ಲ. ಭಕ್ತರು ನೇರವಾಗಿ ಏಕಾಗ್ರತೆಯಿಂದ ಪೂಜೆ ಸಲ್ಲಿಸುವ ಮೂಲಕ ತಮ್ಮ ಸರ್ಪದೋಷ ನಿವಾರಣೆ ಮಾಡಿಕೊಳ್ಳುವದು ಈ ಸ್ಥಳದ ವಿಶೇಷ.

ನಾಗ ಪ್ರತಿಷ್ಠಾನ ಸ್ಥಳದಿಂದ ಸುಮಾರು ಎರಡು ನೂರು ಮೀಟರ್ ಹಿಂಭಾಗದಲ್ಲಿ ಪ್ರತಿಷ್ಠಾಪಿಸಿರುವ 112 ಅಡಿ ಎತ್ತರದ ಬೃಹತ್ ಮಂದಸ್ಮಿತ, ಶಾಂತ ಮುಖ ಮುದ್ರೆಯ ಆದಿಯೋಗೇಶ್ವರ ( ಶಿವ) ನ ಪ್ರತಿಮೆಯ ಮುಂದೆ ನಿಂತಾಗ ನಾವು ಕುಬ್ಜರಾಗಿ ಬಿಡುತ್ತೇವೆ.ಈ ಪ್ರತಿಮೆಯ ಪ್ರತಿಷ್ಠಾಪನೆ ಯಾವ ತತ್ವದ ಮೇಲೆ ಅನುಷ್ಠಾನಗೊಂಡಿದೆ ಎನ್ನುವುದನ್ನು ಸ್ವಯಂಸೇವಕರು ವಿವರಿಸುತ್ತಾ, ಮನುಷ್ಯನ ದೇಹದಲ್ಲಿ 112 ಚಕ್ರಗಳಿವೆ ಅವುಗಳಲ್ಲಿ 108 ಚಕ್ರಗಳು ದೇಹದ ಒಳಗಡೆ ಕ್ರಿಯಾಶೀಲವಾಗಿವೆ,ಇನ್ನೆರಡು ಚಕ್ರಗಳು ದೇಹದೊಳಗಡೆ ತಟಸ್ಥವಾಗಿವೆ,ಇನ್ನೆರಡು ಚಕ್ರಗಳು ದೇಹದ ಹೊರಭಾಗದಲ್ಲಿವೆ.ದೇಹದಲ್ಲಿರುವ 112 ಚಕ್ರಗಳನ್ನು ಏಕಾಗ್ರಗೊಳಿಸಿ ಅಲೌಕಿಕ ಸುಖ ಪಡೆಯುವ ವಿದ್ಯೆಯನ್ನು ಶಿವನು ಸಪ್ತಋಷಿಗಳಿಗೆ (ಒಬ್ಬೊಬ್ಬ ಋಷಿಗೆ 16 ವಿದ್ಯೆಗಳನ್ನು) ಧಾರೆಯರದನಂತೆ.ಈ ತತ್ವದ ಆಧಾರದ ಮೇಲೆ 112 ಅಡಿ ಎತ್ತರದ ಆದಿಯೋಗೇಶ್ವರನ ಪ್ರತಿಮೆಯನ್ನು ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆಯ ಪ್ರತಿಷ್ಠಾಪನೆಗಾಗಿ ನಾಲ್ಕನೂರು(400) ಟನ್ ಉಕ್ಕನ್ನು (iron) ಬಳಸಲಾಗಿದೆ. Make in India ಎನ್ನುವ ಕಲ್ಪನೆಯಂತೆ ಭಾರತೀಯ ಇಂಜಿನಿಯರಗಳೇ ಆದಿಯೋಗೇಶ್ವರನ ದೇಹದವರೆಗಿನ ಪ್ರತಿಮೆಯನ್ನು ಏಕಲೋಹದಲ್ಲಿ ನಿರ್ಮಿಸಿ, ಮಂದಸ್ಮಿತ ಶಿವನ ಮುಖಭಾವವನ್ನು ಹೊಂದಿರುವ ಮುಖಮುದ್ರೆಯನ್ನು ಮೂರು ಹಂತದಲ್ಲಿ ನಿರ್ಮಿಸಿ ಅವುಗಳನ್ನು ಜೋಡಿಸಿರುವುದನ್ನು ಮುಖಭಾವದ ಪ್ರತಿಮೆಯಲ್ಲಿ ಕಾಣಬಹುದು. ಮೂಲಾದಾರ, ಸ್ವಾದಿಷ್ಟಾನ, ಮಣಿಪೂರಕ, ಅನಾಹುತ, ವಿಶುದ್ದಿ ತತ್ವಗಳನ್ನು ಅಳವಡಿಸಿಕೊಂಡು ಆದಿಯೋಗೇಶ್ವರನ ಬೃಹತ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಅದ್ಭುತವನ್ನು ನಿರ್ಮಿಸಿದ್ದಾರೆ ಸದ್ಗುರುರವರು.

ಸದ್ಗುರುರವರು ಪ್ರತಿನಿತ್ಯ ತಾವಿರುವ ಸ್ಥಳದಲ್ಲಿಯೇ ಏಕಾಗ್ರತೆಯಿಂದ ಯೋಗ, ಧ್ಯಾನ, ನೃತ್ಯದ ಮೂಲಕ ಶಿವನನ್ನು ಪ್ರಾರ್ಥಿಸುವ ದೃಶ್ಯವನ್ನು ನೋಡುವುದೇ ಒಂದು ಆನಂದ. 2017 ರಿಂದ ಪ್ರತಿ ವರ್ಷ ಶಿವರಾತ್ರಿಯಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರತಿಷ್ಠಾಪಿಸಿರುವ ಶಿವನ ಬೃಹತ್ ಪ್ರತಿಮೆಯ ಮುಂದೆ ನಿರ್ಮಿಸಿದ ವಿಶಾಲವಾದ ವೇದಿಕೆಯಲ್ಲಿ ಸಹಸ್ರಾರು ಅನುಯಾಯಿಗಳೊಂದಿಗೆ ಧ್ಯಾನ ಮತ್ತು ನೃತ್ಯದ ಮೂಲಕ ಶಿವನನ್ನು ಆರಾಧಿಸುವ ಪರಿಯನ್ನು ದೃಶ್ಯಮಾಧ್ಯಮದ ಮೂಲಕ ತಾವೆಲ್ಲ ನೋಡಿ ಆನಂದಿಸಿರಬಹುದು. ಪ್ರಚಲಿತ ದಿನಗಳಲ್ಲಿ ಸದ್ಗುರುರವರು 72 ದೇಶಗಳಲ್ಲಿ ಇಶಾ ಫೌಂಡೇಶನ್ ನ ಘಟಕಗಳನ್ನು ಸ್ಥಾಪಿಸಿ ಶಿವನ ಆರಾಧನೆಯನ್ನು ಜನಪ್ರಿಯಗೊಳಿಸಿದ್ದಾರೆ.

ಆದಿಯೋಗೇಶ್ವರನ ಬೃಹತ್ ಪ್ರತಿಮೆ ಪ್ರತಿಷ್ಠಾಪನೆಯ ಹಿಂದಿರುವ ತತ್ವಗಳನ್ನು ಗಮನಿಸಿದಾಗ ಅವಿರಳ ಜ್ಞಾನಿ ಚೆನ್ನಬಸವಣ್ಣನ ತತ್ವವನ್ನು ಆಧರಿಸಿ ನಿರ್ಮಿಸಿದ್ದು ಎನಿಸುತ್ತದೆ.ಬಹುಶಃ ಸದ್ಗುರು ರವರು ಆದಿಯೋಗೇಶ್ವರನ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಪೂರ್ವದಲ್ಲಿ ಅವಿರಳಜ್ಞಾನಿ ಚೆನ್ನಬಸವಣ್ಣನವರ “ಕರಣಹಸಿಗೆ” ಹಾಗೂ ಅವರ ವಚನಗಳನ್ನು ಆಳವಾಗಿ ಅಭ್ಯಸಸಿರಬೇಕು. ಇವುಗಳ ಆಧಾರದ ಮೇಲೆ ಆದಿಯೋಗೇಶ್ವರನ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ವಿಚಾರ ಬಂದಿರಬೇಕೆನಿಸುತ್ತದೆ.

ಶಿವಯೋಗದ ಬಗೆಗೆ ಚೆನ್ನಬಸವಣ್ಣನವರ ವಚನಗಳಲ್ಲಿ ಇಷ್ಟಲಿಂಗಾನುಸಂಧಾನದ ಮೂಲಕ ಕಾಯವನ್ನು ಪ್ರಸಾದಕಾಯವಾಗಿಸುವ, ಪ್ರಾಣಲಿಂಗಾನುಸಂಧಾನದ ಮೂಲಕ ಪ್ರಸಾದಕಾಯವನ್ನು ಪ್ರಕಾಶಕಾಯವಾಗಿಸುವ, ಭಾವಲಿಂಗಾನುಸಂಧಾನದ ಮೂಲಕ ಪ್ರಕಾಶಕಾಯವನ್ನು ಆಕಾಶ ಕಾಯವಾಗಿಸುವ ವಿವರ ಎಳೆ ಎಳೆಯಾಗಿ ಬಂದಿರುವುದನ್ನು ಕಾಣುತ್ತೇವೆ. ಆ ಮೂಲಕ ಸ್ಥಲ ಸಿದ್ಧಾಂತಕ್ಕೆ ಒಂದು ಹೊಸ ಆಯಾಮವನ್ನು ಚೆನ್ನಬಸವಣ್ಣನವರು ಅಳವಡಿಸಿ ರುವುದನ್ನು ಕಾಣಬಹುದು. ಲಿಂಗಾಯತದ ಅಂಗವಾದ ಅಷ್ಟಾವರಣ, ಪ್ರಾಣವಾದ ಪಂಚಾಚಾರ,ಮತ್ತು ಆತ್ಮವೆನಿಸಿದ ಷಟಸ್ಥಲಕ್ಕೆ ಸಂಬಂಧಿಸಿದಂತೆ ಆಧ್ಯಾತ್ಮಿಕ ಅಂಶಗಳೆಲ್ಲವೂ ತುಂಬಾ ವಿವರವಾಗಿ ಹಾಗೂ ತಲಸ್ಪರ್ಶಿಯಾಗಿ ಚನ್ನಬಸವಣ್ಣನವರ ವಚನಗಳಲ್ಲಿ ಕಾಣಬಹುದು.

ಬಹುಶಃ ಸದ್ಗುರುರವರು ಚೆನ್ನಬಸವಣ್ಣನವರ ವಚನಗಳ ಜ್ಞಾನದ ಜೊತೆಗೆ ಯೋಗ,ಧ್ಯಾನ ನೃತ್ಯವನ್ನಳವಡಿಸಿಕೊಂಡು ಏಕಾಗ್ರತೆಯನ್ನು ಸಾಧಿಸುವ ಮೂಲಕ ಶಿವನಲ್ಲಿ ಒಂದಾಗುವ ಹೊಸಮಾರ್ಗವನ್ನು ಕಂಡುಕೊಂಡಿರಬಹುದೆಂದು ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್ ನ ಕ್ಷೇತ್ರ ವೀಕ್ಷಣೆ ಮಾಡಿದಾಗ ನನಗನಿಸಿತು.

ಹನ್ನೆರಡನೆಯ ಶತಮಾನದಿಂದಿಚಿಗೆ ಉದಯಿಸಿದ ಮತ, ಪಂಥ, ತತ್ವ, ಪರಂಪರೆ, ಸಂಪ್ರದಾಯಗಳ ಮೇಲೆ ಶರಣರು ಹಾಗೂ ವಚನ ಸಾಹಿತ್ಯದ ಪ್ರಭಾವ ಇದ್ದೇ ಇರುತ್ತದೆ ಎನ್ನುವುದು ನನ್ನ ಬಲವಾದ ನಂಬಿಕೆ.ಹಾಗೆಯೇ ಸದ್ಗುರುರವರ ಮೇಲೆಯೂ ಶರಣರು ಹಾಗು ವಚನ ಸಾಹಿತ್ಯದ ಪ್ರಭಾವ ಇದ್ದೇ ಇರುತ್ತದೆ ಎನ್ನುವುದಕ್ಕೆ ಇಶಾ ಫೌಂಡೇಶನ್ ನ ಚಟುವಟಿಕೆಗಳು ಸಾಕ್ಷಿ. ಲಿಂಗಾಯತದ ಅಷ್ಟಾವರಣಗಳಲ್ಲಿ ಉಪಾಸನೆಯ ಸಾಧನೆಗಳೆಂದು ಹೇಳಲಾಗುವ ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರಗಳು ಲಿಂಗಾಯತಕ್ಕೆ ವಿಶಿಷ್ಟವಾಗಿರುವ ಒಂದು ಪರಿಕಲ್ಪನೆಯನ್ನು ಚೆನ್ನಬಸವಣ್ಣನವರ ವಚನಗಳಲ್ಲಿ ಕಾಣುತ್ತೇವೆ. ಹಾಗೆಯೇ ರುದ್ರಾಕ್ಷಿ ಇಶಾ ಫೌಂಡೇಶನ್ ನವರಿಗೆ ಉಪಾಸನೆಯ ಒಂದು ಸಾಧನವಾಗಿದೆ. ಆ ಪರಿಣಾಮವಾಗಿಯೇ ಮಹಾ ಶಿವರಾತ್ರಿಯ ಈ ದಿನದಂದು ಇಶಾ ಫೌಂಡೇಶನ್ ನವರಿಗೆ ಒಂದು ಮಿಸ್ ಕಾಲ್ ಅನ್ನು ಕೊಟ್ಟರೆ ಉಚಿತವಾಗಿ ಮನೆ ಮನೆಗಳಿಗೆ ರುದ್ರಾಕ್ಷಿಯನ್ನು ತಲುಪಿಸುತ್ತೇವೆ ಎಂದು ಪ್ರಚಾರ ಮಾಡುತ್ತಿರುವುದನ್ನು ದೃಶ್ಯ ಮಾಧ್ಯಮಗಳಲ್ಲಿ ನೀವು ನೋಡಿರಬಹುದು. ಹೀಗಾಗಿ ಬಸವಣ್ಣ ಹಾಗೂ ಶರಣರು ಪ್ರತಿಪಾದಿಸಿದ ವಿಚಾರಗಳು ಎಲ್ಲ ಧರ್ಮೀಯರಿಗೆ ಸ್ವೀಕಾರಾರರ್ಹವಾಗಿವೆಯಲ್ಲವೇ ? ದೇಹವನ್ನೇ ದೇವಾಲಯಕ್ಕೆ ಹೋಲಿಸಿದ, ಕಾಯಕವೇ ಕೈಲಾಸವೆಂದ ಶರಣರ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು.

ಇಶಾ ಫೌಂಡೇಶನ್ ನ ಸದ್ಗುರುರವರು ಕೇವಲ ಒಂದು ವರ್ಷದ ಅವಧಿಯಲ್ಲಿ ನಿಸರ್ಗದತ್ತವಾದ ಗಿರಿ ಶಿಖರಗಳ ನಡುವೆ ನಿರ್ಮಿಸಿರುವ ಆದಿಯೋಗೇಶ್ವರನನ್ನು ನೀವೊಮ್ಮೆ ನೋಡಿ ಬನ್ನಿ. ಹಾಗೆಯೇ ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ನಮ್ಮದಾಗಿರಲಿ.

ಗವಿಸಿದ್ದಪ್ಪ ಕೊಪ್ಪಳ

Don`t copy text!