ಬಸವ ಗುರುವಿನ ಪ್ರಾರ್ಥನೆ
ಬಸವ ಗುರುವೆ ಬವಣೆ ಪರಿಹರಸು
ಭವಸಾಗರದಿ ದಡವ ಸೇರಿಸು
ಅಜ್ಞಾನ ನೀಗಿ ಅಹಂಕಾರವನಳಿಸು
ಸುಜ್ಞಾನ ಸತ್ಪಥದಿ ಸದ್ವಿನಯದಲಿರಿಸಿ
ಸನ್ನಡತೆಯಲಿ ಮುನ್ನಡೆಸು ಗುರುವೆ
ಎನ್ನ ತವನಿಧಿ ವಿಜಯಮಹಾಂತೇಶ||
ಬಸವ ಗುರುವೆ ಗುರುವಿನಿಂದಧಿಕರಾರಿಲ್ಲ
ನಿಗರ್ವದಿ ನಿರಾಳವಾಗಿರಿಸು ತಂದೆ
ನಿಚ್ಚಳದಿ ಎನಗೆ ಸ್ವಚ್ಚ ಮನವನಿರಿಸು
ಒಮ್ಮನದಿ ಲಿಂಗನಿಷ್ಟೆಯಲಿ ಒಲಾಡುವಂತಿರಿಸು
ಅಂಗಗುಣವಳಿಸಿ ಲಿಂಗಾಂಗಿಯಾಗಿಸು
ಎನ್ನತವನಿಧಿ ವಿಜಯಮಹಾಂತೇಶ.
ಬಸವ ಗುರುವೆ ದ್ವೇಷಾಸುಯೆಯಲಿ
ಬೆಂದು ಬಳಲಿರುವೆ ತಂದೆ
ಮನದಂಗಳವ ಗುಡಿಸಿ ಹಸನುಗೊಳಿಸಿ
ಬೆಂದ ಬದುಕನು ನೋಂದ ಜೀವವನು
ಚೆಂದಗೆಡಿಸದಂತಿರಿಸು ಗುರುವೆ
ಎನ್ನ ತವನಿಧಿ ವಿಜಯಮಹಾಂತೇಶ.
ಬಸವ ಗುರುವೆ ಅಂತರದಿ ಅಡಗಿಹ
ಕಾಮ ಕ್ಲೇಶಗಳ ಕಳೆದೋಗೆದು
ಕಾಯಕದಿ ಕೈಹಿಡಿದು ಮುನ್ನಡೆಸು
ಸತ್ಯತೆಗೆ ಶಿರಬಾಗಿ ಕರಮುಗಿಯುವಂತೆ
ನಿತ್ಯದಲಿ ನಮ್ಮನ್ನಿರಿಸು ಗುರುವೆ
ಎನ್ನ ತವನಿಧಿ ವಿಜಯಮಹಾಂತೇಶ.
ಬಸವ ಗುರುವೆ ಬಹಿರಂಗ ಬೆಳಗಿದರೆ
ಅಂತರಂಗ ಹೋಳೆವುದೆ ತಂದೆ
ಕರಣೇಂದ್ರಿಯಗಳ ಕಳೆಯತಗೆದಲ್ಲದೆ
ಆತ್ಮ ಹೊಳೆಯದು ನೋಡಾ
ಆತ್ಮನನುಪಮಗೊಳಿಸು ಗುರುವೆ
ಎನ್ನ ತವನಿಧಿ ವಿಜಯಮಹಾಂತೇಶ.
ಬಸವ ಗುರುವೆ ಒಡಲ ವ್ಯಾಮೋಹದಲಿ
ಉಟ್ಟುಂಡು ನಲಿದು ಗರ್ವದಲಿ ಮೆರೆದೆ
ಒಡಲಾಳದಧಿಪತಿಯ ಮನದಿ ಮರೆದೆ
ಕಡಲ ಅಲೆಯಂತೆ ಕಡುಕಷ್ಟಬಂದಾಗ
ಮೊರೆಯಿಡುತ ಬೊಬ್ಬಿಟ್ಟು ಸಲಹು ಎಂದೆ
ಬಿಡದೆ ನೀನು ಸಲುಹಿದೆ ಕರುಣಾಕರ
ಎನ್ನ ತವನಿಧಿ ವಿಜಯಮಹಾಂತೇಶ.
ಬಸವ ಗುರುವೆ ಮಾಗಿ ಬಾಗುವ
ಮನವಕೊಡು ಎನಗೆ ತಂದೆ
ವ್ಯಷ್ಟಿಯಳಿದು ಸಮಷ್ಟಿಯ ಸೌಖ್ಯದಿ
ಸಮೃದ್ಧ ಬಾಳಿಗೆ ಅನುವಾಗಿ
ಶಿಶುಮನದಿ ಹೊಸ ಅಲೆಯಲಿ ತೇಲಿಸು
ಎನ್ನ ತವನಿಧಿ ವಿಜಯಮಹಾಂತೇಶ.
–ಸವಿತಾ ಮಾಟೂರು ಇಳಕಲ್