ವರ್ತಮಾನದಲ್ಲಿ ಶಿವಶರಣರ ವಚನ ಚಿಂತನಗಳು

ವರ್ತಮಾನದಲ್ಲಿ ಶಿವಶರಣರ ವಚನ ಚಿಂತನಗಳು

ವಿಶ್ವಕ್ಕೆ ಹೊಸ ಧರ್ಮವನ್ನು ಒದಗಿಸಿದ ಕಾಲಘಟ್ಟವದು. ಹಾದಿ ತಪ್ಪಿದ ವರ್ತಮಾನದ ಕಾಲವನ್ನು ಜಾಗೃತಗೊಳಿಸಲು ವಚನಗಳ ಮೂಲ ಅತ್ಯಗತ್ಯವಿದೆ. ಶಿವಶರಣರೆಲ್ಲರೂ ಕಾಯಕ ಕಲಿಗಳಾಗಿದ್ದರು. ತಮ್ಮ ಕಸುಬಿನಲ್ಲಿ ತಮ್ಮ ಆರಾಧ್ಯ ದೈವನನ್ನು ಕಾಣುತ್ತಿದ್ದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿ ಬದುಕುತ್ತಿದ್ದರು. ಅವರ ವಚನಗಳು ದೀಪದ ಬೆಳಕಿನಂತೆ ನಿತ್ಯ ಜೀವನದಲ್ಲಿ ಮಾರ್ಗದರ್ಶನ ಮಾಡುತ್ತಿದ್ದವು.
ಮೊದಲಿನ ಶಿವಶರಣರ ಜೀವನಕ್ಕೂ ಈಗಿನ ಶಿವಶರಣರ ಜೀವನಕ್ಕೂ ಬಹಳ ವ್ಯತ್ಯಾಸವಿದೆ. ಮೊದಲಿನ ಶರಣರು ವಚನಗಳನ್ನು ಬರೆಯುವ ಮೊದಲು ತತ್ವ ಸಿದ್ಧಾಂತಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ತದನಂತರ ವಚನಗಳನ್ನು ಬರೆದ ಶಿವಶರಣರು ಸಮಾಜದ ಚಿಂತಕರಾಗಿದರು. ಅವರಾಡಿದ ಮಾತುಗಳನ್ನು ಕೂಡ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು.
ಈಗಿನ ಶರಣರಿಗೆ ಅನುಕೂಲತೆಗಳು ಸಾಕಷ್ಟಿವೆ. ಆದರೆ ಮನೋಭಾವನೆ ಕುಂಠಿತವಾಗುತ್ತಿದೆ. ನೂರಕ್ಕೆ ಐದರಷ್ಟು ಶರಣರು ಜ್ಞಾನದ ಅರಿವು ಬಿತ್ತುವವರಿರಬಹುದು. ಆದರೆ ನೂರಕ್ಕೆ ತೊಂಬತ್ತೈದರಷ್ಟು ಶರಣರು ಬರೀ ಡೊಂಗಿ ಶರಣರಾಗಿದ್ದಾರೆ. ಯಾವುದೇ ಚಿಂತನೆ, ಸಂದೇಶ, ಬದಲಾವಣೆಯ ಬಗ್ಗೆ ಮತ್ತೊಬ್ಬರಿಗೆ ತಿಳಿಸಬೇಕಾದರೆ ಮೊದಲು ನಮ್ಮನ್ನು ನಾವು ವಿಮರ್ಶಿಸಿ ಕೊಳ್ಳಬೇಕಾಗುತ್ತದೆ. ಕಾಯಾ, ವಾಚಾ, ಮನಸಾ ನಾವು ಎಷ್ಟರ ಮಟ್ಟಿಗೆ ಶರಣ ಚಿಂತನೆ ಅಳವಡಿಸಿಕೊಂಡಿದ್ದೆವೆ. ವರ್ತಮಾನದ ಸಧ್ಯದ ಪರಿಸ್ಥಿತಿಯಲ್ಲಿ ದೇಶ ದೇಶಗಳ ನಡುವಿನ ದ್ವೇಷ ಭಾವನೆ, ಸ್ವಾರ್ಥತೆ, ಸಮಾಜದಲ್ಲಿ ಹುಟ್ಟಿಕೊಂಡ ವರ್ಗಭೇಧ, ಜಾತಿಭೇದ ಬೆಳೆದು ಹೆಮ್ಮರವಾದಂತಿದೆ. ತಾವು ಎಷ್ಟು ದಿನ ಬದುಕುವವರು ಎಂಬುದು ತಿಳಿದಿಲ್ಲ, ಆದರೆ ಸಂಗ್ರಹಿಸುವ ಕೂಡಿಡುವ ಭಾವನೆ ಬಹು ಜನರ ಮನದಲ್ಲಿ ಹಾಸು ಹೊಕ್ಕಂತಿದೆ. ಇದೆಲ್ಲದರ ಕೆಟ್ಟ ಪ್ರಭಾವ ಮುಂಬರುವ ಮಕ್ಕಳಲ್ಲಿಯೂ ಬೇರೂರುತ ಬರುವುದರಲ್ಲಿ ಎರಡು ಮಾತಿಲ್ಲ.
ಹಿರಿಯರು ಹೇಳುತ್ತಿದ್ದರು, ಅವಗುಣ ಬಿಟ್ಟು ಶಿವಗುಣ ಪಡೆಯಿರಿ. ಈ ಮಾತು ಸಧ್ಯದ ಪರಿಸ್ಥಿತಿಯಲ್ಲಿ ಮನಮುಟ್ಟುವಂತಿದೆ.
ಅವಗುಣ ಅಂದರೆ ಜೀವನದ ಮಧ್ಯ ಬಂದು ಕ್ಷಣಕಾಲದಲ್ಲಿ ಬೇರು ಬಿಟ್ಟು ಮರೆಯಾಗಿ ಹೋಗುವುದು. ಇಲ್ಲಿ ಬೇರು ಅಂದರೆ ಅಜ್ಞಾನದ ಅಂಧಕಾರದಲ್ಲಿ ಮುಳಿಗಿದ ಜೀವನ. ಇಂತಹವರು ಜೀವನ ಪಾವನವಾಗಬೇಕಾದರೆ ವಚನಗಳ ಚಿಂತನೆ ಮಾಡುವುದು ಅತ್ಯವಶ್ಯಕ.

ಇಲ್ಲಿ ವಚನ ಅಂದರೆ ಪ್ರಮಾಣ ಮಾಡು ಅಂತ. ನಮ್ಮ ಅವಗುಣಗಳನ್ನು ಅಳಿಸಿ ಕೊಂಡು ಶಿವಗುಣವನ್ನಾಗಿ ಮಾಡಿಕೊಳ್ಳುವುದು. ಇದರ ತಾತ್ಪರ್ಯ ಅರಿವಿಗೆ ಬಾರದನ್ನು ಅರಿಯಲು ತನ್ನ ಅಂತರಾತ್ಮದ ಅರಿವಿನ ಬಾಗಿಲು ತಟ್ಟಬೇಕು. ನಮ್ಮ ಒಳ್ಳೆಯ ನಡೆನಡುಗಿಗಳೊಂದಾದ ಶಿವಭಕ್ತನಾಗಬೇಕು, ಶಿವಗುಣ ಹೊಂದಬೇಕು. ಗಟ್ಟಿಯಾಗಿ ನಿಲ್ಲುವುದು. ಗೊಂದಲಗೊಳಗಾದ ನಮ್ಮ ಮನಸನ್ನು ಗಟ್ಟಿಯಾಗಿ ನಿಲ್ಲಿಸುವಂತಹದು. ಅರಿವು ಮೂಡಿದಾಗ ಸರಿತಪ್ಪಿನ ಜ್ಞಾನ ಅರಿವಾಗುತ್ತದೆ. ಈ ಸಮಾಜದಲ್ಲಿನ ಪ್ರತಿಯೊಬ್ಬರು ಸಮಾಜ ಮುಖಿಯಾಗಿ ವಚನಗಳನ್ನು ಮಾಧ್ಯಮವನ್ನಾಗಿ ಇಟ್ಟುಕೊಂಡು
ಅನುಭವಗಳನ್ನು ಹಂಚಿಕೊಳ್ಳುವುದರಿಂದ ವಚನಗಳ ಚಿಂತನವಾಗುತ್ತದೆ.

ಹನ್ನೆರಡನೆ ಶತಮಾನದಲ್ಲಿ ಶರಣರು ತಮ್ಮ ಚಿಂತನೆಗಳನ್ನು ಅನುಭವಗಳನ್ನು ವಚನಗಳ ಮೂಲಕ ಜನ ಸಾಮಾನ್ಯರಿಗೂ ತಿಳಿಯುವ ಹಾಗೆ ಬರೆದಿಟ್ಟಿದ್ದಾರೆ. ಅವುಗಳನ್ನು ಅಧ್ಯಯನ ಮಾಡಿ ತಿಳಿದುಕೊಂಡು ನಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಸಾಕು.
ವರ್ತಮಾನದಲ್ಲಿ ಎಲ್ಲವೂ ಇದ್ದರೂ ಮನಃಶಾಂತಿ, ಬದುಕಿನಲ್ಲಿ ನೆಮ್ಮದಿ, ನಿಜವಾದ ಸಂತಸ ಸಂಭ್ರಮ ಕಳೆದುಕೊಂಡಿದ್ದೆವೆ. ಈವಾಗ ಕಾಣುವುದೆಲ್ಲ ತೋರಿಕೆಯ ವಿಷಯವಾಗಿದೆ. ಬರೀ ಪೊಳ್ಳು, ಸುಳ್ಳು, ಯಾರ ಮೇಲು ನಂಬಿಕೆ ಹುಟ್ಟುವುದೇಯಿಲ್ಲ. ಮಾನವ ಜನ್ಮ ತಾಳಿದ ಮೇಲೆ ಬೆಳೆದಂತೆ, ಕಂಡಂತೆ, ಪಡೆದಂತೆ ಹಲವು ರೂಪನಾಮಗಳಿಂದ ಗುರುತಿಸಲ್ಪಡುತ್ತಾನೆ. ಆದರೆ ಇಲ್ಲಿ ಶರಣರು ನಾಮರೂಪಕ್ಕಿಂತ ಆತ ಮಾಡುವ ಕಾಯಕಕ್ಕೆ ಬೆಲೆಕೊಟ್ಟಿದ್ದಾರೆ. ಹತ್ತು ಬೆರಳುಗಳನ್ನು ಸೆವಿಸಿ, ಐದು ಬೆರಳುಗಳಿಂದ ಉಣ್ಣಿರೋ. ಸತ್ಯ ಶುದ್ಧ ಕಾಯಕದಲ್ಲಿ ಕೈಲಾಸದ ನಿತ್ಯ ತೃಪ್ತಿಯನ್ನು ಕಾಣಿರೋ. ನಮ್ಮಲ್ಲಿರುವ ಸೂಪ್ತ ಶಕ್ತಿಯನ್ನು ಗುರುತಿಸಿಕೊಂಡು ಸೂಕ್ತ ಪರಿಶ್ರಮ ಪಟ್ಟಲ್ಲಿ ನಮ್ಮ ಬದುಕು ಕೈಲಾಸವಾಗುವುದು.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದಿಪ್ತಿಯಂತಿರಬೇಕು
ನುಡಿದರೆ ಸ್ಪಟೀಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವ ನೆಂದಾತ ಒಲಿಯುವನಯ್ಯ
ಇಲ್ಲಿ ಇನ್ನೊಂದು ಮಾತು ನೆನಪಾಗುತ್ತದೆ. ನಮ್ಮ ನಿಮ್ಮ ದೃಷ್ಟಿ ಮತ್ತು ಸ್ಪರ್ಷ ಪರುಶವಾಗಬೇಕು. ಆವಾಗ ಶಿವಗುಣ ಪಡೆಯುತ್ತೆವೆ. ಪರುಶ ಅಂದರೆ ಮುಟ್ಟಿದ್ದೆಲ್ಲಾ ಬಂಗಾರವಾಗಬೇಕಂತಲ್ಲ ನಮ್ಮನ್ನು ಪರರು ಕಂಡಾಗ ನಮ್ಮನ್ನು ಅಪ್ಪಿಕೊಳ್ಳುವ ಹಾಗೆ, ಒಪ್ಪಿಕೊಳ್ಳುವ ಹಾಗೆ ಅವರಲ್ಲಿ ನಮ್ಮ ಬಗ್ಗೆ ಒಳ್ಳೆಯ ಭಾವನೆ, ಪ್ರೀತಿ, ಬಿಂಬಿತವಾಗಬೇಕು. ಅದಕ್ಕೆ ನಮ್ಮ ಅಂತರಾತ್ಮ ಒಪ್ಪಿಕೊಳ್ಳುವ ಹಾಗೆ ನಡೆನುಡಿ, ಸಹಾಯ ಸಹಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮೊದಲು ನಾವು ನಂಬಿಗಸ್ಥರಾಗಬೇಕು, ಪ್ರಾಮಾಣಿಕರಾಗಬೇಕು, ಹಿತೈಸಿಗಳಾಗಬೇಕು, ಸಮಾನ ಭಾವನೆಯ ಮನಸ್ಕರುಳ್ಳವರಾಗಬೇಕು.

ವರ್ತಮಾನದಲ್ಲಿ ಮನುಜರಿಗೆ ಮನುಜರು ಗುರುತಿಸಿಕೊಂಡು ಅಮರರಾಗಿ ಉಳಿದುಕೊಳ್ಳುವುದು ಬಹಳ ವಿರಳ. ಎಲ್ಲಾ ತಾತ್ಪುರ್ತಿಕ ಜೀವನ. ಇಂದಿನವರನ್ನು ನಾಳೆ ಮರೆಯುತ್ತೆವೆ. ಬಹಳ ದೂರ ಹೋಗುವುದು ಬೇಡ. ತಕ್ಕಮಟ್ಟಿಗೆ ನಮ್ಮ ವಂಶಸ್ಥರ ಹೆಸರುಗಳು, ನಮ್ಮ ಮೂಲ ಕಸುಬು, ಅವರ ನಡೆನುಡಿಗಳು ಬಗ್ಗೆ ನಮಗೆ ಗೊತ್ತಿಲ್ಲವೆಂದ ಮೇಲೆ ನಮ್ಮ ಮುಂದಿನ ಪಿಳಿಗೆಗಳಿಗೆ ಹೆಳಲು ಕೇಳಲು ಏನೂ ಉಳಿದಿಲ್ಲ. ಯಾವುದು ಗಟ್ಟಿಯಾಗಿರುತ್ತದೋ, ಸ್ಥಿರವಾಗಿರುತ್ತದೋ ಅಷ್ಟು ಮಾತ್ರ ಉಳಿಯುತ್ತದೆ.
ಅದೇ ಹನ್ನೆರಡನೆಯ ಶತಮಾನದಲ್ಲಿ ನಮ್ಮ ಶರಣರು ರಚಿಸಿಕೊಟ್ಟ ವಚನಗಳು. ನಮ್ಮ ಶರಣರು ಹೇಗಿದ್ದರೋ ಹಾಗೆಯೇ ಅವರ ವಚನಗಳಿದ್ದವು ಅಂದರೆ

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ(ಅಂಧಕಾರದ)ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಪರುಷದ ಬಲದಿಂದ ಅವಲೋಕದ ಕೇಡು ನೋಡಯ್ಯ
ಕೂಡಲ ಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯ.

ವರ್ತಮಾನ ಮನೋವಿಜ್ಞಾನದ ಮೇಲೆ ಅವಲಂಬವಾದರೆ ನಮ್ಮ ಶರಣರು ಜ್ಞಾನದ ಬಲವನ್ನು, ಜ್ಞೋತಿಯ ಬಲವನ್ನು, ಹೊರಗಣ್ಣಿಗೆ ಕಾಣದೆ ಒಳಗಣ್ಣಿನಿಂದ ಅರಿಯುವ ಸಾಧನೆಯ ತಪಸ್ಸಿನ ಬಲವನ್ನು ವಿವರಿಸಿದ್ದಾರೆ. ಅಕ್ಷರದ ಅರಿವು, ಜ್ಞಾನದ ಹಸಿವು, ಅನುಸಂಧಾನದ( ಧ್ಯಾನ) ಮಾರ್ಗವು ಅನುಭವ ಮಂಟಪದಲ್ಲಿ ಚಿಂತನೆಯ ವಿಷಯಗಳಾಗಿ, ವಚನಗಳು ಹುಟ್ಟಿಕೊಂಡಿವೆ ಎಂದು ಹೇಳಿದ್ದಾರೆ.

ಅನುಭವ ಮಂಟಪ ಕಲ್ಲಿನ ಗೊಡೆಯಾಗಿರಲಿಲ್ಲ, ಅರಿವಿನ ಅನುಸಂಧಾನದ ಚಿಂತನೆಯ ಗೂಡಾಗಿತ್ತು. ಸಮಾಜ ವಿಕಸನವಾಗ ಬೇಕಾದರೆ ಮೊದಲು ವ್ಯಕ್ತಿ ವಿಕಸನ ಮುಖ್ಯವೆಂದು ಎಲ್ಲಾ ಶರಣರು ಅರುಹಿದ್ದಾರೆ. ಶರಣರ ಸತ್ಯದ ನಿಲುವು ಅಸತ್ಯಕೆ ಎಡೆಮಾಡಿ ಕೊಡಲಿಲ್ಲ. ಎಮಗೆ ಸೋಕಿದ ಸೊಂಕು(ಅನಾಗರಿಕತೆ) ಕೇಡು ಎಂದಿದ್ದಾರೆ. ಸಾಮೂಹಿಕ ಬದಲಾವಣೆಗಾಗಿ ಚಿಂತನಕೆ ಒತ್ತು ಕೊಟ್ಟವರು ನಮ್ಮ ಶರಣರು.
ವಚನಗಳು ಬದುಕುವ ಕಲೆಯನ್ನು ಕಲಿಸುತ್ತೇವೆ. ತಿಳಿದು ನೋಡಿದರೆ ವಚನಗಳಲ್ಲಿ ಯಾವುದಿಲ್ಲ ಹೇಳಿ. ಸಾಹಿತ್ಯವಿದೆ, ಮನಶಾಸ್ತ್ರವಿದೆ, ಅರ್ಥಶಾಸ್ತ್ರವಿದೆ, ಸಾಮಾನ್ಯ ಜ್ಞಾನವಿದೆ, ವಿಜ್ಞಾನವಿದೆ ನಿಮಗೆ ಏನು ಬೇಕು ಎಲ್ಲವೂ ಇದೆ. ಆದರೆ ಅದರದೇ ಆದ ಮಾರ್ಗಸೂಚಿ ಶರಣರ ಚಿಂತನಗಳಿಂದ ವಚನಗಳಾಗಿವೆ. ಇವೆಲ್ಲವುಗಳ ಪರಿಜ್ಯಾನವೇ ವಚನಗಳು ಬದುಕಿಗೆ ಸರಿಯಾದ ದಾರಿ, ಮಾರ್ಗ, ಜ್ಞಾನ , ಅರಿವು ಹಂಚುವುದಾಗಿವೆ. ವರ್ತಮಾನದಲ್ಲಿ ಜನರು ಇದರ ಲಾಭ ಪಡೆದುಕೊಳ್ಳಬೇಕು.
ಜ್ಞಾನ, ವಚನಗಳ ಮೌಲ್ಯಯುತ ರಾಶಿಯ ಸುರುಳಿ. ಉಡುವ ಉಂಬುವ, ನುಡಿವ ನಡೆವ ಬದುಕಿಗೆ ನಿತ್ಯಪಾಠದ ಅರುಹಿಕೆಯಾಗಿವೆ. ೯೦೦ ವರ್ಷಗಳು ಕಳೆದರು ಅಳಿಸಲಾಗದ, ಮರೆಯಾಗದ, ಗಟ್ಟಿತನದ ವಚನಗಳು ಎಲ್ಲರ ಬಾಯಲ್ಲಿ ಪಠಣವಾಗಿವೆ. ನೋಡಿ ಮನುಜನ ಬದುಕು ಶರಣರ ಬದುಕಿನಂತಿರಬೇಕು. ಪಿಳಿಗೆಯಿಂದ ಪಿಳಿಗೆಗೆ ತಲುಪುವಂತಿರಬೇಕು. ಯಾಕೆಂದರೆ ನಮ್ಮ ಶರಣರು ತಮ್ಮ ಕಸುಬಿಗೆ, ಕಾಯಕಕ್ಕೆ ಬೆಲೆಕೊಡುವುದಲ್ಲದೆ ಸಮಾಜದಲ್ಲಿ ಎಲ್ಲರಿಗೂ ಸಮಭಾವನೆ, ಸಮಾನತೆಯಿಂದ ಒಂದಾಗಿ ಬಾಳುವ ಪರಿ ಕಲಿಸಿದವರು.

ಅಂತಹ ಚಿಂತನೆಗಳು ನಮ್ಮಲ್ಲಿ ಮನೆಮಾಡಬೇಕು ಅಂದಾಗ ನಮ್ಮ ಶರಣರು ಚಿಂತನೆಗೂ ನಾವು ಮಾಡುವ ಚಿಂತನೆಯಗೂ ಒಂದು ಅರ್ಥ ಕಲ್ಪಿಸಿದಂತಾಗುತ್ತದೆ.
ತಾತ್ಕಾಲಿಕ ಸುಖ ನೀಡುವ, ಖುಷಿ ಕೊಡುವ, ಮಾರುಹೋಗುವ ಹೆಣ್ಣು ಹೊನ್ನು ಮಣ್ಣಿಗಾಗಿ ವ್ಯಕ್ತಿ ನಾಶವಾಗುವುದು ಬೇಡ.
ಯಾರೂ ಕದಿಯದ, ಕಸಿದುಕೊಳ್ಳದ ಜ್ಞಾನವನ್ನು ಸಂಪಾದಿಸಿಕೊಂಡು ಬದುಕಿನ ಮೌಲ್ಯ ಅರಿಯೋಣ. ಅದರಲ್ಲಿ ತೃಪ್ತಿ, ನೆಮ್ಮದಿ,ಆನಂದ, ಸಮಾಧಾನ ಮತ್ತು ಶಾಂತತೆಯ ಬದುಕು ಕಾಣಲು ಸಾಧ್ಯ.
ಬೆಳಕು ಚೆಲ್ಲುವುದು ಸೂರ್ಯನ ಕಾಯಕ, ಬೆಳದಿಂಗಳು ಹರಿಸುವುದು ಚಂದ್ರನ ಕಾಯಕ, ಮಿನುಗುವುದು ನಕ್ಷತ್ರಗಳ ಕಾಯಕ, ಸೃಷ್ಟಿಯನ್ನು ಕಾಪಾಡುವುದು ಭೂಮಿಯ ಕಾಯಕ, ಜೀವಜಾಲದಕೊಂಡಿಗಳಲ್ಲಿ ಪಶು ಪಕ್ಷಿಗಳು ಬದಕುವ ಕಾಯಕ, ಪರಾಗ ಸ್ಪರ್ಷ ಹಿರುವುದು ದುಂಬಿ, ಕಿಟಕಿಗಳು ಕಾಯಕ. ಇವೆಲ್ಲ ನಾಶವಾದರೆ ಮನುಷ್ಯನೂ ನಾಶವಾಗುತ್ತಾನೆ. ಸೃಷ್ಟಿಯನ್ನು ನೋಡಿ ಆನಂದಿಸುತ ಅನುಭವಿಸು. ಪ್ರತಿಯೊಂದಕ್ಕೂ ಮರು ಹುಟ್ಟುವುದು ಮತ್ತು ನಾಶವಾಗುವುದು ಇದ್ದೆಯಿದೆ. ಇರುವ ತನಕ ಕಾಪಾಡಿಕೊಳ್ಳುವುದು, ಪೋಷಿಸುವುದು, ಸಂರಕ್ಷಿಸುವುದು ಕೂಡ ಮನುಜ ಲಕ್ಷಣವಾಗಬೇಕು. ಮನುಜನಿಂದಲೇ ಅಳಿಸುವ ಮತ್ತು ಬೆಳೆಸುವ ಕ್ರೀಯೆ. ಯಾವುದನ್ನು ಅಳಿಸಬೇಕು, ಯಾವುದನ್ನು ಬೆಳೆಸಿಕೊಳ್ಳಬೇಕು ಎಂಬುದು ವಚನಗಳ ಚಿಂತನೆಯಿಂದ ಮಾತ್ರ ಸಾಧ್ಯ.

ನಮ್ಮ ವಚನಗಳಲ್ಲಿ ಅಗಾಧ ಶಕ್ತಿಯಿದೆ. ಅರ್ಥೈಸಿಕೊಂಡು ಆಯಾ ಸಂದರ್ಭಕ್ಕೆ ತಕ್ಕಂತೆ ಸದುಪಯೋಗ ಪಡೆದುಕೊಳ್ಳಬೇಕು. ವಚನ ಸಾಹಿತ್ಯ ಅದರಲ್ಲಿ ಕನ್ನಡದಲ್ಲಿ ಬರೆದ ಸಾಹಿತ್ಯ ಬಹು ದೊಡ್ಡ ಸ್ಥಾನ ಪಡೆದುಕೊಂಡಿದೆ. ಹೊರದೇಶಿಗರು ಕೂಡ ನಮ್ಮ ವಚನಗಳನ್ನು ಓದುವ, ಪಾಲಿಸುವ ಅಭಿರುಚಿ ಬೆಳೆಸಿಕೊಳ್ಳುವಂತೆ ಅಲ್ಲಲ್ಲಿ ಕಂಡುಬರುತ್ತಿದೆ. ನಮ್ಮ ನಾಡಿನಲ್ಲೇ ಹುಟ್ಟಿ ಬೆಳೆದು ರಚಿತವಾದ ವಚನಗಳನ್ನು ಚಿಂತನೆ ಮಾಡುತ್ತಾ ಶರಣರನ್ನು ನೆನೆಯುತ್ತಾ ವರ್ತಮಾನದ ಕಾಲವನ್ನು ಏಕೆ ಪರಿವರ್ತಿಸಬಾರದು?

✍️ ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

Don`t copy text!