ಪರೀಕ್ಷೆ ಎಂಬ ಪರೀಕ್ಷೆ
ಪ್ರಪಂಚದ ಎಲ್ಲಾ ದೇಶಗಳಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದನ್ನು ತಿಳಿಯುವ ಸಲುವಾಗಿ ಶಾಲಾ ಕಾಲೇಜ್ಗಳಲ್ಲಿ ಪರೀಕ್ಷಾ ಅಳವಡಿಸಿಕೊಂಡು ಮೌಲ್ಯಾಂಕನ ವ್ಯವಸ್ಥೆಗೆ ಜೋತು ಬಿದ್ದಿದ್ದಾರೆ.
ಭಾರತದಲ್ಲಿ ಇಡೀ ವರುಷ ತರಗತಿಯ ಕೋಣೆಯಲ್ಲಿ ಪಠ್ಯವನ್ನಾಧರಿಸಿ ಪಾಠ ಪ್ರವಚನಗಳು ಜರುಗಿ ಎಪ್ರಿಲ್ ಮೇ ತಿಂಗಳಿನಲ್ಲಿ ವಾರ್ಷಿಕ ಪರೀಕ್ಷೆಗಳು ಜರುಗುತ್ತವೆ.
ಇಂದಿನ ದಿನಮಾನಗಳಲ್ಲಿ ಅಂಕಗಳ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳಿಗೆ ಅಂಕೆ ಇಲ್ಲದಾಗಿದೆ.ಮೌಲ್ಯಗಳು ಕುಸಿಯುತ್ತಿದ್ದು,ನೈತಿಕತೆ ಪಾತಾಳ ಕಂಡಿದೆ ಇದಕ್ಕೆ ಯಾರು ಹೊಣೆ..?
ಪ್ರತಿಯೊಬ್ಬ ಪೋಷಕರು ತಮ್ಮ ಮಗ ಮಗಳು ಸರಕಾರಿ ಹುದ್ದೆ ಗಿಟ್ಟಿಸುವಂತಾಗಲಿ ಎಂಬ ಆಶಯ ಹೊತ್ತು ತಮ್ಮ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಕಡೆಗೆ ಗಮನ ನೀಡದೆ ಮಕ್ಕಳಿಗೆ ಕೇವಲ ಓದು ಓದು ಎಂದು ಹೇಳುತ್ತಾ ಆಟಗಳ ಮರೆಸಿಬಿಟ್ಟಿದ್ದಾರೆ ಒಂದು ದಿನವೂ ಬದುಕಿನ ಸಿಹಿಯನ್ನು ಉಣ್ಣದೇ ಇಹಲೋಕದ ಯಾತ್ರೆ ಮುಗಿಸಿಬಿಡುತ್ತಾರೆ.
ಪರೀಕ್ಷೆಗಳ ಭಯದಲ್ಲಿ ಅನೇಕ ಮಕ್ಕಳು ಶಾಲೆ ಕಾಲೇಜಿನಿಂದ ಹೊರಗುಳಿದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ.ಪರೀಕ್ಷೆಗಳಿಗೆ ಯಾಕೆ ಹೆದರಬೇಕು?ಅದೇನು ಹುಲಿ ಕರಡಿಯೇ ನಿಮ್ಮನ್ನು ತಿಂದು ತೇಗಿ ಬಿಡುತ್ತದೆಯೇ?
ಅಬ್ಬಬ್ಬಾ ಆದರೆ ಏನಾಗಬಹುದು ಅನುತ್ತೀರ್ಣ ತಾನೆ ಆಗಲಿಬಿಡು ಮಹಾನ್ ಸಾಧಕರೆಲ್ಲಾ ಫೇಲ್ ಆದವರೇ ಅದರಿಂದ ಪಾಠ ಕಲಿತು ಜಗದ್ವಿಖ್ಯಾತರಾಗಿದ್ದಾರೆ.
ಹಾಗಂತ ನೀವು ಅಪಯಶಸ್ಸು ಪಡೆಯಿರಿ ಎಂಬುದು ನಮ್ಮ ಆಶಯ ಅಲ್ಲ,ಬದಲಾಗಿ ಒಂದು ವೇಳೆ ಹಾಗೇನಾದರು ಆದಲ್ಲಿ ಜೀವಕ್ಕೆ ಅಪಾಯ ಮಾಡಿಕೊಳ್ಳಬಾರದೆಂಬ ಹೆಬ್ಬಯಕೆಯಿಂದ ಪ್ರೋತ್ಸಾಹದ ನುಡಿಗಳನ್ನು ಕಟ್ಟಿಕೊಟ್ಟಿದ್ದೇವೆ.
ಪರೀಕ್ಷೆಯ ಅಂಕಗಳು ಕೇವಲ ಸಂಖ್ಯೆಗಳಾಗಿದ್ದು ಕಾಗದದಲ್ಲಿ ಮೂಡಿ ಪ್ರಮಾಣ ಪತ್ರವಾಗಿ ಬರತ್ತವೆ,ಆದರೆ ಜೀವನ ಪಯಣ ಅಂಕಗಳನ್ನು ಸಂಖ್ಯೆಗಳನ್ನು ಕೂಡಿಸಿ, ಕಳೆದು,ಗುಣಿಸಿ ಮತ್ತು ಭಾಗಿಸಿ ಜೀವಂತವಾಗಿ ಲೆಕ್ಕಾಚಾರದಲ್ಲಿ ಬಹು ದಿನಗಳನ್ನು ದೂಡಬೇಕಾಗಿರುವುದರಿಂದ ಜೀವನ ಪರೀಕ್ಷೆಯಲ್ಲಿ ಯಶಸ್ಸು ಪಡೆಯಿರಿ.
ಹಗಲಿರುಳು ನಿದ್ದೆಗೆಟ್ಟು ಓದಿ ಪರೀಕ್ಷಾ ಸಮಯದಲ್ಲಿ ಆರೋಗ್ಯ ಕೆಡಿಸಿಕೊಂಡು ಪರೀಕ್ಷೆಗೆ ಗೈರುಹಾಜರಿಯನ್ನು ಹೊಂದಿ ಒಂದು ವರ್ಷದ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ.ಪಾಲಕರೂ ಆತಂಕಪಡುವಂತೆ ಮಾಡಬೇಡಿ.ಇಂದಿನಿಂದ ಸಿದ್ಧತೆ ನಡೆಸಿರಿ ನಿಮಗೆ ಶುಭವಾಗಲಿ.
-ಶಂಕರ್ ಜಿ ಬೆಟಗೇರಿ.
ಉಪನ್ಯಾಸಕರು
9886575441