ಮಾರ್ಚ್ 1 ರಿಂದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ-ಪಮ್ಮಾರ

ಮಾರ್ಚ್ 1 ರಿಂದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ-ಪಮ್ಮಾರ

e-ಸುದ್ದಿ ವರದಿ:ಇಳಕಲ್

ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸಿ ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ ಎಸ್ ಪಮ್ಮಾರ ತಿಳಿಸಿದರು.

2023-24 ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರಿ ನೌಕರರ ವೇತನ ಭತ್ಯೆಗಳ ಬಗ್ಗೆ, ಹಳೇ ಪಿಂಚಣಿ ಯೋಜನೆ ಜಾರಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದರಿಂದ ಸಹಜವಾಗಿ ಸರ್ಕಾರಿ ನೌಕರರಲ್ಲಿ ನಿರಾಶೆ ಮೂಡಿಸಿದೆ.
ಈಗಾಗಲೇ ಮಾನ್ಯ ಸುಧಾಕರ ರಾವ್ ರವರ ಅಧ್ಯಕ್ಷತೆಯಲ್ಲಿ ವೇತನ ಆಯೋಗವನ್ನು ರಚಿಸಲಾಗಿದ್ದು,ಆಯೋಗದ ಮುಂದೆ ವಿಸ್ತೃತ ವರದಿಯನ್ನು ಸಂಘದಿಂದ ಸಿದ್ದಪಡಿಸಿ ಸಲ್ಲಿಸಲಾಗಿದೆ.

ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಹಾಗೂ ಸರ್ಕಾರದ ಅಧೀನಕ್ಕೆ ಒಳಪಡುವ ನೌಕರರ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ನಮ್ಮ ಮೂಲಭೂತ ನ್ಯಾಯಸಮ್ಮತ ಹಕ್ಕಾಗಿದ್ದು, ಪ್ರಸ್ತುತ ದಿನಮಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ನೌಕರರ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ನೌಕರರ ವೇತನ ಪರಿಷ್ಕರಣೆ ಮಾಡಿ ಆರ್ಥಿಕ ವ್ಯತ್ಯಾಸ ಸರಿಪಡಿಸುವುದು ಸರ್ಕಾರದ ಜವಾಬ್ದಾರಿ ಆಗಿದ್ದರೂ ಸಹ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.
ರಾಜ್ಯದ ಎನ್ ಪಿ ಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡುವುದು ಸರ್ಕಾರದ ಪ್ರಮುಖ ಜವಾಬ್ದಾರಿ ಆಗಿದೆ.ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸಗಡ್,ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆ ಜಾರಿ ಮಾಡಲಾಗಿದೆ ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಮಾರ್ಚ್ 01 ರಿಂದ ಸರ್ಕಾರಿ ನೌಕರರು, ಸರ್ಕಾರದ ಅಧೀನಕ್ಕೆ ಒಳಪಡುವ ಸರ್ವ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ರಂಗನಾಥ ಮಾಸರೆಡ್ಡಿ,ಜಿಲ್ಲಾ ಖಜಾಂಚಿ ಮುತ್ತಣ್ಣ ಬೀಳಗಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಶಂಕರ ಲಮಾಣಿ ಮಾತನಾಡಿದರು.

ನೌಕರರ ಸಂಘದ ಖಜಾಂಚಿ ಎಂ ಎಚ್ ಗೌಡರ,ಕಾರ್ಯದರ್ಶಿ ಗುಂಡಪ್ಪ ಕುರಿ,ಗೌರವಾಧ್ಯಕ್ಷ ಎಸ್ ಎನ್ ಗಡೇದ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಿ ಎಸ್ ಅಡವಿ,ಗ್ರಾ ಪಂ ಕಾರ್ಯದರ್ಶಿ ಸಂಘದ ಅಧ್ಯಕ್ಷ ಈಶ್ವರಪ್ಪ ಹುದ್ದಾರ,ಪಿಡಿಓ ಸಂಘದ ಅಧ್ಯಕ್ಷ ಅಮರೇಗೌಡ ಜಾರಡ್ಡಿ,ವಿಕಲಚೇತನ‌ ನೌಕರ ಸಂಘದ ಜಿಲ್ಲಾ ಖಜಾಂಚಿ ಎಸ್ ಎಸ್ ರೇಶ್ಮೀ,ಡಿ ಗ್ರುಪ್ ನೌಕರ ಸಂಘದ ಅಧ್ಯಕ್ಷ ಅನಿಲ ಅಡವಿ,ಪದಾಧಿಕಾರಿಗಳಾದ ಶರಣು ಬಿರಾದಾರ, ಜಿ ಟಿ ರಾಠೋಡ,ಶ್ರೀಶೈಲ ಕಡ್ಲಿಮಟ್ಟಿ ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!