ಮಹಿಳಾ ದಿನಾಚರಣೆ

ಮಹಿಳಾ ದಿನಾಚರಣೆ

ಮಕ್ಕಳಿಗೆ ಹಣ್ಣು ತರಲೆಂದು ಹೋದಾಗ
ನಮ್ಮೂರಿನಾಕೆಯಲ್ಲಿ ಆಕೆ
ಕೊಟ್ಟಷ್ಟೇ ಹಣ್ಣಿಗೆ,ಕೇಳಿದಷ್ಟೇ
ಹಣ ಕೊಟ್ಟು ತಿರುಗಿದಾಗ
ಹಿಂದೆ ಕೊಂಕಳಲ್ಲಿ ಕೂಸನ್ನು
ಹೊತ್ತವಳು ಭಿಕ್ಷೆಗಾಗಿ
ಕೈಮುಗಿದ ಕೂಡಲೇ
ಥಟ್ಟನೇ ನೆನಪಾಗಿ,
ಜೇಬಿನಲ್ಲಿದ್ದ ಒಂದೆರಡು
ರೂಪಾಯಿ ಚಿಲ್ಲರೆ ಕೊಟ್ಟು
ಖುಷಿಯಿಂದ ಅವಳಿಗೆ
ಶುಭಾಶಯ ಕೋರಿದೆ.

ಸುಧಾ ಮೂರ್ತಿ,
ಸಾಲುಮರದ ತಿಮ್ಮಕ್ಕಳಂಥ
ಮಹಿಳಾ ಚೇತನಗಳಿಗೆ
ಶರಣೆಂದು ಹೆಣ್ಣಿನ ಘನತೆಯ
ನೆನೆದು ಧನ್ಯನಾದೆ.

ಕಳೆದ ವರ್ಷ
ವೃದ್ಧಾಶ್ರಮಗಳಲ್ಲಿನ
ತಾಯಂದಿರ ದರ್ಶನ ಪಡೆದು
ಅವರಿಗೆ ಶುಭಾಶಯ ಕೋರಿ
ಆಶೀರ್ವಾದ ಪಡೆದಿದ್ದೆ…

ಈಗಳಿನವರೆಗೂ
ಅತ್ಯಾಚಾರಕ್ಕೀಡಾದವರು,
ಕೊಲೆಯಾದವರು,
ಮಕ್ಕಳಿಗೆ ಬೇಡವಾದವರು
ಇನ್ನೂ ಮುಂತಾದ ಇಂಥ
ಪರಿತ್ಯಕ್ತ ಹೆಣ್ಣುಗಳಿಗೆ
ದಯಾಮಯನಾದ ದೇವರು
ಒಳಿತನ್ನು ಮಾಡಲಿ ಎಂದು
ಪ್ರಾರ್ಥಿಸಿದೆ……

ಹೀಗೇ……
ಪ್ರತಿ ವರ್ಷ ಈ
ಮಹಿಳಾ ದಿನಾಚರಣೆಗಾಗಿ
ಇಂಥ ಸ್ತ್ರೀ ಸಬಲೀಕರಣದ
ಯೋಜನೆಗಳೊಂದಿಗೆ
ಕಾತರನಾಗಿರುತ್ತೇನೆ.

-ಕೆ.ಶಶಿಕಾಂತ
ಲಿಂಗಸೂಗೂರ.

Don`t copy text!