ಮುಖ್ಯ ಶಿಕ್ಷಕ ವರ್ಗಾವಣೆಗೆ ವಿರೋಧಿಸಿ ಪ್ರತಿಭಟನೆ
e-ಸುದ್ದಿ ಮಾನ್ವಿ:
ತಾಲ್ಲೂಕಿನ ತಡಕಲ್ ಗ್ರಾಮದ ಮುಖ್ಯ ಶಿಕ್ಷಕ ವರ್ಗಾವಣೆ ವಿರೋಧಿಸಿ ಎಸ್‍ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಬುಧವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಪ್ರತಿಭಟನಾನಿರತರ ಜತೆ ಚರ್ಚಿಸಿದರು.
‘ಮಹರ್ಷಿ ವಾಲ್ಮೀಕಿ ಜಯಂತಿ ದಿನದಂದು ಶಾಲಾ ಆವರಣ ಸ್ವಚ್ಛತೆಗೆ ಮಕ್ಕಳನ್ನು ಬಳಸಿಕೊಂಡ ದೂರಿನನ್ವಯ ಮುಖ್ಯ ಶಿಕ್ಷಕ ಸದಾಶಿವಪ್ಪ ಅವರನ್ನು ಬೇರೆಡೆಗೆ ತಾತ್ಕಾಲಿಕವಾಗಿ ನಿಯೋಜನೆಗೊಳಿಸಲಾಗಿದೆ. ಸದರಿ ಘಟನೆಯಲ್ಲಿ ಮುಖ್ಯ ಶಿಕ್ಷಕರು ತಪ್ಪು ಮಾಡಿಲ್ಲ ಎಂದು ಪಾಲಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಎಸ್‍ಡಿಎಂಸಿ ಪದಾಧಿಕಾರಿಗಳ ಗಮನಕ್ಕೆ ತರದೆ ಏಕಾಏಕಿ ಮುಖ್ಯ ಶಿಕ್ಷಕರನ್ನು ವರ್ಗಾಯಿಸಿರುವುದು ಸರಿಯಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಎಸ್‍ಡಿಎಂಸಿ ಅಧ್ಯಕ್ಷ ಶ್ರೀಶೈಲಗೌಡ ಮಾತನಾಡಿ, ‘ ಹಲವು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರು ಹಾಗೂ ಮೂಲಸೌಕರ್ಯಗಳ ಕೊರತೆ ಬಗ್ಗೆ ಅನೇಕ ಬಾರಿ ಗಮನಕ್ಕೆ ತಂದಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಈಗ ಮುಖ್ಯ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿರುವುದು ಸರಿಯಲ್ಲ. ಕೂಡಲೇ ಅವರನ್ನು ಇದೇ ಶಾಲೆಗೆ ಮರು ನಿಯೋಜನೆ ಮಾಡಬೇಕು. ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಖಾಲಿ ಇರುವ ಹುದ್ದೆಗಳಿಗೆ ಅಗತ್ಯ ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಮಾತನಾಡಿ, ‘ ಮುಖ್ಯ ಶಿಕ್ಷಕ ಸದಾಶಿವಪ್ಪ ಅವರ ಮರು ನಿಯೋಜನೆ ಹಾಗೂ ಶಾಲೆಯ ಇತರೆ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಲಾಗುವುದು. ಮುಂದಿನ ದಿನಗಳಲ್ಲಿ ಶಾಲೆಯ ಕುಂದುಕೊರತೆ ನಿವಾರಣೆಗೆ ಎಸ್‍ಡಿಎಎಂಸಿ ಪದಾಧಿಕಾರಿಗಳನ್ನು ಪರಿಗಣಿಸಲಾಗುವುದು’ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಮುಖಂಡರಾದ ಎಸ್.ಎಂ.ಪಾಟೀಲ್, ಅಯ್ಯನಗೌಡ, ದುರುಗಪ್ಪ ತಡಕಲ್, ಮಲ್ಲಯ್ಯ, ವಿರೇಶ, ಹನುಮಂತ ನಾಯಕ, ಅಮರಯ್ಯಸ್ವಾಮಿ, ಹನುಮಂತ ಭೋವಿ, ಯಲ್ಲಗೌಡ ಧೋತರಬಂಡಿ, ಶಿವರಾಜಪ್ಪ ಉಟಕನೂರು, ಶಿಕ್ಷಣ ಸಂಯೋಜಕರಾದ ಮಹೇಶ ಮತ್ತು ಅಬ್ದುಲ್ ಯೂನಸ್, ಶಿಕ್ಷಕರಾದ ರಮೇಶ ದೇಸಾಯಿ, ನೀಲಕಂಠ, ಕವಿತಾ ಇದ್ದರು.