ಕೂಡಲ ಸಂಗನ ಶರಣರ ಅನುಭಾವವಿಲ್ಲದವರು
ಬಚ್ಚಲ ನೀರು ತಿಳಿಇದ್ದಡೇನು?
ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು?
ಆಕಾಶದ ಮಾವಿನ ಫಲವೆಂದಡೇನು?
ಕೊಯ್ಯಲಿಲ್ಲ ಮೆಲ್ಲಲಿಲ್ಲ?
ಕೂಡಲ ಸಂಗನ ಶರಣರ ಅನುಭಾವವಿಲ್ಲದವರು
ಎಲ್ಲಿದಡೇನು,ಎಂತಾದಡೇನು?
-ಬಸವಣ್ಣನವರು
ಬ.ಷ.ವ ೧೨೨ಪುಟ ೩೩* ಸಮಗ್ರ ವಚನ ಸಂಪುಟ -೧
ಈ ವಚನದಲ್ಲಿ ಅಣ್ಣ ಬಸವಣ್ಣನವರು ಮನುಷ್ಯನ ಅನುಭಾವರಹಿತ ಬದುಕಿನ ಚಿತ್ರಣವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಪೂಜೆಗೆ ಸಲ್ಲದು ,ಬಚ್ಚಲದಲ್ಲಿನ ನೀರು ಅದೆಷ್ಟೆ ತಿಳಿಯಾಗಿದ್ದರು ಅದು ಕುಡಿಯಲಿಕ್ಕೆ ,ಪೂಜೆಗೆ ಸಲ್ಲದು . ಕಾರಣ ಮನುಷ್ಯರ ಕೊಳೆಯನ್ನು ತೊಳೆದ ನೀರು ,ಉಪಯೋಗಿಸಲು ಬಾರದು.ಅದೇ ರೀತಿ ಬೇಡವಾದ ಹೊನ್ನು ಬಂಗಾರ ಆಸ್ತಿ ಹಣ ಅವಗುಣಿಗಳ ಕಡೆಗೆ ಇದ್ದರೆ ಏನು ಫಲ ? ಅದರಿಂದ ಯಾವುದೇ ಉಪಯೋಗವಾಗದು .ಅದೇ ರೀತಿ ಆಕಾಶದಲ್ಲಿನ ಮಾವಿನ ಮರ ,ತನ್ನ ಗಿಡದ ತುಂಬಾ ರಸಭರಿತ ಹಣ್ಣು ಬಿಟ್ಟರೇನು ?ಅದನ್ನು ಮರದಿಂದ ಕೊಯ್ಯಲಿಲ್ಲ ,ಮತ್ತು ಅದರ ರುಚಿಯನ್ನು ಅನುಭವಿಸಲಿಲ್ಲ ,ಮೆಲ್ಲಲಿಲ್ಲ.
ಹಾಗೆ ಬಚ್ಚಲದ ನೀರಿನಂತೆ ತಿಳಿಯಿದ್ದರೂ ಉಪಯೋಗಕ್ಕೆ ಬಾರದ,ಬೇಡವಾದ ಸಂಪತ್ತು ,ಆಕಾಶದ ಕಲ್ಪನೆಯ ಮಾವಿನ ಮರ ಮತ್ತು ಅದರ ಹಣ್ಣು ಹೇಗೆ ಉಪಯೋಗಕ್ಕೆ ಬರುವದಿಲ್ಲವೋ ಅದೇ ರೀತಿ,ಸಮಾಜದ ಕೂಡಲ ಸಂಗನ ಶರಣರ ಅನುಭಾವವಿಲ್ಲದವರು ಯಾವುದೇ ಪದವಿ ಅಂತಸ್ತು ಅಧಿಕಾರದಲ್ಲಿದ್ದರೇನು?
ಅದು ಸಮಾಜಕ್ಕೆ ಜಂಗಮಕ್ಕೆ ಉಪಯೋಗಕ್ಕೆ ಬಾರದು. ಲಿಂಗ ಜಂಗಮ ಒಂದು ಎಂಬ ಭಾವನೆ ಗಟ್ಟಿಗೊಂಡು ಆ ಮೂಲಕ ಸಮಾಜ ಸೇವೆಯ ಪರಿಕಲ್ಪನೆ ಪ್ರತಿಯೊಬ್ಬ ಭಕ್ತನ ಆದ್ಯ ಕರ್ತವ್ಯವಾಗಬೇಕು. ಇದು ಅಪ್ಪ ಬಸವಣ್ಣನವರ ಆಶಯ .
-ಡಾ ಶಶಿಕಾಂತ .ಪಟ್ಟಣ -ಪೂನಾ