ಮೂಲಭೂತ ಸೌಲಭ್ಯಕ್ಕಾಗಿ ಮತ್ತೆ ಶಾಂತಿಯುತ ಪ್ರತಿಭಟನೆಗೆ ಕುಳಿತ ಹಿರೇಓತಗೇರಿ ಗ್ರಾಮಸ್ಥರು…
e-ಸುದ್ದಿ ಇಳಕಲ್
ಕಳೆದ 5 ತಿಂಗಳ ಹಿಂದೆ ಹಿರೇ ಓತಗೇರಿ ಗ್ರಾಮದ ಎಂ ಆರ್ ಪಾಟೀಲ್ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಗ್ರಾಮ ಪಂಚಾಯಿತಿಯ ಮುಂದೆ ಗ್ರಾಮಸ್ಥರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆ ಸುದ್ದಿ ತಿಳಿದ ಮಾನ್ಯ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿದ್ದರು. ಗ್ರಾಮಕ್ಕೆ ಬಂದಂತಹ ಅಧಿಕಾರಿಗಳು ಒಂದು ತಿಂಗಳ ಒಳಗಾಗಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಐದಾರು ತಿಂಗಳು ಕಳೆದರೂ ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಮತ್ತೆ ಹಲವು ಬಾರಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿದರು ಸ್ಪಂದಿಸದೆ ಇರುವುದರಿಂದ ಬೇಸತ್ತ ಜನರು, ಮತ್ತೆ ಗ್ರಾಮ ಪಂಚಾಯತಿ ಆವರಣದ ಮುಂದೆ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ.
ಮೂಲಭೂತ ಸೌಲಭ್ಯಗಳಾದ ರಸ್ತೆ ನೀರು ವಿದ್ಯುತ್ ಸಂಪರ್ಕ ಇಲ್ಲದಿರುವ ಬಡಾವಣೆ ಇದಾಗಿದೆ. ಇದರ ಕುರಿತು ಸಾಕಷ್ಟು ಬಾರಿ ಜನರು ಮನವಿ ನೀಡಿದರು ಯಾವುದೇ ಅಧಿಕಾರಿಗಳು ಸ್ಪಂದಿಸದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಈ ದಿನ ಗ್ರಾಮ ಪಂಚಾಯತಿಯ ಆವರಣದಲ್ಲಿ ಪ್ರತಿಭಟನೆಗೆ ಕುಳಿತಾಗ ಗ್ರಾಮ ಪಂಚಾಯಿತಿಯಲ್ಲಿ ಯಾವೊಬ್ಬ ಅಧಿಕಾರಿಗಳು ಇಲ್ಲದೇ ಇರುವುದರಿಂದ ಹಾಗೆ ಪ್ರತಿಭಟನೆಯಲ್ಲಿ ಕುಳಿತಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಲಿ ಕಾರ್ಯದರ್ಶಿಯಾಗಲಿ ಯಾರು ಇರದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.
ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬ ಗಾದೆ ಮಾತಿನಂತೆ, ಸರ್ಕಾರದಿಂದ ಬಂದಂತ ಹಣವನ್ನು ವಿನಿಯೋಗ ಮಾಡದೆ ಕಾಲ ಕಳೆಯುವ ಇಂತಹ ಅಧಿಕಾರಿಗಳಿಗೆ ಜನರೇ ಬುದ್ಧಿ ಕಲಿಸಬೇಕು.
ವರದಿಗಾರರು: ಶರಣಗೌಡ ಕಂದಕೂರ