ಕಾಗೆಗೆ ಪಿಕ್ ಶಿಶುವೆ

ಕಾಗೆಗೆ ಪಿಕ್ ಶಿಶುವೆ


ಇಕ್ಕದ ಕೋಗಿಲೆ, ಕಾಗೆಯ ತತ್ತಿಯಲ್ಲಿ,
ಸಾಕದೆ ತನ್ನ ಶಿಶುವ ಮನಬುದ್ಧಿಯಿಂದ.
ಇಕ್ಕಿದಡೇನೊ, ದೇವಾ ಪಿಂಡವ ತಂದು
ಮಾನವ ಯೋನಿಯಲ್ಲಿ ಹುಟ್ಟಿದಡೇನೊ ?
ಲಿಂಗಶರಣನು ನರರ ಯೋನಿಯಲ್ಲಿ ಹುಟ್ಟಿದಾತನೇ ಅಲ್ಲ.
ಬಾರದೆ ಪಕ್ಷಿಯ ಬಸುರಲ್ಲಿ ಅಶ್ವತ್ಥವೃಕ್ಷವು ?
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ ಕಾಗೆಗೆ ಪಿಕ ಶಿಶುವೆ ?

                                -ಹಾವಿನಾಳ ಕಲ್ಲಯ್ಯನವರು

ಸಮಗ್ರ ವಚನ ಸಂಪುಟ: 9 ವಚನದ ಸಂಖ್ಯೆ: 1112

 

ಇಕ್ಕದ ಕೋಗಿಲೆ, ಕಾಗೆಯ ತತ್ತಿಯಲ್ಲಿ ಸಾಕದೆ ತನ್ನ ಶಿಶುವ ಮನಬುದ್ಧಿಯಿಂದ.
ಕಾಗೆ ಕೋಗಿಲೆ ನೋಡಲು ಒಂದೇ ರೀತಿಯಲ್ಲಿರುತ್ತವೆ. ಕೋಗಿಲೆ ತತ್ತಿಯನ್ನು ಹಾಕಿದರೂ ಸಹಿತ ಅವುಗಳನ್ನು ಕಾವು ಕೊಟ್ಟು ಮರಿ ಮಾಡುವ ಶಕ್ತಿ ಹೊಂದಿರದ ಕಾರಣ ಕೋಗಿಲೆ ತನ್ನ ತತ್ತಿಗಳನ್ನು ಕಾಗೆಯ ಗೂಡಿನಲ್ಲಿ ಇಡುತ್ತವೆ.
ಕಾಗೆಯು ತನ್ನ ತತ್ತಿಗಳೆಂದು ಅವುಗಳಿಗೆ ಕಾವು ಕೊಟ್ಟು ಮರಿ ಮಾಡುತ್ತವೆ.
ಮುಂದೆ ಮರಿ ಕೋಗಿಲೆ ಧ್ವನಿ ಮತ್ತು ಕಾಗೆಯ ಧ್ವನಿ ವ್ಯತ್ಯಾಸ ಇರುವ ಕಾರಣ ತಾನು ಸಾಕಿದ ಸಲುಹಿದ ಕೋಗಿಲೆ ಮರಿಗಳನ್ನು ತನ್ನ ಗೂಡಿನಿಂದ ಆಚೆಗೆ ದಬ್ಬುತ್ತವೆ.

ಇಕ್ಕಿದಡೇನೊ, ದೇವಾ ಪಿಂಡವ ತಂದು ಮಾನವ ಯೋನಿಯಲ್ಲಿ ಹುಟ್ಟಿದಡೇನೊ ?

ಸೃಷ್ಟಿಯಲ್ಲಿ ದೈವಶಕ್ತಿಯು ತನ್ನ.ಮುಹೂರ್ತ ಸ್ವರೂಪದ ಪಿಂಡವನ್ನು ತಂದು ಮಾನವ ಯೋನಿಯಲ್ಲಿ ಇಟ್ಟು ಹುಟ್ಟಿಗೆ ಕಾರಣವಾದಂತೆ ಸೃಷ್ಟಿಕರ್ತ ತನ್ನ ಲೀಲಾ ಕ್ರಿಯೆಗೆ ಮಾನವ ಯೋನಿ ಬಳಸಿ ಮಾನವ ಜನ್ಮಕ್ಕೆ ಕಾರಣವಾದಂತೆ ಎಂಬುದು ಹಾವಿನಾಳ ಕಲ್ಲಯ್ಯನವರ ಅತಿ ದೊಡ್ಡ ಆಧ್ಯಾತ್ಮಿಕ ನಿಲುವುಗಳ ಹೊರ ಹಾಕುವ ಗಟ್ಟಿ ಮುಟ್ಟಾದ ಅಭಿಪ್ರಾಯ.
ಹೇಗೆ ಕೋಗಿಲೆ ಕಾಗೆಯ ಗೂಡಿನಲ್ಲಿ ತನ್ನ ತತ್ತಿಯನ್ನು ಇಟ್ಟು ಹುಟ್ಟಿಗೆ ಕಾರಣ ಆಗುವುದೋ ಆದೆ ರೀತಿ ದೇವ ತನ್ನ ಲೀಲಾ ವಿಲಾಸದ ಭ್ರೂಣ ಪಿಂಡವ ತಂದು ಮನುಷ್ಯನ ಯೋನಿಯಲ್ಲಿ ಇಟ್ಟು ಮಾನವ ಜನ್ಮಕ್ಕೆ ಕಾರಣ ಎಂದು ಸೂಕ್ತವಾಗಿ ಹೇಳಿದ್ದಾರೆ.

ಲಿಂಗಶರಣನು ನರರ ಯೋನಿಯಲ್ಲಿ ಹುಟ್ಟಿದಾತನೇ ಅಲ್ಲ

ಶರಣ ಲಿಂಗಾಯತ ಲಿಂಗಣರರ ಜಂಗಮ ತತ್ವ ಸಿದ್ಧಾಂತಗಳನ್ನು ಅರಿತವ ನರರ ಯೋನಿಯಲ್ಲಿ ಹುಟ್ಟಲು ಹೇಗೆ ಸಾಧ್ಯ ?
ಇಲ್ಲಿ ಭವಿ ಜೀವನ ನಡೆಸಲು ಸಿದ್ಧತೆ ಮಾಡುವ ಪ್ರಾಪಂಚಿಕ ವ್ಯಕ್ತಿ ಅದು ಹೇಗೆ ಪಾರಮಾರ್ಥಿಕ ಸಾಧನೆ ಮಾಡ ಬಲ್ಲ ಇದು ಕಲ್ಲಯ್ಯನವರ ಸಾತ್ವಿಕ ಪ್ರಶ್ನೆ .ಕಾರಣ ಪ್ರಾಪಂಚಿಕ ಕರ್ಮಗಳಿಂದ ಉಪಶಮನವಾಗದ ಬದುಕು ಆಧ್ಯಾತ್ಮಿಕ ಸಾಧನೆ ಮಾಡಲು ಸಾಧ್ಯವಿಲ್ಲ. ಅಂತಹ ಹುಟ್ಟು ಬದುಕು ಸಾವು ಅರ್ಥ ರಹಿತ ಎಂದಿದ್ದಾರೆ ಶರಣರು.

ಬಾರದೆ ಪಕ್ಷಿಯ ಬಸುರಲ್ಲಿ ಅಶ್ವತ್ಥವೃಕ್ಷವು ?
ಹೇಗೆ ಕೋಗಿಲೆ ಒಂದು ಪಕ್ಷಿಯಾಗಿ ತನ್ನ ಮರಿಯನ್ನು ಅಶ್ವತವೃಕ್ಷದ ಕಾಗೆ ಗೂಡಿನಲ್ಲಿ
ಬಿಟ್ಟು ಹೋಗುವುದೋ ಆದೆ ರೀತಿಯಲ್ಲಿ ಶರಣ ಜೀವನ ಮೌಲ್ಯ ಹೊಂದಿದ ವ್ಯಕ್ತಿಯನ್ನು
ದೇವರು ನರನ ಯೋನಿಯಲ್ಲಿ ಬಿಟ್ಟು ಹೋಗುವ ಎಂದು ಅತ್ಯಂತ ಸುಂದರ ಮಾರ್ಮಿಕ ಚಿಂತನೆಯನ್ನು ಈ ವಚನದಲ್ಲಿ ಕಟ್ಟಿ ಕೊಟ್ಟಿದ್ದಾರೆ

ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ ಕಾಗೆಗೆ ಪಿಕ ಶಿಶುವೆ ?

ಇಂತಹ ಸಾದೃಶ್ಯವಾದ ಉದಾಹರಣೆ ನೀಡಿ ವಚನಕಾರ ಕೋಗಿಲೆ ಮರಿ ಜೀವನವಿಡಿ ಕೊಗ್ಗುತ್ತಲೆ ಇರುತ್ತದೆ ತನ್ನ ತಾಯಿಯ ಅಗಲಿಕೆಯ ಬಳಲಿಕೆಗೆ ಬಿಕ್ಕಿ ಬಿಕ್ಕಿ ಅಳುತ್ತಿದೆ.
ಹಾಗೆ ಭಕ್ತ ತನ್ನ ನರ ಜನ್ಮಕ್ಕೆ ಕಾರಣರಾದ ದೇವನಿಗಾಗಿ ಸೃಷ್ಟಿಯ ಅಗಾಧ ಶಕ್ತಿಗಾಗಿ ನಿತ್ಯ ಪೂಜೆ ಪ್ರಾರ್ಥನೆ ಯೋಗ ಮಂತ್ರ ಜಪಿಸುತ್ತಾನೆ.
ಲಿಂಗವೇ ಜಂಗಮ ಎಂಬ ನಂಬಿಕೆ ಶೃದ್ಧೆ ಹೊಂದಿದ ಭಕ್ತ ನರ ಜನ್ಮದ ಹುಟ್ಟು ಆಕಸ್ಮಿಕ ಎಂದು ಹೇಳುತ್ತಾ ಹೇಗೆ ಕೋಗಿಲೆಗೆ ಕಾಗೆ ತಾಯಿಯಾಗಬಲ್ಲುದೆ ? ಕೋಗಿಲೆ ಕಾಗೆಯ ಶಿಶು ವಾಗಬಲ್ಲುದೆ ? ಲಿಂಗ ಶರಣ ನರ ಮಾನವ ಜನ್ಮಕ್ಕೆ ವ್ಯತಿರಿಕ್ತ ಸೃಷ್ಟಿಯ ಕೂಸು ಶರಣ ಎಂಬ ಅರ್ಥದಲ್ಲಿ ಹೇಳಿದ್ದಾನೆ ಶರಣ ಕಲ್ಲಯ್ಯಾ.

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!