ಸತಿಯ ಕಂಡು ಬೃತಿಯಾದ ಬಸವಣ್ಣ .

ಸತಿಯ ಕಂಡು ಬೃತಿಯಾದ ಬಸವಣ್ಣ .

ಸತಿಯ ಕಂಡು ಬೃತಿಯಾದ ಬಸವಣ್ಣ .
ಬೃತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ
ಗುಹೇಶ್ವರ ನಿಮ್ಮಲ್ಲಿ ಬಾಲ ಬ್ರಹ್ಮಚಾರಿಯಾದ ಬಸವಣ್ಣ ಒಬ್ಬನೇ.-

                                      -ಅಲ್ಲಮಪ್ರಭುಗಳು.ವಚನ
ಸಂಖ್ಯೆ -1565 ಪುಟ 465.

ಸತಿಯ ಕಂಡು ಬೃತಿಯಾದ ಬಸವಣ್ಣ.
ಪ್ರಾಪಂಚಿಕ ಬದುಕಿನ ವಿಷಯಾದಿಗಳ, ಆಮಿಷ ,ಆಶೆ ಆಕರ್ಷಣೆಗಳ ಕಂಡು ಬಸವಣ್ಣ ವೃತ್ತಿಯಾದನು. ಅವುಗಳನ್ನು ಹೊರತು ಪಡಿಸಿ ಶುದ್ಧನಾದ ಆಚಾರವಂತ ಗುಣವಂತ ವೃತವನ್ನು ಹಿಡಿದನು. ಕಾಮ ಕ್ರೋಧ ಮೋಹ ಲೋಭ ಮದ ಮತ್ಸರ ಮುಂತಾದ ಅರಿಷಡ್ ವರ್ಗಗಳ ಬೆಂಕಿಗೆ ಸಿಲುಕದೆ ತನ್ನ ನಿಯಮ ವೃತವನ್ನಾಚರಿಸಲು ಸತಿಯೇನೆಂಬ ವ್ಯಾಮೋಹದಿಂದ ದೂರವಿರಲು ಬೃತಿಯಾದ(ವೃತಿ) ಬಸವಣ್ಣ .

ಬೃತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ .

ವೃತ್ತಿಯಾದ ಬಸವಣ್ಣ ಬ್ರಹ್ಮಚಾರಿಯಾದನು . ಇಂತಹ ಸಾಂಸಾರಿಕ ಮೋಹಕ್ಕೆ ಸಿಲುಕದೆ ಭವ ಭವದಲ್ಲಿ ಬೆಂದು ಬಳಲಿ ಮುಕ್ತಿ ಕಾಣದೆ ಪರದಾಡುವಕ್ಕಿಂತ ,
ಅಂತಹ ಪ್ರಾಪಂಚಿಕ ಬದುಕಿನಲ್ಲಿ ಪಾರಮಾರ್ಥಿಕ ದೀಕ್ಷೆ ಪಡೆದ ಬಸವಣ್ಣ ಜ್ಞಾನ ಮಾರ್ಗದಲ್ಲಿ ನಡೆದನು.ಬ್ರಹ್ಮಚಾರಿ ಎನ್ನುವುದು ಕೇವಲ ಸನ್ಯಾಸತ್ವಕ್ಕೆ ಸೀಮಿತ ಪದವಲ್ಲ. ಸೃಷ್ಟಿ ಸ್ಥಿತಿ ಲಯದ ಜೊತೆಗೆ ಕಾಯ ಮನಸು ಆತ್ಮಗಳ ನಿರಂತರ ಮಿಲನಗಳ ಶೋಧನೆಯೆ ಬ್ರಹ್ಮಚಾರಿತನ. ಹಾಗೆ ವೃತವ ಹಿಡಿದು ಬ್ರಹ್ಮಚಾರಿಯಾದ ಬಸವಣ್ಣ .

ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ

ಇಂತಹ ಅಪೂರ್ವ ಬ್ರಹ್ಮಚಾರಿತನ ಸ್ವೀಕರಿಸಿದ ಬಸವಣ್ಣನವರು ಭವದಿಂದ ಮುಕ್ತನಾದರು. ಭವದಲ್ಲಿ ಸಿಲುಕದೆ ಭಕ್ತನಾದರು ಬಸವಣ್ಣನು.ತನ್ನ ಭವದ ಪಾಶ ಕಳೆದು ಕೊಂಡು ಭಕ್ತ ಮಾರ್ಗದಲ್ಲಿ ನಿತ್ಯ ಮುಕ್ತರಾದರು ಬಸವಣ್ಣ.

ಗುಹೇಶ್ವರ ನಿಮ್ಮಲ್ಲಿ ಬಾಲ ಬ್ರಹ್ಮಚಾರಿಯಾದ ಬಸವಣ್ಣ ಒಬ್ಬನೇ
ಬಸವಣ್ಣನವರು ಮದುವೆಯಾಗಿ ಮಂತ್ರಿ ಪದವಿ ಪಡೆದು ಐಶ್ವರ್ಯ ಅಂತಸ್ತು ಇದ್ದರೂ ಅವುಗಳನ್ನು ತ್ಯಜಿಸಿ ಭೃತ್ಯಾಚಾರದ ಭಕ್ತ ಪದವಿಯಿಂದ ನಿರ್ಲಿಪ್ತರಾದರು.
ಇಂತಹ ಘನ ಮಹಿಮರು ಗುಹೇಶ್ವರ ಲಿಂಗದಲ್ಲಿ ಬಾಲ ಬ್ರಹ್ಮಚಾರಿಯಾದ ಬಸವಣ್ಣ ಒಬ್ಬನೇ. ಹುಟ್ಟಿನಿಂದ ವಿರಕ್ತ ಭಾವ ಸಮತೆ ಧ್ಯಾನ ಮುಕ್ತಿಯತ್ತ ಆಸಕ್ತನಾದವರು ಬಸವಣ್ಣನವರು ಬಾಲ ಬ್ರಹ್ಮಚಾರಿ ಹುಟ್ಟು ಬ್ರಹ್ಮಚಾರಿ ಬದುಕಿದವರು. ವ್ಯವಸ್ಥೆಯ ಎಲ್ಲ ಬಂಧನಗಳನ್ನು ಸಂಕೋಲೆಗಳನ್ನು ಕಿತ್ತು ಹಾಕಿ ,ಆಡಂಭರಗಳನ್ನು ಧಿಕ್ಕರಿಸಿ ಮುಕ್ತ ಸಾರ್ವಕಾಲಿಕ ಸಮಾನತೆ ಸಮಾಜ ಕಟ್ಟಲು ಬಾಲ್ಯದಿಂದಲೇ ಸಂಕಲ್ಪ ಮಾಡಿದವರು ಸೃಷ್ಟಿಯಲ್ಲಿ ಬಸವಣ್ಣನೊಬ್ಬರೇ ಎಂದು ಅಲ್ಲಮ ಪ್ರಭುಗಳು ಬಸವಣ್ಣನವರ ದಿವ್ಯ ವ್ಯಕ್ತಿತ್ವದ ಗುಣ ಗಾನ ಮಾಡುತ್ತಾರೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!