ಎಮ್ಮ ವಚನದೊಂದು ಪಾರಾಯಣಕ್ಕೆ..

ಎಮ್ಮ ವಚನದೊಂದು ಪಾರಾಯಣಕ್ಕೆ..

ಎಮ್ಮ ವಚನದೊಂದು ಪಾರಾಯಣಕ್ಕೆ.
ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ,
ಎಮ್ಮ ವಚನದ ನೂರೆಂಟರಧ್ಯಯನಕ್ಕೆ ,
ಶತರುದ್ರೀಯಯಾಗ ಸಮ ಬಾರದಯ್ಯಾ,
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ ,
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲ ಸಿದ್ಧ ಮಲ್ಲಿಕಾರ್ಜುನಾ.

                                      -ಸಿದ್ಧರಾಮೇಶ್ವರ 

ಶರಣ ಸಂಕುಲದಲ್ಲಿಯೆ ಅತ್ಯಂತ ನಿಷ್ಠುರ ನೇರ ನಡೆಯ ವಚನಕಾರ ಸಿದ್ಧರಾಮೇಶ್ವರರು. ಅಂದಿನ ಜಿಡ್ಡುಗಟ್ಟಿದ ವೈದಿಕ ಸಂಪ್ರದಾಯಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸಿದ್ಧರಾಮರು,

ಎಮ್ಮ ವಚನದೊಂದು ಪಾರಾಯಣಕ್ಕೆ.ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ,
-ವಚನಗಳ ನಿತ್ಯ ಒಂದು ಸಲ ಪಾರಾಯಣ ಮಾಡಿದರೆ, ಅಂತಹ ಪಾರಾಯಣಕ್ಕೆ ಅಂದಿನ ವ್ಯಾಸ ಪುರಾಣ ಸಮಬಾರದು. ಅಂದರೆ ವಚನಗಳ ಮೌಲ್ಯವು ವ್ಯಾಸನ ಪುರಾಣಕ್ಕೆ ಸಮಬಾರದು. ಈ ಪುರಾಣವು ಯಾವುದೇ ಅಧ್ಯಾತ್ಮಿಕ ಮೌಲ್ಯವಿಲ್ಲದ್ದನ್ನು ಸಿದ್ಧರಾಮೇಶ್ವರರು ದೃಢಪಡಿಸುತ್ತಾರೆ .

ಎಮ್ಮ ವಚನದ ನೂರೆಂಟರಧ್ಯಯನಕ್ಕೆ, ಶತರುದ್ರೀಯಯಾಗ ಸಮ ಬಾರದಯ್ಯಾ

-ಒಂದು ವಚನವನ್ನು ನೊರೆಂಟು ಬಾರಿ ಅಧ್ಯಯನ ಮಾಡಿದರೆ, ಅಂತಹ ಅಧ್ಯಯನವು ಶತರುದ್ರೀಯಯಾಗಕ್ಕಿಂತ ಶ್ರೇಷ್ಟವಾದದ್ದು. ಶತರುದ್ರೀಯಯಾಗ ಇದು ವೈದಿಕರ ಮಹಾಯಾಗವೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಅದಕಿಂತ ಶ್ರೇಷ್ಠವಾದದ್ದು ಎಮ್ಮ ವಚನದ ನೂರೆಂಟರಧ್ಯಯನ ಎಂದಿದ್ದಾರೆ.

ಎಮ್ಮ ವಚನದ ಸಾಸಿರ ಪಾರಾಯಣಕ್ಕೆ , ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯ

-ನಮ್ಮ ಶರಣರ ವಚನವನ್ನು ಸಾವಿರ ಬಾರಿ ಓದಿದರೆ ಪಾರಾಯಣ ಮಾಡಿದರೆ, ಅದಕ್ಕೆ ಗಾಯತ್ರೀ ಲಕ್ಷ ಜಪ ಸಮಬಾರದು. ಗಾಯತ್ರಿ ಮಂತ್ರವೇ ಶ್ರೇಷ್ಠ ಮಂತ್ರ ಎಂದೆನಿಸುವ ಕಾಲದಲ್ಲಿ , ವಚನಗಳ ಹಿರಿಮೆ ಗರಿಮೆ ಮತ್ತು ವಚನಗಳಲ್ಲಿ ಅಡಗಿದ ಅಧ್ಯಾತ್ಮಿಕ ಶಕ್ತಿಯನ್ನು ಸಿದ್ಧರಾಮೇಶ್ವರರು ದೈವ ಸಾಕ್ಷಿಯಾಗಿ ನಿರೂಪಿಸಿದ್ದಾರೆ.

ವಚನಗಳು ನಮ್ಮ ಉಸಿರು, ನಮ್ಮ ದೇವರು. ವಚನಗಳಲ್ಲಿ ಶರಣರ ಆಶಯ ಕನಸು ತುಂಬಿ ಕೊಂಡಿವೆ. ಕಾರಣ ನಿತ್ಯ ವಚನಗಳ ಪಾರಾಯಣ ಮಾಡಬೇಕು.


ಡಾ. ಶಶಿಕಾಂತ ಪಟ್ಟಣ -ಪೂನಾ ರಾಮದುರ್ಗ

Don`t copy text!