ಆಹಾರ ಕಿರಿದು ಮಾಡಿರಣ್ಣಾ.

ಆಹಾರ ಕಿರಿದು ಮಾಡಿರಣ್ಣಾ.

ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಾಗ 12ನೇ ಶತಮಾನದಲ್ಲಿಯೇ ವಿಶ್ವಮಾನವ ಸಂದೇಶವನ್ನು ಸಾರಿದ ಹೆಮ್ಮೆ ಕನ್ನಡನಾಡಿನದು. ಆ ಕಾಲವನ್ನು ಅವಿಸ್ಮರಣೀಯವಾಗಿ ಮಾಡಿದವರು ಬಸವಾದಿ ಶರಣರು. ಕೆಲವೇ ವರ್ಷಗಳಲ್ಲಿ ನೂರಾರು ಶಿವಶರಣರು ಧರೆಗೆ ಅವತರಿಸಿ ಜೀವನದ ಎಲ್ಲ ರಂಗಗಳ ಕುರಿತು ಅರ್ಥಪೂರ್ಣ ಚಿಂತನೆ ನಡೆಸಿದ ಕಾಲಘಟ್ಟವದು. ಅವರೆಲ್ಲರ ಪ್ರಮುಖ ಉದ್ದೇಶ ಮಾನವ ಕಲ್ಯಾಣ ವಾಗಿತ್ತು.ತಮ್ಮ ಕಾರ್ಯಸಾಧನೆಗೆ ಶರಣರು ಬಳಸಿಕೊಂಡ ವೇದಿಕೆ ಅನುಭವಮಂಟಪ. ಅಲ್ಲಿಂದ ಅಂದು ಹೊರಟ ವಚನ ಕಿರಣ ಇಂದು ಭರತಖಂಡದಲ್ಲಿ ವ್ಯಾಪಿಸಿ ವಿಶ್ವದದೆಡೆಗೆ ಸಾಗುತ್ತಾ ವಿಶ್ವಶಾಂತಿಗೆ ಮುನ್ನುಡಿಯಾಗುತ್ತಿದೆ.

ಆ ಶಿವಶರಣರೆಲ್ಲ ಹಿಂದೆ ಯಾವ ಹಿನ್ನೆಲೆಯಿಂದ ಬಂದವರಲ್ಲ. ವಿವಿಧ ವರ್ಗ, ಜಾತಿ, ಪಂಗಡ, ಧರ್ಮಗಳಿಂದಲ್ಲದೆ ಅರಮನೆ, ಗುರುಮನೆ, ಹಿರಿಮನೆ, ಕಿರಿಮನೆ, ಗುಡಿಸಲು ಮುಂತಾದವುಗಳಿಂದ ಬಂದವರಾಗಿದ್ದರು. ಶರಣರು ನಮ್ಮೊಡನೆ ಇಂದು ಜೀವಂತವಾಗಿರುವುದು ವಚನಗಳಿಂದ.ವಚನ ಎಂದರೆ ಮಾತು ಅಥವಾ ಭಾಷೆ ಎನ್ನಬಹುದಾದರೂ ವಿಶೇಷ ಅರ್ಥವಾಗಿ ಸತ್ಯದ ಮಾತಾಗಿ ಕಾಣಿಸಿಕೊಳ್ಳುತ್ತದೆ. ಕನ್ನಡ ಸಾಹಿತ್ಯದಲ್ಲಿ ವಚನಗಳು ತಮ್ಮದೇ ಸ್ಥಾನ ಪಡೆದಿವೆ.

ವಚನವು ಪದ್ಯದಷ್ಟು ಬಿಗಿಯು ಅಲ್ಲ, ಸಾಮಾನ್ಯ ಗದ್ಯ ದಷ್ಟು ಸಡಿಲವೂ ಅಲ್ಲ.

‌ಶಿವಶರಣ ಶರಣೆಯರ ತಾರಾಗಣದಲ್ಲಿ ಅಕ್ಕಮಹಾದೇವಿಯ ಅಪೂರ್ವ ಕಾಂತಿ ಎಂಥವರನ್ನಾದರೂ ಆಕರ್ಷಿಸುತ್ತದೆ. ಬಸವ, ಅಲ್ಲಮ, ಚೆನ್ನಬಸವಣ್ಣ ರಂಥ ಸೂರ್ಯ ಶ್ರೇಣಿಯ ಜ್ಯೋತಿಗಳೊಡನೆ ಹೋಲಿಸಿಕೊಂಡಾಗಲೂ ಆಕೆಯ ಅಧ್ಯಾತ್ಮ ಪ್ರಖರತೆ, ವರ್ಚಸ್ಸು ಸ್ವಲ್ಪವೂ ಕುಂದುವುದಿಲ್ಲ. ಹಾಗಾಗಿ ಶರಣರಲ್ಲಿ ಒಂದು ಹೆಜ್ಜೆ ಎಲ್ಲದರಲ್ಲೂ ಮುಂದಿದ್ದಳು ಎಂದರೆ ತಪ್ಪಾಗಲಾರದು. ತನ್ನಿಷ್ಟದಂತೆ ನುಡಿದು ನಡೆದಿದ್ದಾಳೆ ರಾಜಪ್ರಭುತ್ವ, ಪುರುಷ ಪ್ರಭುತ್ವ ಎರಡನ್ನೂ ಒಂದೇ ಸಮಯಕ್ಕೆ ಪ್ರತಿಭಟಿಸುವ ಕೆಚ್ಚೆದೆಯ ಧ್ವನಿಯೂ ಆಗಿದ್ದಾಳೆ.ಸಾವ ಕೆಡುವ ಲೋಕದ ಗಂಡನ ಸಂಬಂಧವನ್ನು ತಿರಸ್ಕರಿಸಿದ ಆಕೆಯ ಲೋಕವಿರೋಧಿ ವ್ಯಕ್ತಿತ್ವ ಎಲ್ಲಾ ಕಾಲಕ್ಕೂ ಅಧ್ಯಾತ್ಮ ಪ್ರಪಂಚಕ್ಕೆ ಒಂದು ಸವಾಲಾಗಿ ವಿಸ್ಮಯ ಹುಟ್ಟಿಸಿದೆ.ಅರಿಷಡ್ವರ್ಗಗಳನ್ನು ಕಟ್ಟಿ ನಿಲ್ಲಿಸಿದ ಅಕ್ಕ ಸ್ತ್ರೀ ಸಂಬಂಧಿತ ಎಲ್ಲಾ ನಿಷೇಧಗಳನ್ನು ಧೈರ್ಯವಾಗಿ ಉಲ್ಲಂಘಿಸಿ ವೀರ -ವಿರಾಗಿನಿಯಾಗಿ ಮೆರೆದಿದ್ದಾಳೆ.

ವಿವಾಹ ದಿಂದಲೇ ಮೋಕ್ಷ ಎಂಬುದಕ್ಕೆ ಅಪವಾದವಾಗಿ ವೈರಾಗ್ಯದ ಹಾದಿಯನ್ನು ಹಿಡಿದು ಎಲ್ಲರಿಗೂ ಸವಾಲಾಗಿ ಬೆಳೆಯುತ್ತಾ ಸಾಗುತ್ತಾಳೆ. ಜಗತ್ತಿನ ಪ್ರಥಮ ಸ್ತ್ರೀವಾದಿ ಚಿಂತಕಿ ಪ್ರಗತಿಪರ ವಿಚಾರವಾದಿಯಾದ ಅಕ್ಕ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛೆಗೆ ಬಲಿಯಾಗದೆ ಆಧ್ಯಾತ್ಮಕ ಶಿಖರವೇರಿದ ಅವಳ ವ್ಯಕ್ತಿತ್ವ ಅತ್ಯಂತ ಮಹೋನ್ನತವಾದುದು.
ಕಲ್ಯಾಣದ ಎಲ್ಲ ಶರಣರಿಂದ ಆತ್ಮೀಯವಾಗಿ ಅಕ್ಕ ಎಂದು ಕರೆಸಿಕೊಂಡಿರುವ ಮಹಾದೇವಿಯ ವ್ಯಕ್ತಿತ್ವ ವಿಶ್ವ ಸ್ತ್ರೀಕುಲದ ಸ್ವಾತಂತ್ರ್ಯ, ಸ್ವಾಭಿಮಾನ ,ನಿಷ್ಠುರತೆ, ಸತ್ಯಸಂಧತೆ, ಸದಾಚಾರ, ಸದ್ಭಕ್ತಿ  ಮುಂತಾದ ಶ್ರೇಷ್ಠ ಮೌಲ್ಯಗಳ ಪ್ರತಿನಿಧಿಯಾಗಿದ್ದಾಳೆ. ಸಾಹಿತ್ಯದ ದೃಷ್ಟಿಯಿಂದ ಒಬ್ಬ ಅನುಪಮವಾದ ಕವಿಯಿತ್ರಿ ಆಗಿದ್ದಾಳೆ. ಇಂಥಹ ಮಹಾನ್ ಶಿವಶರಣೆ ಆಹಾರ ಸೇವನೆಯು ದೇಹಾರೋಗ್ಯದ ಮೇಲೆ ಬೀರುವ ಪರಿಣಾಮ ಕುರಿತು ಅಂದೇ ತನ್ನ ವಚನದಲ್ಲಿ ಹೇಳಿದ್ದು ನಿಜಕ್ಕೂ ವಿಜ್ಞಾನಕ್ಕೆ ಸವಾಲೇ ಸರಿ.
ಆಹಾರ ಕಿರಿದು ಮಾಡಿ:  ಆಹಾರ ಸೇವನೆ ಕಡಿಮೆ ಮಾಡಿ ಕೆಲೋರಿ ಮೌಲ್ಯವನ್ನು ಕಡಿಮೆ ಮಾಡಿ ದೀರ್ಘಾಯುಷ್ಯವನ್ನು ಸಾಧಿಸಬಹುದು ಎಂಬುದನ್ನು 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಮನಗಂಡದ್ದು ಸೋಜಿಗದ ವಿಷಯವೆ.ಅಕ್ಕನ ವಚನ…

ಆಹಾರವ ಕಿರಿದು ಮಾಡಿರಣ್ಣಾ
  ಆಹಾರವ ಕಿರಿದು ಮಾಡಿ.
  ಆಹಾರದಿಂ ವ್ಯಾಧಿ ಹಬ್ಬಿ ಬಲಿಯುವುದಯ್ಯ
  ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ,     ಮೈಮರೆವು.
ಮನೋವಿಕಾರ, ಭಾವ ವಿಕಾರ, ಇಂದ್ರಿಯವಿಕಾರ,
ವಾಯುವಿಕಾರ ಇಂಥ ಪಂಚ ವಿಕಾರಗಳನ್ನು ಉಂಟುಮಾಡಿ.
ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣೆ ಬೇಡ.
ಅತಿಪೋಷಣೆ ಮೃತ್ಯುವೆಂದುದು.
ಜಪತಪ ಧ್ಯಾನಧಾರಣ ಪೂಜೆಗೆ ಸೂಕ್ಷ್ಮದಿಂ
ತಾನು ಮಾತ್ರವಿದ್ದು ರೆ ಸಾಲದೆ? ತನುವ ಪೋಷಿಸು.
ಆಸೆ ಯತಿತ್ವಕ್ಕೆ ವಿಘ್ನವೆಂದುದು ತನು ಪೋಷಣೆಯಿಂದ.
ತಾಮಸ ಹೆಚ್ಚಿ ಅಜ್ಞಾನದಿಂ ವಿರಕ್ತಿ ಹಾನಿ.
ಅರಿವು ನಷ್ಟ.ಪರವು ದೂರ, ನಿರಕೆ ನಿಲವಿಲ್ಲದೆ ಕಾರಣ.
ಚೆನ್ನಮಲ್ಲಿಕಾರ್ಜುನನೊಲಿಸಬಂದ ಕಾಯವ ಕೆಡಿಸದೆ ಉಳಿಸಿಕೊಳ್ಳಿರಯ್ಯ”.

ಈ ವಚನದಲ್ಲಿ ಅಕ್ಕನವರು ಆಹಾರ ಸೇವನೆ ಪ್ರಮಾಣವನ್ನು ಕಡಿಮೆಯಾಗಿ ಯಾವ ರೀತಿ ದೇಹ ವ್ಯಾಧಿಯ  ಗೂಡಾಗುವುದನ್ನು ತಪ್ಪಿಸಿ, ಮೃತ್ಯುವನ್ನು ದೂರ ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ. ದೇಹವನ್ನು ಚೆನ್ನಾಗಿಡಲು ಅತಿ ಆಹಾರ ಸಲ್ಲದು. ಆಹಾರ ಕಿರಿದು ಮಾಡುವುದರಿಂದ ದೇಹವನ್ನು ಆರೋಗ್ಯದಿಂದ ಇರಿಸಿಕೊಳ್ಳಬಹುದು. ಆಹಾರ ಕಿರಿದು ಮಾಡುವುದರ ಬಗ್ಗೆ ಒತ್ತಿಒತ್ತಿ ಹೇಳುತ್ತಾಳೆ. ಕೆಲೋರಿ ಕಡಿಮೆಯಾದಷ್ಟು ಜೀವಿತಾವಧಿ ಹೆಚ್ಚುವುದನ್ನು ವಿಜ್ಞಾನ ಗುರುತಿಸಿ ಶತಮಾನವೂ ಕಳೆದಿಲ್ಲ ಆದರೆ ಅದನ್ನು ಅಕ್ಕಮಹಾದೇವಿ 800 ವರ್ಷಗಳ ಹಿಂದೆ ಸಾರಿದ್ದು ಆಕೆಯ ವೈಜ್ಞಾನಿಕ ದೃಷ್ಟಿಕೋನಕ್ಕೆ ಸಾಕ್ಷಿ.
ಆಹಾರದ ಹೆಚ್ಚು ಸೇವನೆಯಿಂದ ಅನೇಕ ರೋಗಗಳು ಹುಟ್ಟುತ್ತವೆ, ಹಬ್ಬುತ್ತವೆ,ಬಲಿಯುತ್ತವೆ.
ಹೆಚ್ಚು ಆಹಾರ ಸೇವನೆ ನಿದ್ದೆಗೆಡೆ ಮಾಡುತ್ತದೆ. ತಾಮಸ ಗುಣವನ್ನು ಹೆಚ್ಚಿಸುತ್ತದೆ. ಕಾಯವಿಕಾರ, ಮನೋವಿಕಾರ, ಭಾವವಿಕಾರ,ಇಂದ್ರಿಯವಿಕಾರ,ವಾಯುವಿಕಾರಗಳೆಂಬ ಪಂಚವಿಕಾರಗಳಿಗೆಡೆ ಮಾಡಿಕೊಟ್ಟು ಆಯುಷ್ಯವನ್ನು ಮೊಟಕುಗೊಳಿಸುವುದು. ಇದಕ್ಕೆಲ್ಲ ಮದ್ದು ಎಂಬಂತೆ ಅಕ್ಕಆ ಹಾರವನ್ನು ಕಿರಿದು ಮಾಡುವ ಅನುಪಾನ ಕೊಟ್ಟಿದ್ದಾಳೆ.ಅದು ಆಯುಷ್ಯವೃದ್ಧಿಗೆ ಸಹಾಯಕ ಎಂಬ ಅಂಶವನ್ನು ವಿಜ್ಞಾನವು ಇಂದು ದೃಡಪಡಿಸಿದೆ.ಆರೋಗ್ಯವೇ ಭಾಗ್ಯ ಎಂದರಿತರೂ ಆಹಾರ ಸೇವನೆಯಲ್ಲಿ ಇಂದಿನ ಆಧುನಿಕ ಯುಗದ ಜನ “ಬಾಯಿಗೆ ಸಿಹಿ,ಹೊಟ್ಟೆಗೆ ಕಹಿ,” ಸೂತ್ರ ಅನುಸರಿಸಿ ಸಿಕ್ಕಾಪಟ್ಟೆ ದಪ್ಪವಾಗಿ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. “ಕಸ ತಿನ್ನುವುದಕ್ಕಿಂತ ತುಸು ತಿನ್ನು”. ಎಂಬ  ನಾಣ್ಣುಡಿ ಇಂದಿನ ದಿನಗಳಲ್ಲಿ ತುಂಬಾ ಅವಶ್ಯಕವಾಗಿ ಎಲ್ಲರೂ ಪಾಲಿಸಬೇಕಿದೆ. ಅಕ್ಕನ ಈ ವಚನ ನಮ್ಮೆಲ್ಲರ ಕಣ್ಣು ತೆರೆಸುವಂತಾಗಲಿ.

ಜಯಶ್ರೀ ಭಂಡಾರಿ, ಬದಾಮಿ

 

 

 

 

ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ

Don`t copy text!