ಶರಣೆ ಬೊಂತಾದೇವಿ
ಕಾಶ್ಮೀರ ದೇಶದ ಪಾಂಡವಪೂರದ ಅರಸು ರಾಜಕುಮಾರಿ ಗುಪ್ತ ವೈರಾಗಿಣಿ, ಕಾಶ್ಮೀರದ ಅರಸು ಮಹಾದೇವ ಭೂಪಾಲನ ತಂಗಿ, ಮೂಲ ನಾಮವಾದ ನಿಜದೇವಿಯಿಂದ ಬೋಂತಾದೇವಿಯಾಗಿ ನಾಮಾಂಕಿತಗೊಂಡು ಗುಪ್ತ ಭಕ್ತಿಗೆ ಹೆಸರುವಾಸಿಯಾದವಳು. ದಿಟ್ಟ, ಎತ್ತರ ನಿಲುವಿನ ಶರಣೆ ಬೊಂತಾದೇವಿ.
ಕಲ್ಯಾಣ ನಾಡಿನ ಶರಣೆಯರಲ್ಲಿ ಅತ್ಯಂತ ಎತ್ತರದ ನಿಲುವಿನ ಅನುಭವಿ ವಚನಕಾರ್ತೆ ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳ ಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ, ಜಾತಿಯತೆಯ ವಿಡಂಬನೆಯಲ್ಲಿ ಪ್ರಭುದೇವರಿಗೆ, ಶ್ರದ್ಧೆಗೆ ಕೊಟ್ಟನದ ಸೋಮವ್ಯೆಗೆ, ಸಮವೆನಿಸಿಕೊಂಡ ಎಲ್ಲ ಶರಣರ ಮೆಚ್ಚುಗೆ ಪಾತ್ರಳಾದ ಶರಣೆ ಬಂತಾದೇವಿ
“ಬೀಡಾಡಿ” ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬರೆದಿದ್ದಾರೆ. ಚಿಕ್ಕಂದಿನಲ್ಲಿಯೇ ಶಿವಭಕ್ತಿಯಲ್ಲಿ ನಿಷ್ಠೆ ನೆಲೆಗೊಂಡು ವೈರಾಗ್ಯ ತಾಳಿ ಕಲ್ಯಾಣಕ್ಕೆ ಅಣ್ಣ ಅತ್ತಿಗೆಯ ಜೊತೆ ಬಂದು ನೆಲೆಸುತ್ತಾರೆ.
(ಇವರ ವೀರ ವೈರಾಗ್ಯ ಗುಪ್ತ ಭಕ್ತಿಯನ್ನು ಕಾವ್ಯ ಪುರಾಣಗಳು ಬಣ್ಣಿಸುತ್ತವೆ.)
ಕೌದಿಯನ್ನು ಹೊಲಿಯುವುದು ಮತ್ತು ಕೌದಿಯನ್ನು ಜನರಿಗೆ ಮಾಡಿಕೊಡುವುದು ಇವರ ಕಾಯಕವಾಗಿತ್ತು ಎನ್ನಲಾಗುತ್ತದೆ.
ಶರಣೆ ಬೊಂತಾದೇವಿ ಅಕ್ಕಮಹಾದೇವಿಯಂತೆ ವಿವಾಹ ಬಂಧನಕ್ಕೆ ಶಿಲುಕದೆ ಶರಣ ದಿಕ್ಷೆ ಸ್ವೀಕರಿಸಿದರು. ಕಾಶ್ಮೀರದಲ್ಲಿದ್ದಾಗ ವಿಪರೀತ ಚಳಿಯಿಂದ ನಡುಗುತ್ತಿದ್ದ ವೃದ್ಧಿಗೆ ತಾನ್ನುಟ್ಟ ಬಟ್ಟೆಯನ್ನೇ ಬಿಚ್ಚಿಕೊಟ್ಟ ಬೊಂತಾದೇವಿ ಬಡಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು. ಧನ ಕನಕದ ಮೋಹದಿಂದ ಹೊರಬಂದವರು, ಕಲ್ಯಾಣದಲ್ಲಿ ಕೌದಿ ಹೊಲಿದು ಮಾರುವ ಕಾಯಕ ಕೈಕೊಂಡು ಮತ್ತು ರೋಗಗ್ರಸ್ತ, ಅಭಲ, ಅನಾಥ, ಬಡವರಿಗೆ ತಾನೇ ಔಷಧ ಉಪಚಾರ ಮತ್ತು ಉಡಲು ಬಟ್ಟೆ,ಹೊದ್ದುಕೊಳ್ಳಲು ಕೌದಿ ಕೊಟ್ಟು ಸೇವೆ ಮಾಡುತ್ತಿದ್ದರು.
ಶರಣೆ ಬೊಂತಾದೇವಿಯ 6 ವಚನಗಳು ಲಭ್ಯವಾಗಿವೆ.
ಇವರ ವಚನಗಳಲ್ಲಿ ಅಪಾರವಾದ ಆಧ್ಯಾತ್ಮಿಕ ಅರ್ಥ ತುಂಬಿದ್ದು “ಬಯಲು”, “ಶೂನ್ಯ” “ಬೀಡಾಡಿ” ಇಂತಹ ಪರಮ ಗುರಿಯ ಶಬ್ದಗಳನ್ನು ಬಳಸಿದ್ದಾರೆ.
ಶರಣೆ ಬೋಂತಾದೇವಿಯ ವಚನ
ಅರಿವೇ ಬಿಡಾಡಿ ಅರಿಯದೆ ಬಿಡಾಡಿ
ಮರವೆ ಬಿಡಾಡಿ ಮರೆಯದೆ ಬಿಡಾಡಿ
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ.
ಅರಿವು ಎಂಬುದು ಯಾವುದೇ ಬಂಧನ,ಸೆಳೆತಕ್ಕೊಳಗಾಗದ ಮುಕ್ತ ಸಂಚಾಲಿತ ಜ್ಞಾನವಾಗಿದೆ. ಅರಿಯಲಾರದೆ ಇರುವುದು ಕೂಡ ಅರಿವಿನ ನೆರಳಿನಂತಿರುವ ಅಜ್ಞಾನದ ಭಾವವಾಗಿದೆ, ಮರೆವು ಅನ್ನುವದು ಒಂದು ಅರ್ಥದಲ್ಲಿ ಬಿಡಾಡಿ ಎಂದು ಹೇಳಿದ್ದಾರೆ ಶರಣೆ ಬೊಂತಾದೇವಿ.
ಕಾರಣ ಮರೆಯಬೇಕೆಂಬ ಉದ್ದೇಶ ಸದ್ಭಕ್ತನಿಗೆ ಇರುವುದಿಲ್ಲ, ಹೀಗಾಗಿ ಅದು ಕೂಡ ಮುಕ್ತವಾಗಿ ಸಂಚಲಿತಗೊಳ್ಳುವ ಭಾವವಾಗಿರುತ್ತದೆ. ಮರೆಯದೆ ಇರುವ ತೀವ್ರತೆಯೂ ಕೂಡ ಒಂದು ಅರ್ಥದಲ್ಲಿ ಜ್ಞಾನದ ನಿರಂತರ ಶೋಧನವಾಗಿರುವುದರಿಂದ ಸ್ಥೂಲ, ಸೂಕ್ಷ್ಮ, ಕಾರಣ ಇವುಗಳ ಬಂಧನದಿಂದ ಹೊರಗಡೆ ಇದ್ದು ಸತ್ಯಕ್ಕೆ ಪರಿತಪಿಸುವ ಜ್ಞಾನಾರ್ಜನೆಯ ಪ್ರಾಮಾಣಿಕ ಪ್ರಯತ್ನವೂ ಕೂಡ ಮುಕ್ತ ಸ್ವತಂತ್ರವಾದ ಬಿಡಾಡಿ ಆಗಿರುತ್ತದೆ ಎನ್ನುತ್ತಾರೆ ಶರಣೆ ಬೊಂತಾದೇವಿ.
ಮುಕ್ತಿಯ ಅರಿವನ್ನು ಪಡೆದು ಮತ್ತೆ ಕುರುಹಿನ ಸಂಕೋಲೆಗೆ ಸಿಲುಕದೆ ಇರುವವರು ಯಾರೆಂದರೆ ಅದುವೇ ದೈವತ್ವ, ಅದೇ ಬಿಡಾಡಿ, ಎಂದು ಅರ್ಥಗರ್ಭಿತವಾಗಿ ಹೇಳಿದ್ದಾರೆ ಶರಣೆ ಬೊಂತಾದೇವಿ.
ಊರ ಒಳಗಣ ಬಯಲು ಊರ ಹೊರಗಣ ಬಯಲೆಂದುಂಟೆ?
ಊರ ಒಳಗೆ ಬ್ರಾಹ್ಮಣ ಬಯಲು ಊರ ಹೊರಗೆ ಹೊಲೆ ಬಯಲೆಂದುಂಟೆ?
ಎಂಬ ವಚನದ ಮೂಲಕ ಕುಲವೊಂದೇ ಎಂದು ಸಾರಿದ್ದಾರೆ. ಸ್ವಾರ್ಥಿಯಾದ ಮನುಷ್ಯ ಕುಲಭೇದಗಳನ್ನು ಮಾಡಿ ,ಶ್ರೇಷ್ಠ ಕನಿಷ್ಠಗಳೆಂಬ ಸ್ರಂಕಲೆಗಳನ್ನು ನಿರ್ಮಿಸಿ ಮೇಲು ಕೇಳಂಬ ಜಾತಿಯ ಕರ್ತಿಮತೆಯನ್ನು ಹುಟ್ಟು ಹಾಕಿಕೊಂಡಿದ್ದಾನೆ. ಅನಂತವಾದ ಬಯಲಿನಲ್ಲಿ ಒಳ- ಹೊರಗೆಂಬ ಅಂತರ ಇಲ್ಲ, ಅನಂತವಾದ ಬಯಲೊಂದೇ ಇರುವಂತೆ ಸರ್ವ ವ್ಯಾಪಿ “ದೈವತ್ವ” ಒಂದೇ ಎಂದು ಹೇಳುತ್ತಾ ಕುಲಭೇದವನ್ನು ಸಾರಾಸಕಟವಾಗಿ ಧಿಕ್ಕರಿಸಿದ್ದಾರೆ ಶರಣೆ ಬೊಂತಾದೇವಿ.
ಸರ್ವ್ಯಾಪಿ ಭಗವಂತ ಅಥವಾ ದೈವತ್ವ “ಜಗದಗಲ ಮುಗಿಲಗಲ”
“ಸುರಾಳ ನಿರಾಳ”
ಯಾವ ಬಂಧನಕ್ಕೂ ಒಳಗಾಗದ “ಸರ್ವ ಸ್ವತಂತ್ರ” “ಸರ್ವವ್ಯಾಪಿ” ಎಂಬರ್ಥದಲ್ಲಿ ಆತನನ್ನು ಬೀಡಾಡಿ ಎಂದು ಕರೆದಿದ್ದಾರೆ.
ಶರಣೆ ಬೊಂತಾದೇವಿ ವಯಸ್ಸಿನಲ್ಲಿ ಚಿಕ್ಕವಳಾದರೂ ಆಧ್ಯಾತ್ಮಿಕ ಸಾಧನೆಯಲ್ಲಿ ಎತ್ತರ ನಿಲುವನ್ನು ಹೊಂದಿದ್ದರು ಎಂಬುದು ಈ ವಚನದ ಮೂಲಕ ಸ್ಪಷ್ಟವಾಗುತ್ತದೆ.
ಆದ್ದರಿಂದ ಇವರನ್ನು ಎತ್ತರ ನಿಲುವಿನ ದಿಟ್ಟ ಶರಣೆ ಎಂದು ಸಂಬೋಧಿಸಲಾಗುತ್ತದೆ.
ಅಂದು ಬೇರೂರಿದ್ದ ಜಾತಿಭೇದ, ವರ್ಗ ಭೇದ, ವರ್ಣಭೇದ ಕುರಿತು ಶರಣರು ಈ ರೀತಿಯ ಪ್ರತಿಕ್ರಿಯೆಗಳನ್ನು ಕೊಡುವ ಮೂಲಕ ಮಾನವ ಕುಲ ಕೋಟಿಗೆ ಸಾರ್ವಕಾಲಿಕ ಸಮತೆ ಮೆರೆದಿದ್ದಾರೆ.
ಜಾತೀಯತೆಯ ವಿಷ ಬೀಜ ಬಿತ್ತಿ, ಅದನ್ನೆತ್ತಿ ಹಿಡಿದು ಪೋಷಿಸುತ್ತಿರುವ ಕರ್ಮಠ ಉಚ್ಚವರ್ಣಿಯರಿಗೆ ‘ ಬಯಲ ‘ ರೂಪಕವೊಂದರ ಮೂಲಕ ಸಮಾನತೆಯ ಪಾಠ ಹೇಳುತ್ತಿದ್ದಾಳೆ ಶರಣೆ ಬೋoತಾದೇವಿ.
ಊರ ಒಳಗಣ ಬಯಲು,
ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣಬಯಲು,
ಊರ ಹೊರಗೆ ಹೊಲೆಬಯಲೆಂದುಂಟೆ ?
ಎಲ್ಲಿ ನೋಡಿದಡೆ ಬಯಲೊಂದೆ;
ಭಿತ್ತಿಯಿಂದ ಒಳಹೊರಗೆಂಬನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
ಊರ ಒಳಗಿರುವುದೊಂದು ಬಯಲು, ಊರ ಹೊರಗಿರುವುದೊಂದು ಬಯಲು, ಎಂಬುದಾಗಿ ಬಯಲುಗಳಲ್ಲಿ ಭೇದವುಂಟೆ? ಅದೇ ರೀತಿ ಊರೊಳಗಿನದು ‘ಬ್ರಾಹ್ಮಣ ಬಯಲು’ ಊರ ಹೊರಗಿನದು ‘ ಹೊಲೆಯ ಬಯಲು ‘ ಎಂದಿರಲು ಸಾಧ್ಯವೇ? ಎಂಬುದಾಗಿ ಪ್ರಶ್ನಿಸುತ್ತಾ ಬೋoತಾದೇವಿಯು ಜಾತಿಯವಾದಿಗಳ ಮೂಲಕ್ಕೆ ಪೆಟ್ಟು ಕೊಡುತ್ತಾಳೆ. ಸೀಮಾತೀತ ಬಯಲಿಗೆ ಜಾತೀಯತೆಯ ಗೋಡೆಗಳನ್ನು ಕಟ್ಟಿದ ಪರಿಣಾಮವಾಗಿ, ಒಳಗೆ – ಹೊರಗೆ, ಶ್ರೇಷ್ಠ – ಕನಿಷ್ಠ, ಎಂಬ ಹೆಸರುಗಳು ಬಂದಿವೆ. ಆದರೆ ಎಲ್ಲಿ ನೋಡಿದರೂ, ಹೇಗೆ ನೋಡಿದರೂ ಬಯಲು ಬಯಲೇ ಆಗಿದೆ. ಅದಕ್ಕೆ ಆದಿ ಅಂತ್ಯಗಳಿಲ್ಲ.
ಘಟದೊಳಗಣ ಬಯಲು,
ಮಠದೊಳಗಣ ಬಯಲು,
ಬಯಲು ಬಯಲು ಬಯಲು?
ತಾನೆಲ್ಲಾ ಬಯಲು, ಬಿಡಾಡಿ ಬಯಲು.
ಎಂದು ಮತ್ತೊಂದು ವಚನದಲ್ಲಿ ಬಯಲ ಸ್ವರೂಪದ ಮತ್ತೊಂದು ಮಗ್ಗುಲನ್ನು ಬಿಚ್ಚಿಡುತ್ತಾಳೆ. ಇಂತಹ ಬಯಲಿನ ಯಾವುದೇ ಮೂಲೆಯಲ್ಲಿ ನಿಂತು, ಸಮರ್ಪಣಾ ಭಾವದಿಂದ, ಆರ್ತರಾಗಿ ಕೂಗಿ ಕರೆದರೆ ಸಾಕು, ಆ ದೇವರು ಖಂಡಿತವಾಗಿಯೂ ‘ ಓ ‘ ಗೊಡುತ್ತಾನೆಂದು ಬೋoತಾದೇವಿ ಹೇಳುತ್ತಾಳೆ .
ಅಪ್ಪ ಬಸವಣ್ಣನವರೂ ಕೂಡಾ,
“ನೆಲನೊಂದೆ ಹೊಲಗೇರಿ-ಶಿವಾಲಯಕ್ಕೆ;
ಜಲವೊಂದೆ ಶೌಚಾಚಮನಕ್ಕೆ;
ಕುಲವೊಂದೆ ತನ್ನ ತಾನರಿದವಂಗೆ;
ಫಲವೊಂದೆ ಷಡುದರುಶನ ಮುಕ್ತಿಗೆ;….”
ಎಂದಿದ್ದಾರಲ್ಲವೆ.
ಬಯಲ ರೂಪಕದ ಈ ವಚನ ಆಧ್ಯಾತ್ಮಿಕ ನೆಲೆಯಲ್ಲಿ ಇನ್ನೂ ಏನನ್ನೋ ಹೇಳಲು ಹೊರಟಂತಿದೆ. ಅಲ್ಲಮರ ದೃಷ್ಟಿಯಲ್ಲಿ, ” ಬಯಲು ಪರಿಪೂರ್ಣತೆಯ, ಪರಿಪಕ್ವತೆಯ, ದಿವ್ಯ ಪರಂಜ್ಯೋತಿಯ ಬೆಳಗಿನೊಳಗನ ಮಹಾ ಬೆಳಗು. ಇಂಥ ತೇಜೋಮಯ ಬೆಳಗು ‘ ಅಖಂಡವೇ ‘ ಹೊರತು ಅದೆಂದೂ ‘ಖಂಡಿತ ‘ ವಾಗಿಲ್ಲ. ಆದರೆ ನಾವೇ, ನಮ್ಮ ದೇಹವೆಂಬ ಗೋಡೆಯನ್ನು ಕಟ್ಟಿಕೊಂಡು ಬಯಲನ್ನು ಚಿದ್ರಗೊಳಿಸಿಬಿಟ್ಟಿದ್ದೇವೆ. ಬಹಿರಂಗ ಮತ್ತು ಅಂತರಂಗಗಳೆರಡರಲ್ಲಿಯೂ ಬಯಲಿದೆ ಎಂಬ ಭೇದವೇಕೆ ? ದೇಹದ ಹೊರಗಿನ ಬಯಲನ್ನು ಬಹಿರಂಗಕ್ಕೆ ಸ್ಥಾವರಗೊಳಿಸಿದ ನಾವು , ಆಂತರಂಗಿಕವಾಗಿ ಅದನ್ನು ಜಂಗಮಗೊಳಿಸಬೇಕಿತ್ತು, ಆದರೆ ಸ್ಥಾವರ ಬಯಲಿಗೆ ನಾನಾ ರೀತಿಯ ರೂಪಗಳನ್ನು ಕೊಟ್ಟು, ಗುಣಾವಗುಣಗಳನ್ನು ಆರೋಪಿಸಿ ಲೌಕಿಕ ಸುಖದ ಮಯಾಮೃಗದ ಬೆನ್ನಟ್ಟಿ ವಿಮುಖರಾಗಿಬಿಟ್ಟೆವು. ಬಹಿರಂಗದ ಸ್ಥಾವರ ಸುಖದ ಬೆನ್ನುಹತ್ತಿ ಆಂತರಿಕವಾದ ಶಾಶ್ವತ, ನಿಜ ಸುಖದ ಪರಮಾನಂದದಿಂದ ವಂಚಿತರಾಗಿಬಿಟ್ಟೆವು. ಇದಕ್ಕೆ ಪಂಚೇಂದ್ರಿಯ ಅರಿಷಡ್ವರ್ಗಗಳೆಂಬ ಗೋಡೆಗಳನ್ನು ನಿಲ್ಲಿಸಿ ಬಿಟ್ಟಿದ್ದೇವೆ. ಆ ಪರಾತ್ಪರ ಪ್ರಣವಸ್ವರೂಪಿಯ ಚೈತನ್ಯರೂಪವು ಸೃಷ್ಟಿಯ (ಬಯಲಿನ) ಅನುರೇಣುತೃಣಕಷ್ಟಾ ದಿಗಳೆಲ್ಲದರಲ್ಲಿಯೂ ಸ್ಥಿತವಾಗಿದೆ. ಆತನನ್ನು ದೃಢವಾಗಿ ನಂಬಿ ಸಂಪೂರ್ಣ ಸಮರ್ಪಣಾ ಭಾವದಲ್ಲಿ ಭಕ್ತಿಯಿಂದ ಆರ್ತತೆಯಿಂದ, ಕೂಗಿ ಕರೆದರೆ ಖಂಡಿತವಾಗಿ ‘ ಓ’ ಗೊಟ್ಟು ನಮ್ಮೆಡೆಗೆ ಓಡೋಡಿ ಬರುತ್ತಾನೆ. ಇಂತಹ ನಿರಾಕಾರ ನಿರ್ಗುಣ ಬಯಲರೂಪಿ ಚೇತನಕ್ಕೆ ಜಾತಿ ಮತ ಪಂಥಗಳ ಭೇದ ಭಾವಗಳಿಲ್ಲ. ಒಳಗೆ, ಹೊರಗೆ ಎಂಬ ಭೇದವಂತೂ ಮೊದಲೇ ಇಲ್ಲ.
–ಸುಜಾತಾ ಪಾಟೀಲ ಸಂಕ