ಅವಳೆಂದರೆ
ಅವಳೆಂದರೆ ಅಭಿಮಾನ ಉಕ್ಕಿಹರಿವುದು
ಅವಳ ಬಾಹ್ಯ ಚೆಲುವಿಕೆಗಾಗಿ ಅಲ್ಲ
ಅಂತರಂಗದ ಅರಿವಿನ ಅನುಭಾವಕ್ಕಾಗಿ.
ಅವಳೆಂದರೆ ಗೌರವ ಇಮ್ಮಡಿಸುವದು
ಅವಳ ಎತ್ತರದ ನಿಲುವಿಗಾಗಿ ಅಲ್ಲ
ಅವಳ ಬಿತ್ತರದ ಮಧುರ ಒಲವಿಗಾಗಿ.
ಅವಳೆಂದರೆ ಸೌಭಾಗ್ಯದ ಸಿರಿ ಸಂಪತ್ತು
ಒಲವಾಗಿ ಚೆಲುವಾಗಿ ಗೆಲುವಾಗಿ ನಿಂದವಳು
ಬೆನ್ನಿಗಾಸರೆಯಾಗಿ ಬದುಕು ಕೊಟ್ಟವಳು
ಕಣ್ಣೀರ ಒರೆಸಿ ಕಡೆಹಾಯ್ಸುವವಳು
ಹೊಟ್ಟೆ ನೆತ್ತಯ ಬುತ್ತಿಯನಿಕ್ಕಿ
ಜೀವನಕೆ ಭದ್ರ ಬುನಾದಿ ಹಾಕಿದವಳು ||
ಅವಳೆಂದರೆ ಎಲ್ಲರಂತವಳಲ್ಲ
ಬಲ್ಲಿದಳು ಬಹಳ ಜೀವನದ ಆಳ
ಕಾಲ್ನಡಿಗೆಯಲ್ಲೆ ಜೀವನ ಸವೆಸಿ
ಕುಂದು ಕೊರತೆಗಳ ಎಲ್ಲೆ ಮೀರಿ
ಮೇಲ್ಮಹಡಿ ಕಟ್ಟಿದವಳು
ಮಕ್ಕಳ ಭವಿಷ್ಯವ ಗಟ್ಟಿಗೊಳಿಸಿದವಳು||
ಅವಳೆಂದರೆ ಜೋಕಾಲಿಯು
ನೋವು ನಲಿವೆಂಬ ಹಗ್ಗ ಹಿಡಿದು
ಕಷ್ಟ ಸುಖಗಳ ಮೇಲೆರಿ ಇಳಿಯುತ
ಬಂದ ಬಿರುಗಾಳಯನೆದುರಿಸುತ
ಸೋಲುತ್ತ ಗೆಲ್ಲುತ್ತ ಗುರಿಯ ಮುಟ್ಟುತ್ತ
ಸಾಗುವಳು ನಿತ್ಯ ನಿರಂತರ ||
–ಸವಿತಾ ಮಾಟೂರ ಇಳಕಲ್